ಸೆಪ್ಟೆಂಬರ್ 18, ಕನ್ನಡ ಚಿತ್ರರಂಗಕ್ಕೆ ಅಪರೂಪದ ದಿನ. ಇದು ಸ್ಟಾರ್ ಡೇ. ಸಾಹಸ ಸಿಂಹ ವಿಷ್ಣುವರ್ಧನ್ಗೆ ಇದು 67ನೇ ಹುಟ್ಟುಹಬ್ಬ. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಜೀವಂತ. ಆ ಮಹಾನ್ ಕಲಾವಿದನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಹುಟ್ಟುಹಬ್ಬಕ್ಕಾಗಿ ರಾಜಸಿಂಹ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಅದು ವಿಷ್ಣು ಅವರ ಅಳಿಯ ಅನಿರುದ್ಧ ಅಭಿನಯದ ಚಿತ್ರ. ಆಡುಗೋಡಿಯ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ 402 ಸಸಿ ನೆಡುವ ಮೂಲಕ ವಿಷ್ಣು ಹುಟ್ಟುಹಬ್ಬದ ಸಡಗರದಲ್ಲಿ ತೊಡಗಿಕೊಳ್ಳುತ್ತಿದೆ. ಅಭಿಮಾನಿಗಳು ಎಂದಿನಂತೆ ಅಭಿಮಾನ್ ಸ್ಟುಡಿಯೋದಲ್ಲಿ ಜನ್ಮ ದಿನ ಆಚರಿಸುತ್ತಿದ್ದಾರೆ. ರಾಜ್ಯದ ನೂರಾರು ವಿಷ್ಣು ಅಭಿಮಾನಿ ಸಂಗಗಳು, ರಕ್ತದಾನ, ಅನ್ನದಾನ ಆಯೋಜಿಸಿವೆ. ಹಲವೆಡೆ ವಿಷ್ನು ಚಿತ್ರಗಳ ಹಾಡುಗಳ ಆರ್ಕೆಸ್ಟ್ರಾ ಮಾಡಲು ಸಿದ್ಧತೆ ನಡೆದಿದೆ.
ಇನ್ನು, ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ಉಪೇಂದ್ರಗೆ, ಇದು 49 ನೇ ಹುಟ್ಟುಹಬ್ಬ. ಈ ಬಾರಿ ಅವರು ರಾಜಕಾರಣಕ್ಕೂ ಪ್ರವೇಶ ಮಾಡಿರುವುದರಿಂದ ಅದು ಇನ್ನೊಂದು ವಿಶೇಷ. ಕತ್ರಿಗುಪ್ಪೆಯ ಮನೆಯಲ್ಲಿ ಸರಳವಾಗಿ ಸಂಭ್ರಮ ನಡೆಯಲಿದೆ. ಕೇಕ್ ತರಬೇಡಿ ಎಂದು ಉಪೇಂದ್ರ ಅವರೇ ಮನವಿ ಮಾಡಿದ್ದರೂ, ಅಭಿಮಾನಿಗಳು ಕೇಕ್ನೊಂದಿಗೇ ಬರುವ ಸಾಧ್ಯತೆಗಳಿವೆ.
ಉಪ್ಪಿ ಮನೆ ಮುಂದೆ ಈಗಾಗಲೇ ಬ್ಯಾನರ್ಗಳೂ ಬಿದ್ದಿವೆ. ಅವರ ಹುಟ್ಟುಹಬ್ಬಕ್ಕಾಗಿ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ. ಇನ್ನು ಉಪೇಂದ್ರ ಅಭಿಮಾನಿ ಸಂಘಗಳೂ ಸಮಾಜಮುಖಿ ಕೆಲಸಗಳ ಮೂಲಕ ಉಪ್ಪಿಗೆ ಶುಭಕೋರುತ್ತಿವೆ.
ಇನ್ನು ಚಿತ್ರನಟಿ ಶೃತಿಗೆ ಇದು 42 ನೇ ಹುಟ್ಟುಹಬ್ಬ. ಕಾಯಕವೇ ಕೈಲಾಸ ಎಂದು ನಂಬಿಕೊಂಡಿರುವ ಶೃತಿ, ಈ ಬಾರಿ ಸಾಯಿ ಪ್ರಕಾಶ್ ನಿರ್ದೇಶನದ ‘ಅಬ್ಬೆ ತುಮಕೂರು ವಿಶ್ವರಾಧ್ಯರು’ ಚಿತ್ರದ ಸೆಟ್ನಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕೆಲವು ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಳ್ಳುತ್ತಿದ್ದಾರೆ.