` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramesh image
ramesh now and ramesh during college days

ಸಾಂಪ್ರದಾಯಿಕ ಶೈಲಿಯಲ್ಲಿ ಈ ಬಾರಿಯ ಅಂಕಣ ಶುರುವಾಗುತ್ತದೆ. ಅದು 1987ನೇ ಇಸ್ವಿ. ನಾನು ‘ಅರಗಿಣಿ’ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕಣ್ಣುಬಿಡುತ್ತಿದ್ದ ಕಾಲ. ನೆಟ್ಟಕಲ್ಲಪ್ಪ ಸರ್ಕಲ್ಲಲ್ಲಿರುವ ಪುಟ್ಟಣ್ಣ ರಸ್ತೆಯಲ್ಲಿದ್ದ ನನ್ನ ಗುರು, ಅಣ್ಣ ಮತ್ತು ಆಶ್ರಯದಾತ ಶೇಷಣ್ಣನ ಮನೆಯಲ್ಲಿ ನನ್ನ ವಾಸ. ಒಂದು ಮುಂಜಾನೆ ಯುವಕನೊಬ್ಬ ನನ್ನನ್ನು ಕೇಳಿಕೊಂಡು ಮನೆಗೆ ಬಂದ. ಆತನ ಕೈಯಲ್ಲೊಂದು ಸ್ವೀಟ್ ಬಾಕ್ಸ್ ಇತ್ತು. ಏನು ಸಮಾಚಾರ ಎಂದೆ. “ನಾನು ಇಂಜಿನಿಯರಿಂಗ್ ಫೈನಲ್ ಇಯರ್ ನಲ್ಲಿ ತೊಂಭತ್ತೆರಡು ಪರ್ಸೆಂಟು ತೆಗೊಂಡಿದ್ದೀನಿ, ಈ ಸಂತೋಷಾನ ನಿಮ್ಮ ಜೊತೆ ಹಂಚಿಕೊಳ್ಳಬೇಕು ಅಂತಾನೇ ಬಂದೆ”ಅಂದ. ಆತನ ಹೆಸರು ರಮೇಶ್. ‘ನಾನು ಮಾಡೋದೆಲ್ಲಾ ತಮಾಷೆಗಾಗಿ’ಅನ್ನುವ ಡಿಡಿ ಸೀರಿಯಲ್ಲಲ್ಲಿ ಆತ ನಿರೂಪಕನಾಗಿದ್ದ. ಈ ಉದಯೋನ್ಮುಖ ನಟನ ಬಗ್ಗೆ ನಾನು ಅರಗಿಣಿಯಲ್ಲಿ ಒಂದೆರಡು ಸಾರಿ ಬರೆದಿದ್ದೆ. ನೆಟ್ಟಕಲ್ಲಪ್ಪ ಸರ್ಕಲ್ ಪಕ್ಕದ  ತ್ಯಾಗರಾಜನಗರದಲ್ಲಿ ಆತನ ಮನೆಯಿತ್ತು.

ramesh aravind first movie mouna geetha first shot

ಈಗ ನವೋದಯ ಶೈಲಿಯಲ್ಲಿ ಇನ್ನೊಂದು ಘಟನೆಯನ್ನು ನಿರೂಪಿಸುತ್ತಿದ್ದೇನೆ. ಅದು 1989ನೇ ಇಸ್ವಿ ಇರಬಹುದು. ನನ್ನ ವಾಸಸ್ಥಾನ ನೆಟ್ಟಕಲ್ಲಪ್ಪ ಸರ್ಕಲ್ಲಿಂದ ಪದ್ಮನಾಭನಗರಕ್ಕೆ ಶಿಫ್ಟ್ ಆಗಿತ್ತು. ನೌಕರಿಯೂ ‘ಅರಗಿಣಿ’ಯಿಂದ‘ಸಂಯುಕ್ತ ಕರ್ನಾಟಕ’ಕ್ಕೆವರ್ಗವಾಗಿತ್ತು. ಪದ್ಮನಾಭ ನಗರ ಬಸ್ ನಿಲ್ದಾಣಕ್ಕೆ13B ಬಸ್ ಹಿಡಿಯುವುದಕ್ಕೆ  ನಾನು ಮನೆಯಿಂದ ನಡೆದು ಬರುವ ಹಾದಿಯಲ್ಲಿ ಒಂದು ದಿನ ರಮೇಶ್ ಭೇಟಿಯಾದರು. ಹಳೇ ಕಾಲದ ಟೀವಿಎಸ್ ಗಾಡಿ. ಬೆನ್ನಹಿಂದೆ ಒಬ್ಬ ಯುವತಿ. ಒಂದೇ ತಿಂಗಳಲ್ಲಿ ಈ ಸೀನ್ ನಾಲ್ಕೈದು ಸಾರಿ ರಿಪೀಟ್ ಆದಮೇಲೆ ಗೊತ್ತಾಯಿತು. ಆಕೆ ರಮೇಶ್ ಮದುವೆಯಾಗಬೇಕಿದ್ದ ಹುಡುಗಿ. ಆ ಮದುವೆಗೆ ಹುಡುಗಿ ಮನೆಯವರಿನ್ನೂ ಒಪ್ಪಿಗೆ ನೀಡಿರಲಿಲ್ಲ. ಮುಂದೆ ಅವರಿಬ್ಬರೂ ಮದುವೆಯಾದರು ಮತ್ತು ಇಬ್ಬರು ಮಕ್ಕಳೊಂದಿಗೆ ಬನಶಂಕರಿ ಎರಡನೇ ಹಂತದಲ್ಲಿರುವ ಮನೆಯಲ್ಲಿ ಸುಖವಾಗಿದ್ದಾರೆ ಅನ್ನುವುದು ವರ್ತಮಾನ.

ramesh aravind family

ಮೂರನೇ ಘಟನೆ ಪಕ್ಕಾ ಸಿನಿಮಾ ಶೈಲಿಯಲ್ಲಿದೆ.ಇಸ್ವಿ 1995.  ನಾನು ಆಗ ಕನ್ನಡಪ್ರಭದಲ್ಲಿದ್ದೆ. ರಮೇಶ್ ಆಗಷ್ಟೇ ಬಾಲಚಂದರ್ ಗರಡಿಯಲ್ಲಿ ಪಳಗಿಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು.ಅವರು ಕಮಲಾಹಾಸನ್ ಅವರನ್ನು ಅನುಕರಿಸುತ್ತಾರೆ ಅನ್ನುವ ಸುದ್ದಿ ತಮಿಳಲ್ಲೂ ಮತ್ತು ಕನ್ನಡದಲ್ಲೂ ದಟ್ಟವಾಗಿ ಹರಡಿತ್ತು. ಕರ್ನಾಟಕವೇ ತನ್ನ ತವರಾಗಿದ್ದರಿಂದ ಕನ್ನಡ ಚಿತ್ರರಂಗದಲ್ಲೇ  ತನ್ನ ಅದೃಷ್ಟಪರೀಕ್ಷೆ ಮಾಡುವ ಉದ್ದೇಶ ಅವರಲ್ಲಿತ್ತು. ಒಂದು ಸಂಜೆ ಕನ್ನಡಪ್ರಭ ಕಚೇರಿಗೆ ರಮೇಶ್  ಕಾರಲ್ಲಿ ಬಂದರು. ನನ್ನನ್ನು ‘ಎತ್ತಾಕ್ಕೊಂಡು’ಯಾವುದಾದರೂ ಹೋಟೆಲ್ಲಿಗೆ ಕಾಫಿ ಕುಡಿಯೋಣ ಅಂತ ಹೊರಟರು. ಎಕ್ಸ್ ಪ್ರೆಸ್ ಸರ್ಕಲ್ ದಾಟಿದ ನಂತರ ಸಿಗುವ ಜಿಪಿಓ ಸರ್ಕಲಲ್ಲಿ ಆಗ ರೈಟ್ ಟರ್ನ್ ನಿಷಿದ್ಧವಾಗಿತ್ತು.  ನನ್ನಲ್ಲಿ ಯಾವುದೇ ವಾಹನಗಳು ಇಲ್ಲದೇ ಇದ್ದಿದ್ದರಿಂದ ನನಗೂ ಟ್ರಾಫಿಕ್ ನಿಯಮಗಳ ಬಗ್ಗೆ ಗೊತ್ತಿರಲಿಲ್ಲ. ರಮೇಶ್  ಬಲಕ್ಕೆ ಕಾರು ತಿರುಗಿಸಿದರು, ಪೊಲೀಸಪ್ಪ ಓಡೋಡಿ ಬಂದು ಕಾರು ನಿಲ್ಲಿಸಿದ, ರಮೇಶ್ ಅವರನ್ನು ಕಂಡಿದ್ದೇ ತಡ“ ಓ ರಮೇಶ್ ಸರ್, ನೀವು ನಟರಾಗಿದ್ದೂ ಹೀಗೆ ರಾಂಗ್ ಸೈಡಲ್ಲಿ ಹೋಗುವುದಾ”ಅಂತ ನಗುನಗುತ್ತಾ ಕೇಳಿ, ಫೈನ್ ಹಾಕದೇ ಬಿಟ್ಟುಬಿಟ್ಟ.  ಆಮೇಲೆ ಕಾಫಿ ಕುಡಿಯುತ್ತಾ ಕನ್ನಡ ಚಿತ್ರರಂಗದಲ್ಲಿ ತನಗೆ ಒಗ್ಗುವ ಯಾವುದಾದರೂ ಸ್ಲಾಟ್ ಖಾಲಿ ಇದೆಯಾ ಎಂದು ರಮೇಶ್ ಕೇಳಿದರು. ಆಗಷ್ಟೇ ಅನಂತನಾಗ್ ನಾಯಕ ಪಾತ್ರಗಳಿಂದ ಹಿಂದೆ ಸರಿಯುತ್ತಿದ್ದ ಕಾಲವದು. ಮಧ್ಯಮವರ್ಗದ ಪಾಲಿಗೆ ಅಚ್ಚುಮೆಚ್ಚಿನ ನಟರಾಗಿದ್ದ ಅನಂತನಾಗ್ ಜಾಗಕ್ಕೆ ರಮೇಶ್ ಪರ್ಯಾಯ ಆಯ್ಕೆಯಾಗಬಹುದು ಅನ್ನುವ ಸಲಹೆಯನ್ನು ನಾನು ನೀಡಿದೆ.ಮುಂದೆ ಅದು ನಿಜ ಆಯಿತು.

ramesh as traffic inspector in venkates in sankata (pic K M Veeresh)

ನಾನು ಈ ಘಟನೆಯನ್ನು ‘ಚಿತ್ರಪ್ರಭ’ದಲ್ಲಿ ಬರೆದೆ.ಪೊಲೀಸ್ ಪೇದೆ ಪಾಲಿಗೆ  ರಮೇಶ್ ತೆಗೆದುಕೊಂಡಿದ್ದು ರಾಂಗ್ ಟರ್ನ್ ಆಗಿದ್ದರೂ ರಮೇಶ್ ವೃತ್ತಿಬದುಕಿನ ಪಾಲಿಗೆ ಇದು ರೈಟ್ ಟರ್ನ್ ಆಗಬಹುದು ಅಂತ ತಮಾಷೆಗೆ ಭವಿಷ್ಯ ಹೇಳಿದ್ದೆ. ಮುಂದಿನ ದಿನಗಳಲ್ಲಿ ಅನಂತನಾಗ್ ಮಾಡಬಹುದಾಗಿದ್ದ ಪಾತ್ರಗಳು ರಮೇಶ್ ಪಾಲಿಗೆ ಬಂದವು.  ಪಂಚಮವೇದದಿಂದ ಶುರುವಾದ ಅವರ ಯಶಸ್ಸಿನ ಪಯಣ ಶ್ರೀಗಂಧ,ನಮ್ಮೂರ ಮಂದಾರ ಹೂವೇ, ಅಮೆರಿಕಾ ಅಮೆರಿಕಾ, ಅಮೃತವರ್ಷಿಣಿ ಹೀಗೆ ಸೆಂಟಿಮೆಂಟು ಚಿತ್ರಗಳ ಸರಣಿಯಲ್ಲಿ ಸಾಗಿತು. ಅವರು ಪದೇಪದೇ ನಾಯಕಿಯನ್ನು ತ್ಯಾಗ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದುದರಿಂದ ವಿಮರ್ಶೆಯೊಂದರಲ್ಲಿ ಅವರನ್ನು ‘ತ್ಯಾಗರಾಜ’ಎಂದು ತಮಾಷೆಗೆ ಕರೆದೆ. ಮುಂದೆ ಅದೇ ಖಾಯಂ ಆಗಿಹೋಯಿತು. ಒಂದೊನೊಂದು ಕಾಲದಲ್ಲಿ ತ್ಯಾಗರಾಜ ನಗರದಲ್ಲಿ ಮನೆ ಮಾಡಿದ್ದ ರಮೇಶ್ ಮುಂದೆ ತ್ಯಾಗರಾಜನೇ ಆಗಿಹೋದರು.

ಹೀಗೆ ರಮೇಶ್ ಬದುಕಿನ ಮೂರು ಮಹತ್ವದ ತಿರುವುಗಳಿಗೆ ನಾನು ಸಾಕ್ಷಿಯಾಗಿದ್ದೆ ಅನ್ನುವುದನ್ನು ಈಗ ನೆನಪಿಸಿಕೊಳ್ಳುವಾಗ ಸೋಜಿಗವಾಗುತ್ತದೆ. ತೊಂಭತ್ತೆರಡು ಪರ್ಸೆಂಟು ಅಂಕಗಳನ್ನು ಗಳಿಸಿದ ರಮೇಶ್ ಮನಸ್ಸು ಮಾಡಿದ್ದರೆ ಒಳ್ಳೆಯ ಇಂಜಿನಿಯರ್ ಆಗಬಹುದಾಗಿತ್ತು. ಆದರೆ ಅವರ ಆಯ್ಕೆ ಸಿನಿಮಾ ಆಗಿತ್ತು. ಆಗ ಅರಗಿಣಿಯಲ್ಲಿ ನನ್ನ ಸಂಪಾದಕರಾಗಿದ್ದ ಹರಿಶ್ಚಂದ್ರ ಭಟ್ ಅವರಿಗೆ ಇಂಥವರ ಬಗ್ಗೆ ಕೊಂಚ ಅಸಮಾಧಾನವಿತ್ತು. ಸರ್ಕಾರ ಅದೆಷ್ಟೋ ದುಡ್ಡು ಖರ್ಚು ಮಾಡಿ ಇಂಜಿನಿಯರುಗಳನ್ನು ತಯಾರು ಮಾಡುತ್ತದೆ, ಅವರಿಂದ ಸಮಾಜಕ್ಕೆ ದೇಶಕ್ಕೆ ಉಪಯೋಗವಾಗಲಿ ಅಂತ. ಆದರೆ ಇವರು ನಟರಾಗಿ ಜನರನ್ನು ರಂಜಿಸುವುದಕ್ಕೆ ತಮ್ಮ ಬದುಕನ್ನು ಮೀಸಲಾಗಿಡುತ್ತಾರೆ. ಈ ಕರ್ಮಕ್ಕೆ ಇಂಜಿನಿಯರಿಂಗ್ ಯಾಕೆ ಓದಬೇಕಾಗಿತ್ತು ಅನ್ನುವುದು ಅವರ ಪ್ರಶ್ನೆಯಾಗಿತ್ತು.

ಸಮಾಜಕ್ಕೆ ನಷ್ಟವಾಯಿತೋ ಗೊತ್ತಿಲ್ಲ, ರಮೇಶ್ ಅವರಿಗಂತೂ ಲಾಭವಾಯಿತು. ಅವರು ಬಾಲಚಂದರ್ ಅಂಥಾ ಶ್ರೇಷ್ಠ ನಿರ್ದೇಶಕನ ಕಣ್ಣಿಗೆ ಬಿದ್ದರು.ನೆನಪಿರಲಿ,ರಜನಿಕಾಂತ್, ಪ್ರಕಾಶ್ ರೈ ಮತ್ತು ರಮೇಶ್ –ಈ ಮೂವರು ಕನ್ನಡಿಗರನ್ನು ಉದ್ಧಾರ ಮಾಡಿದವರು ಬಾಲಚಂದರ್ ಅವರೇ.ಅದರಲ್ಲೂರಮೇಶ್ ರಂಗಪ್ರವೇಶ ಮಾಡಿದ ಕಾಲ ಚೆನ್ನಾಗಿತ್ತು, ಜೊತೆಗೆ ಅವರ ಅದೃಷ್ಟವೂ ಚೆನ್ನಾಗಿತ್ತು. ತಮಿಳಿನಲ್ಲಿ ಬಾಲಚಂದರ್, ಕನ್ನಡದಲ್ಲಿ ಪಿಎಚ್. ವಿಶ್ವನಾಥ್, ಮಹೇಂದರ್, ದಿನೇಶ್ ಬಾಬು, ಹೀಗೆ ಭಾವನಾತ್ಮಕ ಚಿತ್ರಗಳ ನಿರ್ದೇಶನದಲ್ಲಿ ತಜ್ಞರು ಅನಿಸಿಕೊಂಡವರೇ ರಮೇಶ್ ವೃತ್ತಿಯ ಏರುಹಾದಿಯಲ್ಲಿ ಮೆಟ್ಟಲುಗಳಾದರು. ಅನಂತನಾಗ್ ತಾವಾಗಿ ವೀಆರ್ ಎಸ್ ತೆಗೆದುಕೊಂಡಿದ್ದು ಕೂಡಾ ರಮೇಶ್ ಗೆ ವರದಾನವಾಯಿತು. ಹಾಗಂತ ಅನಂತನಾಗ್ ಅವರಿಗೆ ರಮೇಶ್ ಸರಿಯಾದ ರಿಪ್ಲೇಸ್ ಮೆಂಟಾ ಅನ್ನುವ ಪ್ರಶ್ನೆ ಕೇಳಿದರೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಅನಂತನಾಗ್ ಸಹಜನಟ, ರಮೇಶ್ ನಟನೆಯನ್ನು ಕಷ್ಟಪಟ್ಟು ರೂಢಿಸಿಕೊಂಡವರು. ಇಂಥವರನ್ನು ಮೆಥಡ್ ಆಕ್ಟರ್ಸ್ ಅಂತ ಕರೆಯುತ್ತಾರೆ. ಆದರೆ ಸಾಧ್ಯವಾದಷ್ಟೂ ಸಹಜವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವುದಕ್ಕೆ ರಮೇಶ್ ಪ್ರಯತ್ನ ಪಡುತ್ತಾರೆ ಅನ್ನುವುದು ಸುಳ್ಳಲ್ಲ. ಜೊತೆಗೆ ವ್ಯಾವಹಾರಿಕವಾಗಿಯೂ ರಮೇಶ್ ಜಾಣ. ಬದಲಾಗುತ್ತಿರುವ ಟ್ರೆಂಡ್, ಅದಕ್ಕೆ ತಕ್ಕಂತೆ ಒಬ್ಬ ನಟ ಮಾಡಿಕೊಳ್ಳಬೇಕಾದ ಪೂರ್ವತಯಾರಿ ಮತ್ತು ರೂಪಾಂತರಗಳನ್ನು ಅವರು ಗಂಭೀರವಾಗಿ ಅಧ್ಯಯನ ಮಾಡುತ್ತಾರೆ. ಸೆಂಟಿಮೆಂಟು ಪಾತ್ರಗಳಲ್ಲಿ ತಾನು ಸ್ಟೇಲ್ ಆಗುತ್ತಿದ್ದೇನೆ ಅಂತ ಅರಿವಾದ ಕೂಡಲೇ ಅವರು ಕಾಮೆಡಿಯತ್ತ ಹೊರಳಿದ್ದೇ ಈ ಮಾತಿಗೆ ಸಾಕ್ಷಿ. ಅಲ್ಲಿ ಅವರ ಹಾವಭಾವಗಳು ಒರಿಜಿನಲ್ ಅಂತ ನಿಮಗೆ ಅನಿಸದೇ ಇರಬಹುದು, ಆದರೆ ಉಲ್ಟಾಪಲ್ಟಾದಂಥ ಚಿತ್ರಗಳಲ್ಲಿ ಅವರ ಗೆಲುವನ್ನು ತಳ್ಳಿಹಾಕುವುದಕ್ಕಂತೂ ಸಾಧ್ಯವಿಲ್ಲ. ಒಳ್ಳೆಯ ಪಾತ್ರವೊಂದು ಒಲಿದು ಬಂದಾಗ ಅದನ್ನು ತನ್ನದಾಗಿಸಿಕೊಂಡು ತಾನೇ ಆ ಪಾತ್ರವಾಗುವುದಕ್ಕೆ ನಟ ಸಾಕಷ್ಟು ಕಸರತ್ತು ಮಾಡಬೇಕು. ಅದೇ ಮಾದರಿಯಲ್ಲಿ ಬೇರೆ ಭಾಷೆಯಲ್ಲಿ ಬಂದ ಚಿತ್ರಗಳನ್ನೂ ಪಾತ್ರಗಳನ್ನೂ ನೋಡಬೇಕು. ಒಳ್ಳೆಯ ಓದು ಇರಬೇಕು. ನಿರ್ದೇಶಕನ ಸೂಚನೆಯನ್ನು ಪಾಲಿಸುವುದರ ಜೊತೆಗೆ ತನ್ನ ಸ್ವಂತ ಚಿಂತನೆಗಳನ್ನೂ ಬೆರೆಸಬೇಕು. ಅದು ಒಂದು ಪುಟ್ಟ ಗೆಸ್ಚರ್ ಇರಬಹುದು, ಛಕ್ಕಂತ ಮಿಂಚಿಹೋಗುವ ಒಂದು ಸಾಲಿನ ಡೈಲಾಗ್ ಇರಬಹುದು,ಒಂದು ಬಿಕ್ಕಳಿಕೆ, ಅರೆಕೆಮ್ಮು...ನಿರ್ದೇಶಕನನ್ನು ಮೀರದೆಯೇ ಇವೆಲ್ಲವನ್ನೂ ಸಾಧ್ಯವಾಗಿಸಬಲ್ಲ ಜಾಣ್ಮೆ ರಮೇಶ್ ಅವರಿಗಿದೆ.ಅವರು ಸ್ಟಾರ್ ಪಟ್ಟಕ್ಕೇರದೆಯೇ ಚಿತ್ರರಂಗದಲ್ಲಿ ಇಷ್ಟು ವರ್ಷ ಬಾಳಿಕೆ ಬಂದಿದ್ದರ ಹಿಂದೆ ಈ ರಹಸ್ಯಗಳು ಅಡಗಿವೆ.

ramesh aravind (k m veeresh)

ಹೊಸ ಪ್ರಯೋಗಗಳು ಅಂದರೆ ರಮೇಶ್ ಗೆ ಇನ್ನಿಲ್ಲದ ಉತ್ಸಾಹ, ಫೋಟೋಗ್ರಾಫರ್ ತನ್ನನ್ನು ಬೇರೆಯೇ ರೀತಿಯಲ್ಲಿ ಬಿಂಬಿಸುವುದಕ್ಕೆ ಯತ್ನಿಸುತ್ತಿದ್ದಾನೆ ಅಂದರೆ ಅವರದು ಸಂಪೂರ್ಣ ಸಹಕಾರ.ಅಂಥಾದ್ದೊಂದು ಪ್ರಯತ್ನವನ್ನು ನಾನು ‘ಚಿತ್ರಪ್ರಭ’ದಲ್ಲಿದ್ದಾಗಮಾಡಿದ್ದೆ. ಚಿತ್ರಲೋಕ ಸಂಪಾದಕ ಕೆ.ಎಂ. ವೀರೇಶ್ ತೆಗದ ರಮೇಶ್ ಗುಂಡುಹಾಕುವ ನಾನಾಭಂಗಿಗಳನ್ನು ಒಂದು ಸೀರೀಸ್ ಥರ ಅರ್ಧಪುಟದಲ್ಲಿ ಪ್ರಕಟಸಿದ್ದೆ. ಆದರೆ ಆ ಬಗ್ಗೆ ಅವರ ವಿಐಪಿ ಅಭಿಮಾನಿಯೊಬ್ಬ ಆಕ್ಷೇಪ ವ್ಯಕ್ತಪಡಿಸಿದಾಗ ಇನ್ನು ಮುಂದೆ ಗುಂಡು ಹಾಕುವ ಫೋಟೋ ಹಾಕಬೇಡಿ ಎಂದು ನಯವಾಗಿಯೇ ರಮೇಶ್ ಮನವಿ ಮಾಡಿಕೊಂಡಿದ್ದರು. ಪ್ರಯೋಗ ಇರಲಿ, ಆದರೆ ರಿಸ್ಕ್ ಬೇಡ ಅನ್ನುವುದು ಅವರ ಬದುಕಿನ ಪಾಲಿಸಿಯೂ ಹೌದು. ಹೀಗಾಗಿಯೇ ಚಿತ್ರೋದ್ಯಮದಲ್ಲಿ ವಿವಾದಗಳು ಸೃಷ್ಟಿಯಾದಾಗ ಸಪೋಟಾ ಹಣ್ಣಿನ ಬೀಜದಂತೆ ಅವರು ಯಾರ ಕೈಗೂ ಸಿಗದೇ ಜಾರಿಹೋಗುತ್ತಾರೆ. ಎಲ್ಲರಿಂದಲೂ ಒಳ್ಳೆಯವನು ಅನಿಸಿಕೊಳ್ಳುವುದಕ್ಕೆ ಪುಣ್ಯ ಮಾಡಿರಬೇಕು ನಿಜ, ಆದರೆ ಅದೇ ಒಂದು ವ್ಯಸನವಾದರೆ ನಮ್ಮ ವ್ಯಕ್ತಿತ್ವಕ್ಕೊಂದು ಐಡೆಂಟಿಟಿಯೇ ಇರುವುದಿಲ್ಲ ಅನ್ನುವುದೂ ನಿಜ.

ramesh aravind

ಒಬ್ಬ ಸ್ನೇಹಿತನಾಗಿ ರಮೇಶ್ ಜೊತೆ ಗಂಟೆಗಟ್ಟಲೆ ಕಾಲ ಕಳೆಯಬಹುದು, ಯಾಕೆಂದರೆ ಕನ್ನಡದಲ್ಲಿರುವ ಕೆಲವೇ ಕೆಲವು ವಿದ್ಯಾವಂತ ನಟರ ಪೈಕಿ ಅನಂತನಾಗ್ ಮತ್ತು ರಮೇಶ್ ಹೆಸರುಗಳು ಮುಂಚೂಣಿಯಲ್ಲಿವೆ. ಇಬ್ಬರ ಮನೆಯಲ್ಲೂ ಒಳ್ಳೆಯ ಲೈಬ್ರೆರಿಗಳಿವೆ, ನೀವು ಯಾವ ಸಂಗತಿ ಬಗ್ಗೆ ಮಾತಾಡಿದರೂ ಅದನ್ನು ಇನ್ನಷ್ಟು ವಿಸ್ತರಿಸುವ ಜ್ಞಾನ ಇಬ್ಬರಿಗೂ ಇದೆ.ಆದರೆಸರಸ್ವತಿ ಮತ್ತು ಲಕ್ಷ್ಮಿ ಇವರಿಬ್ಬರನ್ನೂ ಸಂಭಾಳಿಸುವ ರಮೇಶ್ ಚಾಕಚಕ್ಯತೆಯನ್ನು ಕಂಡು ನಾನು ಬೆರಗಾಗಿದ್ದೇನೆ. ಅವರು ಆಡುವ ಪ್ರತಿವಾಕ್ಯದ ಹಿಂದೆ ಒಂದು ಲೆಕ್ಕಾಚಾರ ಮತ್ತು ರಿಹರ್ಸಲ್ ಇರುತ್ತದೆ.

ಒಬ್ಬ ಸಿನಿಮಾ ನಟ ಚಾಲ್ತಿಯಲ್ಲಿರಬೇಕಾದರೆ ಯಶಸ್ವಿ ಚಿತ್ರಗಳಲ್ಲಿ ನಟಿಸಿದರಷ್ಟೇ ಸಾಕಾಗುವುದಿಲ್ಲ, ಮಾಧ್ಯಮಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ಆತ ಯಶಸ್ಸಿನ ಉತ್ತುಂಗಲ್ಲಿದ್ದಾಗ ಅದರ ಅಗತ್ಯ ಅಷ್ಟಾಗಿ ಇರುವುದಿಲ್ಲ, ಯಾಕೆಂದರೆ ಮಾಧ್ಯಮಗಳೇ ಆತನ ಬೆನ್ನ ಹಿಂದೆ ಬಿದ್ದಿರುತ್ತವೆ. ಆದರೆ ಸೋತಾಗ ಆತನೇ ಮಾಧ್ಯಮಗಳ ಹಿಂದೆ ಬೀಳಬೇಕಾಗುತ್ತದೆ. ಯಾಕೆಂದರೆ ಜನ ಆತನನ್ನು  ಮರೆಯಬಾರದಲ್ಲ, ಹಾಗಾಗ ಬೇಕಾದರೆ ಸತತವಾಗಿ ಆತ ಅಪ್ ಡೇಟ್ ಆಗಬೇಕಾಗುತ್ತದೆ ಹಾಗೂ ಅವನ್ನೆಲ್ಲಾ ಮಾಧ್ಯಮಗಳ ಮೂಲಕ ಬಹಿರಂಗ ಗೊಳಿಸುತ್ತಲೇ ಇರಬೇಕಾಗುತ್ತದೆ. ಇದಕ್ಕೆ ಹೆಚ್ಚೇನೂ ಶ್ರಮ ಪಡಬೇಕಾಗಿಲ್ಲ, ವಾರಕ್ಕೊಮ್ಮೆ ಫೋನ್ ಮಾಡಿ ಹಲೋ, ಹೇಗಿದ್ದೀರಾ ಅಂದರೆ ಸಾಕು. ತಾನೊಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದೇನೆ, ಕಥೆ ಇನ್ನೂ ಫೈನಲೈಸ್ ಆಗ್ತಾ ಇದೆ ಅಂತ ಸುಖಾಸುಮ್ಮನೇ ಹೇಳಿದರೂ ಸಾಕು. ಆಗ ಆತ ಮಾಧ್ಯಮಗಳ ಪಾಲಿಗೆ ಡಾರ್ಲಿಂಗ್ ಆಗುತ್ತಾನೆ.

 ಈ ಮಾತಿಗೆ ತಾಜಾ ಉದಾಹರಣೆ ಅಂದರೆ ರಮೇಶ್. ಅವರು ಒಳ್ಳೆಯ ನಟರೋ, ನಿರ್ದೇಶಕರೋ ಅನ್ನುವುದಕ್ಕಿಂತ ಹೆಚ್ಚಾಗಿ ಜಂಟಲ್ ಮನ್ ಎಂದೇ ಹೆಸರಾದವರು. ತನ್ನ ಇಪ್ಪತ್ತೈದು ವರ್ಷದ ನಟನಾಬದುಕಲ್ಲಿ ಅವರು ಯಾರೊಂದಿಗೂ ಜಗಳ ಆಡಿದ್ದು ವರದಿಯಾಗಿಲ್ಲ, ಅವರು ಸಿಟ್ಟಾಗಿದ್ದನ್ನೂ ಕಂಡವರಿಲ್ಲ. ವಿದ್ಯಾವಂತ, ವಿನಯವಂತ, ಸಜ್ಜನ, ಮುಂತಾದ ಬಿರುದುಗಳಿಗೆ ಯೋಗ್ಯವಾದ ಮದುವೆ ಗಂಡಿನಂಥಾ ಪ್ರಜೆ. ಪ್ರತಿ ವರ್ಷ ದೀಪಾವಳಿ ಬಂತು ಅಂದರೆ ಸಾಕು ಪತ್ರಕರ್ತರ ಟೇಬಲ್ ಮೇಲೆ ರಮೇಶ್ ಕಳಿಸಿರುವ ಪಟಾಕಿಡಬ್ಬ ಮತ್ತು ಸಿಹಿತಿಂಡಿಗಳ ಬಾಕ್ಸ್ ಕುಳಿತಿರುತ್ತದೆ. ಅವರನ್ನು ಟೀವಿ ಜಾಹಿರಾತಿಗೆ ಹೋಲಿಸಬಹುದು.  ಪದೇಪದೇ ತಾನು ನೆನಪಾಗುವಂತೆ, ನೆನಪಲ್ಲುಳಿಯುವಂತೆ ಏನಾದರೂ ಚಟುವಟಿಕೆ ಮಾಡುತ್ತಲೇ ಇರುತ್ತಾರೆ. ತನಗಿಷ್ಟ ಇಲ್ಲ ಅಂದರೆ ಹಗುರವಾಗಿ ಜಾರಿಕೊಳ್ಳುವ ವಿದ್ಯೆಯೂ ಅವರಿಗೆ ಗೊತ್ತು.

ರಜನಿಕಾಂತ್ ಹೊರತಾಗಿ ಜಗತ್ತಿನ ಯಾವುದೇ ನಟ, ತನ್ನ ವೃತ್ತಿಬದುಕಿನುದ್ದಕ್ಕೂ ಸಾಲುಸಾಲಾಗಿ ಯಶಸ್ವಿ ಚಿತ್ರಗಳನ್ನು ಕೊಟ್ಟಿಲ್ಲ. ಪ್ರತಿಯೊಬ್ಬ ನಟನಿಗೂ ಒಂದು ಅತ್ಯುತ್ತಮ ಕಾಲಘಟ್ಟ ಅನ್ನುವುದಿದೆ. ಅದು ಆತನ ನಟನಾ ಬದುಕಿನ ಆರಂಭದಲ್ಲೇ ಬರಬಹುದು ಅಥವಾ ಅನಂತರ ಬರಬಹುದು. ಉದಾಹರಣೆಗೆ ಅಮಿತಾಬ್ ಬಚ್ಚನ್ ಸ್ಟಾರ್ ಆಗುವುದಕ್ಕೆ ಒಂಭತ್ತು ವರ್ಷ ಕಾಯಬೇಕಾಯಿತು. ಕೊನೆಗೂ ಸ್ಟಾರ್ ಆದಾಗ ಆತನಿಗೆ 39 ವರ್ಷವಾಗಿತ್ತು. ರಮೇಶ್ ಯಶಸ್ಸಿನ ಕಾಲವೆಂದರೆ 1998-99ನೇ ಇಸ್ವಿ. ಒಂದೇ ವರ್ಷದಲ್ಲಿ ಒಂಭತ್ತು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರದಾಗಿತ್ತು. ಅಲ್ಲಿಂದ ನಟನಾಗಿ ಅವರ ಗ್ರಾಫ್ ಕೆಳಗೆ ಜಾರುತ್ತಲೇ ಇದೆ. ಆದರೆ ಈ ಕೆಟ್ಟಕಾಲವನ್ನು ಮೀರುವ ಚಾಕಚಕ್ಯತೆ ಅವರಲ್ಲಿದೆ, ನಟನಾಗಿ ಇನ್ನು ಕಷ್ಟ ಎಂದಾಕ್ಷಣ ಅವರು ನಿರ್ದೇಶನದತ್ತ ಹೊರಳಿದರು. ‘ರಾಮಾಶಾಮಾಭಾಮಾ’ ರೀಮೇಕು ಆಗಿದ್ದರೂ ನೋಡುವಂತಿತ್ತು, ‘ಸತ್ಯವಾನ್ ಸಾವಿತ್ರಿ’ಪರವಾಗಿಲ್ಲ ಅನ್ನುವಂತಿತ್ತು, ‘ಆಕ್ಸಿಡೆಂಟ್’ಕೆಟ್ಟದಾಗಿತ್ತು, ‘ವೆಂಕಟ್ ಇನ್ ಸಂಕಟ್’ತೀರಾ ಲೋಕಲ್ ಅನಿಸುವಷ್ಟು ನಾಟಕೀಯವಾಗಿತ್ತು. ಈ ಮಧ್ಯೆ ನೆನಪಿಟ್ಟುಕೊಳ್ಳುವುದಕ್ಕೇ ಸಾಧ್ಯವಿಲ್ಲದಷ್ಟು ಕೆಟ್ಟಚಿತ್ರಗಳಲ್ಲಿ ನಾಯಕನಾಗಿ ನಟಿಸಿ, ತಮ್ಮ ಮಾರ್ಕೆಟ್ಟನ್ನು ತಾನೇ ಕೆಡಿಸಿಕೊಂಡಿದ್ದು ಇನ್ನೊಂದು ಕತೆ. ಅವೆಲ್ಲವೂ ಟೀವಿ ರೈಟ್ಸ್ ಗೋಸ್ಕರ ನಿರ್ಮಾಣವಾದ ಚಿತ್ರಗಳು, ಶಾಕ್ ಅನ್ನುವ ಚಿತ್ರ ಸ್ವಪ್ನದಂಥ ಮಿನಿಥಿಯೇಟರಲ್ಲಿ ತೆರೆಕಂಡು ಒಂದೇ ವಾರಕ್ಕೆ ಎತ್ತಂಗಡಿಯಾಗಿ ಟೀವಿಯಲ್ಲಿ ಪ್ರತ್ಯಕ್ಷವಾಗಿತ್ತು. ಆರ್ಥಿಕವಾಗಿ ರಮೇಶ್ ಅವರಿಗೆ ಇವೆಲ್ಲವೂ ಲಾಭ ತಂದುಕೊಟ್ಟಿರಬಹುದು, ಆದರೆ ಹೆಸರು ಹಾಳಾಗಿದ್ದಂತೂ ನಿಜ.

kamal hasan, ramesh aravind

ಕಷ್ಟ ಬಂದಾಗಲೆಲ್ಲಾ ಹರಕೆ ಹೊತ್ತವರಂತೆ ಒಂದ್ಸಾರಿ ಚೆನ್ನೈಗೆ ಟೂರ್ ಹೋಗಿ ಬರುವ ರಮೇಶ್ ಈಗ ಮತ್ತೆ ತಮಿಳಿನತ್ತ ಮುಖ ಮಾಡಿದ್ದಾರೆ, ಕಮಲಾಹಾಸನ್ ಜೊತೆಗಿನ ಮಧುರಸಂಬಂಧ ನವೀಕರಣಗೊಂಡಿದೆ. ‘ಉತ್ತಮ ವಿಲನ್’ಎಂಬ ಚಿತ್ರ ನಿರ್ದೇಶಿಸುತ್ತಿದ್ದಾರೆ. ಅದರಲ್ಲಿ ತನ್ನ ಗುರು ಬಾಲಚಂದರ್ ಅವರಿಗೂ ಒಂದು ಪಾತ್ರ ನೀಡಿ ಹಳೆಯ ಋಣ ತೀರಿಸಿದ್ದಾರೆ.ಈ ಚಿತ್ರ ಗೆದ್ದರೆ ನಿರ್ದೇಶಕನಾಗಿ ರಮೇಶ್ ಇನ್ನೊಂದಿಷ್ಟು ವರ್ಷ ಚಲಾವಣೆಯಲ್ಲಿರಬಹುದು.ಅಂದಹಾಗೆ ಇನ್ನೈದು ತಿಂಗಳು ಕಳೆದರೆ ಅವರಿಗೆ 50 ತುಂಬುತ್ತದೆ. ಆದರೆ ಅವರ ಮುಖದಲ್ಲಾಗಲಿ,ಮಾತಲ್ಲಾಗಲಿ, ದೈಹಿಕ ಚಟುವಟಿಕೆಯಲ್ಲಾಗಲಿ ಆ ದಣಿವು ಕಾಣಿಸುವುದೇ ಇಲ್ಲ.

ಆ ಮಟ್ಟಿಗೆ ಇಂದಿಗೂ ರಮೇಶ್ ಕನ್ನಡದ ಗೃಹಿಣಿಯರ ಪಾಲಿಗೆ ಡಾರ್ಲಿಂಗ್.ರಮೇಶನಂಥ ಅಳಿಯ ಸಿಗಲಿ ಅಂತ ಪ್ರಾರ್ಥಿಸುವ ಹೆಣ್ಮಕ್ಕಳೂ ಇದ್ದಾರೆ. ಆದರೆ ಅವರ್ಯಾರೂ ರಮೇಶ್ ನಟಿಸಿದ ಚಿತ್ರವನ್ನು ಥಿಯೇಟರಿಗೆ ಬಂದು ನೋಡುವ ಮನಸ್ಸು ಮಾಡುತಿಲ್ಲ ಅನ್ನುವುದೇ ದುರಂತ.

Also See

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

 

    

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery