ಬಭ್ರುವಾಹನ.. ಬಂಗಾರದ ಪಂಜರ.. ಹುಲಿ ಹಾಲಿನ ಮೇವು.. ಕಸ್ತೂರಿ ನಿವಾಸ.. ಭಕ್ತ ಸಿರಿಯಾಳ.. ರಂಗನಾಯಕಿ.. ಸನಾದಿ ಅಪ್ಪಣ್ಣ.. ಜಯಸಿಂಹ.. ದೂರದ ಬೆಟ್ಟ.. ದಾರಿ ತಪ್ಪಿದ ಮಗ.. ಸತ್ಯ ಹರಿಶ್ಚಂದ್ರ.. ಬೆಳ್ಳಿ ಮೋಡ.. ಅಂತ.. ಅಜಿತ್.. ಅಂತಿಮ ತೀರ್ಪು.. ಧರ್ಮಯುದ್ಧ.. ಭಕ್ತ ಜ್ಞಾನದೇವ.. ನಲ್ಲ..
ಚಿತ್ರರಂಗಕ್ಕೆ ಕೆಸಿಎನ್ ಕೊಟ್ಟ ಕೊಡುಗೆ ಒಂದೆರಡಲ್ಲ.. ಕೆಸಿಎನ್ ಗೌಡರೇ ಆಗಲಿ.. ಕೆಸಿಎನ್ ಚಂದ್ರಶೇಖರ್ ಅವರೇ ಆಗಲಿ.. ನಿರ್ಮಿಸಿದ ಬಹುತೇಕ ಚಿತ್ರಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಕ್ಲಾಸಿಕ್.
ಡಾ.ರಾಜ್, ವಿಷ್ಣು, ಅಂಬಿ, ಸುದೀಪ್, ದರ್ಶನ್, ಲೋಕೇಶ್.. ಕನ್ನಡ ಚಿತ್ರರಂಗದ ಅತಿರಥ ಮಹಾರಥರಿಗೇ ಚಿತ್ರಗಳನ್ನು ನಿರ್ಮಿಸಿದ ಕೆಸಿಎನ್ ಚಂದ್ರಶೇಖರ್ ಮೊನ್ನೆಯಷ್ಟೇ ನಿಧನರಾದರು. ಆದರೆ.. ಕನ್ನಡ ಚಿತ್ರರಂಗದ ಗಣ್ಯರು ಎನಿಸಿಕೊಂಡವರೊಬ್ಬರೂ ಕೆಸಿಎನ್ ಮನೆಯತ್ತ ತಲೆಹಾಕಲಿಲ್ಲ. ಚೇಂಬರ್ ಅಧ್ಯಕ್ಷರು, ನಿರ್ಮಾಪಕರ ಸಂಘದ ಅಧ್ಯಕ್ಷರು, ಸಾ.ರಾ.ಗೋವಿಂದು, ಕೆ ವಿ ಚಂದ್ರಶೇಖರ್, ಕೆಸಿ ರಾಮಮೂರ್ತಿ.. ಹೀಗೆ ಕೆಲವು ಆಪ್ತರಷ್ಟೇ ಮನೆಗೆ ಹೋಗಿ ಕೆಸಿಎನ್ ಕುಟುಂಬದವರಿಗೆ ಸಾಂತ್ವನ ಹೇಳಿದರು. ದ್ವಾರಕೀಶ್ ವಯಸ್ಸಿನ ಕಾರಣದಿಂದ ಮನೆಯಲ್ಲೇ ಉಳಿದರೂ, ಪುತ್ರ ಯೋಗಿ ದ್ವಾರಕೀಶ್ ರನ್ನು ಕಳಿಸಿಕೊಟ್ಟರು. ಆದರೆ.. ಉಳಿದವರು.. ಸ್ಟಾರ್ ನಟ, ನಟಿಯರು.. ಚಿತ್ರರಂಗದಿಂದಲೇ ರಾಜಕೀಯದಲ್ಲೂ ಉನ್ನತ ಸ್ಥಾನಕ್ಕೇರಿದ ಘಟಾನುಘಟಿಗಳು ಯಾರೊಬ್ಬರೂ ಕೆಸಿಎನ್ ಮನೆಗೆ ಬರಲಿಲ್ಲ.
ಹಿರಿಯ ನಟ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ದರ್ಶನ್, ಸುದೀಪ್, ಶ್ರೀಮುರಳಿ.. ಹೀಗೆ ಸ್ಟಾರ್ ನಟರ ಸಂತಾಪ ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡುವಷ್ಟಕ್ಕೇ ಸೀಮಿತವಾಯ್ತು. ಮಾಜಿ ಸಚಿವೆಯೂ ಆಗಿರುವ ಜಯಮಾಲಾ, ಹಾಲಿ ಶಾಸಕಿಯಾಗಿರುವ ತಾರಾ ಅನುರಾಧ, ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ನಾಗಾಭರಣ, ಜಗ್ಗೇಶ್, ಸುಮಲತಾ ಅಂಬರೀಷ್, ಮುಖ್ಯಮಂತ್ರಿ ಚಂದ್ರು.. ಊಹೂಂ.. ಯಾರೊಬ್ಬರೂ ಕೆಸಿಎನ್ ಮನೆಯತ್ತ ಸುಳಿಯಲಿಲ್ಲ. ಮನೆಯವರಿಗೆ ಸಾಂತ್ವನ ಹೇಳಲಿಲ್ಲ.
ಇದರ ನಡುವೆ ಸಂಚಾರಿ ವಿಜಯ್ ಅಕಾಲಿಕ ಮರಣವಾಯ್ತು. ಅವರ ಅಂತ್ಯ ಸಂಸ್ಕಾರದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಸರ್ಕಾರೀ ಗೌರವ ವಂದನೆಯೊಂದಿಗೆ ವಿಜಯ್ ಅವರನ್ನು ಬೀಳ್ಕೊಡಲಾಯಿತು. ಒಬ್ಬ ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದನಿಗ ದೊಡ್ಡ ಗೌರವವೇ ಸಂದಿತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ವಿಜಯ್ ಅವರ ನಿಧನಕ್ಕೆ ಕಂಬನಿ ಮಿಡಿದರು.

ಆದರೆ.. ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೊಳಪು ನೀಡಿದ, ಹೆಮ್ಮೆಯ ಚಿತ್ರಗಳನ್ನು ನಿರ್ಮಿಸಿದ, ದಿಗ್ಗಜ ನಿರ್ಮಾಪಕನನ್ನು ಸರ್ಕಾರ ಕನಿಷ್ಠ ನೆನಪಿಸಿಕೊಳ್ಳಲೂ ಇಲ್ಲ. ಕೆಸಿಎನ್ ಅವರ ಮನೆ ವಿಧಾನಸೌಧಕ್ಕೆ ತುಂಬಾ ದೂರದಲ್ಲೇನೂ ಇಲ್ಲ. ಕೆಲವೇ ಕಿಲೋಮೀಟರುಗಳ ಅಂತರವಷ್ಟೆ. ಸರ್ಕಾರದ ಎಷ್ಟೋ ಸಚಿವರ ನಿವಾಸಗಳು ಕೆಸಿಎನ್ ಅವರ ಮನೆಗೆ ಕೂಗಳತೆ ದೂರದಲ್ಲಿವೆ. ಆದರೂ.. ಯಾಕೋ.. ಏನೋ.. ಯಾರಿಗೂ ನೆನಪಾಗಲಿಲ್ಲ. ಮನೆಗೆ ಬಂದು ಸಾಂತ್ವನ ಹೇಳಿದ ಒಬ್ಬರೇ ಒಬ್ಬ ರಾಜಕಾರಣಿಯಿದ್ದರೆ, ಹಿರಿಯ ನಿರ್ಮಾಪಕರೂ ಆಗಿರುವ ಮುನಿರತ್ನ ಮಾತ್ರ.
ಒಂದೇ ಒಂದು ಖಾಸಗಿ ಚಾನೆಲ್ ಹೊರತುಪಡಿಸಿದರೆ, ಟಿವಿ ಚಾನೆಲ್ಲುಗಳಲ್ಲೂ ಕೆಸಿಎನ್ ಚಂದ್ರಶೇಖರ್ ಅವರ ಸುದ್ದಿ ಹೆಚ್ಚಾಗಿ ಹೋಗಲಿಲ್ಲ. ಪತ್ರಿಕೆಗಳ ವರದಿಗಾರರಾಗಲೀ, ಛಾಯಾಗ್ರಾಹಕರಾಗಲಿ.. ಕೆಸಿಎನ್ ಚಂದ್ರಶೇಖರ್ ಮನೆಯತ್ತ ಹೋಗಿ ವರದಿ ಮಾಡಲಿಲ್ಲ.
ಕನ್ನಡ ಚಿತ್ರರಂಗದ ಇತಿಹಾಸ ಬರೆಯಲು ಕುಳಿತರೆ ಕೆಸಿಎನ್ ಕುಟುಂಬದ ಸಾಧನೆಯೇ ದೊಡ್ಡ ಅಧ್ಯಾಯವಾದೀತು. ಆದರೆ.. ಚಿತ್ರರಂಗದವರಾಗಲೀ.. ಚಿತ್ರರಂಗದಿಂದಲೇ ಗುರುತಿಸಿಕೊಂಡು ರಾಜಕೀಯದಲ್ಲಿ ದೊಡ್ಡ ಸ್ಥಾನ ತಲುಪಿದವರಾಗಲೀ.. ಕೆಸಿಎನ್ ಕುಟುಂಬದಿಂದಲೇ ಚಿತ್ರರಂಗಕ್ಕೆ ಬಂದು ಗುರುತಿಸಿಕೊಂಡವರಾಗಲೀ.. ಕೆಸಿಎನ್ ಕುಟುಂಬವೇ ಬೆನ್ನಿಗೆ ನಿಂತು ಬೆಳೆಸಿದ ದೊಡ್ಡ ದೊಡ್ಡವರಾಗಲೀ.. ಯಾರೊಬ್ಬರೂ ಅಲ್ಲಿ ಇರಲಿಲ್ಲ.
ಕೆಸಿಎನ್ ಕುಟುಂಬದವರು, ಅವರ ಆಪ್ತಮಿತ್ರರನ್ನು ಹೊರತುಪಡಿಸಿದರೆ.. ಉಳಿದವರು ಮರೆತೇಬಿಟ್ಟರು. ದಿಗ್ಗಜ ನಿರ್ಮಾಪಕನ ವಿದಾಯದ ಕ್ಷಣಗಳನ್ನು ನೋಡುತ್ತಿದ್ದರೆ.. ಇದು ಅವಮಾನದ ವಿದಾಯ ಎನ್ನಿಸಿದ್ದಂತೂ ಸುಳ್ಳಲ್ಲ.