ಗಾಜನೂರು ಎಂದರೆ ಥಟ್ಟನೆ ನೆನಪಾಗೋದು ಅಣ್ಣಾವ್ರು. ಗಾಜನೂರು ಕನ್ನಡಿಗರಿಗೆ ಡಾ.ರಾಜ್ ಎಂಬ ವರನಟನನ್ನ ಕೊಟ್ಟ ಊರು. ಈ ಊರಿನಲ್ಲಿ ಇದುವರೆಗೆ ಅಣ್ಣಾವ್ರ ಕೆಲವು ಚಿತ್ರಗಳ ಕೆಲವು ದೃಶ್ಯಗಳ ಚಿತ್ರೀಕರಣವಾಗಿದೆಯೇ ಹೊರತು, ಮುಹೂರ್ತ, ಇಡೀ ಸಿನಿಮಾ ಚಿತ್ರೀಕರಣ ಮುಂತಾದುವೆಲ್ಲ ನಡೆದಿಲ್ಲ. ಅದನ್ನು ಮಾಡಿರೋದು ಖಡಕ್ ಹಳ್ಳಿ ಹುಡುಗರು ಚಿತ್ರತಂಡ.
ಗಾಜನೂರಿನಲ್ಲಿಯೇ ಚಿತ್ರದ ಮುಹೂರ್ತ ಮಾಡಿ ಶೂಟಿಂಗ್ ಶುರು ಮಾಡಿದೆ ಖಡಕ್ ಹಳ್ಳಿ ಹುಡುಗರ ಟೀಂ. ಕ್ಯಾಮೆರಾ ಆನ್ ಮಾಡಿ ಶುಭ ಕೋರಿರುವುದು ಡಾ.ರಾಜ್ ಅವರ ತಂಗಿ ನಾಗಮ್ಮ ಮತ್ತು ಮಂಗಳಾ ರಾಘವೇಂದ್ರ ರಾಜಕುಮಾರ್. ಎಂ.ಯು.ಪ್ರಸನ್ನ ಹಳ್ಳಿ ನಿರ್ದೇಶನದ ಸಿನಿಮಾ ಖಡಕ್ ಹಳ್ಳಿ ಹುಡುಗರು. ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಾಜೀವ್ ರಾಥೋಡ್, ಪ್ರಭಾಸ್ ರಾಜ್, ಪ್ರಭು ನಾಯಕರಾಗಿದ್ದಾರೆ. ಯುಕ್ತಾ ಮಲ್ನಾಡ್, ದೀಪು ವಿಜಯ, ಚಂದ್ರಪ್ರಭಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ದಾರಿ ತಪ್ಪುವ ಹಳ್ಳಿ ಹುಡುಗರಿಗೆ ಗೈಡ್ ಮಾಡುವ, ಅವರನ್ನು ಮತ್ತೆ ಸರಿದಾರಿಗೆ ತರುವ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಹಿರಿಯನ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ನಟಿಸುತ್ತಿದ್ದಾರೆ. ಅಂದಹಾಗೆ ರಾಘಣ್ಣನ ಪಾತ್ರದ ಹೆಸರು ಪರಶುರಾಮ್.