ಸೈಬರ್ ಕ್ರೈಂಗಳು ದಿನೇ ದಿನೇ ಹೆಚ್ಚುತ್ತಿವೆ. ಪೊಲೀಸರು ಎಷ್ಟೇ ಅಲರ್ಟ್ ಮಾಡಿದರೂ.. ಯಾರೋ ಫೋನ್ ಮಾಡಿದವರಿಗೆ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳ ಡೇಟಾ ಕೊಟ್ಟು, ಒಟಿಪಿ ಕೊಟ್ಟು ಹಣ ಕಳೆದುಕೊಳ್ಳುವವರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಬೆಂಗಳೂರೊಂದರಲ್ಲೇ ಪ್ರತಿದಿನ ಮಿನಿಮಮ್ 25 ಜನ ಹೀಗೆ ಮೋಸ ಹೋಗ್ತಾರಂತೆ. ಈಗ ಆ ಚೀಟಿಂಗ್‍ಗೆ ಮ್ಯಾಟ್ರಿಮೋನಿಯಲ್ ವೆಬ್‍ಸೈಟುಗಳೂ ಸೇರಿವೆ. ಹೀಗಾಗಿ ಇವನ್ನು ತಡೆಗಟ್ಟಲು ಸೈಬರ್ ಪೊಲೀಸರು ಅಂಬರೀಷ್, ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ರಂಗಾಯಣ ರಘು ಅವರನ್ನು ಅರ್ಥಾತ್ ಅವರ ಧ್ವನಿಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.
ಸ್ಟಾರ್‍ಗಳು, ಕಲಾವಿದರ ಮೇಲೆ ಜನರಿಗೆ ಪ್ರೀತಿ ಮತ್ತು ನಂಬಿಕೆ ಹೆಚ್ಚು. ಅವರು ಹೇಳಿದ್ದನ್ನು ಪಾಲಿಸುತ್ತಾರಷ್ಟೇ ಅಲ್ಲ, ಬೇಗ ಮರೆಯುವುದಿಲ್ಲ. ಹೀಗಾಗಿ ಸೈಬರ್ ವಂಚನೆಯ ಸುಳಿಯಲ್ಲಿ ಸಿಲುಕದೇ ಇರಲು ಏನು ಮಾಡಬೇಕು.. ಏನು ಮಾಡಬಾರದು ಎಂಬ ಬಗ್ಗೆ ಅವರಿಂದ ಹೇಳಿಸೋದು ಸೈಬರ್ ಪೊಲೀಸರ ಪ್ಲಾನ್. ಈ ಮೂಲಕ ಸೈಬರ್ ಕ್ರೈಂ ಜಾಗೃತಿ ಸಂದೇಶ ಸಾರಲು ನಿರ್ಧರಿಸಿದ್ದಾರೆ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಪೊಲೀಸರು.
ಅಷ್ಟೇ ಅಲ್ಲ, ಇದರ ಜೊತೆಯಲ್ಲೇ ಇನ್ನೂ ಒಂದು ಸಲಹೆ ಕೊಟ್ಟಿದ್ದಾರೆ ಸೈಬರ್ ವಿಭಾಗದ ಇನ್ಸ್‍ಪೆಕ್ಟರ್ ಯಶ್‍ವಂತ್ ಕುಮಾರ್. ಸೈಬರ್ ಕ್ರಿಮಿನಲ್‍ಗಳು ಹೆಚ್ಚಾಗಿ ಹೊರರಾಜ್ಯದವರು. ಅವರು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿಯೇ ವ್ಯವಹರಿಸುತ್ತಾರೆ. ನಾವು ಬ್ಯಾಂಕ್‍ನವರ ಜೊತೆ ಆದಷ್ಟು ಕನ್ನಡದಲ್ಲಿಯೇ ಮಾತನಾಡಿದರೆ ಅರ್ಧ ಅಪರಾಧಗಳನ್ನು ತಡೆಗಟ್ಟಬಹುದು ಅನ್ನೋದು ಅವರ ಸಲಹೆ. ಯಾವುದೇ ಬ್ಯಾಂಕ್‍ನವರು ತಾವಾಗಿಯೇ ಫೋನ್ ಮಾಡಿ ನಮ್ಮ ವಿವರ, ಖಾತೆಯ ವಿವರ, ಒಟಿಪಿ, ಪಾಸ್‍ವರ್ಡ್ ಕೇಳುವುದಿಲ್ಲ ಎನ್ನುವುದನ್ನೂ ಅವರು ಮತ್ತೊಮ್ಮೆ ನೆನಪಿಸಿದ್ದಾರೆ. ಇದರರ್ಥ ಇಷ್ಟೆ.. ವಂಚನೆಯಿಂದ ತಪ್ಪಿಸಿಕೊಳ್ಳಲು ಇರುವ ಅತಿ ದೊಡ್ಡ ಆಯುಧ ನಮ್ಮ ಭಾಷೆ.. ಕನ್ನಡ.