ಬಹಳ ವರ್ಷದ ಹಿಂದೆ ಜಯಂತ ಕಾಯ್ಕಿಣಿಯವರ ಒಂದು ಕತೆ ಓದಿದ್ದೆ. ಕತೆಯ ಹೆಸರು ‘ದಿಗಂಬರ’ ಎಂದಿರಬೇಕು. ಕಥಾನಾಯಕ ತನ್ನ ಮನೆ ಬದಲಾಯಿಸುವ ಸಂದರ್ಭವನ್ನಿಟ್ಟುಕೊಂಡು ಜಯಂತ್ ಆ ಕತೆ ಬರೆದಿದ್ದರು. ಹಳೆಮನೆಯಿಂದ ಹೊಸ ಮನೆಗೆ ಸಾಮಾನು ಸರಂಜಾಮು ಸಾಗಿಸಲು ಒಂದು ಲಾರಿ ಬರುತ್ತದೆ. ಡ್ರೈವರ್ ಮಹಾಮೌನಿ, ನಾಯಕ ವಾಚಾಳಿ. ದಾರಿಯುದ್ದಕ್ಕೂ ಡ್ರೈವರ್ ಜೊತೆ ಮಾತಾಡುವುದಕ್ಕೆ ಕಥಾನಾಯಕ ಪ್ರಯತ್ನಿಸುತ್ತಾನೆ. ಆದರೆ ಆ ಡ್ರೈವರ್ ನಮ್ಮ ಕಥಾನಾಯಕನ ಸ್ಥಾನಮಾನಕ್ಕಾಗಲಿ, ಮಾತಿಗಾಗಲಿ ಕಿಂಚಿತ್ತೂ ಬೆಲೆ ಕೊಡುವುದಿಲ್ಲ. ಉದಾಹರಣೆಗೆ ನಮ್ಮ ನಾಯಕ ಯಾವುದೋ ಒಂದು ಘಟನೆಯನ್ನು ರೋಚಕವಾಗಿ ವರ್ಣಿಸುತ್ತಿರುವ ಹೊತ್ತಲ್ಲೇ ಸ್ಕೂಟರ್ ಒಂದು ಲಾರಿಗೆ ಅಡ್ಡಬರುತ್ತದೆ. ಡ್ರೈವರ್ ಜೋರಾಗಿ ‘ಭಾಂಚೋತ್’ ಎಂದು ಬೈಯ್ಯುತ್ತಾನೆ, ನಾಯಕನಿಗೆ ರಸಭಂಗವಾಗುತ್ತದೆ. ಕತೆ ಹೀಗೇ ಸಾಗುತ್ತದೆ. ಪ್ರತಿಕ್ರಿಯೆಗೋಸ್ಕರ ಮಾತಾಡುವ ಮಧ್ಯಮವರ್ಗದ ಹುಸಿ ಶಿಷ್ಟಾಚಾರವನ್ನು ಕಾಯ್ಕಿಣಿ ಬಹಳ ಚೆನ್ನಾಗಿ ಈ ಕತೆಯಲ್ಲಿ ಗೇಲಿ ಮಾಡುತ್ತಾರೆ. ನಾವೆಲ್ಲರೂ ಇರೋದು ಹೀಗೇ ತಾನೆ? ಯಾರಾದರೂ ಪರಿಚಿತರು ಎದುರಾದಾಗ ಏನ್ಸಾರ್ ಚೆನ್ನಾಗಿದ್ದೀರಾ ಎಂದು ಮಾತು ಶುರು ಮಾಡುತ್ತೇವೆ. ಎದುರಿಗಿದ್ದಾತ ಚೆನ್ನಾಗಿದ್ದೀನಿ ಎಂದೇ ಉತ್ತರಿಸುತ್ತಾನೆ ಅನ್ನುವುದು ನಮ್ಮ ನಿರೀಕ್ಷೆ. ಆ ನಿರೀಕ್ಷೆ ಹುಸಿಯಾಗುವುದಿಲ್ಲ. ಆರೋಗ್ಯ ಕೆಟ್ಟುಕೆರ ಹಿಡಿದಿದ್ದರೂ ಚೆನ್ನಾಗಿದ್ದೀನಿ ಎಂದೇ ಹೇಳುತ್ತೇವೆ. ಆದರೆ ಡ್ರೈವರ್ ನಂಥ ಕೆಳಮಧ್ಯಮ ವರ್ಗದ ಜನರಿಗೆ ಇಂಥಾ ಆಕರ್ಷಕ ಸುಳ್ಳುಗಳಲ್ಲಿ ಆಸಕ್ತಿ ಇರುವುದಿಲ್ಲ. ನಿಮಗೆ ಬೇಸರವಾದರೂ ಪರವಾಗಿಲ್ಲ, ನಿಮ್ಮ ಮುಖಕ್ಕೆ ಹೊಡೆದಂತೆ ಮಾತಾಡುತ್ತಾರೆ. ಯಾಕೆಂದರೆ ನಿಮ್ಮನ್ನು ಮೆಚ್ಚಿಸುವುದರಿಂದ ಅವರಿಗೇನೂ ಆಗಬೇಕಾಗಿಲ್ಲ, ಹಾಗಂತ ನಿಮ್ಮನ್ನು ಅವಮಾನಗೊಳಿಸುವುದೂ ಅವರ ಉದ್ದೇಶ ಆಗಿರುವುದಿಲ್ಲ. ಅವರಿರುವುದೇ ಹಾಗೆ.

ಅಂಬರೀಶ್ ಅವರನ್ನು ನೋಡಿದಾಗಲೆಲ್ಲಾ ನನಗೆ ಜಯಂತ್ ಕತೆ ಜ್ಞಾಪಕಕ್ಕೆ ಬರುತ್ತದೆ. ಅಂಬರೀಶ್ ಅವರೊಂದಿಗೆ ಮಾತಿಗಿಳಿಯುವ ಮುನ್ನ ನೀವು ಮುಖಕ್ಕೆ ರಾಚುವಂಥ ಪ್ರತಿಕ್ರಿಯೆಗೆ ಸಿದ್ಧರಾಗಬೇಕು. ಡಿವಿಲ್ಲಿಯರ್ಸ್ ಬ್ಯಾಟಿಂಗ್ ನಂತೆ, ಅನಿರೀಕ್ಷಿತ, ಅನಪೇಕ್ಷಿತ ಹೊಡೆತಗಳು. ಪರಿಚಿತರಾದರಂತೂ ಕತೆ ಮುಗಿದೇ ಹೋಯಿತು. ಬಾಯ್ತುಂಬ ಬೈಗಳು, ತಾರಕ ಸ್ವರದ ಉದ್ಗಾರಗಳು. ಬಹುವಚನದ ನಿರೀಕ್ಷೆ ಇಟ್ಟುಕೊಂಡರೆ ದುಬಾರಿಯಾದೀತು. ಅಲ್ಲಿರುವುದು ಒಂದೇ ವಚನ, ಅದು ಅಂಬರೀಶಣ್ಣನ ವಚನ. ಬಸವಣ್ಣ, ಸರ್ವಜ್ಞರು ನಾಚುವಂಥ ವಚನ. ಏನ್ಸಾರ್ ಚೆನ್ನಾಗಿದ್ದೀರಾ ಅಂದರೆ ‘ಅದೆಲ್ಲಾ ಪಕ್ಕಕ್ಕಿಟ್ಟು ವಿಷ್ಯಕ್ಕೆ ಬನ್ರೀ’ ಎಂದು ಗದರಿದರೆ ಅಚ್ಚರಿಯೇನೂ ಇಲ್ಲ. ಅಂತರಂಗ, ಬಹಿರಂಗ ಎಂಬ ಎರಡು ಕಂಪಾರ್ಟುಮೆಂಟುಗಳು ಅವರ ನಡತೆಯಲ್ಲಿಲ್ಲ. ಮಧ್ಯಮವರ್ಗಕ್ಕೆ ಅಭ್ಯಾಸವಾಗಿ ಹೋಗಿರುವ ನಯಗಾರಿಕೆಯನ್ನೂ ಅವರಿಂದ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಪಿಸುಗುಟ್ಟುವ ಶೈಲಿಯ ಮಾತುಕತೆಯಂತೂ ಅವರೊಂದಿಗೆ ಸಾಧ್ಯವೇ ಇಲ್ಲ. ಅದು ರೇಸ್ ಕೋರ್ಸೇ ಇರಬಹುದು, ಪಂಚತಾರಾ ಹೋಟೆಲ್ಲೇ ಇರಬಹುದು. ಒಂದೇ ಸ್ವರ, ಒಂದೇ ಸ್ತರ. ಹಾಗಾಗಿ ಕಿವಿ ಚುಚ್ಚುವವರಿಗೆ, ಚಾಡಿ ಹೇಳುವವರಿಗೆ ಅಂಬಿ ಇಷ್ಟವಾಗುವುದು ಕಷ್ಟ.
ನನ್ನ ಸುದೀರ್ಘ ಕಾಲದ ಪತ್ರಿಕೋದ್ಯಮದಲ್ಲಿ ನಾನು ಹಲವಾರು ನಟರ ಸಂದರ್ಶನ ಮಾಡಿದ್ದೇನೆ, ಪತ್ರಿಕಾಗೋಷ್ಠಿಗಳಲ್ಲಿ ಅವರ ನಿಲುವನ್ನು ಪ್ರಶ್ನಿಸಿದ್ದೇನೆ. ಆದರೆ ಇಲ್ಲಿಯ ತನಕ ಅಂಬರೀಶ್ ಅವರ ಸಂದರ್ಶನ ಮಾಡಿಲ್ಲ ಅನ್ನುವುದು ನನಗೇ ಸೋಜಿಗ ನೀಡುವ ಸಂಗತಿಯಾಗಿದೆ. ಅದೇನೋ ವಿಚಿತ್ರ ಭಯ, ಸಂಕೋಚ. ಎಲ್ಲಿ ನನ್ನ ಬಾಯಿ ಮುಚ್ಚಿಸುತ್ತಾರೇನೋ ಎಂಬ ಆತಂಕ. ನನಗೆ ಮುಖ್ಯ ಅನಿಸುವ ಪ್ರಶ್ನೆಗಳು ಅವರಿಗೆ ತಮಾಷೆಯಾಗಿಬಿಟ್ಟರೆ ಏನು ಗತಿ ಎಂಬ ಚಿಂತೆ. ಈ ಭೀತಿಗೆ ಕಾರಣವಿಲ್ಲದೇ ಇಲ್ಲ. ಪತ್ರಿಕಾಗೋಷ್ಠಿಗಳಲ್ಲಿ ನನ್ನ ಸಹೋದ್ಯೋಗಿಗಳ ಮುಖದಲ್ಲಿ ಅಂಬಿ ಬೆವರಿಳಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಎಷ್ಟೋ ಘನಗಂಭೀರ ಅನಿಸುವ ಪ್ರಶ್ನೆಗಳು ಅಂಬಿಯ ಮಾತಿನ ಸುನಾಮಿ ಸಿಲುಕಿ ಚಿಂದಿಯಾಗುವುದನ್ನು ನೋಡಿ ವಿಲವಿಲ ಒದ್ದಾಡಿದ್ದೇನೆ. ಪತ್ರಕರ್ತ ಎಂಬ ಟ್ರಂಪ್ ಕಾರ್ಡ್ ಅಂಬಿ ಮುಂದೆ ಜೋಕರ್ ಆಗುತ್ತದೆ. ಈ ಮಾತಿಗೆ ದೃಷ್ಠಾಂತವಾಗಿ ಎರಡು ಘಟನೆಗಳು ಇಲ್ಲಿವೆಃ
ಯಾವುದೋ ಆಸ್ತಿಗೆ ಸಂಬಂಧಿಸಿದಂತೆ ಚಿಕ್ಕ ವಿವಾದವೊಂದರಲ್ಲಿ ಅಂಬಿ ಸಿಲುಕಿದ್ದರು. ಅದೇ ಸಂದರ್ಭದಲ್ಲಿ ಯಾವುದೋ ಸಿನಿಮಾಕ್ಕೆ ಸಂಬಂಧಪಟ್ಟಂತೆ ಒಂದು ಪತ್ರಿಕಾಗೋಷ್ಠಿ ನಡೆಯಿತು. ಅಂಬಿ ಎಂದಿನಂತೆ ತಡವಾಗಿ ಬಂದರು, ಜೋರಾಗಿ ನಗುತ್ತಾ ನನ್ನ ಪಕ್ಕದಲ್ಲೇ ಕುಳಿತರು. ತಕ್ಷಣ ನನ್ನ ಎಡಕ್ಕೆ ಕುಳಿತಿದ್ದ ಹಿರಿಯ ವರದಿಗಾರರೊಬ್ಬರು ಮೇಲೆ ಹೇಳಲಾದ ವಿವಾದದ ಬಗ್ಗೆ ಕೆಣಕಿದರು. ಅಂಬಿ ಹಿಂದುಮುಂದು ನೋಡದೆ ‘ನಿಮ್ಮಜ್ಜಿ.....ಕಾನ...ನಾಯಿಮರಿ....ಯಾ’ (ಬಿಟ್ಟು ಹೋದ ಎರಡು ಪದಗಳನ್ನು ನಿಮ್ಮ ಕಲ್ಪನೆಯನುಸಾರ ತುಂಬಿಕೊಳ್ಳಿ) ಅಂದುಬಿಟ್ಟರು. ಆ ಪತ್ರಕರ್ತರು ಮುಖ ಕೆಂಪು ಮಾಡಿಕೊಂಡು ಹೊರಟೇಹೋದರು. ಎರಡನೇ ದುರ್ಘಟನೆ ನಡೆದದ್ದು ಚೌಡಯ್ಯ ಸಭಾಂಗಣದಲ್ಲಿ. ವೇದಿಕೆಯ ಮೇಲೆ ಗಣ್ಯರು ಕುಳಿತಿದ್ದರು, ಅಂಬಿ ತಡವಾಗಿ ಬಂದವರೇ ಮುಂದಿನ ಸಾಲಿನತ್ತ ದೃಷ್ಟಿ ಹಾಯಿಸಿದರು. ಅಲ್ಲಿ ಹಿರಿಯ ಪತ್ರಕರ್ತರು ಸಾಲಾಗಿ ಕುಳಿತಿದ್ದರು. ‘ಏನು ಇಷ್ಟೊಂದು ಲೇಟ್ ಮಾಡಿದ್ರಿ’ ಎಂದು ಅವರೊಂದಿಗೆ ಸಲಿಗೆಯಿದ್ದ ಪತ್ರಕರ್ತರೊಬ್ಬರು ಕೇಳಿದರು. ‘ಬೇಗ ಬಂದರೇನು, ತಡವಾಗಿ ಬಂದರೇನು. ಇದೇ ಹಳೇ ಮುಖಗಳನ್ನೇ ನೋಡಬೇಕಲ್ವಾ, ನನ್ನ ಕರ್ಮ’ ಎಂದು ಬಿಟ್ಟರು ಅಂಬಿ. ಹಳೆಯ ಮುಖಗಳು ಇನ್ನಷ್ಟು ಹಳೆಯದಾದವು.
ಇಂಥಾ ಅನಾಹುತಗಳನ್ನು ಮಾಡಿ ದಕ್ಕಿಸಿಕೊಳ್ಳುವುದಕ್ಕೆ ಅಂಬರೀಶ್ ಅವರೊಬ್ಬರಿಗೆ ಸಾಧ್ಯವೇನೋ. ಯಾಕೆಂದರೆ ಈ ಮನುಷ್ಯ ಹೀಗೇ ಎಂದು ಗೊತ್ತಿರುವುದರಿಂದ ಯಾರೂ ಅಪಾರ್ಥ ಮಾಡಿಕೊಳ್ಳುವ ಚಾನ್ಸೇ ಇರುವುದಿಲ್ಲ. ಮುಂದೆ ಇರುವಾತ ಎಂಥಾ ದೊಡ್ಡ ಮನುಷ್ಯನೇ ಆಗಿರಲಿ ಅಥವಾ ಬಡಕಾರ್ಮಿಕನೇ ಆಗಿರಲಿ. ಅಂಬಿ ಅವರದ್ದು ತಾರತಮ್ಯವಿಲ್ಲದ ಒಂದೇ ಧಾಟಿ. ಯಾವುದೋ ಪಾರ್ಟಿ ಮುಗಿಸಿ ಅಂಬಿ ಹೊರಟುನಿಂತಾಗ ಎದುರಾದ ಹಳೇ ಡ್ರೈವರ್ ಒಬ್ಬನ ಯೋಗಕ್ಷೇಮ ವಿಚಾರಿದ ರೀತಿ ನನಗಿನ್ನೂ ನೆನಪಿದೆ.
ಅಂಬಿಃ ಏನೋ......ಮಗನೇ ಇನ್ನೂ ಬದುಕಿದ್ದೀಯೇನೋ.
ಡ್ರೈವರ್¬ - ಹೂಂನಣ್ಣ, ನಿನ್ನ ಥರಾನೇ ಆ ದೇವರು ನಂಗೂ ಆಯಸ್ಸು ಕೊಟ್ಟವ್ನೇ ನೋಡು.
ಅಂಬಿಗೆ ಹ್ಹಹ್ಹ ಎಂದು ಜೋರಾಗಿ ನಕ್ಕರು.
ಪತ್ರಿಕಾಗೋಷ್ಠಿಯಲ್ಲೊಮ್ಮೆ ಬ್ರಾಹ್ಮಣರು, ಹೋಮ ಹವನ, ನಂಬಿಕೆ ಇತ್ಯಾದಿ ವಿಚಾರಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಅಂಬಿ ಕಡ್ಡಿ ಮುರಿದಂತೆ ಒಂದು ಮಾತು ಹೇಳಿದರು. “ಅಲ್ರೀ ಬ್ರಾಹ್ಮಣರಿಗೆ ಯಾಕೆ ಬೈತೀರಿ ಪಾಪ. ಅವರು ನಾಡಿಗೆ ಒಳ್ಳೇದಾಗ್ಲಿ ಅಂತ ತಾನೇ ಹೋಮ ಹವನ ಮಾಡ್ತಿರೋದು. ಅವರು ಇರೋದ್ರಿಂದಾನೇ ಮಳೆಬೆಳೆ ಆಗ್ತಾ ಇದೆ”.

ವಿಷ್ಣುವರ್ಧನ್ ಒಂದ್ಸಾರಿ ಅಂಬರೀಶ್ ಅವರನ್ನು ರಿಪೇರಿ ಮಾಡೋದಕ್ಕೆ ಹೊರಟ ಸ್ವಾರಸ್ಯಕರ ಕತೆ ಬಹಳ ದಿನ ಚಾಲ್ತಿಯಲ್ಲಿತ್ತು. ಅದನ್ನು ವಿಷ್ಣು ಅವರೇ ನಮ್ಮ ಮುಂದೆ ಹೇಳಿದ್ದರು. “ನೋಡಯ್ಯಾ, ನಿನ್ನದು ಬಹಳ ಒಳ್ಳೇ ಮನಸ್ಸು ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಒರಟಾಗಿ ಮಾತಾಡೋದನ್ನು ಸ್ವಲ್ಪ ಕಡಿಮೆ ಮಾಡು. ನೀನೀಗ ಹಿರಿಯ ನಟ, ರಾಜಕಾರಣಿ ಬೇರೆ. ಆ ಲೆವೆಲ್ ಮೇಂಟೇನ್ ಮಾಡಬೇಕು” ಎಂದು ಹಿತವಚನ ಹೇಳಿದರಂತೆ ವಿಷ್ಣು. ಫಾರ್ ಎ ಚೇಂಜ್ ಅಂಬಿ ಗೆಳೆಯನ ಮಾತಿಗೆ ಒಪ್ಪಿಕೊಂಡರು. ಅದಾಗಿ ಸ್ವಲ್ಪ ಹೊತ್ತಲ್ಲಿ ಅಂಬಿ ಶಿಷ್ಯನೊಬ್ಬನ ಫೋನ್ ಬಂತು. ಮುಂದೆ ನಡೆದ ಮಾತುಕತೆ ಹೀಗಿತ್ತುಃ
ಅಂಬಿಃ ಏನ್ಸಾರ್ ಚೆನ್ನಾಗಿದ್ದೀರಾ?
ಶಿಷ್ಯಃ ಹಲೋ..ಅಂಬರೀಶಣ್ಣ ಅಲ್ವಾ ಮಾತಾಡ್ತಿರೋದು.
ಅಂಬಿಃ ಹೂಂ ಕಣಪ್ಪ, ನಾನೇ ಮಾತಾಡ್ತಿರೋದು. ಏನು ವಿಷ್ಯ.
ಶಿಷ್ಯಃ ಯಾಕಣ್ಣ ಹೀಗೆ ಮಾತಾಡ್ತಿದೀಯಾ. ಮೈಗೆ ಹುಷಾರಿಲ್ವಾ...
ಅಂಬಿಃ ಚೆನ್ನಾಗಿದ್ದೀನಿ ಕಣಲೇ. ವಿಷ್ಯಕ್ಕೆ ಬಾ
ಶಿಷ್ಯಃ ಇಲ್ಲಣ್ಣ, ನೀನು ಹೀಗೆ ಮಾತಾಡಿದ್ರೆ ನಂಗೆ ಭಯ ಆಗುತ್ತೆ.
ಅಂಬಿಃ....ಮಗನೇ ಅದೇನೂಂತ ಬೊಗಳೋ ಲೋಫರ್...
ಶಿಷ್ಯಃ ಈಗ ಮನಸ್ಸಿಗೆ ಸಮಾಧಾನ ಆಯ್ತು ನೋಡಣ್ಣ.
ಅದೇ ಕೊನೆ, ವಿಷ್ಣು ಆಮೇಲೆ ಅಂಬರೀಶ್ ಅವರಿಗೆ ಬುದ್ದಿಮಾತು ಹೇಳೋದಕ್ಕೆ ಹೋಗಲಿಲ್ಲ.
ಇದೀಗ ಇಂಥಾ ಅಂಬರೀಶ್ ಅವರನ್ನೇ ಉದ್ಯಮ ಅಪಾರ್ಥ ಮಾಡಿಕೊಂಡಿದೆ. beggars can't be choosers ಎಂದು ಹೇಳಿದ್ದನ್ನೇ ದೊಡ್ಡ ವಿವಾದವನ್ನಾಗಿಸುವ ಹುನ್ನಾರ ನಡೆದಿದೆ. ಇದನ್ನು ಅಜ್ಞಾನದ ಪರಮಾವಧಿ ಎನ್ನದೇ ವಿಧಿಯಿಲ್ಲ. ಇದು ಇಂಗ್ಲಿಷ್ ಭಾಷೆಯಲ್ಲಿರುವ ಜನಪ್ರಿಯ ನಾಣ್ಣುಡಿ. ನಮಗೆ ಬೇಕಾಗಿರುವುದು ಸಿಗದೇ ಹೋದಾಗ ಸಿಕ್ಕಿದ್ದನ್ನೇ ಸ್ವೀಕರಿಸಬೇಕು ಅನ್ನುವುದಕ್ಕೆ ಈ ನಾಣ್ಣುಡಿ ಬಳಸುತ್ತಾರೆ. ಉದಾಹರಣೆಗೆ ನಿರ್ಮಾಪಕನೊಬ್ಬ ಹೀಗಂತಾನೆ ಅಂತಿಟ್ಟುಕೊಳ್ಳಿಃ ‘ನನಗೂ ಸುದೀಪ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಅನ್ನೋ ಆಸೆಯಿದೆ. ಆದರೆ ಅಷ್ಟೊಂದು ಹಣ ಹಾಕೋದಕ್ಕಾಗೋದಿಲ್ಲ ಅಂತ ಹೊಸ ಹೀರೋನ ಹಾಕಿಕೊಂಡು ಸಿನಿಮಾ ಮಾಡಿದೆ. ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್.’ ಹೀಗನ್ನುವುದರಲ್ಲಿ ತಪ್ಪೇನಿದೆ?
ಇದೇ ರೀತಿ ಇನ್ನೊಂದು ಪದವಿದೆ. Every dog has its day. ಹೀಗಂದಾಕ್ಷಣ ನಾವ್ಯಾರೂ ಶ್ವಾನಸಂತತಿಗೆ ಸೇರುವುದಿಲ್ಲ. ಅವಕಾಶ ಕೈತಪ್ಪಿಹೋದಾಗ ಈ ಮಾತು ಬಳಸುತ್ತೇವೆ. ಮುಂದೊಂದು ದಿನ ನಮಗೂ ಒಂದು ಅವಕಾಶ ಬಂದೇ ಬರುತ್ತದೆ, ಅಲ್ಲಿ ತನಕ ಕಾಯಬೇಕು ಅನ್ನೋದು ಅರ್ಥ.
ಹಾಗಿರುವಾಗ beggars can't be choosers ಎಂಬ ವಾಕ್ಯವನ್ನು ಕನ್ನಡಕ್ಕೆ ಅನುವಾದ ಮಾಡಿ, ನಿರ್ಮಾಪಕರನ್ನೆಲ್ಲಾ ಅಂಬರೀಶ್ ಭಿಕ್ಷುಕರಿಗೆ ಹೋಲಿಸಿದರು ಎಂದು ಬೊಬ್ಬಿರಿದರೆ ಅದಕ್ಕಿಂತ ತಮಾಷೆ ಇನ್ನೇನಿದೆ? ಅಂಬರೀಶ್ ಹೇಳಿದ್ದು ವಾಸ್ತವವನ್ನು. ಕನ್ನಡ ನಿರ್ಮಾಪಕರ ಸ್ಥಿತಿಗತಿ ಬಗ್ಗೆ ಅವರ ಮಾತಲ್ಲಿರುವ ವಿಷಾದವನ್ನು ಯಾರೂ ಗಮನಿಸಲಿಲ್ಲ. ಬದಲಾಗಿ ಅಂಬರೀಶ್ ಅವರ ವಿರುದ್ಧ ಕೂಗಾಡುವುದಕ್ಕೆ ಒಂದು ಕಾರಣ ಸಿಕ್ಕಿತು ಎಂದು ಬೀಗಿದರು. ಅಂಬರೀಶ್ ಅವರನ್ನು ಇಷ್ಟೊಂದು ವರ್ಷದಿಂದ ನೋಡುತ್ತಿರುವ, ಅವರ ಸ್ವಭಾವವನ್ನು ಚೆನ್ನಾಗಿ ಅರಿತಿರುವ ಚಿತ್ರೋದ್ಯಮಿಗಳೇ ಅವರನ್ನು ಅಪಾರ್ಥ ಮಾಡಿಕೊಂಡಿದ್ದು ಕೂಡಾ ಪೂರ್ವನಿರ್ಧಾರಿತವೇ?

ಇವರೆಲ್ಲಾ ಏನು ಮಾಡುವುದಕ್ಕೆ ಹೊರಟಿದ್ದಾರೆ? ಈ ವಯಸ್ಸಲ್ಲಿ ಅಂಬರೀಶ್ ಅವರನ್ನು ಬದಲಾಯಿಸುವುದಕ್ಕೆ ಹೊರಟಿದ್ದಾರಾ? ಇದಕ್ಕೆ ನನ್ನಂಥ ಸಹೃದಯಿಗಳ ವಿರೋಧವಿದೆ. ಕನ್ನಡ ಚಿತ್ರೋದ್ಯಮದಲ್ಲಿ ತನಗನಿಸಿದ್ದನ್ನು ಯಾವುದೇ ಮುಜಾಜಿಲ್ಲದೇ ಹೇಳುವ ಏಕೈಕ ವ್ಯಕ್ತಿಯೆಂದರೆ ಅಂಬರೀಶ್. ಜಾತಿ, ಸ್ವಹಿತಾಸಕ್ತಿ, ಲಾಭಗಳ ಆಸೆಯನ್ನು ಮೀರಿನಿಂತ ಮನುಷ್ಯ. ಅವರ ಅಭಿನಯದ ಬಗ್ಗೆ ನನ್ನ ತಕರಾರಿದೆ, ಆದರೆ ಒಬ್ಬ ವ್ಯಕ್ತಿಯಾಗಿ ಅವರನ್ನು ಮೆಚ್ಚುವುದಕ್ಕೆ ನೂರಾರು ಕಾರಣಗಳಿವೆ, ಅವರ ಉಡಾಫೆಯೂ ಸೇರಿದಂತೆ. ಈಗಂತೂ ಅವರಿಗೆ ಈ ಉದ್ಯಮದಲ್ಲಿ ಹಿರಿಯಣ್ಣನ ಸ್ಥಾನಮಾನ ಪ್ರಾಪ್ತಿಯಾಗಿದೆ. ಹಾಗಾಗಿ ಅವರ ಮಾತಿಗೊಂದು ತೂಕ ತಾನಾಗಿ ಒದಗಿಬರುತ್ತದೆ. ಅದನ್ನು ನಾವು ಕೇಳಿಸಿಕೊಳ್ಳಬೇಕು. ಅವರು ರೇಗಿದರೆ ಅದು ಮನೆಯ ಯಜಮಾನನ ಸಾತ್ವಿಕ ಸಿಟ್ಟು ಎಂದು ಸ್ವೀಕರಿಸಬೇಕು.
ಅಥವಾ ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಕು. ಪಂಚಾಯ್ತಿಗೆ ಬನ್ನಿ ಎಂದು ಕರೆದು, ಕೊನೆಗೆ ನೀವೇ ಸರಿಯಿಲ್ಲ ಎಂದು ಘೋಷಿಸುವುದು ನಾಗರಿಕ ಸಮಾಜದ ಲಕ್ಷಣವಲ್ಲ.
Pls Note
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.
Also See
Ambareesh is Fine and Will be Back Soon - Sumalath Ambarish
Ambareesh Hospitalised for Chech Up only
Rebel Star Ambareesh - One Year After the Scare
Lifetime Achievement Award For Ambareesh - Exclusive
Ambareesh says he is Healthy - No Need to Panic
Ambareesh Malaysia Coverage Appreciated
Mid-Air Dare and Ambareesh Tears - Exclusive
Ambareesh FareWell Party At Malaysia - Exclusive
Ambareesh Malaysian Friends Party Begins
Ambareesh Shopping In Malaysia - Exclusive
Ambareesh Shopping and Bargaining in Malaysia
Meeting Ambareesh At Malaysia : The 48-Hour Exclusive - Part 2
Ambareesh Returning on 11th Confirmed
Ambareesh to Malaysia from Singapore
Ambareesh To Be Shifted Out of Singapore - Exclusive
Ambareesh Sends Message to Fans
Ambareesh To Be Air-Lifted to Singapore
Ambareesh Healthy