ಕಿಚ್ಚ ಸುದೀಪ್ ರಾಜಕೀಯಕ್ಕೆ ಹೋಗ್ತಾರಂತೆ ಅನ್ನೋ ಸುದ್ದಿ ಇವತ್ತು ನಿನ್ನೆಯದಲ್ಲ. ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿರುವ ಸುದೀಪ್, ಜನಸೇವೆ ಮಾಡೋಕೆ ರಾಜಕೀಯಕ್ಕೇ ಬರಬೇಕೆಂದೇನೂ ಇಲ್ಲ ಅಂತಾರೆ. ಆದರೆ, ಈ ಬಾರಿ ಸುದೀಪ್ ಮತ್ತೊಮ್ಮೆ ಉತ್ತರ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಏಕೆಂದರೆ, ಈ ಬಾರಿ ಸುದೀಪ್ ರಾಜಕೀಯದ ಬಗ್ಗೆ ಮಾತನಾಡಿರುವುದು ಕರ್ನಾಟಕದ ಹಿರಿಯ ರಾಜಕಾರಣಿ ಮಾಜಿ ಪ್ರಧಾನಿ ದೇವೇಗೌಡ.
ಸುದೀಪ್ ಅವರನ್ನು ಕುಮಾರಸ್ವಾಮಿ ಆಹ್ವಾನಿಸುರುವುದು ನಿಜ. ಆದರೆ, ಸುದೀಪ್ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ಯಾರ ವ್ಯಕ್ತಿತ್ವವನ್ನೂ ಹಗುರವಾಗಿ ಕಾಣುವುದಿಲ್ಲ ಎಂದಿದ್ದಾರೆ ದೇವೇಗೌಡ.
ಇತ್ತೀಚೆಗೆ ಕುಮಾರಸ್ವಾಮಿ ಸುದೀಪ್ ಮನೆಗೆ ಹೋಗಿ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದರು. ಕುಮಾರಸ್ವಾಮಿಯವರಿಗೆ ಸ್ವತಃ ತಾವೇ ಊಟ ಬಡಿಸಿದ್ದ ಸುದೀಪ್, ಆತ್ಮೀಯತೆ ಮೆರೆದಿದ್ದರು. ಸುದೀಪ್ ಇನ್ನೂ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಆಗಲೇ ಸುದೀಪ್ ಅವರು ಮೊಳಕಾಲ್ಮೂರಿನಿಂದ ಸ್ಪರ್ಧಿಸ್ತಾರಂತೆ, ಚಿತ್ರದುರ್ಗದಿಂದ ಎಲೆಕ್ಷನ್‍ಗೆ ನಿಲ್ತಾರಂತೆ, ಶಿವಮೊಗ್ಗದಲ್ಲಿ ಕ್ಷೇತ್ರ ಹುಡುಕುತ್ತಿದ್ದಾರಂತೆ ಎಂಬ ಸುದ್ದಿಗಳಿಗೆ ರೆಕ್ಕೆಪುಕ್ಕ ಬಂದುಬಿಟ್ಟಿದೆ.
ದೇವೇಗೌಡರು ಹೇಳಿರೋದ್ರಿಂದ ಸುದೀಪ್ ಮತ್ತೊಮ್ಮೆ ಸ್ಪಷ್ಟನೆ ಕೊಡ್ತಾರಾ..? ಅಥವಾ ತಮ್ಮ ಹಿಂದಿನ ರಾಜಕೀಯದಿಂದ ದೂರ ಇರುವ ಹೇಳಿಕೆಗೇ ಬದ್ಧರಾಗಿರ್ತಾರಾ..? ಮೂಲಗಳ ಪ್ರಕಾರ, ಸುದೀಪ್ ರಾಜಕೀಯಕ್ಕೆ ಬರುವ ಸಾಧ್ಯತೆ ಇಲ್ಲವೇ ಇಲ್ಲ.