` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jayanth kaikini image
jayanth kaikini

ಟ್ಯೂನ್ ಗೆ ತಕ್ಕಂತೆ ಹಾಡು ಬರೆಯುವುದನ್ನು ಕೇಳಿದ್ದೀರಿ, ಆದರೆ ಟ್ಯೂನ್ ಗೆ ತಕ್ಕಂತೆ ಡೈಲಾಗ್ ಬರೆಯುವುದನ್ನು ಎಲ್ಲಾದರೂ ಕೇಳಿದ್ದೀರಾ. ಕೆಲವು ವರ್ಷದ ಹಿಂದೆ ಕನ್ನಡದ ಚಿತ್ರಸಾಹಿತಿಯೊಬ್ಬರಿಗೆ ಇಂಥಾದ್ದೊಂದು ಸವಾಲು ಎದುರಾಗಿತ್ತು. ಸದ್ಯಕ್ಕೆ ಮಾಜಿಯಾಗಿರುವ ಖ್ಯಾತ ನಿರ್ದೇಶಕರೊಬ್ಬರ ಸಿನಿಮಾ ಒಂದಕ್ಕೆ ಅವರೇ ಡೈಲಾಗ್ ರೈಟರ್. ನಾಯಕ ಸಿಟ್ಟಾಗುವ ದೃಶ್ಯ. ಆಗ ಆತ ಪಕ್ಕದಲ್ಲಿರುವ ಪಾತ್ರದ ಕಡೆ ತಿರುಗಿ ರೇಗಬೇಕು. ಸಾಹಿತಿ ಒಂದು ಪುಟದ ಡೈಲಾಗ್ ಬರೆದು ನಿರ್ದೇಶಕರ ಕೈಗಿತ್ತರು. ಅವರು ಅದರ ಕಡೆಗೊಮ್ಮೆ ಕಣ್ಣುಹಾಯಿಸಿ ‘ಛೆಛೆ ಇಷ್ಟುದ್ದ ಡೈಲಾಗ್ ಬೇಕಾಗಿಲ್ಲ’ಅನ್ನುತ್ತಾ ಮುಖ ಗಂಟಿಕ್ಕಿಕೊಂಡು ‘ಹಾ ಹೂಂ ಹೀಂ ಹಾ’ಎಂದು ಭುಸುಗುಟ್ಟಿದರು. ಸಾಹಿತಿ ಗಾಬರಿಯಾಗಿ ನೋಡುತ್ತಿದ್ದಂತೆಯೇ ‘ಈ ಎಕ್ಸ್ ಪ್ರಶನ್ ಗೆ ಸರಿಹೊಂದುವ ಡೈಲಾಗ್ ಬರೆಯಿರಿ’ಅಂದರು. ಆಮೇಲೇನಾಯಿತು ಅನ್ನೋದು ಗೊತ್ತಿಲ್ಲ. ಅಲ್ಲಿ ಡೈಲಾಗ್ ಯಾಕೆ ಬೇಕಿತ್ತು, ಬರೀ ಸೌಂಡನ್ನು ಬಳಸಿಕೊಳ್ಳಬಹುದಾಗಿತ್ತಲ್ಲ ಎಂದು ಕೇಳಿದರೆ ಕುಹಕವಾದೀತು.

ಈ ಹಾಸ್ಯಪ್ರಸಂಗವನ್ನು ನೆನಪಿಸಿಕೊಂಡವರು ಜಯಂತ್ ಕಾಯ್ಕಿಣಿ. ಕಳೆದ ವಾರ ಜಯಂತ್ ಅವರು ಅಚಾನಕ್ಕಾಗಿ ಭೇಟಿಯಾದರು. ಕನ್ನಡ ಚಿತ್ರರಂಗದ ಸಹವಾಸ ಮಾಡಿದ ನಂತರ ಅವರಿಗೆ ಅನಾಯಾಸವಾಗಿ ದಕ್ಕಿದಂಥ ಇಂಥಾ ಹಲವಾರು ರಸಗಳಿಗೆಗಳು ಮತ್ತು ಗುಳಿಗೆಗಳು ಅವರ ನೆನಪಿನಬುತ್ತಿಯಿಂದ ಹೊರಗೆ ಇಣುಕಿದವು. ಇತ್ತೀಚಿನ ಸಿನಿಮಾ ಗೀತೆಗಳ ಬಗ್ಗೆಯೂ ಪ್ರಸ್ತಾಪ ಬಂತು. ಒಬ್ಬ ಖ್ಯಾತ ನಟ ನಿರ್ಮಿಸಿದ ಚಿತ್ರವೊಂದಕ್ಕೆ ಜಯಂತ್ ತುಂಬಾ ಇಷ್ಟಪಟ್ಟು ಬರೆದ ಹಾಡೊಂದನ್ನು ಆ ನಟರು ಸಿನಿಮಾದಲ್ಲಿ ಬಳಸಿಕೊಳ್ಳಲೇ ಇಲ್ಲವಂತೆ. ಅದಕ್ಕೆ ಕಾರಣ ಅವರಿಗೆ ಆ ಹಾಡಿನ ಭಾವಾರ್ಥವೇ ಗೊತ್ತಾಗಿರಲಿಲ್ಲ.  ಆ ಬಗ್ಗೆ ಜಯಂತ್ ಅವರಿಗೆ ಬೇಸರವಿಲ್ಲ. ಸಿನಿಮಾದಲ್ಲಿ ಯಾವುದು ವರ್ಕೌಟ್ ಆಗುತ್ತದೆ ಅನ್ನುವುದನ್ನು ಹೇಳುವುದಕ್ಕೆ ಆಗುವುದಿಲ್ಲ. ಯಾಕೆಂದರೆ ಅದು ಬರೀ ಕಲೆಯಲ್ಲ, ವಿಜ್ಞಾನ ಕೂಡಾ. ಅವೆರಡನ್ನೂ ಅರ್ಥ ಮಾಡಿಕೊಂಡಿರುವ ನಿರ್ದೇಶಕನಷ್ಟೇ ಯಶಸ್ಸು ಕಾಣುತ್ತಾನೆ ಅನ್ನುವುದು ಜಯಂತ್ ಅವರಿಗೆ ಅರಿವಾಗಿದೆ.

ಸಿನಿಮಾ ಕವಿಯ ಮುಂದಿರುವ ಸವಾಲುಗಳು ಹಲವಾರು. ಆತ ಕೇವಲನದಿ, ಬೆಳದಿಂಗಳು, ಹುಡುಗಿ,  ಹೂ ಮತ್ತು ಹಕ್ಕಿಯ  ಬಗ್ಗೆ ಬರೆದರಷ್ಟೇ ಸಾಕಾಗುವುದಿಲ್ಲ. ಒಂದು ಮದುವೆ ಮನೆ ಹೇಗಿರುತ್ತೆ, ಅಲ್ಲಿಯ ಸಂಭ್ರಮ ಹೇಗಿರುತ್ತೆ ಅನ್ನೋದನ್ನೂ ಎರಡು ಚರಣಗಳಲ್ಲಿ ಹೇಳಬೇಕಾಗುತ್ತದೆ. ಅದಕ್ಕೆ ಪ್ರತಿಭೆಯೊಂದಿದ್ದರೆ ಸಾಕಾಗುವುದಿಲ್ಲ, ಜಾಣ್ಮೆಯೂ ಇರಬೇಕಾಗುತ್ತದೆ. ಅದರ ಜೊತೆಗೆ ಮೀಟರ್ ಗೆ ತಕ್ಕಂತೆ ಬರೆಯುವ ಸವಾಲನ್ನೂ ನಿಭಾಯಿಸಬೇಕಾಗುತ್ತದೆ ಎಂದರು ಜಯಂತ್. ಇದನ್ನು ಕಾಂಪ್ರಮೈಸ್ ಅಥವಾ ತನ್ನ ಸ್ವಾತಂತ್ರ್ಯ ಹರಣ ಎಂದು ಕವಿ ಭಾವಿಸಿದರೆ ಅತ ಸಿನಿಮಾ ಹಾಡುಗಳನ್ನು ಬರೆಯುವುದಕ್ಕಾಗುವುದಿಲ್ಲ. ಈ ಕಾರಣಕ್ಕೆ ಪತ್ರಿಕೆಗಳಲ್ಲಿ,  ವೇದಿಕೆಗಳಲ್ಲಿ, ವಿಚಾರಸಂಕಿರಣಗಳಲ್ಲಿ, ಕವನಸಂಕಲನಗಳಲ್ಲಿ ಮಿಂಚುವ ಕವಿಗಳು ಸಿನಿಮಾದಲ್ಲಿ ವರ್ಕೌಟ್ ಆಗುವುದಿಲ್ಲ. ಅವರು ಬಳಸುವ ರೂಪಕಗಳು ಸಾಮಾನ್ಯ ಜನರನ್ನು ತಲುಪುವುದೇ ಇಲ್ಲ. ಆದರೆ ಜಯಂತ್ ಆ ಮಾತಿಗೆ ಅಪವಾದ. ಅವರು ಮೂಲತಃ ಕವಿ ಮತ್ತು ಕತೆಗಾರರು. ಹಾಗಿದ್ದೂ ಸಿನಿಮಾ ಗೀತೆಗಳ ವ್ಯಾಕರಣವನ್ನು ಸುಲಭವಾಗಿ ಅರ್ಥ ಮಾಡಿಕೊಂಡರು, ಅಲ್ಲೂ ಸಲ್ಲುವ ಮತ್ತು ಇಲ್ಲೂ ಸಲ್ಲುವ ಹಾಡುಗಳನ್ನು ಬರೆದರು. ಆ ಮೂಲಕ ಸಾಹಿತ್ಯ ವಲಯಕ್ಕಷ್ಟೇ ಸೀಮಿತವಾಗಿದ್ದ ತಮ್ಮ ಜನಪ್ರಿಯತೆಯನ್ನು ಶ್ರೀಸಾಮಾನ್ಯನ ವಲಯಕ್ಕೂ ವಿಸ್ತರಿಸಿದರು. ಹಾಗಂತ ಅವರು ಸಿನಿಮಾ ಸಲುವಾಗಿ  ತಮ್ಮ ಅಭಿರುಚಿ, ಆಸಕ್ತಿಯನ್ನು ಬಲಿಕೊಡಲಿಲ್ಲ. ಕೊಂಚ ಸರಳೀಕರಿಸಿದರು. ಉದಾಹರಣೆಗೆ ಅವರು ಬರೆದ ‘ಉಡಿಸುವೆ ಬೆಳಕಿನ ಸೀರೆಯ’ಎಂಬ ಗೀತೆ ಸಿನಿಮಾ ಹಾಡು ಎಂಬ ಬೌಂಡರಿಯಾಚೆ ಜಿಗಿದು ಎಲ್ಲರಿಗೂ ಇಷ್ಟವಾಗುತ್ತದೆ.  ‘ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೇ ಸುಮ್ಮನೆ’ಎಂಬ ಸಾಲು ಪ್ರೀತಿಯ ಪರಾಕಾಷ್ಠೆಗೆ ಸಂಕೇತವಾಗುತ್ತದೆ. ‘ಈ ಸಂಜೆ ಯಾಕಾಗಿದೆ..’ಎಂಬ ಗೀತೆ ಏಕಕಾಲಕ್ಕೆ ಪ್ರೇಮಿಗಳ ವಿರಹವನ್ನೂ, ಸಂಜೆಯ ಮೆಲಾಂಕಲಿಯನ್ನೂ ಧ್ವನಿಸುತ್ತದೆ. ಅವರದು ಪಿಸುಗುಡುವ ಶೈಲಿ, ಒಲಿಸಿಕೊಳ್ಳುವ ಶೈಲಿ, ನೇವರಿಸುವ ಶೈಲಿ, ಆವರಿಸುವ ಶೈಲಿ. ಅಲ್ಲಿ ಆಕ್ರಂದನವಾಗಲಿ, ಆರ್ತನಾದವಾಗಲಿ ಅಪರೂಪ.

ಕಾಯ್ಕಿಣಿ ಬರೆದ ‘ಅನಿಸುತಿದೆ ಯಾಕೋ ಇಂದು ಹಾಡು’ಸಿಕ್ಕಾಪಟ್ಟೆ ಹಿಟ್ ಆಗಿ ಅದೆಷ್ಟೋ ದಿನಗಳಾದ ನಂತರ ಗೆಳೆಯ ರವಿ ಹೆಗಡೆ ಒಂದು ಸಾರಿ ಹೇಳಿದರು. “ನೀವು ಅನಿಸುತಿದೆ ಯಾಕೋ ಇಂದು ಹಾಡಿನ ಬಗ್ಗೆ ಬಹಳ ಹೇಳುತ್ತಿದ್ರಿ. ಆದರೆ ನನಗೆ ಅದ್ಯಾಕೆ ಅಷ್ಟೊಂದು ಜನಪ್ರಿಯವಾಗಿದೆ ಎಂದು ಅರ್ಥವೇ ಆಗಿರಲಿಲ್ಲ. ಇವತ್ತು ಅರ್ಥ ಆಯಿತು. ಮನೆಯಿಂದ ಆಫೀಸಿಗೆ ಬರುವ ಹೊತ್ತಲ್ಲಿ ಕಾರಲ್ಲಿ ಆ ಹಾಡು ಕೇಳುತ್ತಾ ಬಂದೆ. ಕಾರು ಡ್ರೈವಿಂಗಿಗೆ ಆ ಹಾಡು ಸೊಗಸಾಗಿ ಮ್ಯಾಚ್ ಆಗುತ್ತೆ ಮಾರಾಯ್ರೇ”

sunil kumar desai

ಹೀಗೆ ಒಂದುಒಳ್ಳೆಯ ಹಾಡು ನಾನಾ ಕಾರಣಗಳಿಗೆ ಹಲವರನ್ನು ಸ್ಪರ್ಶಿಸುತ್ತದೆ. ಹಾಗಾದಾಗಲೇ ಅದು ಜನಪ್ರಿಯವಾಗುತ್ತದೆ. ಮೊನ್ನೆ ಉದಯ ಟೀವಿಯಲ್ಲಿ ಹಳೆಯ ಹಾಡೊಂದನ್ನು ನೋಡಿದೆ. ‘ರಾಜರಾ ಮಹಲಿನಲಿ ಮಲ್ಲಿಗೆ ಹೂ ಅರಳೈತೆ ಐ ಲೇಸಾ..’ ಎಂದು ಆರಂಭವಾಗುವ ಆ ಹಾಡಿನ ಸನ್ನಿವೇಶ ಹೀಗಿತ್ತು. ನದಿಯಲ್ಲಿ ಸಾಗುತ್ತಿರುವ ದೋಣಿ, ಹುಟ್ಟುಹಾಕುತ್ತಿರುವ ಅಂಬಿಗನಾಗಿ   ರಾಜಕುಮಾರ್, ಆ ಕಡೆ ರಾಜನಾಗಿ ಉದಯಕುಮಾರ್, ಇನ್ನೊಂದು ತುದಿಯಲ್ಲಿ ರಾಜಕುಮಾರಿ ನಾಯಕಿ. ಎಂಥಾ ಕಲ್ಪನೆ ನೋಡಿ. ಸಾಮಾನ್ಯವಾಗಿ ಮಲ್ಲಿಗೆ ಅರಳುವುದು ಬಯಲಲ್ಲಿ, ಆದರೆ ಇಲ್ಲಿ ಅದು ಅರಮನೆಯಲ್ಲೇ ಅರಳುವ ಚೋದ್ಯ ಸಂಭವಿಸಿದೆ. ಅದು ಅಂಬಿಗನ ಕಲ್ಪನೆಗೆ ನಿಲುಕಿ, ಹಾಡಾಗಿ, ಆ ಹಾಡು ನಾಯಕಿಗಷ್ಟೇ ಅರ್ಥವಾಗಿ ಅವಳು ನಾಚಿಕೊಳ್ಳುತ್ತಿದ್ದಾಳೆ, ಥೇಟು ಮಲ್ಲಿಗೆಯಂತೆ ಅರಳುತ್ತಿದ್ದಾಳೆ.  ಖಳನಾಯಕನಿಗೆ ಇದರ ತಲೆಬುಡ ಅರ್ಥವಾಗದೇ ಇಲ್ಲೇನೋ ನಡೆಯುತ್ತಿದೆ ಅನ್ನುವ ಕಸಿವಿಸಿ. ಹಾಡಿನ ಭಾವಾರ್ಥ ನಿರ್ದೇಶಕನಿಗೆ ಅರ್ಥವಾದರೆ ಇಂಥಾ ಸೊಗಸಾದ ದೃಶ್ಯಗಳು ಹುಟ್ಟುತ್ತವೆ. ಇಲ್ಲದೇ ಇದ್ದರೆ, ‘ಅಲ್ಲಿ ನೋಡು ಚಂದ್ರಬಿಂಬ’ಅಂದಾಕ್ಷಣ ಕೆಮರಾ ಆಕಾಶದ ಕಡೆ ಹೊರಳುತ್ತದೆ. ಹಾಡಿನ ಸಾಹಿತ್ಯವನ್ನು ಮಕ್ಕಿ ಕಾ ಮಕ್ಕಿ ದೃಶ್ಯವಾಗಿ ಅನುವಾದಿಸುವುದು ಒಳ್ಳೆಯ ನಿರ್ದೇಶಕನ ಲಕ್ಷಣವಲ್ಲ. ಹಾಗನ್ನುವ ಹೊತ್ತಿಗೆ ನನಗೆ ‘ನಮ್ಮೂರ ಮಂದಾರ ಹೂವೆ’ಚಿತ್ರದ ಶೂಟಿಂಗಲ್ಲಿ ನಡೆದ ಒಂದು ಪ್ರಸಂಗ ನೆನಪಾಗುತ್ತದೆ. ‘ಹೇಳೇ ಕೋಗಿಲೆ ಇಂಪಾಗಲಾ’ಅನ್ನುವುದು ಆ ಚಿತ್ರದ ಜನಪ್ರಿಯ ಗೀತೆ. ಆ ಹಾಡಲ್ಲಿ ಒಂದು ಸಾಲು ಹೀಗೆ ಬರುತ್ತದೆ – ‘ಹೇಳೇ ದುಂಬಿಯೇ ಜೊಂಪಾಗಲಾ..’. ಆ ಹಾಡಿಗೆ ಕೊರಿಯಾಗ್ರಫಿ ಮಾಡುತ್ತಿದ್ದ ನೃತ್ಯಸಂಯೋಜಕರು ‘ಜೊಂಪಾಗಲಾ’ಪದವನ್ನು ‘ಜಂಪ್ ಆಗಲಾ’ಎಂದು ಅರ್ಥ ಮಾಡಿಕೊಂಡು ನಾಯಕಿ ಪ್ರೇಮಾಗೆ ಬಂಡೆಯಿಂದ ಕೆಳಗೆ ಜಿಗಿಯುವಂತೆ ಸೂಚಿಸಿದರಂತೆ. ಅದನ್ನು ನೋಡಿ ಕೆಂಡಾಮಂಡಲವಾದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಚಪ್ಪಲಿ ಕೈಗೆ ತೆಗೆದುಕೊಂಡು ತಾವೇ ರಪರಪಾಂತ ಹೊಡೆದುಕೊಂಡರಂತೆ.ಈ ಗೀತೆಯನ್ನು ಬರೆದವರು ಕಲ್ಯಾಣ್. ಅಂದಹಾಗೆ ಜೊಂಪಾಗಲಾ ಅಂದರೆ ಏನು?ಕನ್ನಡ ರತ್ನಕೋಶದಲ್ಲಿ ಆ ಪದವೇ ಇಲ್ಲ. ಪ್ರಾಸಕ್ಕೋಸ್ಕರ ಒಂದು ಹೊಸ ಶಬ್ದ ಸೃಷ್ಟಿಯಾಯಿತಾ?ಗೊತ್ತಿಲ್ಲ.

ಕನ್ನಡ ಚಿತ್ರರಂಗ ಅಸ್ತಿತ್ವಕ್ಕೆ ಬಂದಮೇಲೆ ಸುಮಾರು 22 ಸಾವಿರ ಹಾಡುಗಳು ಬಂದುಹೋಗಿವೆ. ಕುರಾಸೀ, ಜಯಗೋಪಾಲ್, ಗೀತಪ್ರಿಯ, ಸೋರಟ್ ಅಶ್ವತ್ಥ್, ವಿಜಯನಾರಸಿಂಹ, ಚಿ. ಉದಯಶಂಕರ್, ಹಂಸಲೇಖಾ, ಮನೋಹರ್, ಕಲ್ಯಾಣ್, ನಾಗೇಂದ್ರಪ್ರಸಾದ್, ಕಾಯ್ಕಿಣಿ, ಕವಿರಾಜ್,  ಯೋಗರಾಜ್ ಭಟ್ ತನಕ ಹಲವಾರು ಕವಿಗಳು ಸೊಗಸಾದ ಸಾಹಿತ್ಯ ರಚಿಸಿದ್ದಾರೆ. ಅಯ್ಯರ್, ಎಸ್. ನಾರಾಯಣ್ ಮೊದಲಾದ ನಿರ್ದೇಶಕರು ಕವಿಗಳಾಗಿ ನಮ್ಮನ್ನು ರಂಜಿಸಿದ್ದಾರೆ. ಆದರೆ ಕವಿ ಮತ್ತು ಸಂಗೀತ ನಿರ್ದೇಶಕರು ಒಬ್ಬರೇ ಆಗಿರುವ ಅದ್ಭುತ ಸಂಭವಿಸಿರುವುದು ಕನ್ನಡದಲ್ಲಷ್ಟೇ ಅನಿಸುತ್ತದೆ.  ಉದಾಹರಣೆಗೆ ಹಂಸಲೇಖಾ,  ಮನೋಹರ್, ಕಲ್ಯಾಣ್ ಅವರು ಕವಿಗಳೂ ಹೌದು , ರಾಗಸಂಯೋಜಕರೂ ಹೌದು. ಅವರಿಗೆ ಸಾಹಿತ್ಯ ಮೊದಲು ಹೊಳೆಯುತ್ತದೋ ಅಥವಾ ರಾಗ ಮೊದಲು ಹೊಳೆಯುತ್ತದೋ ಅನ್ನುವುದು ನನ್ನನ್ನು ಸದಾ ಕಾಡುವ ಪ್ರಶ್ನೆ. ಎರಡೂ ಏಕಕಾಲಕ್ಕೆ ಹೊಳೆದಾಗ ಒಂದು ಚೆಂದದ ಹಾಡು ಹುಟ್ಟುತ್ತದೆ.

ಒಂದು ಹಾಡು ಹೇಗೆ ಹುಟ್ಟುತ್ತದೆ. ನಿರ್ದೇಶಕ ಒಂದು ಸನ್ನಿವೇಶವನ್ನು ಸೃಷ್ಟಿಸುತ್ತಾನೆ, ಸಂಗೀತ ನಿರ್ದೇಶಕ ಅದಕ್ಕೆ ತಕ್ಕಂತ ರಾಗವನ್ನು ಸೃಷ್ಟಿಸುತ್ತಾನೆ, ಕವಿ ಆ ರಾಗಕ್ಕೆ ತಕ್ಕಂತೆ ಹಾಡು ಬರೆಯುತ್ತಾನೆ. ಇವೆಲ್ಲವೂ ಸೇರಿ ಒಂದು ವಾತಾವರಣ ನಿರ್ಮಾಣವಾಗುತ್ತದೆ. ಸಂಗೀತ ನಿರ್ದೇಶಕನಿಗೆ ರಾಗಜ್ಞಾನ ಇರಬೇಕು ಮತ್ತು ಸನ್ನಿವೇಶ ಬೇಡುವಂಥಾ ಭಾವವನ್ನು ಆ ರಾಗ ಧ್ವನಿಸಬೇಕು. ಕವಿ ಅದನ್ನು ಪದಗಳ ಮೂಲಕ ವಿಸ್ತರಿಸುತ್ತಾನೆ. ಹಾಡು ಹಿಟ್ ಆದಾಗ ಅದರಲ್ಲಿ ರಾಗಸಂಯೋಜಕನ ಪಾಲೆಷ್ಟು ಮತ್ತು ಕವಿಯ ಪಾಲೆಷ್ಟು ಅನ್ನುವುದು ಯಾವಾಗಲೂ ಒಂದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಗಾಯಕ ಅಥವಾ ಗಾಯಕಿಯ ಕೊಡುಗೆಯೂ ಲೆಕ್ಕಕ್ಕೆ ಬರುತ್ತದೆ. ಕೆಲವೊಮ್ಮೆ ಸಂಗೀತದ ಅಬ್ಬರದಲ್ಲಿ ಹಾಡು ಕೇಳಿಸುವುದೇ ಇಲ್ಲ, ಆಗ ಅದರ ಸಂಪೂರ್ಣ ಕ್ರೆಡಿಟ್ಟನ್ನು ಸಂಗೀತ ನಿರ್ದೇಶಕ ಒಬ್ಬನೇ ಬಾಚಿಕೊಳ್ಳಬಹುದು!

ಇತ್ತೀಚೆಗೆ ಟಪ್ಪಾಂಗುಚ್ಚಿ ಸಾಂಗು ಎಂಬ ಹೊಸ ಪ್ರಕಾರ ಹುಟ್ಟಿಕೊಂಡಿರುವುದರಿಂದ ಹಾಡು ಬರೆಯುವ ಕೆಲಸ ಸಲೀಸಾಗಿದೆ. ಹಾಗಾಗಿ ಹಲವಾರು ನಿರ್ದೇಶಕರೂ ಕವಿಗಳಾಗಿದ್ದಾರೆ.  ರಾಧಿಕಾ ರೋಡಿಗಳಿಯುತ್ತಾಳೆ, ಅಪ್ಪ ಅಮ್ಮ ಲೂಸ್ ಲೂಸಾಗಿ ಆಡುತ್ತಿದ್ದಾರೆ, ಬೋರ್ಡೇ ಇಲ್ಲದ ಬಸ್ಸಲ್ಲಿ ಬಂದಿಳಿಯುವ ಚೋಕರಿ ಯರ್ರಾಬಿರ್ರಿ ಕುಣಿಯುತ್ತಾಳೆ.ಕುನಾಲ್ ಗಾಂಜಾವಾಲನಂಥಾ ಪರಭಾಷಾ ಗಾಯಕ ಸಾರ್ವಜನಿಕ ವೇದಿಕೆಯಲ್ಲಿ ‘ಒಂದೇ ಒಂದು ಸಾರಿ ಕಳ್ ಮುಂಡೆ ಬಾರೇ’ಎಂದು ಹಾಡಿ ಜನರಿಂದ ಛೀಮಾರಿಗೊಳಗಾಗುತ್ತಾನೆ.  ಜಯಂತ ಕಾಯ್ಕಿಣಿಯಂಥ ಕವಿಗಳು ಅಪರೂಪಕ್ಕೊಮ್ಮೆ ‘ಒಗ್ಗರಣೆ’ಹಾಕಿದರೂ ಟಪ್ಪಾಂಗಚ್ಚಿಯ ಘಾಟಿನ ಮುಂದೆ ಈ ಘಮ ಮಂಕಾಗುತ್ತದೆ. ‘ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ’ಹಾಡಲ್ಲಿರುವ ಸರಳಸುಂದರ ಉಪಮೆ ಎಲ್ಲಿ ಮಾಯವಾಯಿತು ಎಂದು ನಾನು ಹುಡುಕುತ್ತಿದ್ದೇನೆ.

ಈ ಅಬ್ಬರದ ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಬಹುದಾ? ಹಾಗಂತ ಜಯಂತ್ ಅವರನ್ನು ಕೇಳಬೇಕು.

Also See

Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery