ಹೊನ್ನವಳ್ಳಿ ಕೃಷ್ಣ ಅಭಿನಯದ ಮೊದಲ ಚಿತ್ರ ನ್ಯಾಯವೇ ದೇವರು. 1000ನೇ ಚಿತ್ರ ಭೂತಯ್ಯನ ಮಗ ಅಯ್ಯು. ಆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕಳೆ ತಂದವರು ಪುನೀತ್ ರಾಜ್ಕುಮಾರ್. ಅದಕ್ಕೆ ಕಾರಣ, ಹೊನ್ನವಳ್ಳಿ ಮೇಲಿನ ಪ್ರೀತಿ. ಪುನೀತ್ರನ್ನು ಚಿಕ್ಕ ಹುಡುಗನಾಗಿದ್ದಾಗ ಹೆಗಲ ಮೇಲೆ ಹೊತ್ತು ಬೆಳೆಸಿದ್ದವರು ಹೊನ್ನವಳ್ಳಿ ಕೃಷ್ಣ. ಗುರು, ಗಾರ್ಡಿಯನ್ ಎಲ್ಲವೂ ಆಗಿದ್ದ ಹೊನ್ನವಳ್ಳಿ ಕೃಷ್ಣ ಅವರ ಬಗ್ಗೆ ಪುನೀತ್ ಇಂದಿಗೂ ಅದೇ ಪ್ರೀತಿ ಇಟ್ಟುಕೊಂಡಿರುವುದು ವಿಶೇಷ.
ನನಗೆ ಗೊತ್ತಿರೋದು ಬಣ್ಣದ ಬದುಕು. ನಾನು ಈಗಲೂ ನಿರ್ದೇಶಕರು, ನಿರ್ಮಾಪಕರ ಬಳಿ ಚಾನ್ಸ್ ಕೇಳುತ್ತೇನೆ. ಈಗಲೂ ನಿನಗೆ ಚಾನ್ಸ್ ಕೊಡಬೇಕೇ? ಎನ್ನುತ್ತಾರೆ. ಆದರೆ, ನಾನು ಸಿನಿಮಾ ವಿದ್ಯಾರ್ಥಿ. ನಟನೆ ಮೂಲಕ ಕಲಿಯುತ್ತಲೇ ಇದ್ದೇನೆ ಅಂತಾರೆ ಹೊನ್ನವಳ್ಳಿ ಕೃಷ್ಣ.
ವರನಟ ರಾಜ್‌ಕುಮಾರ್, ಅಂಬರೀಷ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಜಗ್ಗೇಶ್ ಸೇರಿದಂತೆ ಹೊಸಪೀಳಿಗೆಯ ಕಲಾವಿದರ ಸಿನಿಮಾಗಳಲ್ಲಿಯೂ ನಟಿಸಿರುವುದು ಅವರ ಹೆಗ್ಗಳಿಕೆ. ಗಜಪತಿ ಗರ್ವಭಂಗ, ಮುತ್ತಣ್ಣ, ಶ್ರತಿ, ಗಣೇಶನ ಮದುವೆ.. ಹೀಗೆ ನೆನಪಿನಲ್ಲುಳಿಯುವ ಪಾತ್ರಗಳಿವೆ.
ಪುನೀತ್ಗೋಸ್ಕರ ಸಹ ನಿರ್ದೇಶನ ಮಾಡುತ್ತಿದೆ. ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದ ನಂತರ ಅದನ್ನು ಬಿಟ್ಟುಬಿಟ್ಟೆ ಎಂದು ನೆನಪಿಸಿಕೊಳ್ಳುವ ಹೊನ್ನವಳ್ಳಿ, 40ಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನಿರ್ದೇಶನ ಮಾಡಿದ್ಧಾರೆ. ಆದರೆ, ನಿರ್ದೇಶನದ ಅವಕಾಶ ಸಿಕ್ಕಿಲ್ಲ.
ನನಗೆ ಒಂದು ಸಾವಿರ ಸಿನಿಮಾಗಳಲ್ಲಿ ನಟಿಸಿದ್ದೇನೆಂಬ ಅಹಂ ಇಲ್ಲ. ಕಲಾವಿದರಿಗೆ ವೃತ್ತಿಯಲ್ಲಿ ನಯ, ವಿನಯ ಇರಬೇಕು. ಆಗ ಮಾತ್ರವೇ ಉನ್ನತಮಟ್ಟಕ್ಕೇರಲು ಸಾಧ್ಯ. ಅದನ್ನು ನಾನು ರಾಜ್ರಿಂದ ಕಲಿತೆ ಎಂದು ಸ್ಮರಿಸಿಕೊಳ್ಳುವ ಹೊನ್ನವಳ್ಳಿ ಕೃಷ್ಣ, ಗಾಂಧಿನಗರಕ್ಕೆ ಬಂದಿದ್ದೇ ರಾಜ್ ಅವರನ್ನು ಕಣ್ತುಂಬಾ ನೋಡುವ ಸಲುವಾಗಿ. ಆಮೇಲೆ ಅವರ ಮನೆ ಮಗನಂತೆಯೇ ಆಗಿ ಹೋದರು ಹೊನ್ನವಳ್ಳಿ ಕೃಷ್ಣ.
45 ವರ್ಷಗಳಿಂದ ಚಿತ್ರರಂಗದಲ್ಲಿರುವ ಹೊನ್ನವಳ್ಳಿ ಕೃಷ್ಣ, ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್, ಲೋಕೇಸ್, ಎಂ.ಪಿ. ಶಂಕರ್ ಹಾಗೂ ಸಿದ್ಧಲಿಂಗಯ್ಯ ಜೋಡಿಯ ಹಳೆಯ ಭೂತಯ್ಯನ ಮಗ ಅಯ್ಯು ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಹೆಸರೊಂದನ್ನು ಹೊರತುಪಡಿಸಿ.
ಭೂತಯ್ಯನ ಮಗು ಅಯ್ಯು, ಹೊನ್ನವಳ್ಳಿ ಕೃಷ್ಣ ಅವರಿಗೆ ಸ್ಮರಣೀಯ ಚಿತ್ರವಾಗಲಿ.