ಕೋಮಲ್, ಸದ್ಯಕ್ಕೆ ಕೆಂಪೇಗೌಡ-2 ಚಿತ್ರದ ಬಿಡುಗಡೆ ಖುಷಿಯಲ್ಲಿದ್ದಾರೆ. ಸುದೀರ್ಘ ವಿರಾಮದ ನಂತರ ಬರುತ್ತಿರುವ ಕೋಮಲ್ ಅಭಿನಯದ ಸಿನಿಮಾ, ಶಂಕರೇಗೌಡರು ನಿರ್ಮಿಸಿರುವ ಸಿನಿಮಾ ಅಷ್ಟೇ ಅಲ್ಲ, ಸುದೀಪ್ ಅಭಿನಯದಲ್ಲಿ ಸೂಪರ್ ಹಿಟ್ ಆಗಿದ್ದ ಕೆಂಪೇಗೌಡ ಟೈಟಲ್‍ನ ಭಾರ. ಎಲ್ಲವೂ ದೊಡ್ಡ ಚಾಲೆಂಜುಗಳೇ. ವಿಶೇಷವೇನು ಗೊತ್ತೇ.. ಚಾಲೆಂಜ್ ತೆಗೆದುಕೊಂಡಾಗಲೆಲ್ಲ ಕೋಮಲ್ ಗೆದ್ದಿದ್ದಾರೆ.
ನಾನು ಆರಂಭದಲ್ಲಿ ಕೆಲವು ವಿಲನ್ ರೋಲ್ ಮಾಡಿದೆ. ಕಾಮಿಡಿ ಏನೆಂಬುದೇ ಗೊತ್ತಿರಲಿಲ್ಲ. ಕುರಿಗಳು ಸಾರ್ ಕುರಿಗಳು ಚಿತ್ರದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನನಗೆ ಬೈದಿದ್ದರು. ದೊಡ್ಡಣ್ಣ ಅವರಂತೂ ಅಷ್ಟು ದೊಡ್ಡ ಕಲಾವಿದನ ತಮ್ಮನಾಗಿ ಕಾಮಿಡಿ ಮಾಡೋಕೆ ಬರೊಲ್ವಾ ಎಂದು ಕಪಾಳಕ್ಕೆ ಹೊಡೆದಿದ್ದರು. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ. ಕುರಿಗಳು ಸಾರ್ ಕುರಿಗಳು ಬಂದ ಮೇಲೆ ಸ್ಟಾರ್ ಆದೆ.
ಕಾಮಿಡಿಗಷ್ಟೆ ಸೀಮಿತ ಎಂದುಕೊಂಡಿದ್ದಾಗ ಶಿವಣ್ಣನ ಜೊತೆ ತವರಿಗೆ ಬಾ ತಂಗಿ ಸಿನಿಮಾ ಮಾಡಿದೆ. ಅದು ಸೆಂಟಿಮೆಂಟ್ ಪಾತ್ರ. ಅದಕ್ಕೆ ರಾಜ್ಯ ಪ್ರಶಸ್ತಿ ಗೆದ್ದುಕೊಂಡೆ.
ಅವಕಾಶ ಕಮ್ಮಿ ಆದಾಗ ಗರಗಸ ಚಿತ್ರದಲ್ಲಿ ಹೀರೋ ಆಗಿ ಮಾಡಿದೆ. ಅದು ಹಿಟ್ ಆಯ್ತು. ಹೀರೋ ಆಗಿ ಗೆದ್ದೆ.
ಈಗ ಕೆಂಪೇಗೌಡ-2 ಮಾಡಿದ್ದೇನೆ. ಕಾಮಿಡಿ ಪೀಸ್‍ಗೆ ಇವೆಲ್ಲ ಬೇಕಾ ಎಂದು ಕೆಲವರು ಕಾಲೆಳೆಯುತ್ತಿದ್ದಾರೆ. ಅದನ್ನೂ ಚಾಲೆಂಜ್ ಆಗಿ ತೆಗೆದುಕೊಂಡಿದ್ದೇನೆ. ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎನ್ನುತ್ತಾರೆ ಕೋಮಲ್.