ನಟ ಕಿಚ್ಚ ಸುದೀಪ್ ತಮಗೆ ಸಿನಿಮಾ ಮಾಡಿಕೊಡುತ್ತಿಲ್ಲ. ಸಂಭಾವನೆ ತೆಗೆದುಕೊಂಡಿದ್ದಾರೆ. ಇ ವರ್ಷಗಳಿಂದ ನನ್ನ ಹಣ ಅವರಲ್ಲೇ ಇದೆ. ಆದರೆ ಸಿನಿಮಾ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದ್ದರು ನಿರ್ಮಾಪಕ ಎನ್. ಕುಮಾರ್. ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕರ ಸಂಘ ಕೂಡ ಕುಮಾರ್ ಜೊತೆಗಿತ್ತು.
ಟ್ವಿಟರಿನಲ್ಲಿ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದ ಸುದೀಪ್, ಕಾನೂನು ಹೋರಾಟದ ಮೊರೆ ಹೋದರು. ನೇರವಾಗಿ ಮಾನನಷ್ಟ ಮೊಕದ್ದಮೆ ನೋಟಿಸ್ ಕೊಟ್ಟಿದ್ದರು. ಅದಾದ ಮೇಲೆ ನಿರ್ಮಾಪಕ ಹಾಗೂ ಸುದೀಪ್ ಅವರ ಆತ್ಮೀಯ ಗೆಳೆಯರಾಗಿರುವ ಜಾಕ್ ಮಂಜು ಎಲ್ಲ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗೌರವ ಕೊಟ್ಟದ್ದೀವಿ, ಮುಂದೆಯೂ ಕೊಡುತ್ತೇವೆ. ಸುದೀಪ್ ಅವರ ಮನೆಗೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ಬಂದಿದ್ದರು. ಎನ್ ಕುಮಾರ್ ಕುರಿತಾಗಿ ಸಂಪೂರ್ಣ ಚರ್ಚೆ ಮಾಡಿದ್ದರು. ಐದಾರು ವರ್ಷಗಳಲ್ಲಿ ಏನೆಲ್ಲ ಆಯ್ತು ಅನ್ನೋದರ ಬಗ್ಗೆ ಸುದೀಪ್ ಹೇಳಿದ್ದಾರೆ. ಇಷ್ಟೆಲ್ಲ ಆದಮೇಲೆ ವಾಣಿಜ್ಯ ಮಂಡಳಿಗೆ ಕುಮಾರ್ ದೂರು ಕೊಟ್ಟರು. ಆಗ ಚೇಂಬರ್ನಿಂದ ನಮಗೆ ಬಂದ ಪತ್ರಕ್ಕೆ ನಾವು ಆಗಲೇ ಉತ್ತರವನ್ನೂ ಕೊಟ್ಟಿದ್ದೇವೆ. ಐದಾರು ಪತ್ರ ಬರೆದ್ರು ಉತ್ತರ ಕೊಟ್ಟಿಲ್ಲ ಎಂಬ ತಪ್ಪು ಸಂದೇಶ ಎಲ್ಲ ಹಬ್ಬಿದೆ. ಒಂದೇ ವಿಚಾರಕ್ಕೆ ಐದಾರು ಬಾರಿ ಪತ್ರ ಬರೆದಿದ್ದಾರೆ. ನಾವು ಮೊದಲನೇ ಪತ್ರಕ್ಕೆ ಉತ್ತರ ಕೊಟ್ಟಿದ್ದೇವೆ. ನಮ್ಮಿಂದ ಆಗಲೇ ಸ್ಪಷ್ಟನೆಯನ್ನು ನೀಡಿದ್ದೇವೆ. ಆದರೆ ಪದೇ ಪದೇ ಅದೇ ವಿಚಾರವನ್ನೇ ಕೇಳಿದರೆ ಅದಕ್ಕೆ ಅರ್ಥವಿಲ್ಲ ಎಂದಿದ್ದಾರೆ ಜಾಕ್ ಮಂಜು.
ಮುಕುಂದ ಮುರಾರಿ ರಿಲೀಸ್ ಆದ 8 ದಿನಕ್ಕೆ ಕುಮಾರ್ ಸುದೀಪ್ ಅವರ ಬಳಿ ಬಂದರು. ನೋಟ್ ಬ್ಯಾನ್`ನಿಂದಾಗಿ ತೊಂದರೆ ಸಿಕ್ಕಿಕೊಂಡಿದ್ದೇನೆ. ಈಗ ತೊಂದರೆಯಲ್ಲಿ ಇದ್ದೇನೆ. ಈಗ ಒಂದು ಸಿನಿಮಾ ಮಾಡಿ, ನನ್ನನ್ನು ತೊಂದರೆಯಿಂದ ಪಾರು ಮಾಡಿ' ಎಂದು ಮನವಿ ಮಾಡಿಕೊಂಡರು. ಓಕೆ ಎಂದ ಸುದೀಪ್, ನಿರ್ದೇಶಕರನ್ನು ಹುಡುಕುವಂತೆ ಹೇಳಿದರು. ಕೊನೆಗೆ ಸುದೀಪ್ ಅವರೇ ಒಬ್ಬ ನಿರ್ದೇಶಕರನ್ನು ನೋಡಿ ಕಥೆಯನ್ನು ನಾನು ಕೇಳಿದ್ದೇನೆ. ನೀವು ಕೇಳಿ ಅಂತ ಕುಮಾರ್ ಬಳಿ ಕಳಿಸಿಕೊಡುತ್ತಾರೆ. ಆದರೆ ನಿರ್ದೇಶಕರ ಸಂಭಾವನೆ ಜಾಸ್ತಿಯಾಯ್ತು ಎಂದ ಕುಮಾರ್, ಸಿನಿಮಾ ಕೈಬಿಟ್ಟರು. 2020ರ ಜನವರಿಯಲ್ಲಿ ಸುದೀಪ್ ಅವರು ವಿಕ್ರಾಂತ್ ರೋಣ ಶುರುವಾಯ್ತು. ಇವತ್ತಿಗೆ 3 ವರ್ಷ 7 ತಿಂಗಳಾಗಿದೆ. ಆ ಸಿನಿಮಾ ಬಿಟ್ಟು ಬೇರೆ ಯಾವ ಸಿನಿಮಾವನ್ನು ಅವರು ಮಾಡಿಲ್ಲ. ಕೊರೊನಾ ಸಮಸ್ಯೆಗಳು, ಅವರ ಆರೋಗ್ಯ ಸಮಸ್ಯೆಗಳು, ಹೀಗೆ ನಾನಾ ಕಾರಣದಿಂದ ಕುಮಾರ್ಗೆ ಜಾಸ್ತಿ ಸ್ಪಂದಿಸಲು ಸುದೀಪ್ಗೆ ಆಗಲಿಲ್ಲ ಎಂದು ಮಂಜು ತಿಳಿಸಿದ್ದಾರೆ.
ಈ ಮಧ್ಯೆ ಪ್ರಿಯಾ ಅವರು ಕುಮಾರ್ ಅವರೊಂದಿಗೆ ಭೇಟಿ ಮಾಡಿದ್ದರು. ಪ್ರಿಯಾ ಅವರು ಚಿತ್ರರಂಗದ ಯಾವ ವಿಚಾರಕ್ಕೂ ತಲೆ ಹಾಕೋದಿಲ್ಲ. ಆದರೆ ಕುಮಾರ್ ಕುಟುಂಬದ ಆತ್ಮೀಯರು ಎಂದು ಭೇಟಿ ಮಾಡಿದ್ದರು. ಆ ಮೀಟಿಂಗಿನಲ್ಲಿ ನಾನೂ ಇದ್ದೆ. ಆಗ ತುಂಬಾ ಕಷ್ಟ ಹೇಳಿಕೊಂಡರು. ಕೊನೆಗೆ ಅದನ್ನು ತಿಳಿದು ಸುದೀಪ್ ಅವರೇ ಕುಮಾರ್ ತುಂಬಾ ಕಷ್ಟದಲ್ಲಿದ್ದಾರೆ, ಈಗ 5 ಕೋಟಿ ಕೊಡೊಣ, ಆಮೇಲೆ ನೋಡೋಣ ಎಂದರು. ಅದಕ್ಕೆ ಕುಮಾರ್ ನನಗೇನು ಭಿಕ್ಷೆ ಕೊಡ್ತೀರಾ.. ಅದೆಲ್ಲ ಬೇಡ, ಸಿನಿಮಾ ಮಾಡಿ ಎಂದರು.
ಸುದೀಪ್ ಅವರಿಗೆ ಕುಮಾರ್ ಯಾವುದೇ ದುಡ್ಡು ಕೊಟ್ಟಿಲ್ಲ. ಆದರೆ ಕುಮಾರ್ ತಮಗೆ ಸಾಲ ಕೊಟ್ಟಿರುವವರಿಗೆಲ್ಲ ಸುದೀಪ್ 8-9 ಕೋಟಿ ದುಡ್ಡು ಕೊಡಬೇಕು. ಅವರು ಕೊಟ್ಟಾಗ ಕೊಡ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಇದೆಲ್ಲ ಸುದೀಪ್ ಅವರಿಗೂ ಗೊತ್ತಿದೆ. ಕುಮಾರ್ ನೂರಾರು ಥಿಯೇಟರ್ ನಡೆಸಿದವರು, ಹಲವು ಸಿನಿಮಾಗಳನ್ನು ಮಾಡಿದವರು. ಎಷ್ಟು ಫಿಲ್ಮ್ ಹಿಟ್ ಆಗಿವೆ, ಎಷ್ಟು ಸೋತಿವೆ ನಮಗೆ ಗೊತ್ತಿಲ್ಲ. ಆದರೆ ಆಗಿರುವ ನಷ್ಟಕ್ಕೆಲ್ಲ ಸುದೀಪ್ ಕಾರಣ ಎಂದರೆ ಹೇಗೆ? ಎಂದಿದ್ದಾರೆ ಜಾಕ್ ಮಂಜು.
ಅಷ್ಟೆ ಅಲ್ಲ, ಸುದೀಪ್ ಅವರು ಸಿನಿಮಾ ಮಾಡೋಕೆ ಮುಂದಾದರೆ 50-60 ಕೋಟಿ ಬಜೆಟ್ ಆಗುತ್ತೆ. ಇಷ್ಟೆಲ್ಲ ಆಗಲ್ಲ ಎಂದರು. ಅವರಿಗೆ ಸಹಾಯವಾಗಲಿ ಎಂದು ಒಂದು ಕಂಪೆನಿ ಜೊತೆ ಮಾತನಾಡಿ, ಕುಮಾರ್ ಅವರಿಗೆ ಸಹಾಯ ಮಾಡೋಕೆ ಹೋದರೆ ಮೊದಲು ಒಪ್ಪಿದ್ದ ಅದೇ ಕುಮಾರ್, ನಾನ್ಯಾಕೆ ಇನ್ನೊಂದು ಕಂಪನಿ ಜತೆಗ ಸಿನಿಮಾ ಮಾಡಲಿ? ನಾನೇ ಹಣ ಹಾಕುತ್ತೇನೆ ಎಂದು ಕೂಗಾಡಿದರು. ಆಗ ಸುದೀಪ್ ಅವರು, ಇದ್ಯಾಕೋ ಸರಿ ಆಗುತ್ತಿಲ್ಲ ಎಂದು ತಮ್ಮ ದಾರಿಯಲ್ಲೇ ತಾವು ಹೋಗುತ್ತಿದ್ದಾರೆ ಎಂದು ವಿವರಣೆ ಕೊಟ್ಟಿದ್ದಾರೆ.
ನಾವು ಕಾನೂನಿನ ಮೊರೆ ಹೋಗಿದ್ದೇವೆ. ಕೋರ್ಟ್ ಏನಾದರೂ ಕುಮಾರ್ ಅವರಿಗೆ 10-20 ಕೋಟಿ ಕೊಡಿ ಎಂದರೂ ಒಪ್ಪಿಕೊಳ್ಳುತ್ತೇವೆ. ಕಾನೂನಿನ ಹೋರಾಟ ನಡೆಸುತ್ತೇವೆ ಎಂದಿದ್ದಾರೆ ಜಾಕ್ ಮಂಜು.