ರೆಬಲ್‍ಸ್ಟಾರ್ ಅಂಬರೀಷ್‍ಗೆ ಈಗಿನ್ನೂ ಜಸ್ಟ್ 66 ವರ್ಷ. ಅವರ ಸಿನಿಮಾ ಅಂಬಿ ನಿಂಗ್ ವಯಸ್ಸಾಯ್ತೋ ನಿರ್ದೇಶಕ ಗುರುದತ್ ಗಾಣಿಗಗೆ ವಯಸ್ಸು 26 ವರ್ಷ. ಬಹುಶಃ ಅಂಬರೀಷ್ ಅವರ ಸಿನಿಮಾ ನಿರ್ದೇಶಿಸಿರುವ ಅತ್ಯಂತ ಚಿಕ್ಕ ವಯಸ್ಸಿನ ಹುಡುಗ ಗುರುದತ್. ಕೆಲವರಿಗೆ ಮಾತ್ರವೇ ಅಂತಾದ್ದೊಂದು ಅದೃಷ್ಟವಿರುತ್ತೆ. ಮೊದಲ ಸಿನಿಮಾದಲ್ಲಿಯೇ ಅಂಬರೀಷ್, ಸುಹಾಸಿನಿ, ಸುದೀಪ್‍ರಂತಹ ನಟರನ್ನು ನಿಭಾಯಿಸುವ ಅದೃಷ್ಟ. ಹೇಗಾಯ್ತು ಇದೆಲ್ಲ.. ಅಂತಾ ಕೇಳಿದ್ರೆ ಅವರು ತೋರಿಸೋದು ಸುದೀಪ್ ಅವರತ್ತ.
ಗುರುದತ್, ಕುಂದಾಪುರದ ಹುಡುಗ. ಯಕ್ಷಗಾನದಲ್ಲಿ ಆಸಕ್ತಿಯಿತ್ತು. ಆದರೆ ಕ್ರಮೇಣ ಟಿವಿ, ಸಿನಿಮಾ ಗೀಳು ಹತ್ತಿಸಿಕೊಂಡ ಗುರುದತ್ ಗಾಂಧಿನಗರಕ್ಕೆ ಬಂದ್ರು. ಅಪ್ಪ ಅಮ್ಮನ ಮಾತು ಧಿಕ್ಕರಿಸಿ ಬಂದಿದ್ದ ಕಾರಣ, ನಿತ್ಯ ಜೀವನಕ್ಕೂ ಪರದಾಟವಿತ್ತು. ಆಗ ಹೊಟ್ಟೆಪಾಡಿಗಾಗಿ ಎಲ್ಲ ಕೆಲಸವನ್ನೂ ಮಾಡಿದ ಗುರುದತ್, ಮೇಕಪ್ ಮ್ಯಾನ್‍ನಿಂದ ಹಿಡಿದು ಸೆಟ್ ಬಾಯ್‍ವರೆಗೆ ಎಲ್ಲ ಕೆಲಸವನ್ನೂ ಮಾಡಿದ್ದಾರೆ. ಹೀಗಿರುವಾಗಲೇ ಅವರು ಒಂದು ದಿನ ಸುದೀಪ್ ಕಣ್ಣಿಗೆ ಬಿದ್ದರು. ಅದೃಷ್ಟದ ಬಾಗಿಲು ತೆರೆದುಕೊಂಡಿತ್ತು.
ನಿಂಗೆ ಒಳ್ಳೆ ಕಮ್ಯುನಿಕೇಷನ್ ಸ್ಕಿಲ್ ಇದೆ. ಏನ್ ಮಾಡಬೇಕು ಅಂದ್ಕೊಂಡಿದ್ದೀಯಾ ಅಂದ್ರಂತೆ ಸುದೀಪ್. ಡೈರೆಕ್ಟರ್ ಆಗುವ ಆಸೆಯನ್ನು ಬಿಚ್ಚಿಟ್ಟ ಗುರುದತ್ ಅವರನ್ನ ತಮ್ಮ ಜೊತೆಯಲ್ಲೇ ಅಸಿಸ್ಟೆಂಟ್ ಆಗಿ ಸೇರಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಸಂಜು ವೆಡ್ಸ್ ಗೀತಾಗೆ ನಾಗಶೇಖರ್ ಜೊತೆ ಹಾಗೂ ಎಸ್.ನಾರಾಯಣ್ ಜೊತೆ ಸ್ವಲ್ಪ ಸ್ವಲ್ಪ ಕೆಲಸ ಮಾಡಿದ್ದ ಗುರುದತ್, ಮಾಣಿಕ್ಯ ಚಿತ್ರದಲ್ಲಿ ಸಂಪೂರ್ಣವಾಗಿ ಅಸಿಸ್ಟೆಂಟ್ ಡೈರೆಕ್ಟರ್ ಆದ್ರು. ಸುದೀಪ್ ಅವರ ಸಂಬಂಧಿಯಾಗಿರೋ ಸಂಚಿತ್ ಎಂಬುವರ ಜೊತೆ ಕಿರುಚಿತ್ರಗಳಲ್ಲಿ ತೊಡಗಿಸಿಕೊಂಡ್ರು. ತಮ್ಮದೇ ಆದ ಒಂದು ಸ್ಕ್ರಿಪ್ಟ್ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದಾಗಲೇ.. ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರದ ಆಫರ್ ಸಿಕ್ಕಿದ್ದು. ಸುದೀಪ್ ಮತ್ತು ಜಾಕ್ ಮಂಜು ಅವರೇ ನಿರ್ಮಾಪಕರು.
ಮೊದಲ ಚಿತ್ರದಲ್ಲಿಯೇ ದೊಡ್ಡ ದೊಡ್ಡ ಸ್ಟಾರ್‍ಗಳನ್ನು ನಿರ್ದೇಶಿಸುವ ಅವಕಾಶ ಬಿಡೋಕೆ ಸಾಧ್ಯನಾ..? ಜೊತೆಗೆ ಸುದೀಪ್ ಇದ್ದರು. ಈಗ ಚಿತ್ರ ಮುಗಿಸಿದ್ದೇವೆ. ಮನೆಯಲ್ಲಿ ನನ್ನ ಸಿನಿಮಾ ಕನಸನ್ನು ವಿರೋಧಿಸಿದ್ದವರೆಲ್ಲ ಈಗ ಒಪ್ಪಿಕೊಂಡಿದ್ದಾರೆ ಎಂದು ಹೇಳೋ ಗುರುದತ್, ಮೊದಲ ಚಿತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂದು ತಿಳಿದುಕೊಳ್ಳೋ ಕುತೂಹಲದಲ್ಲಿದ್ದಾರೆ