ವಿಷ್ಣುವರ್ಧನ್ ಮತ್ತು ಅಂಬರೀಷ್ ಚಿತ್ರರಂಗಕ್ಕೆ ಒಟ್ಟಿಗೇ ಬಂದವರು. ಅಂಬರೀಷ್ ಖಳನ ಪಾತ್ರಗಳಿಂದ ಆರಂಭಿಸಿ ರೆಬಲ್‍ಸ್ಟಾರ್ ಆದರೆ, ವಿಷ್ಣುವರ್ಧನ್ ಸಾಹಸ ಸಿಂಹನಾಗಿ ಮೆರೆದರು. ವಿಶೇಷವೆಂದರೆ ಪರಸ್ಪರ ಸ್ಪರ್ಧಿಗಳಾಗಿದ್ದರೂ ಅಂಬರೀಷ್ ಮತ್ತು ವಿಷ್ಣು ಜೀವದ ಗೆಳೆಯರು. ಅದು ಗುಟ್ಟಾಗಿಯೇನೂ ಇರಲಿಲ್ಲ. ಪರಸ್ಪರರ ಏಳಿಗೆಗೆ ನೆರವಾಗುತ್ತಿದ್ದ, ಸಂಕಟಗಳಲ್ಲಿ ಜೊತೆಯಾಗುತ್ತಿದ್ದ ಇಬ್ಬರೂ ಅದೆಷ್ಟೋ ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ.
ಅದರಲ್ಲಿಯೂ ದಿಗ್ಗಜರು ಚಿತ್ರದಲ್ಲಿ ವಿಷ್ಣು ಮತ್ತು ಅಂಬಿಯನ್ನು ನೋಡಿದವರು, ಅವರನ್ನು ಪಾತ್ರಗಳಾಗಿ ನೋಡಿರಲೇ ಇಲ್ಲ ಎನ್ನುವುದರಲ್ಲೇ ಕುಚಿಕು ಗೆಳೆಯರ ಶ್ರೇಯಸ್ಸಿದೆ. ಈಗ ಅವರಿಬ್ಬರೂ ಒಟ್ಟಿಗೇ, ಒಂದೇ ಚಿತ್ರದಲ್ಲಿ ನಟಿಸಿದ್ದಾರೆ.
ಹೇಗೆ ಅಂತಾ ಗೊಂದಲ ಬೇಡ. ರಾಜಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್‍ನಲ್ಲಿ ಮರುಸೃಷ್ಟಿ ಮಾಡಲಾಗಿದೆ. ಅದೇ ಚಿತ್ರದಲ್ಲಿ ಅಂಬರೀಷ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ವಿಷ್ಣು ಪತ್ನಿಯಾಗಿ ನಟಿಸಿರುವುದು ಭಾರತಿ. ವಿಷ್ಣು, ಸಿಂಹಾದ್ರಿಯ ಸಿಂಹನ ನರಸಿಂಹ ಗೌಡನಾಗಿ ಬರಲಿದ್ದಾರೆ. ಕುಚ್ಚಿಕು ಗೆಳೆಯರ ಪುನರ್‍ಮಿಲನವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳೂ ಕಾಯುತ್ತಿದ್ದಾರೆ.