ಕಿಚ್ಚ ಸುದೀಪ್ ಚಿತ್ರವೊಂದಕ್ಕೆ ಹಿನ್ನೆಲೆ ಧ್ವನಿ ನೀಡುವುದು ಹೊಸದೇನಲ್ಲ. ಪ್ರೀತಿ, ಸ್ನೇಹ, ಅಭಿಮಾನಕ್ಕಾಗಿ ಈ ಹಿಂದೆಯೂ ಹಲವು ಚಿತ್ರಗಳಿವೆ ವಾಯ್ಸ್ ಓವರ್ ಕೊಟ್ಟಿದ್ದಾರೆ. ಕಠಾರಿ ವೀರ ಸುರಸುಂದರಾಂಗಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಶ್ರಾವಣಿ ಸುಬ್ರಮಣ್ಯ, ಆರ್ಯನ್, ಹಗ್ಗದ ಕೊನೆ, ರಿಕ್ಕಿ, ಜೈ ಮಾರುತಿ 800, ಚಕ್ರವ್ಯೂಹ, ಮಂಡ್ಯ ಟು ಮುಂಬೈ, ರಾಗ, ತಾಯಿಗೆ ತಕ್ಕ ಮಗ, ಉದ್ಗರ್ಷ ಮುಂತಾದ ಚಿತ್ರಗಳಿಗೆ ಕಿಚ್ಚ ಸುದೀಪ್ ವಾಯ್ಸ್ ಓವರ್ ಕೊಟ್ಟಿದ್ದರು. ಇದೀಗ ಶಾನ್ವಿ ಅಭಿನಯದ ಬ್ಯಾಂಗ್ ಚಿತ್ರಕ್ಕೆ ಸುದೀಪ್ ವಾಯ್ಸ್ ಕೊಟ್ಟಿದ್ದಾರೆ.
ಚಿತ್ರದ ಟ್ರೇಲರ್ ಶುರುವಾಗುವುದೇ ಸುದೀಪ್ ಅವರ ವಾಯ್ಸಿನಲ್ಲಿ. ಒಂದು ಅನಪೇಕ್ಷಿತ ಸುಳಿಯೊಳಗೆ ಸಿಲುಕುವ ಮೂವರು ಯುವಕರು, ಆ ವ್ಯೂಹಕ್ಕೆ ತಾವಾಗಿಯೇ ಸಿಲುಕಿದರಾ..? ಯಾರಾದರೂ ಸಿಲುಕಿಸಿದರಾ ಎಂಬ ಪ್ರಶ್ನೆ ಟ್ರೇಲರ್ ನೋಡಿದವರಿಗೆ ಹುಟ್ಟುತ್ತೆ. ಆದರೆ, ಅದರತ್ತ ಗಮನ ಹರಿಸದಂತೆ ತಡೆಯುವುದು ಶಾನ್ವಿಯವರ ಆಕ್ಷನ್ ಸೀಕ್ವೆನ್ಸ್‍ಗಳು.
ಬ್ಯಾಂಗ್ ಚಿತ್ರದಲ್ಲಿನ ಸುದೀಪ್ ಅವರ ವಾಯ್ಸ್‍ನ್ನ ಅವರ ಅಭಿಮಾನಿಗಳು ಸಹ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಈ ಕನಸನ್ನು ನನಸು ಮಾಡಿದ ಶಾನ್ವಿ ಶ್ರೀವಾಸ್ತವ ಅವರಿಗೆ ಮತ್ತು ಒಂದು ಹೊಸ ತಂಡದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಸುದೀಪ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ ನಿರ್ದೇಶಕ ಗಣೇಶ್ ಪರಶುರಾಮ್. ಸುದೀಪ್ ಚಿತ್ರಗಳನ್ನೇ ನೋಡಿ ಬೆಳೆದಿದ್ದ ಗಣೇಶ್ ಪರಶುರಾಮ್ ಅವರಂತೂ ಥ್ರಿಲ್ ಆಗಿ ಹೋಗಿದ್ದಾರೆ. ನಾವೆಲ್ಲ ಸುದೀಪ್ ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡ್ತಾ ಇದ್ದವರು. ಅವರು ನಮ್ಮ ಚಿತ್ರಕ್ಕೆ ಧ್ವನಿ ನೀಡಿದಾಗ, ಅವರನ್ನು ಭೇಟಿಯಾಗಿ ಕೈಕುಲುಕಿದಾಗ, ನಮ್ಮ ಬಹುವರ್ಷಗಳ ಕನಸು ನನಸಾದಂತಾಯಿತು ಎಂದಿದ್ದಾರೆ ಗಣೇಶ್.
ಪೂಜಾ ವಸಂತ್ ಕುಮಾರ್ ನಿರ್ಮಾಣದ ‘ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಜೊತೆಗೆ ರಘು ದೀಕ್ಷಿತ್, ಸಾತ್ವಿಕಾ, ರಿತ್ವಿಕ್ ಮುರಳೀಧರ್, ಸುನಿಲ್ ಗುಜ್ಜಾರ್, ನಾಟ್ಯರಂಗ ಮುಂತಾದವರು ಅಭಿನಯಿಸಿದ್ದಾರೆ.