ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 23 ವರ್ಷಗಳಾಗಿ ಹೋಗಿವೆ. ಸ್ಪರ್ಶ ಸಿನಿಮಾವನ್ನ ಮೊನ್ನೆ ಮೊನ್ನೆ ನೋಡಿದ ಹಾಗಿದೆ. ಆದರೆ, ಸ್ಪರ್ಶ ಅವರ ಮೊದಲ ಸಿನಿಮಾ. ಸುದೀಪ್ ಅಭಿನಯದ ಮೊದಲ ಚಿತ್ರ ಬ್ರಹ್ಮ. ಮುಹೂರ್ತಕ್ಕಷ್ಟೇ ಸೀಮಿತವಾದರೆ, ಮತ್ತೊಂದು ಸಿನಿಮಾ ಓ ಕುಸುಮಬಾಲೆ ತೆರೆ ಕಾಣಲೇ ಇಲ್ಲ. 3ನೇ ಸಿನಿಮಾ ತಾಯವ್ವ ಅಟ್ಟರ್ ಫ್ಲಾಪ್. 4ನೇ ಸಿನಿಮಾ ಪ್ರತ್ಯರ್ಥದಲ್ಲಿ ಪೋಷಕ ನಟ. ಊಹೂಂ.. ಆ ನಟನ ಒಳಗಿದ್ದ ತುಡಿತ, ಆಸೆ, ಛಲ ಬೆಳೆಯುತ್ತಲೇ ಹೋಯ್ತು. ಸುನಿಲ್ ಕುಮಾರ್ ದೇಸಾಯಿ ಅನ್ನೋ ನಿರ್ದೇಶಕನ ಕಣ್ಣಿಗೆ ಬಿದ್ದ ಮೇಲೆ ಸುದೀಪ್ ನಟರಾದರು. ಹುಚ್ಚನ ಕಿಚ್ಚ ಪಾತ್ರ ಸ್ಟಾರ್ ನಟನನ್ನಾಗಿಸಿತು. ಈಗಲೂ ಸುದೀಪ್ ಬೆನ್ನ ಹಿಂದೆಯೇ ಇದೆ ಆ ಹೆಸರು ಕಿಚ್ಚ.
ಈಗ ಸುದೀಪ್ ಏರಿರುವ ಎತ್ತರ ನೋಡಿದರೆ, ವ್ಹಾವ್ ಎನ್ನುತ್ತೀರಿ. ಆದರೆ, ಆರಂಭದ ದಿನಗಳು ಹಾಗಿರಲಿಲ್ಲ. ಸುದೀಪ್ ಅವರ ಸರೋವರ್ ಹೋಟೆಲ್ ಚಿತ್ರರಂಗದ ಸ್ಟಾರ್ಗಳ ಪಾಲಿಗೆ ಟೈಂ ಪಾಸ್ ಅಡ್ಡೆಯೂ ಹೌದು. ಶೂಟಿಂಗ್ ಜಾಗವೂ ಹೌದು. ಕಥೆ, ಚಿತ್ರಕಥೆಗಳ ಚರ್ಚೆಯ ಜಾಗವೂ ಹೌದು. ಹೀಗಾಗಿ ಸ್ಟಾರ್ಗಳನ್ನು, ಡೈರೆಕ್ಟರುಗಳನ್ನು ಹತ್ತಿರದಿಂದಲೇ ನೋಡುತ್ತಿದ್ದ ಸುದೀಪ್, ಪ್ರತಿ ದಿನವೂ ಸ್ಟುಡಿಯೋಗಳಿಗೆ, ನಿರ್ದೇಶಕರ ಮನೆ ಬಾಗಿಲು ತಟ್ಟುತ್ತಿದ್ದರು. ಆಡಿಷನ್ ಕೊಡುತ್ತಿದ್ದರು.
ಆಗ ಹಲವರು ಸುದೀಪ್ಗೆ ಸಲಹೆ ಕೊಡುತ್ತಿದ್ದರಂತೆ.. ಡ್ಯಾನ್ಸ್ ಕಲಿತುಕೋ, ಕುದುರೆ ಸವಾರಿ, ಹೀಗೆ ಹಲವು ಸಲಹೆ ಬರುತ್ತಿದ್ದವಂತೆ. ಅವೆಲ್ಲವನ್ನೂ ವಿನೀತರಾಗಿ ಕೇಳುತ್ತಿರುವಾಗಲೇ ಇನ್ನೊಂದು ಸಲಹೆ ಬಂದಿರುತ್ತಿತ್ತು. ನಿಂಗ್ಯಾಕೆ ಇದೆಲ್ಲ. ಅಪ್ಪನ ಬ್ಯುಸಿನೆಸ್ ಮಾಡಿಕೊಂಡಿರಬಾರದೇ.. ಎನ್ನುವವರೂ ಇದ್ದರು. ಅದೊಂದು ಮಾತನ್ನು ನಾನು ದ್ವೇಷಿಸುತ್ತಿದ್ದೆ.
ಹೀಗೆ ಆರಂಭದ ದಿನಗಳ ಕಥೆ ಹೇಳಿಕೊಂಂಡಿರೋ ಸುದೀಪ್, ಅಂಬರೀಷ್, ಶಂಕರ್ನಾಗ್, ರವಿಚಂದ್ರನ್, ಶಿವರಾಜ್ಕುಮಾರ್ ಮೊದಲಾದವರು ನೀಡಿದ ಸ್ಫೂರ್ತಿಯನ್ನು ನೆನಪಿಸಿಕೊಂಡಿದ್ದಾರೆ.