ಚಿತ್ರದುರ್ಗದ ಕೋಟೆಯನ್ನು ನೋಡಲು ಹೋಗುವವರು ಮದಕರಿ ನಾಯಕನ ಜಾತಿ ನೋಡಿ ಹೋಗ್ತಾರಾ..? ಓಬವ್ವನ ಕಥೆ ಕೇಳಿ ಹೆಮ್ಮೆ ಪಟ್ಟುಕೊಂಡವರಿಗೆ ಆಕೆಯ ಜಾತಿ ಯಾವುದೆಂದು ಗೊತ್ತಾ..? ಅನಗತ್ಯವಾಗಿದ್ದ ವಿವಾದವೊಂದನ್ನು ಸೃಷ್ಟಿಸಿದ ವಾಲ್ಮೀಕಿ ಸ್ವಾಮೀಜಿ, ಪದೇ ಪದೇ ವಿವಾದದ ಬೆಂಕಿ ಹಚ್ಚುತ್ತಲೇ ಹೋಗಿಬಿಟ್ಟರು. ಕಲಾದೇವಿಗೊಂದು ಜಾತಿಯ ಕಳಂಕ ಅಂಟಿಸಿಬಿಟ್ಟರು.
ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹೇಳಿದ್ದೂ ಇದನ್ನೇ. ಎಲ್ಲವನ್ನೂ ಜಾತಿ ನೋಡಿಕೊಂಡು ಮಾಡಿದ್ದರೆ, ಡಾ.ರಾಜ್ ಒಂದೇ ಒಂದು ಐತಿಹಾಸಿಕ ಪಾತ್ರವನ್ನೂ ಮಾಡುವಂತಿರಲಿಲ್ಲ. ಕನಕದಾಸ ಎನ್ನಿ, ಪುರಂದರದಾಸ ಎನ್ನಿ, ಶ್ರೀಕೃಷ್ಣ ದೇವರಾಯ ಎನ್ನಿ, ಮಯೂರ ಎನ್ನಿ, ಬಭ್ರುವಾಹನ ಎನ್ನಿ, ಭಕ್ತ ಕುಂಬಾರ ಎನ್ನಿ, ಭಕ್ತ ಚೇತ ಎನ್ನಿ, ಸರ್ವಜ್ಞಮೂರ್ತಿ ಎನ್ನಿ, ರಾಘವೇಂದ್ರ ಸ್ವಾಮಿ ಎನ್ನಿ, ರಣಧೀರ ಕಂಠೀರವ ಎನ್ನಿ.. ಕಣ್ಣ ಮುಂದೆ ಬರುವುದು ಡಾ.ರಾಜ್‍ಕುಮಾರ್. ರಾಜಕೀಯದಲ್ಲಿ ಜಾತಿಯಿಲ್ಲದೆ ಏನೂ ನಡೆಯಲ್ಲ. ಜಾತ್ಯತೀ ಪಕ್ಷ ಎಂದು ಕರೆಸಿಕೊಳ್ಳುವವರೂ ಜಾತಿ ರಾಜಕೀಯವನ್ನೇ ಮಾಡೋದು. ಅದು ದೇಶದ ಜನರಿಗೆಲ್ಲ ಗೊತ್ತಿರುವ ಬಹಿರಂಗ ಗುಟ್ಟು. ಆದರೆ, ಚಿತ್ರರಂಗದಲ್ಲಿ ಜಾತಿ ಇರಲಿಲ್ಲ.
ಒಬ್ಬ ಕಲಾವಿದನನ್ನು ಆತನ ಶ್ರೇಷ್ಟತೆಯಿಂದಲೇ ಗೌರವಿಸುತ್ತಿದ್ದರು. ಗೌರವಿಸುತ್ತಿದ್ದಾರೆ. ಕನ್ನಡದಲ್ಲಿ ಕೆಲವು ಹಿರಿಯ ನಿರ್ದೇಶಕರು, ಕಲಾವಿದರಿಗೆ.. ಕಣ್ಣಿಗೆ ಕಂಡ ತಕ್ಷಣ ಕಾಲು ಮುಟ್ಟಿ ನಮಸ್ಕರಿಸುತ್ತಾರೆ ಚಿತ್ರರಂಗದ ಕಿರಿಯರು. ಅಲ್ಲಿ ಜಾತಿ ನೋಡುವುದಿಲ್ಲ. ಕಾಣುವುದು ಕಲಾ ಸರಸ್ವತಿ. ಡಾ.ರಾಜ್, ವಿಷ್ಣು, ಪುಟ್ಟಣ್ಣನಂತಹವರಿಗೆ ಆ ಗೌರವ ಸಿಗುತ್ತಿತ್ತು. ಈಗಲೂ.. ಅಂಬಿ, ರವಿಚಂದ್ರನ್, ಶಿವಣ್ಣ, ಭಾರ್ಗವ, ಭಗವಾನ್.. ರಂತಹ ಹಿರಿಯರಿಗೆ ನಮಸ್ಕರಿಸುವಾಗ.. ಅವರ ಜಾತಿ ಯಾವುದೆಂದು ನಮ್ಕಸರಿಸುವವರು ನೆನಪಿಸಿಕೊಳ್ಳಲ್ಲ. ಇಷ್ಟಕ್ಕೂ ಅವರಿಗೆ ಆ ಗೌರವ ಸಿಕ್ಕಿದ್ದೇ ಕಲಾದೇವಿ ಒಲಿದ ಮೇಲೆ. ಕಲಾದೇವಿ ಒಲಿಯುವುದೇ ಜಾತಿಯ ಅರಿವು ಸತ್ತ ಮೇಲೆ.
ಜಗ್ಗೇಶ್ ಹೇಳಿದ ಮಾತಿನಲ್ಲಿ ಅರ್ಥವಿದೆ ಎನಿಸುವುದು ಆಗಲೇ. ಕಲೆಗೆ ಜಾತಿ ಎಲ್ಲಿಯದು..? ಇಷ್ಟಕ್ಕೂ ಮದಕರಿ ನಾಯಕನನ್ನು ಒಬ್ಬ ಜಾತಿಯ ನಾಯಕ ಎಂದು ಸೀಮಿತಗೊಳಿಸುವುದೇ ನಮಗೆ ನಾವು ಮಾಡಿಕೊಳ್ಳುವ ಅವಮಾನ. ಈಗ ಈ ಸ್ವಾಮೀಜಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ.. ಆ ಪಾತ್ರದಲ್ಲಿ ನಟಿಸುವ ಕಲಾವಿದನ ಜಾತಿಯನ್ನೂ ಎತ್ತಿಬಿಟ್ಟಿದ್ದಾರೆ.
ಒಬ್ಬ ಸ್ವಾಮೀಜಿಯ ಅತಿರೇಕದಿಂದ ಒಬ್ಬ ಕಲಾವಿದನ ಜಾತಿ ಗೊತ್ತಾಗುವಂತಾಯ್ತೇ ಹೊರತು, ಮತ್ತೇನಲ್ಲ. ಸುದೀಪ್‍ರನ್ನು ಕನ್ನಡಿಗರು ಪ್ರೀತಿಸುವುದು ಆತ ಒಬ್ಬ ಕಲಾವಿದ. ಕನ್ನಡದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳಗಲು ಪ್ರಯತ್ನಿಸುತ್ತಿರುವ ಸಾಹಸಿ ಎಂಬ ಕಾರಣಕ್ಕೆ. ಜಾತಿ ಕಟ್ಟಿಕೊಂಡು ಆಗಬೇಕಾದ್ದೇನು..? ದರ್ಶನ್ ಜಾತಿಯೂ ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಾಗುವ ಅಗತ್ಯವೂ ಇಲ್ಲ. ಕಲಾವಿದರ ಜಾತಿ ಕಟ್ಟಿಕೊಂಡು ನಮಗೇನಾಗಬೇಕು..?
ಇಷ್ಟಕ್ಕೂ ಮದಕರಿ ನಾಯಕನ ಎರಡು ಸಿನಿಮಾ ಬರುತ್ತವಾ..? ಬರಲಿ ಬಿಡಿ. ನಮ್ಮ ಮದಕರಿ ನಾಯಕನ ಇತಿಹಾಸ ಮನೆ ಮನೆಗೂ ತಲುಪಲಿ. ಅದಕ್ಕೆ ಹೆಮ್ಮೆ ಪಡೋಣ.
ಕೆ.ಎಂ.ವೀರೇಶ್
ಸಂಪಾದಕರು
ಚಿತ್ರಲೋಕ.ಕಾಮ್