ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಸಮಸ್ತ ಕನ್ನಡ ಚಿತ್ರರಂಗವೇ ಸೇರಿತ್ತು. ಅಶ್ವಿನಿ ಪುನೀತ್ ರಾಜ್‍ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗವಹಿಸಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಮೊದಲ ದಿನವೇ ಥಿಯೇಟರ್‍ನಲ್ಲಿ ಸಿನಿಮಾ ನೋಡುತ್ತೇನೆ. ಕ್ಷಮೆಯಿರಲಿ ಎಂದು ಪೋಸ್ಟ್ ಮಾಡಿದ್ದಾರೆ ರಿಷಬ್ ಶೆಟ್ಟಿ. ಶಿವಣ್ಣ ಸೇರಿದಂತೆ ಇಡೀ ದೊಡ್ಮನೆ ಗೊಂಬೆ ಹೇಳುತೈತೆ ಹಾಡಿನ ಮೂಲಕ ಪುನೀತ್‍ಗೆ ಶ್ರದ್ಧಾಂಜಲಿ ಸಲ್ಲಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಪುನೀತ್ ಅವರ ನಗುವನ್ನೇ ಮೈಮೇಲೆ ಹೊತ್ತುಕೊಂಡಿದ್ದರು. ನಗು ನಗುತ್ತಲೇ ಮಾತನಾಡಿದರು.
ಸುಧಾ ಮೂರ್ತಿ : ನಾನು ಅಪ್ಪುವನ್ನ ಪುನೀತ್ ಎಂದು ಕರೆದವಳಲ್ಲ. ಲೋಹಿತ್ ಎಂದೇ ಕರೆಯುತ್ತಿದ್ದೆ. ಅವರು ಎಂತಹ ಸಜ್ಜನರು ಎಂದರೆ ಎಲ್ಲೇ ಕಂಡರೂ ಕಾಲಿಗೆ ನಮಸ್ಕರಿಸುತ್ತಿದ್ದರು. ಕೊಲಂಬೋ ವಿಮಾನನಿಲ್ದಾಣದಲ್ಲಿ ಕೂಡಾ ನಮಸ್ಕರಿಸಿದ್ದರು. ಇಲ್ಯಾಕೆ ಎಂದರೆ ಸಜ್ಜನರು ಎಲ್ಲೇ ಕಂಡರೂ ನಮಸ್ಕರಿಸಬೇಕು ಎನ್ನುತ್ತಿದ್ದರು. ನಾವೆಲ್ಲ ಹಳೆಯ ಕಾಲದವರು ಅಣ್ಣಾವ್ರ ಭಕ್ತರು.
ಯಶ್ : ಒಂದು ವರ್ಷದ ಕೆಳಗೆ ಹತ್ತಿರಹತ್ತಿರ ಇದೇ ದಿನ ಇರಬಹುದು. ನಾನು, ಶಿವಣ್ಣ ಮತ್ತು ಪುನೀತ್ ಒಟ್ಟಿಗೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಅವರಿದ್ದ ಕಡೆ ಉತ್ಸಾಹವಿರುತ್ತಿತ್ತು. ಅವರೊಬ್ಬರಿಗೆ ಮಾತ್ರ ಇಡೀ ಕರ್ನಾಟಕದ ಮಗ ಅನ್ನೋ ಫೀಲಿಂಗ್. ಕರ್ನಾಟಕದ ಜನ ಅವರನ್ನು ಮಾತ್ರ ಕರ್ನಾಟಕದ ಮಗ ಎಂದುಕೊಂಡಿದ್ದರು. ಅದು ಸಿಗೋದು ಅಪ್ಪು ಅವರಿಗೆ ಮಾತ್ರ.
ರಮ್ಯಾ : ಇವತ್ತು ಈ ವೇದಿಕೆ ಮೇಲಿದ್ದೀನಿ. ಜನ ಪ್ರೀತಿ ತೋರಿಸುತ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ ರಾಜ್ ಕುಟುಂಬ. ನನಗೆ ಅಪ್ಪು ಬದುಕಿಲ್ಲ ಎಂದು ಅನ್ನಿಸಿಲ್ಲ. ಅಭಿಮಾನಿಗಳ ಹೃದಯದಲ್ಲಿ ನೋಡುತ್ತಿದ್ದೇನೆ.
ಸೂರ್ಯ : ನನಗೆ ಅಪ್ಪು ಅವರೊಂದಿಗೆ ಅದ್ಭುತ ನೆನಪುಗಳಿವೆ. ಆ ನೆನಪುಗಳೊಂದಿಗೆ ಅಪ್ಪು ಜೀವಂತವಾಗಿದ್ದಾರೆ. ಅಪ್ಪು ಅವರನ್ನು ಪಡೆದ ನೀವು ಅದೃಷ್ಟವಂತರು. ನಿಮ್ಮಂತ ಅಭಿಮಾನಿಗಳನ್ನ ಪಡೆದ ಅಪ್ಪು ಕೂಡಾ ಅದೃಷ್ಟವಂತರು.
ರಕ್ಷಿತ್ ಶೆಟ್ಟಿ : ನನ್ನ ಚಾರ್ಲಿಗೆ ಎಡಿಟರ್ ಆಗಿದ್ದ ಪ್ರತೀಕ್ ಶೆಟ್ಟಿ ಗಂಧದ ಗುಡಿಗೂ ಎಡಿಟರ್. ಹೀಗಾಗಿ ಕೆಲವು ದೃಶ್ಯಗಳನ್ನು ನಾನು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಅಪ್ಪು ಅವರನ್ನು ಅಪ್ಪು ಅವರಾಗಿಯೇ ನೋಡುವ ಅವಕಾಶ ಇದುವರೆಗೆ ಸಿಕ್ಕಿರಲಿಲ್ಲ. ದೊಡ್ಡ ಪರದೆ ಮೇಲೆ ನೋಡೋಕೆ ಕಾಯುತ್ತಿದ್ದೇನೆ.
ಸುಮಲತಾ ಅಂಬರೀಷ್ : ಅಪ್ಪು ನನಗೆ ತುಂಬಾನೇ ಸ್ಪೆಷಲ್. ನಾನು ಅಪ್ಪುನ ನೋಡಿದಾಗ ಅವನಿಗೆ 5 ವರ್ಷ. ಕನ್ನಡ ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದ್ದು ಡಾ.ರಾಜ್ ಮತ್ತು ಪಾರ್ವತಮ್ಮ. ಈಗ ಅಪ್ಪು ಲೈಫ್‍ನ್ನು ಸೆಲಬ್ರೇಟ್ ಮಾಡೋಣ
ಧ್ರುವ ಸರ್ಜಾ : ಅಣ್ಣಾವ್ರ ಗಂಧದ ಗುಡಿ ನೋಡಿದ್ದೇವೆ. ಶಿವಣ್ಣನ ಗಂಧದ ಗುಡಿಯನ್ನೂ ನೋಡಿದ್ದೇವೆ. ಈಗ ಪುನೀತ್ ಗಂಧದ ಗುಡಿಯನ್ನು ಅಭಿಮಾನಿಗಳ ಜೊತೆಯಲ್ಲಿ ನೋಡುತ್ತೇನೆ.
ದುನಿಯಾ ವಿಜಯ್ : ಗಂಧದ ಗುಡಿ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇನೆ. ಕನ್ನಡಕ್ಕೆ ಒಬ್ಬನೇ ರಾಜಕುಮಾರ. ಅದು ಪುನೀತ್ ರಾಜಕುಮಾರ
ರವಿಚಂದ್ರನ್ : ಡಾ.ರಾಜ್ ಅಪ್ಪುಗೆಯಿಂದ ನಾನು ನಟನಾದೆ. ಗಂಧದ ಗುಡಿ ಎಂದರೆ ಅಣ್ಣಾವ್ರ ಕುಟುಂಬ. ಗಂಧದ ಗುಡಿ ಎಂದರೆ ರಾಜ್‍ಕುಮಾರ್. ಗಂಧದ ಗುಡಿ ಎಂದರೆ ಶಿವರಾಜ್‍ಕುಮಾರ್. ಗಂಧದ ಗುಡಿ ಎಂದರೆ ಪುನೀತ್ ರಾಜ್‍ಕುಮಾರ್. ರಾಜ್ ಅಪ್ಪುಗೆಯಿದ ನಟನಾದೆ. ವೀರಸ್ವಾಮಿ ಅಪ್ಪುಗೆಯಿಂದ ನಿರ್ದೇಶಕನಾದೆ. ಅಪ್ಪು ಅಪ್ಪುಗೆಯಿಂದ ಅದೃಷ್ಟವಂತನಾದೆ..
ಶಿವರಾಜ್‍ಕುಮಾರ್ : ಸಲಗೆ ಪ್ರೀಮಿಯರ್ ಶೋನಲ್ಲಿ ಅಣ್ಣ, ಟ್ರೇಲರ್ ರೆಡಿಯಾಗುತ್ತಿದೆ. ಚೆನ್ನಾಗಿದೆ. ತೋರಿಸುತ್ತೇನೆ ಎಂದಿದ್ದ. ತೋರಿಸದೆಯೇ ಹೋಗಿಬಿಟ್ಟ. ನಾನು ಶಿವಣ್ಣನ ಫ್ಯಾನ್ ಎನ್ನುತ್ತಿದ್ದ. ಆದರೆ ನಾನು ಅಪ್ಪು ಫ್ಯಾನ್. ಅವನು ದೂರವಾಗಿದ್ದರೆ ತಾನೇ ಮಿಸ್ ಮಾಡಿಕೊಳ್ಳೋದು..