ಒಂದು ಚಿತ್ರವನ್ನು ಜನರಿಗೆ ತಲುಪಿಸಬೇಕು ಎಂದರೆ ಪ್ರಚಾರವೂ ಅಷ್ಟೇ ವಿಭಿನ್ನವಾಗಿರಬೇಕು. ವಿಶಿಷ್ಟವಾಗಿರಬೇಕು. ನೋಡುವವರಿಗೆ ವ್ಹಾವ್ ಎನ್ನಿಸುವಂತಿರಬೇಕು. ಆ ಹಾದಿಯಲ್ಲಿ ವಿಕ್ರಾಂತ್ ರೋಣ ಆರಂಭದಿಂದಲೂ ಬೇರೆಯದೇ ಮಜಲು ಹತ್ತಿದ್ದು ಸುಳ್ಳಲ್ಲ.
ಬುರ್ಜ್ ಖಲೀಫಾದಲ್ಲಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದು ಮೊದಲ ದಾಖಲೆ. ಮುಂಬೈನಲ್ಲಿ ರಕ್ಕಮ್ಮನ ಕಟೌಟ್ ಹಾಕಿದ್ದು ಇನ್ನೊಂದು ದಾಖಲೆ. ಆನಂತರ ಬೇರೆ ಬೇರೆ ರೀತಿಯಲ್ಲಿ ಪ್ರಚಾರದ ಹೊಸ ಹೊಸ ಶಿಖರಗಳನ್ನೇರುತ್ತಾ ಹೋದ ವಿಕ್ರಾಂತ್ ರೋಣ ಈಗ ರಿಲೀಸ್ ಹಂತಕ್ಕೆ ತಲುಪಿದೆ.
ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಎಲ್ಲೆಡೆ ಪ್ರೀ-ರಿಲೀಸ್ ಈವೆಂಟ್ ಮಾಡಿತ್ತು ವಿಕ್ರಾಂತ್ ರೋಣ ಚಿತ್ರತಂಡ. ಮುಂಬೈನಲ್ಲಿ ವಿಕ್ರಾಂತ್ ರೋಣನ ದಿಬ್ಬಣಕ್ಕೆ ಸಾರಥಿಯಾಗಿದ್ದು ಖುದ್ದು ಸಲ್ಮಾನ್ ಖಾನ್. ಒಂದೊಂದು ಭಾಷೆಯಲ್ಲೂ ಅಲ್ಲಿನ ಸ್ಟಾರ್ ನಟರು, ಸಂಸ್ಥೆಗಳು ಕೈಜೋಡಿಸಿದ್ದು ಮತ್ತೊಂದು ವಿಶೇಷ.
ಸಿನಿ ಡಬ್ ಆಪ್ ಮೂಲಕ ಪ್ರೇಕ್ಷಕರಿಗೆ ಹೊಸ ತಂತ್ರಜ್ಞಾನವನ್ನೂ ಪರಿಚಯಿಸುತ್ತಿರುವುದು ಚಿತ್ರದ ಹೆಗ್ಗಳಿಕೆ. ಈ ಆಪ್ ಮೂಲಕ ಪ್ರೇಕ್ಷಕರು ತಮಗೆ ಬೇಕಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ರಾಕೆಟ್ರಿ ಚಿತ್ರವೂ ಈ ಟೆಕ್ನಾಲಜಿ ಅಳವಡಿಸಿಕೊಂಡಿತ್ತಂತೆ. ಆದರೆ.. ರಾಕೆಟ್ರಿ ಚಿತ್ರಕ್ಕೆ ಪ್ರೇಕ್ಷಕರ ಮಟ್ಟದಲ್ಲಿ ಒಳ್ಳೆಯ ಮಾಸ್ ಸಕ್ಸಸ್ ಸಿಗಲಿಲ್ಲ. ಕ್ಲಾಸ್ ವರ್ಗದ ಜನರಷ್ಟೇ ನೋಡಿ ಮೆಚ್ಚಿದ ಸಿನಿಮಾ ರಾಕೆಟ್ರಿ. ಆದರೆ, ವಿಕ್ರಾಂತ್ ರೋಣ ಫುಲ್ ಮಾಸ್.
ಇದೆಲ್ಲದರ ಜೊತೆಗೆ ಈಗ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದೆ. ಯುಎಇಯಲ್ಲಿ ಪ್ರೀಮಿಯರ್ ಶೋ ಇದ್ದು, ಅಲ್ಲಿಗೆ ಸುದೀಪ್ ಅವರೇ ಖುದ್ದು ಹೋಗುತ್ತಿದ್ದಾರೆ.
ಅದು ಮುಗಿದ ನಂತರ ದೆಹಲಿಗೆ ಬಂದರೆ, ಅಲ್ಲಿ ವಿಕ್ರಾಂತ್ ರೋಣನ ಸ್ವಾಗತಕ್ಕೆ ದೇಶದ ಸಂಸದರು ಇರಲಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗಾಗಿ ದೆಹಲಿಯಲ್ಲಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.
ಹೀಗೆ ಚಿತ್ರದ ವಿಶೇಷಗಳದ್ದೆಲ್ಲ ಒಂದು ತೂಕವಾದರೆ.. ಚಿತ್ರದ ಪ್ರಚಾರದ್ದೇ ಇನ್ನೊಂದು ತೂಕ. ಇನ್ನೊಂದ್ ದಿನ ವೇಯ್ಟ್ ಮಾಡಿ.. ವಿಕ್ರಾಂತ್ ರೋಣದ ಗುಮ್ಮನನ್ನು ನೋಡಿಯೇ ಬಿಡೋಣ..