ರಮೇಶ್ ಅರವಿಂದ್. ತಮಿಳಿನವರು ಗುರುತಿಸಲು ಸುಲಭವಾಗಲಿ ಎಂಬ ಕಾರಣಕ್ಕೆ ಬಾಲಚಂದರ್ ಸೇರಿಸಿದ ಉಪನಾಮ ಅರವಿಂದ್. ಕನ್ನಡಿಗರಿಗೆ ಮಾತ್ರ ರಮೇಶ್. ಅವರಿಗೀಗ 55 ವರ್ಷ. ಈಗಲೂ ದಿನಕ್ಕೆ 16ರಿಂದ 18 ಗಂಟೆ ದುಡಿಯುವ, ಕಾಯಕವೇ ಕೈಲಾಸ ಎಂದುಕೊಂಡಿರುವ ನಟ. ನಿರ್ದೇಶಕ, ಸಂಭಾಷಣೆಗಾರ, ಕಿರುತೆರೆ ನಿರ್ಮಾಪಕ, ನಿರೂಪಕ.. ಎಲ್ಲವೂ..
1986ರಲ್ಲಿ ಕೆ.ಬಾಲಚಂದರ್ ಅವರ ಸುಂದರ ಸ್ವಪ್ನಗಳು ರಮೇಶ್ ಅಭಿನಯಿಸಿದ ಮೊದಲ ಸಿನಿಮಾ. ಆ ಚಿತ್ರದಲ್ಲಿ ಅವರು ಹೀರೋ ಅಲ್ಲ, ವಿಲನ್. ಮಧುಮಾಸ ಹೀರೋ ಆಗಿ ನಟಿಸಿದ ಮೊದಲ ಚಿತ್ರ. ದೊಡ್ಡ ಮಟ್ಟದ ಹೆಸರು ತಂದುಕೊಟ್ಟ ಚಿತ್ರ ಪಂಚಮವೇದ. ಹೀಗಿದ್ದರೂ.. ಸೋಲೋ ಹೀರೋ ಆಗಿ ಸತತ ಅವಕಾಶಗಳು ಸಿಗಲಿಲ್ಲ. ಒಳ್ಳೆ ಚಿತ್ರಗಳಿಗೆ.. ಒಳ್ಳೆಯ ಪಾತ್ರಗಳಿಗೆ ಕೊರತೆಯೂ ಇರಲಿಲ್ಲ.
ಅದೇನು ಅದೃಷ್ಟವೋ.. 1995ರಲ್ಲಿ ಅನುರಾಗ ಸಂಗಮ ಸೂಪರ್ ಹಿಟ್ ಆಯ್ತು. ಅದಾದ ನಂತರ ಬೆನ್ನು ಬೆನ್ನಿಗೆ ಸೂಪರ್ ಹಿಟ್ ಚಿತ್ರಗಳು. ಅತ್ತ ತಮಿಳಿನಲ್ಲೂ ಸಕ್ಸಸ್. ಇತ್ತ ಕನ್ನಡದಲ್ಲೂ ಸಕ್ಸಸ್. ಅಮೆರಿಕಾ ಅಮೆರಿಕಾ, ಕರ್ಪೂರದ ಗೊಂಬೆ, ನಮ್ಮೂರ ಮಂದಾರ ಹೂವೆ, ಅಮೃತವರ್ಷಿಣಿ, ಓ ಮಲ್ಲಿಗೆ, ಉಲ್ಟಾಪಲ್ಟಾ, ತುತ್ತಾ ಮುತ್ತಾ, ಹೂಮಳೆ, ಭೂಮಿ ತಾಯಿಯ ಚೊಚ್ಚಲ ಮಗ.. ಒಂದಲ್ಲ.. ಎರಡಲ್ಲ.. ಈ ವೇಳೆಯಲ್ಲಿ ಬಂದ ಹಲವು ಚಿತ್ರಗಳು ರಮೇಶ್ ಅವರಿಗೆ ತ್ಯಾಗರಾಜ ಅನ್ನೋ ಬಿರುದು ಕೊಟ್ಟವು. ಆ ಹೆಸರು ಈಗಲೂ ಇದೆ.
ರಾಮ ಶ್ಯಾಮ ಭಾಮ ಚಿತ್ರದ ಮೂಲಕ ನಿರ್ದೇಶಕರಾದ ರಮೇಶ್, ಅಲ್ಲಿಯೂ ಯಶಸ್ಸು ಕಂಡಿದ್ದಾರೆ. ಕಿರುತೆರೆಯ ಜನಪ್ರಿಯ ನಿರೂಪಕರಾಗಿಯೂ ಗೆದ್ದಿದ್ದಾರೆ. ಅವರಿಗೀಗ 55 ವರ್ಷ.
ಈಗಲೂ ಅವರ ಕೈಲಿ ಕೈತುಂಬಾ ಸಿನಿಮಾಗಳಿವೆ. ದಿನಕ್ಕೆ ಈಗಲೂ 16ರಿಂದ 18 ಗಂಟೆ ಕೆಲಸ ಮಾಡುವ ಕಾಯಕಯೋಗಿ ರಮೇಶ್ ಅರವಿಂದ್. ಶಿವಾಜಿ ಸುರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯ, 100, ಭೈರಾದೇವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರೇ ನಿರ್ದೇಶಿಸಿರುವ ಬಟರ್ ಫ್ಲೈ ರಿಲೀಸ್‍ಗೆ ರೆಡಿಯಾಗಿದೆ. ಇದರ ನಡುವೆಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ರಮೇಶ್ ಅರವಿಂದ್.