ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ, ಅಂಬರೀಷ್‍ರ ವಯಸ್ಸಿನ ಅರ್ಧಕ್ಕಿಂತ ಚಿಕ್ಕ ವಯಸ್ಸಿನ ಹುಡುಗ. ಸುದೀಪ್ ಅಂಬರೀಷ್ ಬಳಿ `ಮಾಮ, ನನ್ನ ಬಳಿ ಒಬ್ಬ ಹುಡುಗ ಇದ್ದಾನೆ. ತುಂಭಾ ಟ್ಯಾಲೆಂಟೆಡ್ ಫೆಲೋ. ನೋಡಿದ್ರೆ ಚಿಕ್ಕ ಹುಡುಗನ ಥರಾ ಕಾಣ್ತಾನೆ. ಆದರೆ ಒಳ್ಳೆಯ ಕೆಲಸಗಾರ' ಎಂದು ಹೇಳಿ ಗುರುದತ್‍ನನ್ನು ಕಳಿಸಿಕೊಟ್ಟಿದ್ದರಂತೆ. ಮೇಲಿಂದ ಕೆಳಗೆ ನೋಡಿದ ಅಂಬರೀಷ್, ಇವನ್ಯಾರೋ.. ಒಳ್ಳೆ ಮಗು ಥರಾ ಇದ್ದಾನೆ. ಹೇಗಪ್ಪ ಎಂದುಕೊಂಡಿದ್ದರಂತೆ.
ಮೊದಲನೇ ದಿನ ಸೆಟ್‍ಗೆ ಹೋದರೆ, ಏನಾದರೂ ಹೇಳಿಕೊಳ್ಳೋಕೂ ಹೆದರುತ್ತಿದ್ದ ಹುಡುಗನಿಗೆ ನಂತರ ಅಂಬರೀಷ್ ಅವರೇ ಧೈರ್ಯ ಹೇಳಿದ್ರಂತೆ. ಡೈರೆಕ್ಟರೇ.. ಹೆದರಿಕೊಳ್ಳಬೇಡಿ. ನಾನು ಹೊರಗೆ ಮಾತ್ರ ಅಂಬರೀಷ್. ಸೆಟ್‍ನಲ್ಲಿ ಡೈರೆಕ್ಟರ್ ಹೇಳಿದಂತೆ ಕೇಳುವ ನಟ ಅಷ್ಟೆ ಎಂದು ಧೈರ್ಯ ತುಂಬಿದರಂತೆ. ಅದಾದ ಮೇಲೆ ಸರಿ ಹೋಯ್ತು ಎಂದು ಹೇಳಿಕೊಂಡಿದ್ದಾರೆ ಅಂಬಿ. ಎಷ್ಟೆಂದರೂ ಪುಟ್ಟಣ್ಣ ಗರಡಿಯಲ್ಲಿ ಬೆಳೆದವರು. ನಿರ್ದೇಶಕರನ್ನು ಗೌರವಿಸುವ ಗುಣ, ಸಹಜವಾಗಿಯೇ ಬಂದಿದೆ.
ಅಷ್ಟೇ ಅಲ್ಲ, ದಿಲೀಪ್ ರಾಜ್‍ಗೆ ಚಿತ್ರದಲ್ಲಿ ಅಂಬರೀಷ್‍ರನ್ನು ಬೈಯ್ಯುವ ದೃಶ್ಯಗಳಿವೆ. ಆ ದೃಶ್ಯಗಳನ್ನು ಮಾಡೋಕೆ ಹೆದರುತ್ತಿದ್ದ ದಿಲೀಪ್ ರಾಜ್‍ಗೆ `ನೀನು ಬೈತಿರೋದು ಅಂಬರೀಷ್‍ಗೆ ಅಲ್ಲ, ಸಿನಿಮಾದಲ್ಲಿರೋ ಅಂಬಿಯ ಪಾತ್ರಕ್ಕೆ' ಎಂದು ಹೇಳಿ ಧೈರ್ಯ ತುಂಬಿದರಂತೆ.
ಹೀಗೆ ಕಿರಿಯರ ಜೊತೆ ಪ್ರೀತಿಯಿಂದ ಕೆಲಸ ಮಾಡಿಸಿ ತಂದಿರುವ ಸಿನಿಮಾ ಈಗ ಥಿಯೇಟರಿನಲ್ಲಿದೆ. ಜಾಕ್ ಮಂಜು ನಿರ್ಮಾಣದ ಚಿತ್ರದಲ್ಲಿ ಸುದೀಪ್ ನಿರ್ಮಾಪಕರೂ ಹೌದು. ಕಲಾವಿದರೂ ಹೌದು. ಶೃತಿ ಹರಿಹರನ್, ಯಂಗ್ ಸುಹಾಸಿನಿಯಾಗಿ ನಟಿಸಿದ್ದಾರೆ.
ನನ್ನ ವಯಸ್ಸಿಗೆ ತಕ್ಕಂತೆ ಕಥೆ, ಸ್ಕ್ರಿಪ್ಟ್ ಬಂದರೆ ನಟಿಸೋಕೆ ಸಿದ್ಧ ಎಂದಿರೋ ಅಂಬರೀಷ್, ಹೊಸ ಪ್ರತಿಭೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.