ಯುವರತ್ನ, ಏಪ್ರಿಲ್ 1ರಂದು ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಾದಿಯಲ್ಲಿದ್ದ ಸಿನಿಮಾ. ಈ ಸಿನಿಮಾಗೆ ಇದ್ದಕ್ಕಿದ್ದಂತೆ 50% ನಿರ್ಬಂಧ ಹೇರಿದ್ದು ರಾಜ್ಯ ಸರ್ಕಾರ. ಪುನೀತ್ ರಾಜ್ಕುಮಾರ್ ಸೇರಿದಂತೆ ಇಡೀ ಚಿತ್ರರಂಗವೇ ಕೈಮುಗಿದು ಕೇಳಿಕೊಂಡಿತು. ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡಿ ಎಂದು ಬೇಡಿಕೊಂಡಿತು. ಈ ಹಾದಿಯಲ್ಲಿ ಯುವರತ್ನ ಚಿತ್ರತಂಡಕ್ಕೆ ಸಿಕ್ಕ ಬೆಂಬಲವಂತೂ ಅಮೋಘವಾಗಿತ್ತು.
ಕಿಚ್ಚ ಸುದೀಪ್, ಶಿವಣ್ಣ, ಯಶ್, ಜಗ್ಗೇಶ್, ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಶರಣ್, ರಿಷಬ್ ಶೆಟ್ಟಿ, ಜೋಗಿ ಪ್ರೇಮ್, ದಿನಕರ್ ತೂಗುದೀಪ್, ಪವನ್ ಒಡೆಯರ್, ಎ.ಪಿ.ಅರ್ಜುನ್. ಹೇಮಂತ್ ರಾವ್, ಶೈಲಜಾ ನಾಗ್, ಕೆ.ಪಿ.ಶ್ರೀಕಾಂತ್, ಚೇತನ್ ಕುಮಾರ್, ಸ್ವಪ್ನಾ ಕೃಷ್ಣ, ಪೃಥ್ವಿ ಅಂಬರ್, ವಿ.ನಾಗೇಂದ್ರ ಪ್ರಸಾದ್, ರವಿಶಂಕರ್ ಗೌಡ….. ಹೀಗೆ ಚಿತ್ರತಂಡದ ಸದಸ್ಯರಷ್ಟೇ ಅಲ್ಲದೆ ಇಡೀ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕರು ಯುವರತ್ನ ಬೆಂಬಲಕ್ಕೆ ನಿಂತರು.
ಫಿಲಂ ಚೇಂಬರ್ ಒಗ್ಗಟ್ಟಾಗಿ ನಿಂತು ಸರ್ಕಾರದ ವಿರುದ್ಧ ಗುಡುಗಿತು. ರಾಜ್ಯ ಸರ್ಕಾರವೇ ಯುವರತ್ನ ಚಿತ್ರವನ್ನು ಕೊಂದು ಹಾಕಿತು ಎಂದು ನೇರವಾಗಿಯೇ ಗುಡುಗಿದರು ಸಾ.ರಾ.ಗೋವಿಂದು. ಇದರ ಹಿಂದೆ ಪಿತೂರಿಯೇ ನಡೆಯುತ್ತಿದೆ ಎಂಬ ಅನುಮಾನವನ್ನೂ ಹಲವು ಚೇಂಬರ್ನ ಹಲವು ಸದಸ್ಯರು ಹೇಳಿದರು. ಸಂಜೆಯ ಹೊತ್ತಿಗೆ ಫಿಲಂ ಚೇಂಬರ್ ಸಂಪೂರ್ಣ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ಕೋರಿ ಖುದ್ದು ಯಡಿಯೂರಪ್ಪನವರಿಗೇ ಮನವಿ ಸಲ್ಲಿಸಿತು.ಸರ್ಕಾರವೂ ಈಗ 100% ಪ್ರೇಕ್ಷಕರ ಭರ್ತಿಗೆ ಓಕೆ ಎಂದಿದೆ. ಅದೂ ಕೇವಲ 4 ದಿನ.
ಇದೆಲ್ಲವೂ ಚಿತ್ರರಂಗದ ಮಾತಾದರೆ, ಅಭಿಮಾನಿ ದೇವರುಗಳ ರಿಯಾಕ್ಷನ್ ಬೇರೆಯೇ ಇತ್ತು. ಅವರು ನೇರವಾಗಿ ಚಿತ್ರಮಂದಿರಕ್ಕೆ ಹೋದರು. ಅಭಿಮಾನಿ ಸಂಘಟನೆ ಸದಸ್ಯರು ಫಿಲಂ ಚೇಂಬರ್ ಎದುರು ಪ್ರತಿಭಟನೆಗಿಳಿದರು. ಚಿತ್ರ ನೋಡಿದ್ದ ಪ್ರೇಕ್ಷಕರೇ ಪುಟ್ಟ ಪುಟ್ಟ ವಿಡಿಯೋ ಮಾಡಿ ಯುವರತ್ನ ಚಿತ್ರವನ್ನು ನೋಡಲು ಮತ್ತೊಬ್ಬರಿಗೆ ಕರೆ ಕೊಟ್ಟರು. ನೋಡ ನೋಡುತ್ತಲೇ ಯುವರತ್ನ ಚಿತ್ರವೀಗ ಕನ್ನಡಿಗರು ನೋಡಲೇಬೇಕಾದ ಚಿತ್ರವಾಗಿ ಹೋಗಿದೆ. ಯುವರತ್ನ ಗೆಲ್ಲಲಿ.