ಜುಲೈ 7ಕ್ಕೆ, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ರಾಜಕುಮಾರ ಚಿತ್ರದ ಶತದಿನೋತ್ಸವ ಸಂಭ್ರಮಾಚರಣೆ ನಡೆಯುತ್ತಿದೆ.ಇತರರಿಗೆ ಮಾದರಿಯಾಗುವಂತೆ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ, ಚಿತ್ರದಲ್ಲಿ ದುಡಿದ ಕಲಾವಿದರ, ತಂತ್ರಜ್ಞರಿಗೆ ತಮಗೆ ಬಂದ ಲಾಭದ ಸ್ವಲ್ಪ ಲಾಭಾಂಶವನ್ನೂ ಹಂಚುತ್ತಿದ್ದಾರೆ. ಸುಮಾರು 140 ತಂತ್ರಜ್ಞರಿಗೆ ಕಾರ್ಮಿಕರಿಗೆ, ಉಡುಗೊರೆಯ ಜೊತೆ ಲಾಭದ ಪಾಲನ್ನೂ ನೀಡುತ್ತಿದ್ದಾರೆ.
ಲಾಭ ಬಂದ ನಂತರ ಹೀಗೆ ಹಂಚಲೇಬೇಕು ಎನ್ನುವ ನಿಯಮವೇನೂ ಇಲ್ಲ. ಆದರೆ, ಕಾರ್ತಿಕ್ ಗೌಡ, ಹೊಸ ಸತ್ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಸಮಾರಂಭದ ವೇದಿಕೆಯಲ್ಲಿ ಪುನೀತ್ ರಾಜ್ಕುಮಾರ್, ನಿರ್ದೇಶಕ ಸಂತೋಷ್ ಆನಂದ್‍ರಾಮ್ ಜೊತೆ ಇಡೀ ಚಿತ್ರತಂಡ, ರಾಜ್ ಕುಟುಂಬ, ಯಶ್, ಸುದೀಪ್, ಜಗ್ಗೇಶ್, ಉಪೇಂದ್ರ, ರವಿಚಂದ್ರನ್ ಸೇರಿದಂತೆ ಎಲ್ಲರೂ ಭಾಗವಹಿಸುತ್ತಿರುವುದು ವಿಶೇಷ. ರಾಜಕುಮಾರ ಚಿತ್ರದ ಯಶಸ್ಸು, ಇಡೀ ಚಿತ್ರರಂಗದ ಪಾಲಿಗೆ ಹಬ್ಬವಾಗಿದೆ.
ಕಾರ್ಯಕ್ರಮದಲ್ಲಿ ನಟಿ ಹರಿಪ್ರಿಯಾ ಡ್ಯಾನ್ಸ್ ಇರಲಿದೆ. ಸಾಧು ಕೋಕಿಲ, ಚಿಕ್ಕಣ್ಣ ಕಾಮಿಡಿ ಇರಲಿದೆ. ಲೇಜರ್ ಶೋ, ಮಕ್ಕಳ ನೃತ್ಯ ಸೇರಿದಂತೆ ಭರ್ಜರಿ ಮನರಂಜನೆ ಇರಲಿದೆ.