` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramya image
ramya

ಕಳೆದ ವಾರವೇ ಒಂದು ಸಂತೋಷದ ಸಂಗತಿಯನ್ನು ನಿಮಗೆ ಹೇಳಬೇಕು ಅಂದುಕೊಂಡಿದ್ದೆ. ಯಾಕೋ ಮರೆತುಹೋಗಿತ್ತು. ಕೆಲವು ವಾರಗಳ ಹಿಂದೆ ಇದೇ ಅಂಕಣದಲ್ಲಿ ಕಳೆದು ಹೋದ ‘ಬದುಕನ್ನು ಮರಳಿ ಕೊಡುವವರು ಯಾರು?’ಎಂಬ ಶೀರ್ಷಿಕೆಯಲ್ಲಿ ಒಬ್ಬ ಮುಗ್ಧ ಯುವಕನ ಬಗ್ಗೆ ಬರೆದಿದ್ದೆ.  ಹದಿಮೂರು ವರ್ಷಗಳ ಕಾಲ ಒಬ್ಬ ಹೆಸರಾಂತ ನಟನ ಸೇವೆ ಮಾಡಿ ಕೊನೆಗೆ ಬರಿಗೈಯಲ್ಲಿ ಬೀದಿಗೆ ಬಿದ್ದ ಒಬ್ಬ ನತದೃಷ್ಟ ವ್ಯಕ್ತಿಯ ಕತೆಯದು. ಖುಶಿಯ ಸಂಗತಿಯೆಂದರೆ ಪುಣ್ಯಾತ್ಮ ನಿರ್ಮಾಪಕರೊಬ್ಬರು ಆ ಅಂಕಣವನ್ನು ಓದಿ, ಅದು ಹೇಗೋ ಆ ಯುವಕನ ಫೋನ್ ನಂಬರ್ ಸಂಪಾದಿಸಿಕೊಂಡು ತಮ್ಮ ಕಂಪನಿಯಲ್ಲೇ ಆತನಿಗೊಂದು ಒಳ್ಳೆಯ ನೌಕರಿ ನೀಡಿದ್ದಾರೆ. ಮೊನ್ನೆಯಷ್ಟೇ ಆ ಯುವಕ ಒಂದು ಎಸ್ಸೆಮ್ಮೆಸ್ಸು ಕಳಿಸಿದ್ದ ‘ನಾನು ಇವತ್ತು ನನ್ನ ಮೊದಲ ಸಂಬಳ ತೆಗೆದುಕೊಂಡೆ, ತುಂಬಾ ಥ್ಯಾಂಕ್ಸ್ ಸರ್’. ಒಂದು ಕ್ಷಣ ಮನಸ್ಸು ಹಕ್ಕಿಯಾಯಿತು.

ಇದೇನು ಜಂಬದಿಂದ ಕೊಚ್ಚಿಕೊಳ್ಳುವಂಥ ಮಹಾನ್ ಸಾಧನೆಯೇನಲ್ಲ. ಕೆಲವು ಸತ್ಕಾರ್ಯಗಳು ಈ ಜಗತ್ತಲ್ಲಿ ಇನ್ನೂ ನಡೆಯುತ್ತಿವೆ ಅನ್ನುವುದಕ್ಕೊಂದು ಉದಾಹರಣೆ ಅಷ್ಟೆ. ನಮಗರಿವಿಲ್ಲದಂತೆ,  ನಮ್ಮಿಂದಾಗಿ ಯಾರಿಗೋ ಉಪಕಾರವಾದರೆ ಅದಕ್ಕಿಂತ ದೊಡ್ಡ ಖುಶಿಯೇನಿದೆ?ಅಷ್ಟಕ್ಕೂ ನಾನಲ್ಲಿ ನೆಪಮಾತ್ರ, ಉಪಕರಿಸಿದವರ ಸಹೃದಯತೆಗೊಂದು ಥ್ಯಾಂಕ್ಸ್ ಹೇಳುತ್ತೇನೆ. ಇದೇ ಥರ ‘ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು’ಎಂಬ ಇನ್ನೊಂದು ಅಂಕಣದಲ್ಲಿ ರಮ್ಯ ಮತ್ತೆ ನಟಿಸುವಂತಾಗಲಿ ಎಂದು ಬರೆದಿದ್ದೆ. ಅದಾಗಿ ಕೆಲವೇ ದಿನಗಳಲ್ಲಿ ರಮ್ಯ ಅಂಥಾದ್ದೊಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಅನ್ನುವ ಸುದ್ದಿ ಬಂತು. ನಾನೇ ಒಂದು ನ್ಯೂಸ್ ಚಾನೆಲ್ಲು ಆಗಿದ್ದರೆ ಇದು ‘ನನ್ನ ಬರಹದ Impact’ಎಂದು ಹೆಮ್ಮೆಯಿಂದ ಘೋಷಿಸಬಹುದಾಗಿತ್ತು. ದುರದೃಷ್ಟವಶಾತ್ ರಮ್ಯ ಈ ಅಂಕಣವನ್ನು ಓದಿರುವ ಯಾವ ಸಾಧ್ಯತೆಯೂ ಇಲ್ಲದಿರುವುದರಿಂದ ನಾನು ಅದರ ಕ್ರೆಡಿಟ್ಟು ತೆಗೆದುಕೊಳ್ಳುವುದು ಜೋಕ್ ಆದೀತು!  ಅದಿರಲಿ, ಈಗ ಬಂದಿರುವ ಸುದ್ದಿ ಪ್ರಕಾರ ರಮ್ಯ ‘ದೊಡ್ಮನೆ ಹುಡುಗ’ಚಿತ್ರದಲ್ಲಿ ನಟಿಸುತ್ತಿಲ್ಲ.ಅದಕ್ಕೆ ಕಾರಣ ಕಡಿಮೆ ಸಂಭಾವನೆ. ಈ ಬಗ್ಗೆ ಫೇಸ್ ಬುಕ್ಕಲ್ಲಿ ಬರೆದುಕೊಂಡಿರುವ ರಮ್ಯ ಮೂರು ಗಂಭೀರ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.

* ಕನ್ನಡ ಚಿತ್ರದಲ್ಲಿ ನಟಿಸುವ ಪರಭಾಷಾ ನಟಿಯರಿಗೆ ಅವರು ಕೇಳಿದಷ್ಟು ಸಂಭಾವನೆಯನ್ನು ನೀಡುವ ಕನ್ನಡ ನಿರ್ಮಾಪಕರು ಕನ್ನಡ ನಾಯಕಿಯರಿಗೇಕೆ ಮೂರು ಕಾಸು ಕೊಡುತ್ತಾರೆ. ಕನ್ನಡ ನಟಿಯರೂ ಪರಭಾಷೆಯಲ್ಲಿ ನಟಿಸಿದಾಗ ಅಲ್ಲಿ ಜಾಸ್ತಿ ಸಂಭಾವನೆ ಸಿಗುತ್ತದೆ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ನಮಗಲ್ಲಿ ಸಿಗುವುದು ಕೂಡಾ ಕಡ್ಲೆಕಾಯೀನೇ.

* ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ನಾಯಕ ನಟರು ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಆದರೆ ಹನ್ನೆರಡು ವರ್ಷದಿಂದ  ಇಲ್ಲೇ ಸೈಕಲ್ ಹೊಡೆಯುತ್ತಿರುವ ನಾಯಕಿಗೆ ಮಾತ್ರ ಅದರ ಕಾಲುಭಾಗದಷ್ಟೂ ಸಂಭಾವನೆ ಸಿಗುವುದಿಲ್ಲ. ನಾನು ನಟರ ಜೊತೆ ಪೈಪೋಟಿಗಿಳಿದಿಲ್ಲ, ಅವರ ಬಗ್ಗೆ ನನಗೆ ಗೌರವವಿದೆ. ನಾನು ಹೇಳುತ್ತಿರುವುದು ನನ್ನಂಥಾ ಇತರೇ ನಟಿಯರ ಸ್ಥಿತಿಗತಿಯ ಬಗ್ಗೆ. ನಾವೂ ಕೂಡಾ ನಟರಷ್ಟೇ ಪರಿಶ್ರಮ ಪಡುತ್ತೇವೆ, ಹಾಗಾಗಿ ನಾವೂ ಅವರಷ್ಟೇ ಸಂಭಾವನೆ ಪಡೆಯುವುದಕ್ಕೆ ಅರ್ಹರಾಗಿದ್ದೇವೆ ಅನ್ನುವುದು ನನ್ನ ಭಾವನೆ.

* ನಾನು ಈ ಹಿಂದೆ ನಟಿಸಿರುವ ಕೆಲವು ಚಿತ್ರಗಳಲ್ಲಿ ಪೂರ್ತಿ ಸಂಭಾವನೆಯನ್ನು ತೆಗೆದುಕೊಳ್ಳದೇ ನಿರ್ಮಾಪಕರಿಗೆ ಸಹಾಯ ಮಾಡಿದ್ದೇನೆ, ಕೆಲವೊಮ್ಮೆ ನಾನೇ ಹಣಕಾಸಿನ ನೆರವೂ ನೀಡಿದ್ದೂ ಉಂಟು. ಸೇವಂತಿ ಸೇವಂತಿ, ಆಕಾಶ್ ಮತ್ತು ಆರಸು ಚಿತ್ರಗಳ ನಿರ್ಮಾಪಕರ ಜೊತೆ ನಾನು ಸಂಭಾವನೆ ಬಗ್ಗೆ ಮಾತಾಡಿಯೇ ಇರಲಿಲ್ಲ, ಅವರು ಕೊಟ್ಟಿದ್ದನ್ನಷ್ಟೇ ಸ್ವೀಕರಿಸಿದ್ದೇನೆ. ನನ್ನ ಪ್ರಶ್ನೆಯೇನಂದರೆ ಹೀರೋಗೆ ತುಟಿಪಿಟಕ್ಕೆನ್ನದೆ ದುಡ್ಡು ಕೊಡುವ ನೀವು ನಾವು ಕೇಳಿದಾಗ ಮಾತ್ರ ಯಾಕೆ ಕೊಸರಾಡುತ್ತೀರಿ. ಚಿತ್ರೋದ್ಯಮದಲ್ಲಿ ನಟಿಯರ ಪರಿಸ್ಥಿತಿ ನೋಡಿದರೆ ದುಃಖವಾಗುತ್ತಿದೆ.

ramya, deepa sannidi, radhika pandit

ರಮ್ಯ ಮಂಡಿಸಿರುವ ವಾದ ಹೊಸದೇನೂ ಅಲ್ಲ, ಈ ಹಿಂದೆಯೂ ಕನ್ನಡದ ನಾಯಕಿಯರು ತಮಗೆ ಸಿಗುತ್ತಿರುವ ಅಲ್ಪ ಮರ್ಯಾದೆಯ ಬಗ್ಗೆ ಆಗಾಗ ಧ್ವನಿಯೆತ್ತಿದ್ದುಂಟು. ಆದರೆ ಅವೆಲ್ಲವೂ ಅತೃಪ್ತರ ಗೊಣಗಾಟದಂತೆ ಕೇಳಿಸಿದ್ದವು. ಜೊತೆಗೆ ಅವರ್ಯಾರೂ ‘ದೊಡ್ಮನೆ ಹುಡುಗಿ’ಯಲ್ಲದೇಆಗಿದ್ದರಿಂದ ಮತ್ತು ರಮ್ಯನಷ್ಟು ನೇರವಾಗಿ, ಗಟ್ಟಿಯಾಗಿ ಮಾತಾಡದೇ ಇದ್ದಿದ್ದರಿಂದ ಉದ್ಯಮದವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆಗ ಫೇಸ್ ಬುಕ್ ಮತ್ತು ಟ್ವೀಟರುಗಳೂ ಇರಲಿಲ್ಲ ಅನ್ನುವುದು ಬೇರೆ ಮಾತು. ಕೆಲವೊಮ್ಮೆ ನೀವು ನಿಂತಿರುವ ನೆಲೆಯೇ ನಿಮ್ಮ ಮಾತಿಗೆ ಎಕ್ ಸ್ಟ್ರಾ ತೂಕವನ್ನೂ, ಗಾಂಭೀರ್ಯವನ್ನೂ ತಂದುಕೊಡುತ್ತದೆ. ರಮ್ಯ ಈಗ ಕೇವಲ ನಟಿಯಲ್ಲ, ಕಾಂಗ್ರೆಸ್ ಪಕ್ಷದ ದೊಡ್ಡ ನಾಯಕಿ. ಆಕೆಯ ಅಭಿಮಾನಿ ಬಳಗವೂ ದೊಡ್ಡದು. ಆಕೆ ಫೇಸ್ ಬುಕ್ಕಲ್ಲಿ ನೀಡಿದ ‘ಸಂಭಾವನೆಯಲ್ಲಿ ಲಿಂಗ ತಾರತಮ್ಯ’ದಹೇಳಿಕೆಗೆ 2547 ಲೈಕ್ಸು ಮತ್ತು 37ಶೇರುಗಳು ಬಂದಿರುವುದೇ ಈ ಮಾತಿಗೆ ಸಾಕ್ಷಿ.

ನಾನು ಈ ಹಿಂದೊಮ್ಮೆ ಇದೇ ಅಂಕಣದಲ್ಲಿ ಬರೆದಂತೆ ವಾದಕ್ಕೆ ನಿಂತರೆ ರಮ್ಯ ಥೇಟು ಲಾಯರ್. ಅವರ ಅಭಿಪ್ರಾಯಗಳು ನೇರ ಮತ್ತು ನಿಖರ. ಕಡ್ಡಿ ಮುರಿದಂತೆ ಮಾತು, ಒಂದ್ಸಾರಿ ಆಡಿದ ಮಾತನ್ನು ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನೀವು ಆಕೆಯ ಹೇಳಿಕೆಯನ್ನು ಇನ್ನೊಮ್ಮೆ ಓದಿನೋಡಿ. ಎಂಥವರೂ ತಲೆದೂಗಬೇಕು ಅನ್ನುವಂಥ ವಾದಮಂಡನೆ. ಕನ್ನಡ ಚಿತ್ರೋದ್ಯಮದಲ್ಲಿ ಚಾಲ್ತಿಯಲ್ಲಿರುವ ಪುರುಷಪ್ರಧಾನ ವ್ಯವಸ್ಥೆ ವಿರುದ್ಧ ನಾಯಕಿಯೊಬ್ಬಳ ಬಂಡಾಯದ ಧ್ವನಿ ಇದು ಎಂದು ಪ್ರಗತಿಪರರು ಬಣ್ಣಿಸಬಹುದು, ಅನಾದಿಕಾಲದಿಂದಲೂ ನಿರ್ಮಾಪಕರ ಶೋಷಣೆಗೆ ಬಲಿಯಾಗುತ್ತಿರುವ ಕನ್ನಡತಿಯರಿಗೆ ರಮ್ಯಾ ಧ್ವನಿಯಾಗಿದ್ದಾರೆ ಎಂದು ನವ್ಯಕಾಲದ ವಿಮರ್ಶಕರು ಬರೆಯಬಹುದು, ತನ್ನ ವೈಯಕ್ತಿಕ ಸಮಸ್ಯೆಯನ್ನು ಸಾರ್ವಜನಿಕಗೊಳಿಸುವ ಪ್ರಯತ್ನವಿದು ಎಂದು ಕುಹಕಿಗಳು ಅಪಸ್ವರ ಹಾಡಬಹುದು.

ನಿಜ, ರಮ್ಯ ಹೇಳಿಕೆಯಲ್ಲಿ ಒಂದಿನಿತೂ ಉತ್ಪ್ರೇಕ್ಷೆಯಿಲ್ಲ, ಅವರು ಹೇಳಿದ ಎಲ್ಲಾ ಮಾತುಗಳೂ ಸತ್ಯ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಚಿತ್ರೋದ್ಯಮ ಅನ್ನುವುದು ಬೇರೆ ಉದ್ಯಮಗಳ ಥರ ಅಲ್ಲ. ಇಲ್ಲಿ ದುಡಿಯುತ್ತಿರುವವರು ಉದ್ಯೋಗಿಗಳೂ ಅಲ್ಲ. ಹಾಗಾಗಿ ಭಾರತೀಯ ಸಂವಿಧಾನದ ನೀತಿನಿಯಮಗಳು ಇಲ್ಲಿಗೆ ಅನ್ವಯವಾಗುವುದಿಲ್ಲ. ಇದು ಏನಿದ್ದರೂ ಮಾರುಕಟ್ಟೆಯ ಬೇಡಿಕೆ ಮೇಲೆ ಅವಲಂಬಿತವಾಗಿರುವ ಉದ್ಯಮ. ಸಾಮಾನ್ಯ ಪ್ರೇಕ್ಷಕರು ಹೀರೋ ಸಲುವಾಗಿ ಸಿನಿಮಾ ನೋಡುತ್ತಾರೆ, ಹಾಗಾಗಿ ಹೀರೋಗೆ ಸಂಭಾವನೆ ಜಾಸ್ತಿ. ಒಂದು ಸಿನಿಮಾದೊಳಗಿನ ಅವಕಾಶದ (space) ಮಾತು ಬಂದಾಗಲೂ ಹೀರೋ ಕೈಯೇ ಮೇಲು, ಎರಡೂವರೆ ತಾಸಿನ ಸಿನಿಮಾದಲ್ಲಿ ಮುಕ್ಕಾಲುಭಾಗವನ್ನು ಆತನೇ ಆಕ್ರಮಿಸುತ್ತಾನೆ. ಹಾಡು ಮತ್ತು ಅಳುವ ಸನ್ನಿವೇಶ ಬಂದಾಗ ಮಾತ್ರ ನಾಯಕಿ ಹಾಜರಿರುತ್ತಾಳೆ.

 ಕನ್ನಡದಲ್ಲಿ ಹೀರೋಯಿನ್ ಸಲುವಾಗಿಯೇ ಚಿತ್ರಗಳನ್ನು ನೋಡುವ ಕಾಲವೊಂದಿತ್ತು. ಅದು ಮಾಲಾಶ್ರೀ ಯುಗ. ಆಗ ಅವರು ದಿನವೊಂದಕ್ಕೆ ಒಂದು ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ ಅನ್ನುವುದು ದೊಡ್ಡ ಸುದ್ದಿಯಾಗಿತ್ತು. ನಿರ್ದೇಶಕರ ಹೆಸರಿನ ಮೇಲೆ ಸಿನಿಮಾಗಳನ್ನು ಓಡುವಂತೆ ಮಾಡಿದವರು ಪುಟ್ಟಣ್ಣ, ಸಿದ್ದಲಿಂಗಯ್ಯ, ಸಿಂಗ್ ಬಾಬು ಮತ್ತು ಇತ್ತೀಚಿಗೆ ಬಂದಿರುವ ಯೋಗರಾಜ್ ಭಟ್, ಸೂರಿ ಮುಂತಾದ ಕೆಲವೇ ಕೆಲವರು. ಆದರೂ ಅವರ ಸಂಭಾವನೆ ಹೀರೋ ಸಂಭಾವನೆಯ ಅರ್ಧದಷ್ಟೂ ಇಲ್ಲ. ಕತೆಯನ್ನೇ ನೆಚ್ಚಿಕೊಂಡು ಸಿನಿಮಾ ನಿರ್ಮಿಸುವ ಅಲ್ಪಸಂಖ್ಯಾತರು ನಾಯಕನಿಗೂ ಸಂಭಾವನೆ ನೀಡುವುದಿಲ್ಲ, ನಾಯಕಿಗೂ ನೀಡುವುದಿಲ್ಲ. ಕಲಾತ್ಮಕ ಚಿತ್ರಗಳಿಗೆ ಇವರಿಬ್ಬರ ಅಗತ್ಯವೇ ಇರುವುದಿಲ್ಲ.

sunny leone, poonam pande, veena mallik

ಪರಭಾಷೆಯಿಂದ ಆಮದಾಗುವ ನಾಯಕಿಯರಿಗೆ ವಿಪರೀತ ಸಂಭಾವನೆ ನೀಡುವ ಬಗ್ಗೆ ರಮ್ಯ ತಕರಾರೆತ್ತಿದ್ದಾರೆ. ಇಲ್ಲೊಂದು ವಿಚಿತ್ರ ಲಾಜಿಕ್ ಇದೆ. ಬಹಳಷ್ಟು ಸಂದರ್ಭಗಳಲ್ಲಿ  ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಪರಭಾಷಾ ನಟಿಯರನ್ನು ಕರೆತರುವುದು ಅವರಲ್ಲಿರುವ ಪ್ರತಿಭೆಗೋಸ್ಕರ ಅಲ್ಲ. ಅವರು ತೆರೆಯ ಮೇಲೆ ‘ಮೈದೋರಿ ಮುಂದೆ ಸಹಕರಿಸುತ್ತಾರೆ’ಅನ್ನುವ ಕಾರಣಕ್ಕೆ. ನಾವೂ ಮೈಚಳಿ ಬಿಟ್ಟು ನಟಿಸುವುದಕ್ಕೆ ಸಿದ್ಧ ಸ್ವಾಮೀ ಎಂದು ಕನ್ನಡತಿಯರು ಹೇಳಿದರೂ ಪ್ರೇಕ್ಷಕನಿಗೆ ಅದು ಪಥ್ಯ ಆಗುವುದಿಲ್ಲ. ಆ ಮಟ್ಟಿಗೆ ನಮ್ಮ ಪ್ರೇಕ್ಷಕ ತುಂಬಾ ಪೊಸೆಸಿವ್. ನಮ್ಮನೆ ಹುಡುಗಿಯರು ಗೌರಮ್ಮನಂತೆಯೇ ಶೋಭಿಸಬೇಕು, ಪರವೂರಿಂದ ಬರುವಾಕೆ ವಸ್ತ್ರತ್ಯಾಗ ಮಾಡಬೇಕು ಅನ್ನುವುದು ಆತನ ಸಿದ್ಧಾಂತ.

ಹಾಗಂತ ನಾಯಕನಿಗೆ ಮೂರು ಕೋಟಿ ಸಂಭಾವನೆ ನೀಡಿ, ನಾಯಕಿಗೆ ಬರೀ ಹತ್ತು ಲಕ್ಷ ನೀಡುವುದು ತಪ್ಪಾಗುತ್ತದೆ. ಈ ಥರದ ತಾರತಮ್ಯವನ್ನು ನಮ್ಮ ನಾಯಕಿಯರು ಪ್ರತಿಭಟಿಸಬೇಕು. ಹಾಗನ್ನುತ್ತಿರುವ ಹೊತ್ತಿಗೇ ದೊಡ್ಮನೆ ಹುಡುಗ ಚಿತ್ರಕ್ಕೆ ರಮ್ಯ ಕೇಳಿದ ಸಂಭಾವನೆ ಎಷ್ಟು ಎಂಬ ಕುತೂಹಲ ಸಹಜವಾಗಿಯೇ ಕಾಡುತ್ತದೆ. ಒಂದು ಮೂಲದ ಪ್ರಕಾರ ಅದು ಮೂರಂಕಿಯ ಸಮೀಪವಿದೆಯಂತೆ. ಅಕಸ್ಮಾತ್ ಅದು ನಾಯಕಿ ಪ್ರಧಾನ ಚಿತ್ರವಾಗಿದ್ದರೂ ಕೂಡಾ ಈ ದುಬಾರಿ ಬೇಡಿಕೆಯನ್ನು ನಿರ್ಮಾಪಕ ಸಹಿಸಿಕೊಳ್ಳುವುದು ಕಷ್ಟ.

ನಾನು ಲಿಂಗ ತಾರತಮ್ಯ ಮಾಡುವುದಿಲ್ಲ ಎನ್ನುವ ಆದರ್ಶವಾದಿ ನಿರ್ಮಾಪಕನ ಚಿತ್ರ ಸೋತುಹೋದರೆ ಆತನನ್ನು ಕಾಪಾಡುವುದಕ್ಕೆ ನಾಯಕಿಯೂ ಬರುವುದಿಲ್ಲ, ನಾಯಕನೂ ಬರುವುದಿಲ್ಲ. ಆದರೂ ರಮ್ಯ ಹೀಗೇ ಮಾತಾಡುತ್ತಿರಬೇಕು ಅನ್ನೋದು ನನ್ನಾಸೆ. ಯಾಕೆಂದರೆ ವಿರೋಧಪಕ್ಷವೇ ಇಲ್ಲದೇ ಇದ್ದರೆ ಆಳುವ ಪಕ್ಷದವರ ಹಾವಳಿಗೆ ಕಡಿವಾಣ ಹಾಕುವವರು ಯಾರು?

Also See

Uma Column 44 - ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಎಲ್ಲಿ ಹೋಯಿತು?

Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery