ಸಾಹಸ ಸಿಂಹ, ಅಭಿನಯ ಭಾರ್ಗವ, ಅಭಿಮಾನಿಗಳ ಪಾಲಿನ ಪ್ರೀತಿಯ ಯಜಮಾನ ವಿಷ್ಣುವರ್ಧನ್ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ನೀಡಿರುವ ಹೇಳಿಕೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಅಭಿಮಾನಿಗಳಷ್ಟೇ ಅಲ್ಲ, ಹಲವು ಕಲಾವಿದರು ವಿಜಯ್ ರಂಗರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.
ಪುನೀತ್ ರಾಜ್‍ಕುಮಾರ್ : ನಮ್ಮ ನಾಡಿನ ಮೇರುನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆ ಕಲಾವಿದ ಕೂಡಲೇ ಕ್ಷಮೆ ಕೇಳಿ, ತನ್ನ ಮಾತುಗಳನ್ನು ವಾಪಸ್ ಪಡೆಯಬೇಕು. ಭಾರತೀಯ ಚಿತ್ರರಂಗ ಒಂದು ಮನೆ. ಕಲಾವಿದರೆಲ್ಲರೂ ಒಂದು ಕುಟುಂಬ. ಕಲೆಗೆ, ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ. ಮೊದಲು ಮಾನವನಾಗು.
ಕಿಚ್ಚ ಸುದೀಪ್ : ವಿಜಯ್ ರಂಗರಾಜು ಅವರೇ, ಒಬ್ಬ ವ್ಯಕಿಯ ಬಗ್ಗೆ ಏನು ಮಾತನಾಡಬೇಕು ಎಂಬುದು ನಿಮಗೆ ಬಿಟ್ಟಿದ್ದು. ಆದರೆ ಆ ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ದರೆ, ಅದನ್ನು ಗಂಡಸ್ತನ ಎನ್ನಬಹುದಿತ್ತು. ವಿಷ್ಣು ಸರ್ ಬಗ್ಗೆ ಮಾತನಾಡಿರುವ ನಿಮ್ಮನ್ನು ನಿಮ್ಮವರೇ ಒಪ್ಪೋದಿಲ್ಲ. ವಿಷ್ಣು ಸರ್ ಇಲ್ಲ. ಆದರೆ, ನಾವೆಲ್ಲ ಇದ್ದೇವೆ. ಇಂಡಸ್ಟ್ರಿಯಲ್ಲಿ ನಾವೆಲ್ಲ ಚೆನ್ನಾಗಿದ್ದೇವೆ. ನಿಮ್ಮಿಂದ ಅದು ಹಾಳಾಗೋದು ಬೇಡ. ನಿಮ್ಮ ಮಾತುಗಳನ್ನು ವಾಪಸ್ ತೆಗೆದುಕೊಳ್ಳಿ.
ಜಗ್ಗೇಶ್ : ನತದೃಷ್ಟ ಶಿಖಾಮಣಿ. ಇವನು ಕಲಾವಿದನಂತೆ. ಈ ದರಿದ್ರ ಮುಖವನ್ನು ಎಲ್ಲೂ ನೋಡಿದ ನೆನಪಿಲ್ಲ. ಇವನ ಉದ್ಧಟತನದ ಮಾತಿಗೆ ಕ್ಷಮೆ ಇಲ್ಲ. ಸತ್ತವರು ದೇವರ ಸಮ. ದುಃಖವಾಯಿತು.
ಅನಿರುದ್ಧ : ಸುಮ್ಮನೆ ಮೀಸೆ ಬೆಳೆಸಿಕೊಂಡರೆ ಧೈರ್ಯಶಾಲಿ, ಶಕ್ತಿಶಾಲಿ ಎನ್ನಲು ಸಾಧ್ಯವಿಲ್ಲ. ಯಾರೋ ಏನೋ ಎಂದರು ಎಂದಾಕ್ಷಣ ಯಾರೂ ಬೇಜಾರು ಮಾಡಿಕೊಳ್ಳಬೇಕಿಲ್ಲ. ಅಭಿಮಾನಿಗಳ ಹೃದಯದಲ್ಲಿ ಅವರು ಶಾಶ್ವತ ಸ್ಥಾನ ಪಡೆದಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ತೆಲುಗು ಚಿತ್ರರಂಗದವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ವಿಜಯ್ ರಂಗರಾಜು ಅವರೇ, ದಯವಿಟ್ಟು ಇಲ್ಲಿಗೆ ಬರಬೇಡಿ. ಬಂದರೆ ಇಲ್ಲಿನ ಸಿಂಹ, ಸಿಂಹಿಣಿಯರು ಏನು ಮಾಡ್ತಾರೆ ಅನ್ನೋದನ್ನು ಹೇಳೋಕಾಗಲ್ಲ.
ಯಶ್ : ಸಾಧಕರನ್ನು ನಿಂದಿಸಿ ಹೆಸರು ಮಾಡುವ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನೇ ಅಲ್ಲ. ಕನ್ನಡ ಚಿತ್ರರಂಗ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದೆ. ಈ ವ್ಯಕ್ತಿಯಿಂದ ಅದು ಹಾಳಾಗಬಾರದು. ಈ ವ್ಯಕ್ತಿ ಕ್ಷಮೆ ಕೇಳಬೇಕು.
ಗಣೇಶ್ : ದಾದಾ ಬಗ್ಗೆ ಇಷ್ಟು ಕೀಳುಮಟ್ಟದ ಹೇಳಿಕೆ ಕೊಟ್ಟ ಯಾವನೇ ಆದರೂ ತನ್ನ ದುರಹಂಕಾರವನ್ನು ಪಕ್ಕಕ್ಕಿಟ್ಟು ಮೊದಲು ಕ್ಷಮೆ ಕೇಳಬೇಕು.
ರಿಷಬ್ ಶೆಟ್ಟಿ : ತನ್ನ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ವಿಷ್ಣು ಸರ್ ಬಗ್ಗೆ ನಟನೊಬ್ಬ ತುಚ್ಛವಾಗಿ ಮಾತನಾಡಿದ್ದು ಖಂಡನೀಯ. ಆತ ಕೂಡಲೇ ಕ್ಷಮೆ ಕೇಳಬೇಕು.
ಸಿಂಪಲ್ ಸುನಿ : ಆಚಾರವಿಲ್ಲದ ನಾಲಿಗೆಯು ಎಂದೂ ಗಲೀಜು. ನಿನ್ನ ನೀಚಬುದ್ದಿಯ ಬಿಡು ರಂಗರಾಜು.
ಒಳ್ಳೆ ಹುಡ್ಗ ಪ್ರಥಮ್ : ಸಂಸ್ಕಾರದ ಕೊರತೆಯಿಂದ ನರಳುತ್ತಿರೋ ಅನಾಗರಿಕ ತೆಲುಗು ನಟನಿಂದ ಇನ್ನೇನು ನಿರೀಕ್ಷೆ ಮಾಡೋಕೆ ಸಾಧ್ಯ..? ದಾದಾರಿಗೆ ಹೆಣ್ಣಿನ ವೀಕ್‍ನೆಸ್ ಇದ್ದಿದ್ರೆ 3-4 ಮದುವೆ ಆಗ್ತಿದ್ರು. ನಾಚಿಕೆ ಆಗ್ಬೇಕು ನಿಮ್ ಜನ್ಮಕ್ಕೆ..
.... ಹೀಗೆ ಕನ್ನಡ ಚಿತ್ರರಂಗದ ನಟ, ನಟಿ, ತಂತ್ರಜ್ಞರೆಲ್ಲ ವಿಜಯ್ ರಂಗರಾಜು ವಿರುದ್ಧ ಕಿಡಿ ಕಾರಿದ್ದಾರೆ. ಈ ಕುರಿತು ದಕ್ಷಿಣ ಭಾರತ ಫಿಲಂ ಚೇಂಬರ್‍ನಲ್ಲಿ ಪ್ರಸ್ತಾಪ ಮಾಡುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ.
Also Read :-
ವಿಷ್ಣು ಒಬ್ಬ ಲಜ್ಜೆಗೆಟ್ಟ ನಟ : ತೆಲುಗು ನಟ ವಿವಾದಾತ್ಮಕ ಹೇಳಿಕೆ