ಉಪ್ಪು ಹುಳಿ ಖಾರ... ಇಮ್ರಾನ್ ಸರ್ದಾರಿಯಾ ನಿರ್ದೇಶನದ ಈ ಚಿತ್ರದಲ್ಲಿ ಮಸಾಲೆಯ ಪರಿಮಳ ಜೋರಾಗಿದೆ. ಮಸಾಲೆಯೆಂದರೆ, ಅಂತಿಂಥ ಮಸಾಲೆಯಲ್ಲ. ಕನ್ನಡ ಚಿತ್ರರಂಗದ ರುಚಿ ರುಚಿಯಾದ ಮಸಾಲೆಗಳನ್ನೆಲ್ಲ ಒಂದೇ ಚಿತ್ರದಲ್ಲಿ ಬೆರೆಸಿದ್ದಾರೆ ಇಮ್ರಾನ್.
ಉಪ್ಪು ಹುಳಿ ಖಾರಕ್ಕೆ ನಾಲ್ವರು ನಿರ್ದೇಶಕರು ಸಂಗೀತದ ಮಸಾಲೆ ಅರೆದಿದ್ದಾರೆ. ಜ್ಯೂಡಾ ಸ್ಯಾಂಡಿ 3, ಪ್ರಜ್ವಲ್ ಪೈ 2, ಕಿಶೋರ್ ಎಕ್ಸಾ ಒಂದು ಹಾಡು ಸಂಯೋಜಿಸಿದ್ದಾರೆ. ಗಾಯಕ ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಹಾಡುಗಳ ಮಸಾಲೆಗೆ ಇಬ್ಬರು ಸ್ಟಾರ್ ನಟರಿದ್ದಾರೆ. ಚಿತ್ರದ ಗಣೇಶ ಹಾಡಿಗೆ ಧ್ವನಿಯಾಗಿರುವುದು ಕಿಚ್ಚ ಸುದೀಪ್. ರೋ ರೋ ರೋಮಿಯೋಗೆ ಧ್ವನಿಯಾಗಿರೋದು ಪವರ್ ಸ್ಟಾರ್ ಪುನೀತ್. ಮತ್ತೊಂದು ಹಾಡಿಗೆ ಧ್ವನಿ ನೀಡಿರುವುದು ಸಾಧು ಕೋಕಿಲ.
ಮಸಾಲೆಯ ಪರಿಮಳ ಹೆಚ್ಚಿಸೋಕೆ ನಾಯಕಿಯಾಗಿರೋದು ಅನುಶ್ರೀ, ಜಯಶ್ರೀ ಹಾಗೂ ಫಾರಿನ್ ಬೆಡಗಿ ಮಾಶಾ. ಈ ದೇಸಿವಿದೇಸಿ ಮಸಾಲೆಯ ಜೊತೆಗೆ ನಾಯಕರಾಗಿರೋದು ಹೊಸಬರಾದ ಶರತ್, ಧನಂಜಯ್ ಹಾಗೂ ಶಶಿ. ಇವರೆಲ್ಲರನ್ನೂ ಹದವಾಗಿ ರುಬ್ಬೋಕೆಂದೇ ವಿಶೇಷ ಪಾತ್ರದಲ್ಲಿ ಕಾಣಿಸಿರುವುದು ಮಾಲಾಶ್ರಿ.
ಹೀಗೆ ಚಿತ್ರದ ತುಂಬಾ ಮಸಾಲಾ ಐಟಂಗಳಿವೆ. ಅವುಗಳನ್ನೆಲ್ಲ ಹದವಾಗಿ ಬೆರೆಸಿ, ರುಚಿಕಟ್ಟಾದ ಅಡುಗೆಯನ್ನೂ ಮಾಡಿರುವ ಭರವಸೆ ಇಮ್ರಾನ್ ಸರ್ದಾರಿಯಾ ಅವರ ಮೇಲಿದೆ. ಟೇಸ್ಟ್ ನೋಡೋಕೆ ತುಂಬಾ ದಿನ ಕಾಯಬೇಕಿಲ್ಲ.