‘ನಿಂದಕರಿರಬೇಕು ಇರಬೇಕು. ಹಂದಿ ಇದ್ದಲ್ಲಿ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ. ಅಂದಂದು ಮಾಡಿದ ಪಾಪವೆಂಬಾ ಮಲ ಕೊಂಡು ಹೋಗುವರಯ್ಯ ನಿಂದಕರು’–ಶ್ರೀಪುರಂದರದಾಸರು.
ಪುರಂದರದಾಸರು ಹಂದಿಯನ್ನು ಅವಹೇಳನ ಮಾಡುವುದಕ್ಕೆ ಈ ಪದ್ಯ ಬರೆಯಲಿಲ್ಲ, ನಿಂದಕರನ್ನು ಟೀಕಿಸುವುದಕ್ಕೂ ಬರೆಯಲಿಲ್ಲ. ಹಂದಿ ಹೇಗೆ ಊರಿನ ಹೊಲಸನ್ನು ಶುದ್ಧಗೊಳಿಸುತ್ತದೆಯೋ ಅದೇ ಥರ ನಿಂದಕರಿಂದ ಸಮಾಜದಲ್ಲಿರುವ ಹೊಲಸು ಪದ್ಧತಿಗಳು ನಿರ್ನಾಮವಾಗುತ್ತವೆ. ಹಾಗಾಗಿ ಅಂಥವರನ್ನು ದ್ವೇಷಿಸಬೇಕಾಗಿಲ್ಲ ಅನ್ನುವ ಅರ್ಥದಲ್ಲಿ ಬರೆದರು. ನಮ್ಮ ನಡುವೆ ಈಗ ಸಿಕ್ಕಾಪಟ್ಟೆ ಚಾಲ್ತಿಯಲ್ಲಿರುವ ಪ್ರಗತಿಪರ ಜಿ.ಕೆ.ಗೋವಿಂದರಾವ್ ಈ ಪದವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ ಅನ್ನುವುದಕ್ಕೆ ಅವರ ಇತ್ತೀಚಿನ ಹೇಳಿಕೆಗಳೇ ಸಾಕ್ಷಿ. ಅವರು ಮೋದಿಯನ್ನು ದುಷ್ಟ ಎಂದು ಏಕವಚನದಲ್ಲಿ ಬೈಯ್ಯುತ್ತಾರೆ, ಪೇಜಾವರ ಶ್ರೀಗಳನ್ನು ಜಾತಿವಾದಿ ಎಂದು ಗೇಲಿ ಮಾಡುತ್ತಾರೆ, ಯಡಿಯೂರಪ್ಪ ಅವರನ್ನು ಲಿಂಗಾಯತ ಭಯೋತ್ಪಾದಕ ಅನ್ನುತ್ತಾರೆ, ಮಠಗಳನ್ನು ನಾಶಗೊಳಿಸಿ ಎಂದು ಕರೆನೀಡುತ್ತಾರೆ, ಎಸ್.ಎಲ್. ಭೈರಪ್ಪ ಅವರನ್ನು ಕೆಟ್ಟ ಕಾದಂಬರಿಕಾರ ಎಂದು ಜರೆಯುತ್ತಾರೆ, ಪೊಲೀಸರನ್ನು ಕೊಲ್ಲುವ ನಕ್ಸಲರ ಪರವಾಗಿ ನಿಲ್ಲುತ್ತಾರೆ, ಪುರಂದರದಾಸರ ಕಲ್ಪನೆಯ ಹಂದಿ ಇಷ್ಟೆಲ್ಲಾ ಅವಾಂತರಗಳನ್ನು ಮಾಡುತ್ತಿತ್ತು ಅನ್ನುವುದರ ಬಗ್ಗೆ ನನಗೆ ಅನುಮಾನವಿದೆ. ದಾಸರು ಬದುಕಿದ್ದರೆ ಅವರನ್ನು ಕೇಳಬಹುದಾಗಿತ್ತು.
ಹಂದಿಗಳ ಬಗ್ಗೆ ನನಗೆ ಪ್ರೀತಿ ಮತ್ತು ಸಹಾನುಭೂತಿ ಇದೆ. ಯಾಕೆಂದರೆ ಅವುಗಳು ತಮ್ಮ ಬಾಯನ್ನಷ್ಟೇ ಹೊಲಸು ಮಾಡಿಕೊಳ್ಳುತ್ತವೆ. ಅವುಗಳು ಮಾತಾಡದೇ ಇರುವುದರಿಂದ ನಾಲಗೆ ಹೊಲಸಾಗುವುದಿಲ್ಲ, ಜನರ ಕಿವಿಗಳೂ ಮಲಿನವಾಗುವುದಿಲ್ಲ. ಗೋವಿಂದರಾವ್ ಮಾತಾಡಿದರೆ ಅದು ವಿವಾದವಾಗುತ್ತದೆ, ಪತ್ರಿಕೆ ಮತ್ತು ಟೀವಿಗಳಿಗೆ ಬ್ರೇಕಿಂಗ್ ನ್ಯೂಸ್ ಆಗುತ್ತದೆ, ಜನರಿಗೆ ಉಚಿತ ಮನರಂಜನೆ ಸಿಗುತ್ತದೆ. ಅಂದಹಾಗೆ ಗೋವಿಂದರಾಯರಿಗೆ ಈಗ 74 ವರ್ಷ.
ಜಿಕೆಜಿ ಒಂದು ಕಾಲದಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರು, ನಿವೃತ್ತರಾದ ನಂತರ ಚುರುಕಾದರು ಅಥವಾ ಅವರ ನಾಲಿಗೆ ಚುರುಕಾಯಿತು. ಅವರು ನಟರಾದರು, ರಂಗಕರ್ಮಿಯಾದರು, ಕೆಲವು ವರ್ಷಗಳಿಂದ ಅವರನ್ನು ಪ್ರಗತಿಪರ ಮತ್ತು ಬುದ್ದಿಜೀವಿ ಎಂದು ಮಾಧ್ಯಮಗಳು ಗುರುತಿಸಿವೆ. ಗೋವಿಂದರಾವ್ ಕೂಡಾ ಯಾವುದೇ ತಕರಾರಿಲ್ಲದೇ ಅದನ್ನು ಒಪ್ಪಿಕೊಂಡಿದ್ದಾರೆ. ಕನಿಷ್ಠ ವಾರಕ್ಕೆರಡು ಸಾರ್ವಜನಿಕ ಸಮಾರಂಭಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ, ತನಗನಿಸಿದ್ದನ್ನು ನಿರ್ಭಿಡೆಯಿಂದ ಹೇಳುತ್ತಾರೆ. ಕರ್ನಾಟಕದ ಯಾವುದಾದರೂ ಮೂಲೆಯಲ್ಲಿ ‘ಸಾಮಾಜಿಕ ಅಸಮಾನತೆ’ಯಂಥಾಅನ್ಯಾಯವಾದರೂ ಅಲ್ಲಿಗೆ ಜಿಕೆಜಿ ಧಾವಿಸುತ್ತಾರೆ. ತಮ್ಮ ಜಾಗಟೆಯಂಥ ಧ್ವನಿಯಲ್ಲಿ ಅದನ್ನು ಖಂಡಿಸುತ್ತಾರೆ. ಟೀವಿಯಲ್ಲೂ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಾರೆ, ಆದರೆ ತಮಗೆ ಮಾತಿಗೆ ಅವಕಾಶ ಸಿಗದೇ ಇದ್ದರೆ ಮೈಕ್ ಎಸೆದು ಹೊರಟುಬಿಡುತ್ತಾರೆ. ಆ ಮಟ್ಟಿಗೆ ಅವರದು ‘ನೇರ ದಿಟ್ಟ ನಿರಂತರ’ಧೋರಣೆ. ಅವರು ಸದಾ ನಿಂದನಾಸ್ತುತಿಯಲ್ಲಿ ನಿರತರಾಗಿರುವುದು ಅವರ ವಿರೋಧಿಗಳಿಗೆ ಕೋಪವನ್ನೂ, ಅವರಂತೆಯೇ ಇರುವ ಅಲ್ಪಸಂಖ್ಯಾತ ಸಮಾನಮನಸ್ಕರಿಗೆ ಸಂತೋಷವನ್ನೂ ಮತ್ತು ನ್ಯೂಟ್ರಲ್ ಆಗಿರುವ ಸಾಮಾನ್ಯ ಪ್ರಜೆಗಳಿಗೆ ಮನರಂಜನೆಯನ್ನೂ ನೀಡುತ್ತಿದೆ.
ಗೋವಿಂದರಾವ್ ಒಂದು ಕಾಲದಲ್ಲಿ ದ್ರಾವಿಡ್ ಅಂಥಾ ಸಂಭಾವಿತ ಕ್ರಿಕೆಟರ್ ಗೆ ಪಾಠ ಮಾಡಿದವರು. ಹಾಗಾಗಿ ಅವರಿಗೆ ಕ್ರಿಕೆಟ್ ಗೊತ್ತಿರಬಹುದು. ಸದ್ಯ, ಅವರಿನ್ನೂ ಯಾವುದೋ ಕ್ರಿಕೆಟರ್ ಮೇಲೆ ಹರಿಹಾಯ್ದಿಲ್ಲ ಅನ್ನುವುದು ಬಿಸಿಸಿಐ ಪುಣ್ಯ. ಅವರ ಮೆಚ್ಚಿನ ಟಾರ್ಗೆಟ್ ಅಂದರೆ ಹಿಂದೂಪರ ಸಂಘಟನೆಗಳು, ಬಲಪಂಥೀಯ ರಾಜಕಾರಣಿಗಳು ಮತ್ತು ಸಾಹಿತಿಗಳು ಹಾಗೂ ಸ್ವಾಮೀಜಿಗಳು. ಆದರೆ ಇತ್ತೀಚೆಗೆ ಜಿಕೆಜಿ ಅವರು ಕನ್ನಡ ಸಿನಿಮಾ ಮತ್ತು ಸೀರಿಯಲ್ಲುಗಳ ಮೇಲೆಯೂ ಪ್ರಹಾರ ಮಾಡಿದರು. ಅದು ಬಹಳ ಜನರಿಗೆ ಆಶ್ಚರ್ಯವನ್ನುಂಟು ಮಾಡಿರಬಹುದು. ನ್ಯಾಯವಾಗಿ ಹೇಳಬೇಕಾದರೆ ಅವರಿಗೆ ಆ ಅಧಿಕಾರವೂ ಇದೆ. ಯಾಕೆಂದರೆ ಅವರು ಒಂದಿಷ್ಚು ಸಿನಿಮಾ ಮತ್ತು ಸೀರಿಯಲ್ಲುಗಳಲ್ಲಿ ನಟಿಸಿದ್ದಾರೆ. ಅಂಥಾ ಒಳ್ಳೆಯ ನಟ ಎಂಬ ವಿಮರ್ಶೆಯೇನೂ ಅವರಿಗೆ ಸಿಗಲಿಲ್ಲ ಅನ್ನುವುದು ಬೇರೆ ಮಾತು. ಈಗ ಇದ್ದಕ್ಕಿದ್ದಂತೆ ‘ಕನ್ನಡ ಸಿನಿಮಾಗಳೆಲ್ಲವೂ ದರಿದ್ರ’ಅನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಇದು ಅವರ ಅನಿಸಿಕೆಯೋ ಸಂಶೋಧನೆಯೋ ಗೊತ್ತಿಲ್ಲ. ಒಟ್ಟಲ್ಲಿ ಗೋವಿಂದರಾವ್ ಹೇಳಿದರೆ ಮುಗಿದೇಹೋಯಿತು. ಪ್ರಗತಿಪರರೆಲ್ಲರೂ ಅದನ್ನು ಒಪ್ಪಿಕೊಳ್ಲಲೇಬೇಕು.
ಆದರೆ ಕೆ. ಮಂಜು ಒಪ್ಪಿಕೊಳ್ಳಲಿಲ್ಲ, ಯಾಕೆಂದರೆ ಅವರು ಪ್ರಗತಿಪರರಲ್ಲ, ಬುದ್ದಿಜೀವಿಯೂ ಅಲ್ಲ. ಸಿನಿಮಾವನ್ನೇ ವೃತ್ತಿಯಾಗಿ ಮತ್ತು ಪ್ರವೃತ್ತಿಯಾಗಿ ಸ್ವೀಕರಿಸಿಕೊಂಡು ಬದುಕುತ್ತಿರುವ ಶ್ರಮಜೀವಿ. ಎರಡು ದಶಕಗಳಿಂದ ಅವರು ಈ ರಂಗದಲ್ಲಿಯೇ ಇದ್ದಾರೆ ಮತ್ತು ಸಿನಿಮಾದಿಂದಲೇ ಅನ್ನ ತಿನ್ನುತ್ತಿದ್ದಾರೆ. ಇಂಥಾ ಸರಳವ್ಯಕ್ತಿಗಳು ತಾವು ದುಡಿಯುವ ಜಾಗವನ್ನೇ ದೇವಸ್ಥಾನವೆಂದೂ, ತಮ್ಮ ಪಾಲಿಗೆ ಬರುವ ಬಿಡಿಗಾಸನ್ನೇ ಪಂಚಾಮೃತವೆಂದೂ ನಂಬುತ್ತಾರೆ. ಹಾಗಾಗಿ ಗೋವಿಂದ ರಾವ್ ಕನ್ನಡ ಚಿತ್ರಗಳನ್ನು ದರಿದ್ರ ಎಂದು ಕರೆದಾಗ ಸಹಜವಾಗಿಯೇ ಮಂಜು ಅವರಿಗೆ ನೋವಾಗಿದೆ, ಇದು ತನ್ನ ವೃತ್ತಿಗೆ ತೋರಿದ ಅಗೌರವ ಎಂದೇ ಅವರು ಭಾವಿಸಿದ್ದಾರೆ. ಹಾಗಾಗಿಯೇ ಗೋವಿಂದರಾಯರು ಕ್ಷಮೆ ಕೇಳಬೇಕೆಂದು ಮಂಜು ಒತ್ತಾಯಿಸಿದ್ದಾರೆ. ಎಂಬಲ್ಲಿಗೆ ಮಂಜು ಅವರಿಗೆ ‘ಗಂಡುಗಲಿ’ಎಂದು ಹಂಸಲೇಖಾ ನಾಮಕರಣ ಮಾಡಿದ್ದು ತಡವಾಗಿಯಾದರೂ ಸಾರ್ಥಕವಾಗಿದೆ.
‘ಗೋವಿಂದರಾವ್ ಎಷ್ಟೇ ದೊಡ್ಡ ಬುದ್ದಿಜೀವಿಯಾಗಿರಬಹುದು. ಆದರೆ ಸಾವಿರಾರು ಕುಟುಂಬಗಳನ್ನು ಸಲಹುತ್ತಿರುವ ಉದ್ಯಮವೊಂದರ ಬಗ್ಗೆ ಹಗುರವಾಗಿ ಮಾತಾಡಿದ್ದು ತಪ್ಪು’ಅನ್ನುವುದು ಮಂಜು ವಾದ. ಇಂಥಾದ್ದೊಂದು ಸರಳ ಸಂಗತಿ ಇತರೇ ಚಿತ್ರೋದ್ಯಮಿಗಳಿಗೆ ಅರ್ಥವಾಗದೇ ಇರುವುದು ಆಶ್ಚರ್ಯ ಮತ್ತು ಆಘಾತಕಾರಿ. ಮಂಜು ಅವರ ಹೊರತಾಗಿ ಇನ್ಯಾರೂ ಗೋವಿಂದರಾವ್ ಅವರ ಮಾತಿಗೆ ಪ್ರತಿಭಟಿಸುವುದಿರಲಿ, ಆಕ್ಷೇಪಿಸುವ ಕೆಲಸವನ್ನೂ ಮಾಡಿಲ್ಲ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳ ಬಗ್ಗೆ ಯಾರಾದರೂ ಮಹನೀಯರು ಇಂಥಾ ಹೇಳಿಕೆ ನೀಡಿದ್ದರೆ ಅವರ ಮನೆ ಮುಂದೆ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಕನ್ನಡದಲ್ಲಿ ನಮ್ಮ ಚಿತ್ರೋದ್ಯಮವನ್ನು ಪ್ರತಿನಿಧಿಸುವ ನಿರ್ಮಾಪಕರ ಸಂಘವಾಗಲಿ, ಫಿಲಂ ಚೇಂಬರ್ ಆಗಲಿ ಅಥವಾ ಕಲಾವಿದರ ಸಂಘವಾಗಲಿ ತುಟಿಪಿಟಕ್ಕೆಂದಿಲ್ಲ.ಟೀವಿ ಚಾನೆಲ್ಲುಗಳಿಗೂ ಇದನ್ನೊಂದು ಇಶ್ಯೂ ಮಾಡಬೇಕೆನ್ನುವ ಐಡಿಯಾ ಬಂದಿಲ್ಲ. ಬಹುಶಃ ಗೋವಿಂದರಾವ್ ಟೀಆರ್ ಪಿ ಸರಕಲ್ಲ ಎಂದು ಅವರಿಗೆ ಅನಿಸಿದ್ದಿರಬಹುದು.
ಗೋವಿಂದರಾವ್ ಕನ್ನಡ ಚಿತ್ರರಂಗವನ್ನು ಗೇಲಿ ಮಾಡುತ್ತಿರುವುದು ಇದು ಮೊದಲೇನಲ್ಲ. ‘ಒಂದೂರಲ್ಲಿ’ಅನ್ನುವ ಚಿತ್ರಕ್ಕೆ ಸಂಬಂಧಪಟ್ಟ ಸೆಮಿನಾರ್ ಒಂದರಲ್ಲಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಹಾಸ್ಯನಟ ನರಸಿಂಹರಾಜು ಅವರನ್ನು ಜಿಕೆಜೆ ‘ಬಫೂನ್’ಎಂದು ಕರೆದಿದ್ದರು. ಹಿರಿಯ ಗೀತರಚನೆಕಾರ ಗೀತಪ್ರಿಯ ಬರೆದ ‘ನೀರ ಬಿಟ್ಟು ನೆಲದ ಮೇಲೆದೋಣಿ ಸಾಗದು’ಹಾಡನ್ನು ಸಾಹಿತ್ಯವೇ ಅಲ್ಲ ಎಂದಿದ್ದರು. ಆಗಲೂ ಯಾರೂ ಪ್ರತಿಭಟಿಸಲಿಲ್ಲ.
ಈಗ ಮತ್ತೊಮ್ಮೆ ಜಿಕೆಜಿ ಅವರ ಹೇಳಿಕೆಯನ್ನು ಗಮನಿಸೋಣ. “ಗಾಂಧಿನಗರದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳು ದರಿದ್ರ ಸಿನಿಮಾಗಳು. ಇವುಗಳಲ್ಲಿ ಒಂದೋ ವಿಲನ್ ಇರಬೇಕು ಅಥವಾ ಹೆಣ್ಣಿನ ಕಣ್ಣೀರು ಇರಬೇಕು. ಈ ಸಿನಿಮಾಗಳನ್ನು ನೋಡಿಯೇ ಜನರು ಅಳಬೇಕಿದೆ. ಈ ಸಿನಿಮಾಗಳನ್ನು ಜನರು ನೋಡುವುದಿಲ್ಲ. ಹೀಗಾಗಿ ಥಿಯೇಟರ್‌ಗಳು ಮುಚ್ಚುತ್ತಿವೆ. ಎರಡು ತಿಂಗಳು ಕಳೆದರೆ ಮನೆಯಲ್ಲೇ ಹೊಸ ಸಿನಿಮಾಗಳನ್ನು ವೀಕ್ಷಿಸಬಹುದು.ಈಗ ಬರುತ್ತಿರುವ ದರಿದ್ರ ಕನ್ನಡ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ಯಾವನು ನೋಡುತ್ತಾನೆ. ಕನ್ನಡ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳು ಬಾಗಿಲು ಹಾಕುತ್ತಿವೆ ಎನ್ನುವ ವಿಷಯ ತಿಳಿದಾಗ ಸಂತೋಷವಾಗುತ್ತಿದೆ”.
ಈ ಹೇಳಿಕೆಯಲ್ಲಿರುವ ವಿರೋಧಾಭಾಸಗಳನ್ನು ನೀವು ಗಮನಿಸಬೇಕು. ಒಂದೆಡೆ ಕನ್ನಡ ಸಿನಿಮಾಗಳನ್ನು ದರಿದ್ರ ಅನ್ನುವ ಅವರು ಅದೇ ಚಿತ್ರಗಳನ್ನು ಜನ ಮನೆಯಲ್ಲೇ ವೀಕ್ಷಿಸುತ್ತಾರೆ ಎಂದೂ ಹೇಳುತ್ತಾರೆ. ಎಂಬಲ್ಲಿಗೆ ದರಿದ್ರ ಚಿತ್ರಗಳನ್ನು ನೋಡುವವರೂ ದರಿದ್ರರು ಅಂದಹಾಗಾಯಿತು. ಅದಿರಲಿ, ಥಿಯೇಟರುಗಳು ಮುಚ್ಚುತ್ತಿರುವ ವಿಷಯ ಅವರಿಗೆ ಸಂತೋಷನೀಡುತ್ತಿದೆ ಅನ್ನುವ ಮಾತನ್ನು ವಿಘ್ನಸಂತೋಷಿಗಳಷ್ಟೇ ಹೇಳುವುದಕ್ಕೆ ಸಾಧ್ಯ. ಯಾಕೆಂದರೆ ಚಿತ್ರೋದ್ಯಮ ಅನ್ನುವುದು ಲಕ್ಷಾಂತರ ಜನರಿಗೆ ಅನ್ನ ನೀಡುವ ಉದ್ಯಮ. ಅದು ಮುಚ್ಚಿಹೋದರೆ ಅವರೆಲ್ಲಾ ಬೀದಿಗೆ ಬರುತ್ತಾರೆ ಅನ್ನುವುದು ಪ್ರಗತಿಪರರಾದ ಜಿಕೆಜಿ ಅವರಿಗೆ ಯಾಕೆ ಅರ್ಥವಾಗುವುದಿಲ್ಲ?ಕನ್ನಡ ಚಿತ್ರಗಳು ದರಿದ್ರ ಅನ್ನುವ ಮಾತನ್ನು ಸಮರ್ಥಿಸಿಕೊಳ್ಳುವುದಕ್ಕೆ ಅವರು ಒಂದಾದರೂ ಉದಾಹರಣೆ ನೀಡಬಹುದಾಗಿತ್ತಲ್ಲ?ಅವರದೇ ಮಾನದಂಡದಲ್ಲಿ ಹೇಳುವುದಾದರೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲೂ ದರಿದ್ರ ಅನ್ನುವ ಟೀಕೆಗೆ ಲಾಯಕ್ಕಾದ ಚಿತ್ರಗಳು ಬರುತ್ತಿವೆ. ಕಲೆ ಮತ್ತು ಉದ್ಯಮ ಇವೆರಡನ್ನೂ ಬ್ಯಾಲೆನ್ಸ್ ಮಾಡುವುದಕ್ಕೆ ಹೊರಟಾಗ ಇಂಥಾ ಅಪಸವ್ಯಗಳುಆಗುವುದು ಸಹಜ ಕೂಡಾ. ಪ್ರಗತಿಪರರನ್ನು ಮೆಚ್ಟಿಸಬೇಕು ಅನ್ನುವ ಕಾರಣಕ್ಕೆ ಮೋದಿಯನ್ನು ವಿಲನ್ ಆಗಿ ತೋರಿಸುವಂಥಾ ಸಿನಿಮಾ ಮಾಡುವುದಕ್ಕಾಗುತ್ತಾ!ಹೋಗಲಿ, ಇಂಥಾ ‘ದರಿದ್ರ’ಸ್ಥಿತಿಯಲ್ಲಿರುವ ಚಿತ್ರರಂಗದ ಉದ್ಧಾರಕ್ಕೆ ಜಿಕೆಜಿ ಏನಾದರೂ ಸಲಹೆ ನೀಡುತ್ತಾರಾ, ಅದೂ ಇಲ್ಲ. ಸುಮ್ಮನೆ ಒಂದು ಕಲ್ಲು ಎಸೆದು ತನ್ನ ಪಾಡಿಗಿದ್ದು ಬಿಟ್ಟರೆ ತನ್ನ ಕೆಲಸ ಮುಗಿಯಿತು ಅನ್ನುವ ಧೋರಣೆಯಿದು.
ವಯಸ್ಸು ಮತ್ತು ಅನುಭವ ಒಬ್ಬ ಮನುಷ್ಯನಿಗೆ ಕೆಲವು ಸ್ವಾತಂತ್ರ್ಯಗಳನ್ನು ನೀಡುತ್ತದೆ. ಆತ ಜಗತ್ತಿನ ಸಮಸ್ತ ಆಗುಹೋಗುಗಳ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು, ಟೀಕಿಸಬಹುದು. ಇನ್ನೊಂದೆಡೆ ಇದೇ ವಯಸ್ಸು ಮತ್ತು ಅನುಭವ ಮನುಷ್ಯನನ್ನು ಮಾಗಿಸುತ್ತದೆ. ಆತ ಕೊಂಚ ಉದಾರಿಯಾಗಬಹುದು. ಇದು ಹೀಗಲ್ಲ ತಮ್ಮಾ ಎಂದು ಹಿತವಚನ ಹೇಳಬಹುದು. ಗೋವಿಂದರಾವ್ ಅವರದು ಮೊದಲನೇ ಹಾದಿ. ಆದರೆ ಆ ಸ್ವಾತಂತ್ರ್ಯ ಅತಿಯಾಗಿ ಬಳಕೆಯಾದಾಗ ಅದು ದರಿದ್ರ ರೂಪ ಪಡೆಯುತ್ತದೆ. ಹಿರಿಯರ ಮಾತಿಗೆ ಬೆಲೆ ಕೊಡಬೇಕು ಅನ್ನುವ ಶಿಷ್ಟಾಚಾರವನ್ನು ಜನ ಮರೆಯುವ ಸಂದರ್ಭ ಸೃಷ್ಟಿಯಾಗುತ್ತದೆ. ಆಗ ಎಲ್ಲರೂ ಗೋವಿಂದರಾಯರಾಗುತ್ತಾರೆ!
Also See
K Manju Demands Apology From GK Govindarao
Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ
Uma Column 17 - ತಂದೆ ನೀನಾಗು ಬಾ
Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ
Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!
Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್
Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ
Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?
Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ
Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು
Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?
Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..
Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!
Uma Column 6 - ಹಾಯ್ ಕನ್ನಡ ತಾಯ್!
Uma Column 5 - ನನ್ನ ಭಯ ಮತ್ತು ಅಭಯನ ಜಯ
Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು
Uma Column 3 - ಕಲ್ಲು ಕೊರಗುವ ಸಮಯ
Uma Column 2 - ಮುನಿ ಮತ್ತು MONEY
Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು
ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ
Udaya Marakini Column In Chitraloka
Pls Note -
The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.