ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಅವರ ಮನೆಗೀಗ ಮುದ್ದಾದ ರಾಜಕುಮಾರಿ ಬಂದಿದ್ದಾಳೆ. ಮಗಳನ್ನು ತಮ್ಮ ವಿವಾಹ ವಾರ್ಷಿಕೋತ್ಸವದ ದಿನವೇ ಮನೆದುಂಬಿಸಿಕೊಂಡಿದ್ದಾರೆ ಯಶ್ ದಂಪತಿ. ನಮ್ಮ ಮಗು, ನಮ್ಮ ವಿವಾಹ ವಾರ್ಷಿಕೋತ್ಸವದ ಉಡುಗೊರೆ ಎಂದು ಹೇಳಿದ್ದಾರೆ ರಾಧಿಕಾ.
ಎಲ್ಲ ಓಕೆ.. ನಿಮ್ಮ ರಾಜಕುಮಾರಿಯ ಹೆಸರೇನು ಅಂದ್ರೆ ಅದರ ಹೊಣೆ ಇರೋದು ಯಶ್ ಮೇಲೆ. ಗಂಡು ಮಗು ಆಗಲಿದೆ ಎಂದು ರಾಧಿಕಾ, ಹೆಣ್ಣು ಮಗು ಆಗಲಿದೆ ಎಂದು ಯಶ್ ಬೆಟ್ ಕಟ್ಟಿದ್ದರಂತೆ. ಗಂಡು ಮಗು ಹುಟ್ಟಿದರೆ ಏನು ಹೆಸರಿಡಬೇಕು ಎಂದು ರಾಧಿಕಾ ಮೊದಲೇ ನಿರ್ಧರಿಸಿದ್ದರಂತೆ. ಹೆಣ್ಣು ಹುಟ್ಟಿದರೆ ಏನು ಹೆಸರಿಡಬೇಕು ಎಂದು ಯಶ್ ಫೈನಲ್ ಮಾಡಬೇಕಿತ್ತು.
ನಾನು ಕೆಲಸದ ಬ್ಯುಸಿಯಲ್ಲಿ ಹೆಸರು ಫೈನಲ್ ಮಾಡೋಕೆ ಆಗಲಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಹೆಸರು ನಿರ್ಧರಿಸುತ್ತೇನೆ ಎಂದಿದ್ದಾರೆ ಯಶ್.
ಆಸ್ಪತ್ರೆಯಿಂದ ಮನೆಗೆ ಹೋಗುವ ಮುನ್ನ ಸುದ್ದಿಗೋಷ್ಟಿಯಲ್ಲಿ ಮಗುವಿನೊಂದಿಗೆ ಬಂದಿದ್ದ ಯಶ್ ದಂಪತಿ, ತಮ್ಮ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಧನ್ಯವಾದ ಎಂದರು.
ಅಂಬರೀಷ್ ಅವರು ನೀಡಿದ ತೊಟ್ಟಿಲು ಉಡುಗೊರೆಯನ್ನು ಪ್ರೀತಿಯಿಂದ ಸ್ಮರಿಸಿದ ಯಶ್, ನಮಗೆ ಅವರು ತಂದೆಯ ಸ್ಥಾನದಲ್ಲಿದ್ರು. ಮಗಳನ್ನು ನೋಡಲು ಅವರು ಇರಬೇಕಿತ್ತು ಎಂದು ಭಾವುಕರಾದರು ಯಶ್.