` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
umesh banakar with car driver image
harish, umesh banakar

ಕೆಲವು ತರಲೆಗೆಳೆಯರಿರುತ್ತಾರೆ. ಎಷ್ಟೋ ವರ್ಷದ ನಂತರ ಫೋನ್ ಮಾಡಿ ನಾನು ಯಾರು ಹೇಳು ನೋಡೋಣ ಅಂತ ಸವಾಲು ಹಾಕುತ್ತಾರೆ, ನೀವು ಅವರಹೆಸರು  ಹೇಳಲಿಲ್ಲ ಅಂದರೆ ಕೆಬಿಸಿ ಕಾರ್ಯಕ್ರಮದಲ್ಲಿ ಅಮಿತಾಬ್ ಕೇಳುವ ಥರ ನಾಲ್ಕೈರು ಆಪ್ಶನ್ನುಗಳನ್ನು ಕೊಟ್ಟು ಸತಾಯಿಸುತ್ತಾರೆ. ಅವರ ಧ್ವನಿಯನ್ನು ಪತ್ತೆ ಹಚ್ಚಿ, ಈ ಧ್ವನಿಯ ಮಾಲೀಕ ನೀನೇ ಕಣಯ್ಯಾ ಅಂದರೆ  ನೀವು ಬಚಾವು. ಇಲ್ಲ ಅಂದರೆ ನಿಮ್ಮನ್ನು ಮಾತಲ್ಲೇ ಸಾಯಿಸಿಬಿಡುತ್ತಾರೆ. ಇನ್ನೂ ಕೆಲವರಿರುತ್ತಾರೆ. ಇವರು ಸಜ್ಜನರು.  ಇವರ ಮುಖ ನಿಮ್ಮ ನೆನಪಲ್ಲಿರುತ್ತದೆ, ಹೆಸರು ಮಾತ್ರ ಜಪ್ಪಯ್ಯಾ ಅಂದರೂ ನೆನಪಾಗುವುದಿಲ್ಲ.  ಇವರು ಒನ್ ಫೈನ್ ಡೇ ಅಚಾನಕ್ಕಾಗಿ ಮುಖಾಮುಖಿಯಾಗುತ್ತಾರೆ.   ನಿಮ್ಮ ವೃತ್ತಿ ಬಗ್ಗೆ , ಸಂಸಾರದ ಬಗ್ಗೆ, ಆರೋಗ್ಯದ ಬಗ್ಗೆ ಬಹಳ ಕಾಳಜಿಯಿಂದ ವಿಚಾರಿಸುತ್ತಾ ಹೋಗುತ್ತಾರೆ. ನೀವು ಪೆದ್ದುಪೆದ್ದಾಗಿ ಹಾಂ ಹೂಂ ಅನ್ನುತ್ತಾ ಈ ಚಹರೆ ಯಾರದು ಅಂತ ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಇರುತ್ತೀರಿ. ಇದು ನಿಮಗೇ ಬಹಳ ಮುಜುಗರ ನೀಡುವ ಸಂಗತಿ.

ಮೊನ್ನೆ ಬಸ್ಸಲ್ಲಿ ಅಚಾನಕ್ಕಾಗಿ ಭೇಟಿಯಾದ ವ್ಯಕ್ತಿಯ ಜೊತೆಗೂ ನನಗೆ ಹೀಗೇ ಆಯಿತು. ಆದರೆ ಆತ ನನ್ನ ಕಷ್ಟ ಅರ್ಥ ಮಾಡಿಕೊಂಡವನಂತೆ ನಾನು ಮುಜುಗರ ಅನುಭವಿಸುವುದಕ್ಕೆ ಅವಕಾಶವೇ ಕೊಡಲಿಲ್ಲ.  “ನಾನು ಈಗ ಆ ನಟರ ಜೊತೆ ಕೆಲಸ ಮಾಡುತ್ತಿಲ್ಲ ಸರ್”ಅಂತ ಹೇಳಿಬಿಟ್ಟ. ತಕ್ಷಣ ಆತನ ಬಯೋಡೇಟ ಕಣ್ಣ ಮುಂದೆ ಹಾಜರಾಯಿತು. ಆತನಿಗೆ ಮುಂದೆ ತೊಂದರೆಯಾಗಬಾರದು ಅನ್ನುವ ದೃಷ್ಟಿಯಿಂದ ಆತನ ಮೂಲಹೆಸರನ್ನು ಮರೆಮಾಚಿ ರಾಜೇಶ್ ಅಂತ ಕರೆಯೋಣ.

ರಾಜೇಶ್  ತುಂಬಾ ಸಜ್ಜನ.  ಕನ್ನಡದ ಪ್ರಸಿದ್ಧ ನಟರೊಬ್ಬರಿಗೆ ಹಲವಾರು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಸಹಾಯಕ ಅಂದರೆ ಬರೀ ಸೆಟ್ಟಲ್ಲಷ್ಟೇ ಅಲ್ಲ, ಮನೆಯಲ್ಲೂ ಪ್ರತಿಯೊಂದು ಕೆಲಸಕ್ಕೂ ಆತನೇ ಬೇಕು. ಮಕ್ಕಳನ್ನು ಸ್ಕೂಲಿಗೆ ಕರೆದುಕೊಂಡು ಹೋಗುವುದರಿಂದ ಹಿಡಿದು ಮನೆಗೆ ರೇಷನ್ ತಂದುಹಾಕುವ ತನಕ. ಈ ಮಧ್ಯೆ ಆ ನಟ ಶೂಟಿಂಗಿಗೆ ಹೋಗುವಾಗಲೂ ರಾಜೇಶ ಜೊತೆಗಿರಬೇಕು, ನಟನ ಕಾರಿಗೆ ರಾಜೇಶನೇ ಅಧಿಕೃತ ಚಾಲಕ. ಪರವೂರಲ್ಲಿ ಶೂಟಿಂಗ್ ಇದ್ದಾಗ ಹಗಲುರಾತ್ರಿ ಕಾರು ಡ್ರೈವ್ ಮಾಡಬೇಕು, ಆ ನಟನ ಹೊಸ ಚಿತ್ರ ಶುರುವಾದಾಗ ಪತ್ರಿಕೆಗಳಿಗೆ ಆಮಂತ್ರಣ ಪತ್ರಿಕೆ ಹಂಚಬೇಕು, ಮನೆಯಲ್ಲಿ ಹಬ್ಬಹರಿದಿನಗಳಿದ್ದಾಗ ಪುರೋಹಿತರಿಂದ ಹಿಡಿದು ಕ್ಯಾಟರಿಂಗ್ ತನಕ ಈತನದ್ದೇ ಓಡಾಟ. ನಟನ ಮಕ್ಕಳು ಕೂಡಾ ರಾಜೇಶನನ್ನು ಬಹಳ ಹಚ್ಚಿಕೊಂಡಿದ್ದರು, ಅವರನ್ನು ಪಾರ್ಕಿಗೆ, ಪಿಕ್ಟರಿಗೆ ರಾಜೇಶನೇ ಕರಕೊಂಡು ಹೋಗುತ್ತಿದ್ದ. ರಾಜೇಶನ ಮೇಲೆ ನಟನ ಪತ್ನಿಗೂ ವಿಪರೀತ ನಂಬಿಕೆ. ಮಕ್ಕಳನ್ನು ರಾಜೇಶನ ಸುಪರ್ದಿಗೆ ಬಿಟ್ಟು, ಆಕೆ  ಶಾಪಿಂಗಿಗೆ ಹೋಗುತ್ತಿದ್ದರು. ಒಟ್ಟಲ್ಲಿ ರಾಜೇಶನಂಥಾ ಸಹಾಯಕ ಪಕ್ಕದಲ್ಲಿ ಇಲ್ಲದೇ  ಇದ್ದಾಗ ಆ ನಟ ಅಸಹಾಯಕನಂತೆ ಕಾಣಿಸುತ್ತಿದ್ದ. ಇಂಥಾ ಶಿಷ್ಯ ಸಿಗಬೇಕಾಗಿದ್ರೆ ನೀವು ಪುಣ್ಯ ಮಾಡಿರಬೇಕು ಕಣ್ರೀ ಅಂತ ನಾವೆಲ್ಲಾ ಆ ನಟನನ್ನು ರೇಗಿಸುತ್ತಿದ್ದೆವು. ಹೌದು ಹೌದು ನಮ್ಮನೇಲೇ ಬೆಳೆದ ಹುಡುಗ ಇವನು ಅಂತ ಅವರು ತಲೆ ಅಲ್ಲಾಡಿಸುತ್ತಿದ್ದರು.

ಹೀಗೇ  ಆ ನಟನ ಮನೆಮಗನಂತೆಯೇ ಇದ್ದ  ರಾಜೇಶ ಈಗ ಅವರ ಜೊತೆಗಿಲ್ಲ ಅನ್ನುವ ವಿಷಯ ಕೇಳಿ ನನಗೆ ಆಶ್ಚರ್ಯವಾಯಿತು. ಯಾಕೆ ಕೆಲಸ ಬಿಟ್ರಿ ಅಂತ ಕೇಳಿದೆ. “ಅಂಥಾದ್ದೇನೂ ಕಾರಣ ಇಲ್ಲ, ನಂಗೂ ಏನಾದರೂ ಇಂಡಿಪೆಂಡೆಂಟಾಗಿ ಮಾಡಬೇಕು ಅನ್ನೋ ಆಸೆಯಿತ್ತು. ಅದಕ್ಕೇ ಈಗ ಚಿಕ್ಕ ಬಿಸಿನೆಸ್ ಶುರು ಮಾಡಿದ್ದೇನೆ”.

ಏನು ಬಿಸಿನೆಸ್?

“ಕಾರು ಖರೀದಿ ಮತ್ತು ಮಾರಾಟ. ಜೊತೆಗೆ ಚಿಕ್ಕಪುಟ್ಟ ಕೆಲಸಗಳು. ಡ್ರೈವಿಂಗ್ ಗೊತ್ತಿರುವುದರಿಂದ ಯಾರಾದರೂ ಒಳ್ಳೇ ಪಾರ್ಟಿ ಸಿಕ್ಕಿದ್ರೆ ಊರಾಚೆಗೂ ಹೋಗಿ ಬರುವುದುಂಟು.  ಪರವಾಗಿಲ್ಲ, ಹೇಗೋ ಜೀವನ ನಡೀತಿದೆ.”

ಹೇಗೋ ಜೀವನ ನಡೀತಿದೆ ಅನ್ನುವ ಮಾತು ಕೇಳಿದಾಕ್ಷಣ ಎಲ್ಲೋ ಏನೋ ಎಡವಟ್ಟಾಗಿದೆ ಅಂತ ಅನಿಸುವುದಕ್ಕೆ ಶುರುವಾಯಿತು.  

 “ನೀವು ನಿಮ್ ಬಾಸ್  ಜೊತೆ ಚೆನ್ನಾಗಿಯೇ ಇದ್ರಲ್ಲ, ಅಲ್ಲಿ ನಿಮಗೇನು ಕಡಿಮೆಯಾಗಿತ್ತು”ಅಂತ ಕೇಳಿದೆ.

“ನಾನೂ ಹಾಗೇ ಅಂದ್ಕೊಂಡಿದ್ದೆ ಸರ್.  ಆ ಕಾರಣಕ್ಕೆ ನಿಯತ್ತಿಂದ ದುಡಿದೆ. ನನ್ನ ಇಡೀ ಜೀವನಾನೇ ಅವರಿಗೋಸ್ಕರ ಮುಡಿಪಾಗಿಟ್ಟಿದ್ದೆ.  ಮಧ್ಯರಾತ್ರಿ ಅವರ ಫೋನ್ ಬಂದರೂ ಎದ್ದು ಹೊರಟುಬಿಡುತ್ತಿದ್ದೆ.  ಆದರೆ ...”

ಹಾಗಂತ ಮಾತು ಅರ್ಧಕ್ಕೇ ನಿಲ್ಲಿಸಿ ಆ ಕಡೆ ಮುಖ ತಿರುಗಿಸಿದ. ಅವನ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದನ್ನು ಮತ್ತು ನನಗೆ ಗೊತ್ತಾಗಬಾರದು ಅಂತ ಅದನ್ನು ಒರೆಸಿದ್ದನ್ನು ನಾನು ಗಮನಿಸಿದೆ. ಇಬ್ಬರ ನಡುವೆ ಒಂದು ಸಣ್ಣ ಮೌನ ಆವರಿಸಿತು. ರಾಜೇಶ್ ಮತ್ತೆ ಮಾತು ಶುರು ಮಾಡಿದ.

“ಒಂದಲ್ಲ, ಎರಡಲ್ಲ. ಹದಿಮೂರು ವರ್ಷ ಅವರಿಗೋಸ್ಕರ ನನ್ನ ಜೀವನವನ್ನು ಸವೆಸಿದೆ ಸರ್. ನನಗೆ ಪರ್ಸನಲ್ ಲೈಫ್ ಅನ್ನೋದೇ ಇರಲಿಲ್ಲ. ಹೆಂಡ್ತಿ ಮಕ್ಕಳನ್ನು ಒಂದು ಪಿಕ್ಚರಿಗೆ ಕರಕೊಂಡು ಹೋಗಿರಲಿಲ್ಲ, ಅಷ್ಟೇಕೆ ಸಂಸಾರ ಸಮೇತ ನಾವು ಹೋಟೆಲ್ಲಿಗೆ ಹೋಗಿದ್ದೂ ಇಲ್ಲ. ಒಂದು ಸಾರಿಯಾದ್ರೂ ನಂಗೆ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದವನಲ್ಲ, ಅವರೇನೋ ಊರು ತುಂಬಾ ಸೈಟುಗಳನ್ನು ಮಾಡಿಕೊಂಡರು. ನಂಗೊಂದು ಸೈಟು ಕೊಡಿಸಿ ಅಂತ ಕೇಳಬೇಕು ಅಂತಾನೂ ನನಗನಿಸಲಿಲ್ಲ. ಆದರೆ ಆರು ತಿಂಗಳ ಹಿಂದೆ ನನ್ನ ಮಗಳಿಗೆ ಪ್ರೈವೇಟ್ ಸ್ಕೂಲಲ್ಲೊಂದು ಸೀಟು ಬೇಕಾಗಿತ್ತು. ಅಲ್ಲಿ ಡೊನೇಷನ್ ಕೊಡೋದಕ್ಕೆ ದುಡ್ಡಿರಲಿಲ್ಲ. ಸ್ಕೂಲ್ ಪ್ರಿನ್ಸಿಪಾಲರನ್ನು ಕಂಡು ರಿಕ್ವೆಸ್ಟು ಮಾಡಿಕೊಂಡೆ. ನಿಮ್ಮ ಬಾಸ್ ಕೈಯಲ್ಲೊಂದು ಲೆಟರ್ ತೆಗೆದುಕೊಂಡು ಬನ್ನಿ, ಸೀಟು ಕೊಡ್ತೀವಿ ಅಂದರು. ಲೆಟರ್ ಕೇಳಿದ್ದಕ್ಕೆ ಏನಂದ್ರು ಗೊತ್ತಾ ಸರ್..

ಏನಂದ್ರು?

“ಪ್ರೈವೇಟ್ ಸ್ಕೂಲಿಗೆ ಯಾಕಯ್ಯಾ ಮಗಳನ್ನು ಸೇರಿಸ್ತೀಯಾ. ಯಾವುದಾದರೂ ಗವರ್ನ್ ಮೆಂಟ್ ಸ್ಕೂಲಿಗೆ ಸೇರಿಸು. ಅಲ್ಲೇ ಚೆನ್ನಾಗಿ ಹೇಳಿಕೊಡೋದು ಅಂದುಬಿಟ್ರು. ಲೆಟರ್ ಕೊಟ್ರೆ ಫೀಸನ್ನೂ ತಾನೇ ಕಟ್ಟಬೇಕಾಗುತ್ತೆ ಅಂತ ಅವರು ಯೋಚನೆ ಮಾಡಿದ್ರು ಅನಿಸುತ್ತೆ. ಆವತ್ತೇ ಒಂದು ನಿರ್ಧಾರಕ್ಕೆ ಬಂದುಬಿಟ್ಟೆ ಸರ್, ಇನ್ನು ಈ ಮನುಷ್ಯನ ಸಹವಾಸ ಸಾಕು ಅಂತ. ರಾತ್ರಿ ಮನೆಗೆ ಹೋದವನೇ ಹೆಂಡ್ತಿ ಮುಂದೆ ಎಲ್ಲವನ್ನೂ ಹೇಳಿದೆ. ಈ ಕೆಲಸಾನ ಮೊದಲೇ ಮಾಡಬಹುದಾಗಿತ್ತು ಅಂದಳು. ಮಾರನೇ ದಿನ ಹೋಗಿ ಬಾಸ್ ಮುಂದೆ ನಿಂತು ಹೇಳಿದೆ. ನಾನು ಕೆಲಸ ಬಿಟ್ ಬಿಡ್ತೀನಿ ಅಂತ”

ಅವರೇನಂದರು?

“ಏನೂ ಅನ್ನಲಿಲ್ಲ, ಆಯ್ತು ಅಂದುಬಿಟ್ಟರು. ಕೈಯಲ್ಲಿ ಐದು ಸಾವಿರ ರುಪಾಯಿ ಮತ್ತೊಂದು ಶರ್ಟು ಇಟ್ಟರು. ಆ ಶರ್ಟ್ ಯಾಕೆ ತೆಗೊಂಡು ಬಂದ್ರಿ, ಅವರ ಕೈಗೇ ವಾಪಸ್ ಕೊಡಬೇಕಾಗಿತ್ತು ಅಂತ ಹೆಂಡ್ತಿ ಕೈಲಿ ಬೈಸಿಕೊಂಡೆ. ಅವರ ಜೊತೆ ಇಷ್ಟು ವರ್ಷ ದುಡಿದಿದ್ದಕ್ಕೆ ನಂಗೆ ಬೇಸರ ಆಗ್ತಿಲ್ಲ ಸರ್. ನನ್ನ ಜೀವನದ ಹದಿಮೂರು ವರ್ಷಗಳನ್ನು ವೇಸ್ಟ್ ಮಾಡಿದ್ನಲ್ಲ ಅನ್ನೋ ಬೇಸರ ಅಷ್ಟೆ. ಅವರ ಕೆಳಗೆ ಕೆಲಸ ಮಾಡೋ ಬದಲು ಗಾರೆ ಕೆಲಸ ಮಾಡ್ತಿದ್ರೆ ನಾನೀಗ ಎಲ್ಲೋ ಇರ್ತಿದ್ದೆ. ನಂಗೀಗ ನಲುವತ್ತು, ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಅವರನ್ನು ಸಾಕಬೇಕು. ಇದನ್ನೆಲ್ಲಾ ನೆನಸಿಕೊಂಡು ಬಹಳ ದುಃಖ ಆಯಿತು. ಇದನ್ನೆಲ್ಲಾ ದೇವರ ಮುಂದೆ ಹೇಳಿಕೊಳ್ಳೋಣ ಅಂತ ಧರ್ಮಸ್ಥಳಕ್ಕೆ ಹೋದೆ. ದೇವರ ಮುಂದೆ ಕುಳಿತು ಒಂದು ಗಂಟೆ ಗಳಗಳಾಂತ ಅತ್ತುಬಿಟ್ಟೆ ಸರ್..ನನ್ನ ನಿಯತ್ತು, ಪ್ರಾಮಾಣಿಕತೆ ನಂಗೆ ಕೊಟ್ಟಿದ್ದು ಇದೇನಾ ಅಂತ ದೇವರನ್ನೇ ಕೇಳಿದೆ..ಈಗ್ಲೂ ಆ ಹದಿಮೂರು ವರ್ಷ ವ್ಯರ್ಥವಾಗಿ ಹೋಗಿದ್ದು ನನ್ನ ಕಣ್ಣ ಮುಂದೆ ಬರ್ತಿದೆ. ನಾನು ಕೆಲಸ ಬಿಟ್ಟ ಮೇಲೆ ನನ್ನ ಜಾಗಕ್ಕೆ ಎಂಟು ಜನ ಬಂದುಹೋದರಂತೆ.”

ರಾಜೇಶನಿಗೆ ಮಾತಾಡೋದಕ್ಕೆ ಇನ್ನೂ ಇತ್ತು. ಆದರೆ ಸ್ಟಾಪ್ ಬಂತು, ಆತ ಇಳಿದುಹೋದ. ಆದರೆ ಆತ ಆಡಿದ ಮಾತುಗಳು ನನ್ನೊಳಗೆ ಇಳಿದಿದ್ದವು. ರಾಜೇಶನ ಥರ ತಮ್ಮ ಬದುಕನ್ನೇ ಬಾಸ್ ಗೆ ಮೀಸಲಾಗಿಟ್ಟ ಹಲವು ಅಮಾಯಕರು ಕಣ್ಣ ಮುಂದೆ ಸಾಲಾಗಿ ಬಂದರು. ಪಂಚತಾರಾ ಹೋಟೆಲಲ್ಲಿ ಪಾರ್ಟಿ ನಡೀತಾ ಇದ್ದರೆ ಅವರು ಹೊರಗೆ ಕಾರು ಪಾರ್ಕಿಂಗ್ ಜಾಗದಲ್ಲಿ ಕಾಯುತ್ತಾ ನಿಂತಿರುತ್ತಾರೆ. ಪಾರ್ಟಿ ಯಾವಾಗ ಮುಗಿಯುತ್ತೆ, ಬಾಸ್ ಯಾವಾಗ ಹೊರಗೆ ಬರುತ್ತಾರೆ, ಯಾವ ಸ್ಥಿತಿಯಲ್ಲಿರುತ್ತಾರೆ, ಇದ್ಯಾವುದೂ ಅವರಿಗೆ ಗೊತ್ತಿರುವುದಿಲ್ಲ. ಅದೆಲ್ಲಾ ಹಾಳಾಗಿ ಹೋಗ್ಲಿ, ವರ್ಷಗಟ್ಟಲೆ ತಮ್ಮ ಧಣಿಗೋಸ್ಕರ ತಮ್ಮ ಬದುಕನ್ನು ತೇಯ್ದಿರುವ ಅಂಥವರಿಗೆ ಕೊನೆಗೆ ಸಿಗುವುದಾದರೂ ಏನು?ಐದು ಸಾವಿರ ಮತ್ತು ಒಂದು ರೆಡಿಮೇಡ್ ಶರ್ಟು.

ಈಗ ಜ್ಞಾನಪೀಠಿ ಸಾಹಿತಿಯೊಬ್ಬರ ಡ್ರೈವರ್ ಕತೆ ನೆನಪಾಗುತ್ತಿದೆ. ಆತನೂ ರಾಜೇಶ್ ಥರಾನೇ ಹತ್ತು ವರ್ಷ ಆ ಸಾಹಿತಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದ. ಒಂದು ದಿನ ಆತನ ಮದುವೆ ನಿಶ್ಚಯವಾಯಿತು. ಸಂಭ್ರಮದಿಂದ ತನ್ನ ಯಜಮಾನರ ಮುಂದೆ ಈ ವಿಷಯ ಹೇಳಿಕೊಂಡ. ಅವರು ಬಹಳ ಸಂತೋಷ ಕಣಯ್ಯಾ ಅನ್ನುತ್ತಾ ಐದು ಸಾವಿರ ರುಪಾಯಿ ಅವನ ಕೈಯಲ್ಲಿಟ್ಟರಂತೆ. ಅದೇ ಕೊನೆ. ಆಮೇಲೆ ಅವನು ಬೇರೆ ಕಡೆ ಕೆಲಸ ಹುಡುಕಿಕೊಂಡ.

ಇನ್ನೊಬ್ಬ ಜಾಣ ನಟರು ತಮ್ಮ ಡ್ರೈವರನ್ನು ಪದೇಪದೇ ಬದಲಾಯಿಸುತ್ತಾ ಇರುತ್ತಾರೆ. ಅದಕ್ಕೆ ಅವರು ನೀಡುವ ಕಾರಣ ಸ್ವಾರಸ್ಯಕರವಾಗಿದೆ. “ಡ್ರೈವರುಗಳಿಗೆ ನಮ್ಮ ಪರ್ಸನಲ್ ಮ್ಯಾಟರ್ ಎಲ್ಲಾ ಗೊತ್ತಿರುತ್ತೆ ಕಣ್ರೀ, ಜಾಸ್ತಿ ದಿನ ಇಟ್ಕೊಂಡರೆ ಊರು ತಂಬಾ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ”. ಸಿನಿಮಾ ಪಾರ್ಟಿಗಳಿಗೆ ನಾನು ಹೋಗುತ್ತಿದ್ದ ದಿನಗಳಲ್ಲಿ ಇಂಥಾ ಡ್ರೈವರುಗಳು ನಂಗೆ ಮನೆ ತನಕ ಡ್ರಾಪ್ ಕೊಟ್ಟಿದ್ದುಂಟು. ಕೆಲವರ ಜೇಬಲ್ಲಿ ನೂರೋ ಇನ್ನೂರೋ ರುಪಾಯಿಗಳನ್ನು ನಾನು ಒತ್ತಾಯಪೂರ್ವಕವಾಗಿ ತುರುಕಿದ್ದುಂಟು. ಆದರೆ ರಾಜೇಶ್ ನಂಥವರು ಅದನ್ನು ನಿರಾಕರಿಸುತ್ತಿದ್ದರು.

ನಾನು ಬೆಂಗಳೂರಿಗೆ ಬಂದ ದಿನಗಳಲ್ಲಿ ಖ್ಯಾತ ಸಾಹಿತಿಗಳನ್ನು, ಕವಿಗಳನ್ನು ಭೇಟಿ ಮಾಡಬೇಕು, ಅವರ ಜೊತೆ ಮುಕ್ತವಾಗಿ ಮಾತಾಡಬೇಕು ಅನ್ನೋ ಆಸೆ ಇತ್ತು. ದೊಡ್ಡ ಮನುಷ್ಯರನ್ನು ದೂರದಿಂದ ನೋಡಿ ಸಂತೋಷಪಡಬೇಕು ಕಣಯ್ಯಾ, ಹತ್ತಿರ ಹೋದರೆ ಅವರ ಬಗ್ಗೆ ನಿನಗಿರುವ ಅಭಿಪ್ರಾಯಾನೇ ಬದಲಾಗುತ್ತದೆ ಅಂತ ಹಿತೈಷಿಯೊಬ್ಬರು ಬೆದರಿಸಿದ್ದರು. ಅವರ ಮಾತು ಕೇಳದೇ ನಾನು ಕೂಡಾ ರಾಜೇಶ ಆಗಿದ್ದುಂಟು. ಸದ್ಯ, ನನ್ನ ಬದುಕಿನ ಹದಿಮೂರು ವರ್ಷ ವೇಸ್ಟ್ ಮಾಡಿಕೊಳ್ಳಲಿಲ್ಲ.

ರಾಜೇಶನಂಥವರ ಕತೆ ಹೇಳುವ ಹೊತ್ತಿಗೇ ನಂಗೆ ಹರೀಶ್ ಅನ್ನುವ ಇನ್ನೊಬ್ಬ ಹುಡುಗ ನೆನಪಾಗುತ್ತಾನೆ. ಹಾಸನದಿಂದ ಬಂದ ಹುಡುಗ. ಅವನ ಅದೃಷ್ಟಕ್ಕೆ ಒಳ್ಳೇ ಬಾಸ್ ಸಿಕ್ಕಿದ್ದಾರೆ. ಸ್ವಂತ ತಮ್ಮನ ಥರ ನೋಡಿಕೊಳ್ಳುತ್ತಿದ್ದಾರೆ. ಕೆಲವೊಂದು ವಿಷಯಗಳಲ್ಲಿ ಹರೀಶನ ಸಲಹೆಯನ್ನು ಅವರು ಕೇಳುವುದೂ ಉಂಟು. ಹರೀಶನೂ ಅಷ್ಟೆ, ಯಾವತ್ತೂ ಈ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಿಲ್ಲ. ಬಾಸ್ ದೊಡ್ಡಮನುಷ್ಯರ ಜೊತೆಗಿದ್ದಾಗ ಹರೀಶ ಕೊಂಚ ದೂರ ನಿಂತಿರುತ್ತಾನೆ, ಇಬ್ಬರೇ ಇದ್ದಾಗ ಗೆಳೆಯರ ಥರ ಹರಟುತ್ತಿರುತ್ತಾರೆ. ಬಾಸ್ ರೇಗಿಸಿದಾಗ ಹರೀಶ ನಗುತ್ತಾನೆ, ಹರೀಶನ ಐಡಿಯಾಗಳಿಗೆ ಬಾಸ್ ತಲೆದೂಗುತ್ತಾನೆ.       ಅಂದಹಾಗೆ ಆ ಬಾಸ್ ಹೆಸರು ಉಮೇಶ್ ಬಣಕಾರ್. ಒಬ್ಬ ಡ್ರೈವರು ಒಳ್ಳೇ ಸಂಗಾತಿಯಾಗಬಲ್ಲ, ತಮ್ಮನೂ ಆಗಬಲ್ಲ, ಮನೆಹುಡುಗನೂ ಆಗಬಲ್ಲ, ಅವೆಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಜೀವ ಕಾಪಾಡುವ ರಕ್ಷಕನೂ ಆಗಬಲ್ಲ.  ಬಣಕಾರ್ ಅವರಿಗೆ ಅದು ಅರ್ಥವಾಗಿದೆ. ಚಾರಿಟಿ ಅನ್ನುವುದು ಮೊದಲು ಮನೆಯಿಂದ ಶುರುವಾಗಬೇಕು ಅನ್ನುವ ಸತ್ಯವನ್ನು ಅವರ ತಂದೆ ಮಹದೇವ ಬಣಕಾರ್ ಅವರೇ ಮಗನಿಗೆ ಹೇಳಿಕೊಟ್ಟಿರಬಹುದು ಅನ್ನುವ ಗುಮಾನಿ ನನ್ನದು. ರಾಜೇಶ್ ಆ ಮಟ್ಟಿಗೆ ನತದೃಷ್ಟ.

Also See

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

 

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery