ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಈ ವಾರ ನಿರ್ಮಾಪಕ, ಫಿಲಂ ಚೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ ಅತಿಥಿಯಾಗುತ್ತಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರೋ ಕಾರ್ಯಕ್ರಮದಲ್ಲಿ ಚಿನ್ನೇಗೌಡರು ತಮ್ಮ ಚಿತ್ರಬದುಕಿನ ನೆನಪುಗಳನ್ನು ಬಿಚ್ಚಿಡಲಿದ್ದಾರೆ.
ಚಿನ್ನೇಗೌಡರು, ಪಾರ್ವತಮ್ಮ ರಾಜ್‍ಕುಮಾರ್ ಅವರ ತಮ್ಮ. ರಾಜ್‍ಕುಮಾರ್ ಇವರಿಗೆ ಬಾವ. ಕನ್ನಡದ ಇಬ್ಬರು ಸ್ಟಾರ್ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿಯವರ ತಂದೆ. ಪತ್ನಿ ಜಯಮ್ಮ ಕೂಡಾ ನಿರ್ಮಾಪಕಿ. ಒಂದು ರೀತಿಯಲ್ಲಿ ಅವರ ಮನೆಯೇ ಒಂದು ಮಿನಿ ಚಿತ್ರರಂಗ.
ಸಹೋದರಿ ಪಾರ್ವತಮ್ಮನವರ ಚಿತ್ರಬದುಕಿಗೆ ಹೆಗಲು ಕೊಟ್ಟಿದ್ದ ಚಿನ್ನೇಗೌಡ, ವಜ್ರೇಶ್ವರಿ ಕಂಬೈನ್ಸ್ ಬೆಳೆಸಲು ಶ್ರಮಿಸಿದರು. ನಿರ್ಮಾಪಕರಾಗಿ, ವಿತರಕರಾಗಿ ಬೆಳೆದರು. ಶ್ರೀನಿವಾಸ ಕಲ್ಯಾಣ, ಜ್ವಾಲಾಮುಖಿ, ಹೊಸ ಬೆಳಕು, ಹೃದಯ ಹಾಡಿತು, ಸಪ್ತಪದಿ, ಮನ ಮೆಚ್ಚಿದ ಹುಡುಗ, ರೂಪಾಯಿ ರಾಜ, ಶ್ರೀಹರಿಕಥೆ.. ಮೊದಲಾದುವು ಚಿನ್ನೇಗೌಡ ನಿರ್ಮಿಸಿದ ಸಿನಿಮಾಗಳು.
ಚಿನ್ನೇಗೌಡರ ಪತ್ನಿ ಜಯಮ್ಮ ಖುಷಿ, ಸೇವಂತಿ ಸೇವಂತಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಿನ್ನೇಗೌಡರ ಜೊತೆ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್, ಸಾಯಿಪ್ರಕಾಶ್, ರಾಮು, ಮಾಲಾಶ್ರೀ, ಸುಧಾರಾಣಿ, ಸುಂದರ್‍ರಾಜ್, ಪ್ರಮೀಳಾ ಜೋಷಾಯ್ ಎಲ್ಲರೂ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾಋಎ.
ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅಪ್ಪನ ನೆನಪುಗಳನ್ನು ವಿಶೇಷ ಗಣ್ಯರಾಗಿ ಕುಳಿತು ಕೇಳಲಿದ್ದಾರೆ. ಸಾ.ರಾ.ಗೋವಿಂದು, ಜಯಮಾಲಾ, ಹೆಚ್.ಡಿ. ಗಂಗರಾಜು ಸೇರಿದಂತೆ ಚೇಂಬರ್ ಹಾಗೂ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.