ಪುನೀತ್ ರಾಜ್‍ಕುಮಾರ್ ಪಿಆರ್‍ಕೆ ಪ್ರೊಡಕ್ಷನ್ಸ್ ಎಂಬ ಹೊಸ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಪುನೀತ್ ಹೊಸ ಬ್ಯಾನರ್ ನಿರ್ಮಿಸಿದರು ಎಂದ ಕೂಡಲೇ ಒಂದಷ್ಟು ಹೊಸ ಅನುಮಾನಗಳು, ಪ್ರಶ್ನೆಗಳು ಎದ್ದಿವೆ. ಆ ರೀತಿಯ ಪ್ರಶ್ನೆಗಳು ಏಳೋದು ಸಹಜ. ಅಂತಹ ಪ್ರಶ್ನೆಗಳಿಗೆಲ್ಲ ಪುನೀತ್ ಉತ್ತರ ಕೊಟ್ಟಿದ್ದಾರೆ. ಇನ್ನೊಂದು ವಿಶೇಷವಿದೆ ಕೇಳಿ. ಪಿಆರ್‍ಕೆ ಪ್ರೊಡಕ್ಷನ್ಸ್ ಎಂದರೆ, ಪುನೀತ್ ರಾಜ್‍ಕುಮಾರ್ ಪ್ರೊಡಕ್ಷನ್ಸ್ ಅಲ್ಲ. ಪಾರ್ವತಮ್ಮ ರಾಜ್‍ಕುಮಾರ್ ಪ್ರೊಡಕ್ಷನ್ಸ್. ಇದು ತಾಯಿಯ ಹೆಸರಲ್ಲಿ ಪುನೀತ್ ಆರಂಭಿಸಿರುವ ಹೊಸ ಚಿತ್ರ ನಿರ್ಮಾಣ ಸಂಸ್ಥೆ.
ಪ್ರಶ್ನೆ : ವಜ್ರೇಶ್ವರಿಯಿಂದ ಪಿಆರ್‍ಕೆ ಹೇಗೆ ಭಿನ್ನ..? ಇದು ಬೇರೆಯೇ ಸಂಸ್ಥೆನಾ..?
ಪುನೀತ್ : ಪಿಆರ್‍ಕೆ ಬ್ಯಾನರ್ ಉದ್ಘಾಟನೆಯಾಯಿತು ಎಂದ ಕೂಡಲೇ ವಜ್ರೇಶ್ವರಿ ಸಂಸ್ಥೆಯಿಂದ ದೂರವೇನೂ ಇರಲ್ಲ. ಅದರಂತೆಯೇ ಇದು ಕೂಡಾ ಇನ್ನೊಂದು ಬ್ಯಾನರ್ ಅಷ್ಟೆ. ಮುಂದಿನ ವರ್ಷ ಸ್ವಂತ ಬ್ಯಾನರ್‍ನಲ್ಲೇ ಚಿತ್ರ ನಿರ್ಮಾಣದ ಯೋಚನೆ ಇದೆ. ವಜ್ರೇಶ್ವರಿಯಲ್ಲಾದರೂ ನಿರ್ಮಾಣವಾಗಬಹುದು, ಪಿಆರ್‍ಕೆ ಬ್ಯಾನರ್‍ನಲ್ಲಾದರೂ ನಿರ್ಮಾಣವಾಗಬಹುದು.
ಪ್ರಶ್ನೆ : ಇನ್ನು ಮುಂದೆ ಬೇರೆ ಬ್ಯಾನರ್‍ಗಳಲ್ಲಿ ನಟಿಸೋದಿಲ್ವಾ..?
ಪುನೀತ್ : ಹಾಗೇನಿಲ್ಲ. ಬೇರೆ ಬ್ಯಾನರ್‍ಗಳಲ್ಲೂ ನಟಿಸುತ್ತೇನೆ. ನಮ್ಮ ಬ್ಯಾನರ್‍ನಲ್ಲೂ ನಟಿಸುತ್ತೇನೆ.
ಪ್ರಶ್ನೆ : ನೀವು ನಿರ್ಮಿಸುತ್ತಿರುವ ಚಿತ್ರದಲ್ಲಿ ಬೇರೊಬ್ಬರು ಹೀರೋ ಆಗುವದು ಹೊಸ ಪ್ರಯತ್ನ ಅಲ್ಲವೇ..?
ಪುನೀತ್ : ಹಾಗೇನಿಲ್ಲ. ಈ ಹಿಂದೆ, ಸುದೀಪ್, ದರ್ಶನ್ ಇಂಥ ಪ್ರಯತ್ನ ಮಾಡಿದ್ದಾರೆ. ನಮ್ಮಲ್ಲೂ ಹೊಸ ಹೊಸ ಪ್ರಯೋಗಗಳಿಗೆ ಜನ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂಥ ಕೆಲಸಕ್ಕೆ ಕೈ ಹಾಕಲು ಧೈರ್ಯವಾಯಿತು.
ಪ್ರಶ್ನೆ : ನಿಮ್ಮ ಬ್ಯಾನರ್‍ನಿಂದ ಎಂಥ ಸಿನಿಮಾಗಳು ಬರುತ್ತವೆ..?
ಪುನೀತ್ ; ಕಮರ್ಷಿಯಲ್ ಸಿನಿಮಾಗಳೇ ಬರುತ್ತವೆ. ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವ ಮನಸ್ಸಿದೆ. ನನ್ನ ಪ್ರಕಾರ, ಸಿನಿಮಾಗಳನ್ನು ಕಮರ್ಷಿಯಲ್, ಆರ್ಟ್ ಎಂದು ವಿಭಜಿಸಲೇಬಾರದು. ಒಂದು ಸಿನಿಮಾ ಎಲ್ಲರಿಗೂ ತಲುಪುವಂತಿರಬೇಕು.