` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
muniratna image
muniratna

ಮುನಿರತ್ನ ಮಹಾನ್ ಬುದ್ದಿವಂತ, ಆದರೆ ಅವರ ಬುದ್ದಿವಂತಿಕೆಯಿಂದ ಕನ್ನಡ ಚಿತ್ರೋದ್ಯಮಕ್ಕೇನೂ ಅಂಥಾ ಉಪಯೋಗವಾಗಿಲ್ಲ, ಲಾಭವಾಗಿದ್ದು ಅವರಿಗೇ. ಹಾಗಂತ ಮೊನ್ನೆಮೊನ್ನೆ ಯಾರೋ ಹೇಳಿದರು. ಇದ್ದರೂ ಇರಬಹುದು, ಎಲ್ಲರೂ ಮಾಡುವುದು ಅದನ್ನೇ ತಾನೆ. ಬುದ್ದಿವಂತಿಕೆ ಅನ್ನುವುದು ಒಬ್ಬ ಮನುಷ್ಯನ ಕಾಪಿರೈಟ್. ಅದನ್ನು ಆತ ತನ್ನ ಸ್ವಂತಕ್ಕೆ ಬಳಸಿಕೊಳ್ಳುವುದರಲ್ಲಿ ತಪ್ಪೇನಿದೆ? ನಿಜ, ಆದರೆ ಅದಕ್ಕೋಸ್ಕರ ಆತ ಒಂದು ಸಂಸ್ಥೆ ಅಥವಾ ಸಮುದಾಯವನ್ನು ಬಳಸಿಕೊಳ್ಳಬಾರದು ಅನ್ನುವುದೂ ನಿಜಾನೇ.

ಹಾಗಿದ್ದರೆ ಮುನಿರತ್ನ ತಮ್ಮ ಸ್ವಂತ ಹಿತಾಸಕ್ತಿಯನ್ನು ಪೋಷಿಸಲು ಕನ್ನಡ ಚಿತ್ರೋದ್ಯಮವನ್ನು  ಏಣಿಯಂತೆ ಬಳಸಿಕೊಂಡರಾ?  ಗೊತ್ತಿಲ್ಲ, ಅವರ ವಿರೋಧಿಗಳು ಹಾಗಂತ ಬಲವಾಗಿ ನಂಬಿದ್ದಾರೆ. ಅವರು ಏಣಿಯೇರಿದ್ದಕ್ಕೆ ನಾನೇ ಸಾಕ್ಷಿ, ಆದರೆ ಏಣಿಯನ್ನು ಒದ್ದಿದ್ದಾರೆ ಅಂತ ಹೇಳುವುದಕ್ಕೆ ಮನಸ್ಸು ಯಾಕೋ ಒಪ್ಪುತ್ತಿಲ್ಲ. ಗುರಿ ತಲುಪಿದ ಮೇಲೆ ಏಣಿಯನ್ನು ಪಕ್ಕಕ್ಕಿಟ್ಟಿರಬಹುದು.

munirathna in a protest on 17-05-2001 (pic km veeresh)

ಒಂದಂತೂ ನಿಜ, ಈ ಮುನಿರತ್ನಂ ನಾಯ್ಡು ಅನ್ನುವ ವ್ಯಕ್ತಿ ನನ್ನಲ್ಲಿ ಯಾವಾಗಲೂ ಅಚ್ಚರಿಯನ್ನು ಮೂಡಿಸುತ್ತಾರೆ. ಚಿತ್ರರಂಗದ ಸಹವಾಸ ಮಾಡುವ ಮುಂಚೆ ಅವರು ರಸ್ತೆ ಕಂಟ್ರಾಕ್ಟರ್ ಆಗಿದ್ದರು. ಈಗಲೂ ಆ ಕೆಲಸವನ್ನು ಮರೆತಿಲ್ಲ. ಗಾಂಧಿನಗರದ ಉಬ್ಬುತಗ್ಗಿನ ದುರ್ಗಮ ರಸ್ತೆಯಲ್ಲಿ ಅವರು ಒಂಟಿಸಲಗನಂತೆ ನಡೆದರು. ರಸ್ತೆ ರಿಪೇರಿ ಮಾಡಲಿಲ್ಲ ಅನ್ನುವ ಆರೋಪ ಇದ್ದರೂ  ಚಿತ್ರೋದ್ಯಮದಲ್ಲಿ ಅವರಷ್ಟು ವೇಗವಾಗಿ ಬೆಳೆದ ಇನ್ನೊಬ್ಬ ವ್ಯಕ್ತಿಯನ್ನು ಹುಡುಕುವುದು ಕಷ್ಟ. ಅವರು ನಿರ್ಮಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳೇ ಆದರೂ ತಾನು ಸದಾ ಸುದ್ದಿಯಲ್ಲಿರುವಂತೆ ನೋಡಿಕೊಂಡರು. ಚುರುಕು ನಾಲಿಗೆಯೇ ಅವರ ಬಂಡವಾಳ. ಅದನ್ನೇ ಜಳಪಿಸುತ್ತಾ   ಒಮ್ಮೆಪಾಟೀಸವಾಲು ಹಾಕುವ ವಕೀಲನಂತೆ, ಮತ್ತೊಮ್ಮೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಹುಡುಕುವ ರಾಜಕಾರಣಿಯಂತೆ, ಇನ್ನೊಮ್ಮೆ ತಮ್ಮ ಕಟು ವಿಡಂಬನೆಯಲ್ಲೇ ವಿರೋಧಿಗಳನ್ನು ಹಣಿಯುವ ನಟನಂತೆ, ಮಗದೊಮ್ಮೆ ಕೆಳಗೆ ಬಿದ್ದವರನ್ನು ಮೇಲೆತ್ತುವ ಸಂತನಂತೆ, ಹೀಗೆ ನಾನಾ ಅವತಾರಗಳನ್ನು ತಾಳಿದರು.  ಕೇವಲ ಹನ್ನೆರಡು ವರ್ಷದ ಅವಧಿಯಲ್ಲಿ ಅವರು ಏನೇನೋ ಆಗಿಹೋದರು. ಕಂಟ್ರಾಕ್ಟರ್ ಪ್ರೂಡ್ಯೂಸರ್ ಆದರು, ಪ್ರೂಡ್ಯೂಸರ್ ಕಾರ್ಪೋರೇಟರ್ ಆದರು, ಕಾರ್ಪೋರೇಟರ್ ಎಂಎಲ್ಎ ಆದರು. ನಾಳೆ ಮಿನಿಸ್ಟರ್ ಆದರೆ ಯಾರೂ ಹುಬ್ಬೇರಿಸಬೇಕಿಲ್ಲ.

munirathna in a protest on 29-06-2004 (pic km veeresh)

ಮುನಿರತ್ನಂ ಅವರ ರಂಗಪ್ರವೇಶವಾಗಿದ್ದು 2002ನೇ ಇಸ್ವಿಯಲ್ಲಿ ‘ಆಂಟಿ ಪ್ರೀತ್ಸೆ’ ಎಂಬ ರೀಮೇಕು ಚಿತ್ರದ ಮೂಲಕ. ಚಿತ್ರದ ಮೊದಲ ಪತ್ರಿಕಾಗೋಷ್ಟಿಯಲ್ಲಿ ಅವರನ್ನು ಮಾಧ್ಯಮದವರಿಗೆ ಪರಿಚಯ ಮಾಡಿಕೊಡುವುದಕ್ಕೆ ಸಾರಾ. ಗೋವಿಂದು ಅವರೂ ಬಂದಿದ್ದರು. ಗೋವಿಂದು ಅವರೇ ತನ್ನ ಗಾಡ್ ಫಾದರ್ ಎಂದು ಹೇಳಿದ ಮುನಿ ಅದರ ಹೊರತಾಗಿ ಒಂದಕ್ಷರವನ್ನೂ ಆಡಲಿಲ್ಲ. ಅವರು ಆಡಬೇಕಾಗಿದ್ದನ್ನೆಲ್ಲಾ ಗೋವಿಂದು ಅವರೇ ಹೇಳಿದರು. ಕಂಟ್ರಾಕ್ಟರುಗಳೂ, ವೈನ್ ಶಾಪ್ ಮರ್ಚೆಂಟುಗಳೂ, ರಿಯಲ್ ಎಸ್ಟೇಟು ಕುಳಗಳೂ ಚಿತ್ರರಂಗದ ಮೇಲೆ ದಾಳಿ ನಡೆಸಿ, ಒಂದೇ ಚಿತ್ರಕ್ಕೆ ಕೈಸುಟ್ಟುಕೊಂಡು ಮಾಯವಾಗುತ್ತಿದ್ದ ಕಾಲವದು. ಹಾಗಾಗಿ ಆ ಪಟ್ಟಿಗೆ ಈ ಮುನಿರತ್ನಂ ಅನ್ನುವ ಹೆಸರೂ ಜಮೆಯಾಯಿತು ಅಂತ ಪತ್ರಕರ್ತರು ಮಾತಾಡಿಕೊಂಡರು.

munirathna, sa ra govindu (km veeresh)

ಅದಾಗಿ ಒಂದು ತಿಂಗಳಿಗೇ, ಎಂಜಿ ರಸ್ತೆಯ ಯುಟಿಲಿಟಿ ಕಟ್ಟಡದ 24ನೇ ಕೊನೇ ಮಹಡಿಯಲ್ಲಿರುವ ಟಾಪ್ ಕೆಫೆ ರೆಸ್ಟಾರೆಂಟಲ್ಲಿ ಮುನಿಯವರ ಮತ್ತೊಂದು ಪತ್ರಿಕಾಗೋಷ್ಠಿ ಏರ್ಪಾಡಾಯಿತು. ಆ ಹೊತ್ತಿಗೆ ಅವರು ಚಿಗಿತುಕೊಂಡಿದ್ದರು, ಗೋಷ್ಠಿಗೆ ಒಂದು ಗಂಟೆ ತಡವಾಗಿ ಬಂದರು. ಟ್ರಾಫಿಕ್ ಜಾಮ್ ಅನ್ನುವ ಪುರಾತನ ಕಾರಣ ಕೊಟ್ಟರು. ಲೋಕಾಭಿರಾಮದ ಮಾತುಗಳ ಮಧ್ಯೆ ಬೆಂಗಳೂರಲ್ಲಿ ನಡೆಯುತ್ತಿದ್ದ ರೌಡಿಗಳ ಅಟ್ಟಹಾಸದ ಬಗ್ಗೆಯೂ ಚರ್ಚೆ ನಡೆಯಿತು. ಆಗ ಮುನಿ ಒಂದು ರತ್ನದಂಥಾ ಮಾತು ಹೇಳಿದರು. “ಪಾಪ, ರೌಡಿಗಳಿಂದ ಜನರಿಗ್ಯಾಕೆ ತೊಂದರೆಯಾಗುತ್ತೆ ಹೇಳಿ. ರೌಡಿಗಳು ಅವರವರೇ ಬಡಿದಾಡಿಕೊಂಡು ಸಾಯುತ್ತಾರೆ ತಾನೆ?”. ಮುನಿಯವರ ಈ ಸಂಶೋಧನೆಗೆ ನಾವೆಲ್ಲರೂ ದಂಗಾಗಿಹೋದೆವು. ಮುಂದಿನ ದಿನಗಳಲ್ಲಿ ಮುನಿ ಇಂಥಾದ್ದೇ ವಿವಾದಾತ್ಮಕ ಹೇಳಿಕೆಗಳಿಂದಲೇ ಫೇಮಸ್ ಆಗುತ್ತಾ ಹೋದರು. ಅವರಿಗೆ ಟ್ರೇಡ್ ಸೀಕ್ರೆಟ್ ಅರ್ಥವಾಗಿತ್ತು. ಸುಖಾಸುಮ್ಮನೆ ಏನಾದರೊಂದು ವಿವಾದ ಹುಟ್ಟುಹಾಕುವುದು, ಮಜಾ ನೋಡೋದು,  ಅದು ಕೈಮೀರಿ ಹೋದಾಗ ವಿವರಣೆ ನೀಡುವುದು. ಇದನ್ನೇ ಹವ್ಯಾಸವಾಗಿಸಿಕೊಂಡ ಮುನಿ  ಆ ಕಾರಣಕ್ಕೇ ಕೈತುಂಬಾ ಮಿತ್ರರನ್ನೂ ಶತ್ರುಗಳನ್ನೂ ಸಂಪಾದಿಸಿಕೊಂಡರು.

ಮುನಿರತ್ನಂ ಅವರ ವಿವಾದಪ್ರಿಯ ಸ್ವಭಾವಕ್ಕೆ ಕೆಲವು ಉದಾಹರಣೆಗಳು ಹೀಗಿವೆ – ಕಂಬಾಲಪಲ್ಲಿ ದುರಂತವನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದು, ಹೀರೋಗಳು ನಿರ್ಮಾಪಕರಿಂದ ಕಾಂಡೋಮ್ ಒಂದನ್ನು ಬಿಟ್ಟು ಮಿಕ್ಕೆಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುತ್ತಾರೆ ಎಂಬ ಹೇಳಿಕೆ, ನಿಖಿತಾರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವ ಫರ್ಮಾನು ಹೊರಡಿಸಿದ್ದು, ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದಾಗ ಆಕೆಯನ್ನು ಸದ್ಗುಣ ಸಂಪನ್ನೆ-ಹಾಲಿನಂಥ ಮನಸ್ಸುಳ್ಳವಳು ಎಂದೆಲ್ಲಾ ವ್ಯಂಗ್ಯವಾಗಿ ಪ್ರಶಂಸಿಸಿ ಬ್ಯಾನನ್ನು ವಾಪಸ್ ಪಡೆದುಕೊಂಡದ್ದು, ಡಬ್ಬಿಂಗ್ ಚಿತ್ರಗಳ ಪರ ಒಲವು ತೋರಿದ್ದು,  ಕಠಾರಿ ವೀರ ಸುರಸುಂದರಾಂಗಿ ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂಬ ವಿವಾದ ಭುಗಿಲೆದ್ದಾಗ ಉಡುಪಿ ಮಠಕ್ಕೆ ಹೋಗಿ ಸ್ವಾಮೀಜಿಗಳ ಕ್ಷಮೆ ಯಾಚಿಸಿದ್ದು....

aunty preetse launch (pic km veeresh)

ನಿರ್ಮಾಪಕ ಸಂಘದ ಅಧ್ಯಕ್ಷರಾಗಿ ಮುನಿರತ್ನ ಮುಂದುವರಿಯಬಾರದು ಎಂದು ಕೆಲವು ನಿರ್ಮಾಪಕರು ಗಲಾಟೆ ಮಾಡಿದ್ದನ್ನು ಓದಿದಾಗ ಇವೆಲ್ಲಾ ಸಂಗತಿಗಳು ನೆನಪಾದವು. ಕಾನೂನು ಪ್ರಕಾರ ಎರಡು ವರ್ಷಗಳು ಮುಗಿದ ತಕ್ಷಣ ನಿರ್ಮಾಪಕ ಸಂಘದ  ಚುನಾವಣೆ ನಡೆಯಬೇಕು ಅನ್ನುವುದು ಸರಿ. ಆದರೆ ಈ ಹಿಂದೆ ಅದೆಷ್ಟು ಸಾರಿ ಉದ್ಯಮದೊಳಗೆ ಕಾನೂನು ಉಲ್ಲಂಘನೆಯಾಗಿಲ್ಲ?   ಮುನಿ ನಿರ್ಮಾಪಕ ಸಂಘದ ಅಧ್ಯಕ್ಷರಾದಾಗ ಹತ್ತಾರು ಆಶ್ವಾಸನೆಗಳನ್ನು ನೀಡಿದ್ದರು. ಸಂಘಕ್ಕೊಂದು ಸೈಟು, ಸ್ವಂತ ಬಿಲ್ಡಿಂಗು, ಇತ್ಯಾದಿ. ಅವ್ಯಾವುದೂ ಈಡೇರಿಲ್ಲ. ನಿರ್ಮಾಪಕರು ಬುದ್ದಿವಂತರಾಗಿದ್ದರೆ ಮುನಿಯವರ ಚಾಣಾಕ್ಷತನವನ್ನೇ ಅವರ ವಿರುದ್ಧ ಬಾಣವನ್ನಾಗಿ ಬಳಸಿಕೊಂಡು, ಈ ಕೆಲಸಗಳನ್ನು ಮುಗಿಸುವಂತೆ ಒತ್ತಡ ಹೇರಿ, ನಂತರವೇ ಅವರನ್ನು ಕಳಿಸಿಕೊಡಬಹುದಾಗಿತ್ತು. ಮುನಿ ಅವರು ಕಾಂಗ್ರೆಸ್  ಶಾಸಕರಾಗಿರುವುದರಿಂದ ಅವರನ್ನು ಮುಂದಿಟ್ಟುಕೊಂಡು ಸರ್ಕಾರದಿಂದ ಉದ್ಯಮಕ್ಕೆ ಬೇಕಾದ ಸವಲತ್ತುಗಳನ್ನು ಪಡೆಯಬಹುದಾಗಿತ್ತು.  ಆದರೆ ಈಗ ಆಗಿದ್ದೇನು? ಮುನಿ ಬಯಸಿದ್ದೂ ನಿವೃತ್ತಿ, ನಿರ್ಮಾಪಕರೂ ನೀಡಿದ್ದೂ ನಿವೃತ್ತಿಯನ್ನೇ.

producers association insurance to producers

ಹಾಗಂತ ಸಂಘದ ಅಧ್ಯಕ್ಷರಾಗಿ ಮುನಿ ಏನೂ ಮಾಡಿಲ್ಲ ಅನ್ನೋ ಹಾಗಿಲ್ಲ. ನಿರ್ಮಾಪಕರಿಗೆ ವಿಮಾ ಸೌಲಭ್ಯವನ್ನು ಒದಗಿಸಿದ್ದಾರೆ. 32 ವರ್ಷದಿಂದ ಸಂಘಕ್ಕೊಂದು ಬೈಲಾ ಇರಲಿಲ್ಲ. ಅದನ್ನು ರೂಪಿಸಿದ್ದು ಮತ್ತು ಸಹಕಾರಿ ಸಂಘದಲ್ಲಿ ನಿರ್ಮಾಪಕರ ಸಂಘವನ್ನು ನವೀಕರಿಸಿದ್ದೂ ಅವರ ಸಾದನೆಯೇ. ಅದಕ್ಕಿಂತ ಹೆಚ್ಚಾಗಿ ಚಿತ್ರರಂಗದಲ್ಲಿ ನಿರ್ಮಾಪಕನೇ ನಿಜವಾದ ಬಾಸ್ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಖಾಸಗಿ ಸಮಾರಂಭವೊಂದರಲ್ಲಿ ತಮ್ಮ ಪಕ್ಕದಲ್ಲಿ ಕುಳಿತಿದ್ದ ಸ್ಟಾರ್ ಒಬ್ಬರ ಬಳಿ ಮುನಿ ಹೇಳಿದ ಮಾತು ನನಗೀಗಲೂ ನೆನಪಿದೆ. “ನಿಮ್ಮನ್ನು ನಂಬಿಕೊಂಡು ಸಿನಿಮಾ ಮಾಡಿ ಪಾಪರ್ ಆಗೋದಕ್ಕಿಂತ, ನಾಲ್ಕು ರಸ್ತೆಗಳಿಗೆ ಟಾರು ಹಾಕಿದರೆ ನಾಲ್ಕು ಕಾಸು ಸಂಪಾದನೆ ಮಾಡಬಹುದು”. ಇಂದಿನ ಕನ್ನಡ ಚಿತ್ರಗಳು ಮತ್ತು ಬೆಂಗಳೂರಿನ ರಸ್ತೆಗಳನ್ನು ನೋಡಿದಾಗಲೆಲ್ಲಾ ನನಗೆ ಮುನಿರತ್ನ ನೆನಪಾಗುತ್ತಾರೆ.

ಚಿತ್ರೋದ್ಯಮದ ನಾಯಕತ್ವದ ಚುಕ್ಕಾಣಿ ಹಿಡಿಯುವ ಆಸೆಯುಳ್ಳವರು ಮುನಿರತ್ನಂ ಕಾರ್ಯಶೈಲಿಯನ್ನೇ ಮಾದರಿಯಾಗಿಟ್ಟುಕೊಂಡರೆ ಬಹಳ ಬೇಗ ಮಿಂಚಬಹುದು. ಆದರೆ ನೀವು ಬುದ್ದಿವಂತರಾಗಿರಬೇಕು, ಅದನ್ನೇ ಬಂಡವಾಳವಾಗಿಸಿಕೊಂಡು ಉದ್ಯಮದೊಳಗಿನ ಹುಳುಕುಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ನಿಮಗಿರಬೇಕು!ಜೊತೆಗೆ ತನ್ನಂಥಾ ಬುದ್ದಿವಂತರು ಇನ್ನೊಬ್ಬರಿರಬಹುದು ಅನ್ನುವ ಎಚ್ಚರ ಮತ್ತು ಪ್ರಜ್ಞೆಯೂ ಇರಬೇಕು. ಬಹುಶ ಮುನಿರತ್ನ ಅವರು ಮಾಡಿದ ತಪ್ಪು ಅದೊಂದೇ. ಒಬ್ಬನೇ ಒಬ್ಬನೇ ಮುನಿರತ್ನನೊಬ್ಬನೇ ಅಂದುಕೊಂಡರು. ಅದು ಅಲ್ಲಲ್ಲಿ ಬೂಮ್ ರಾಂಗ್ ಆಯಿತು.

ನನಗೆ ಮುನಿರತ್ನ ಅವರನ್ನು ಕನ್ನಡ ಚಿತ್ರರಂಗ ಅನ್ನೋ ಸೀನ್ ನಿಂದ  ಮಿಸ್ ಮಾಡಿಕೊಳ್ಳಲು ಮನಸ್ಸಿಲ್ಲ. ಅಂಥಾ ರಂಜನೀಯ ವ್ಯಕ್ತಿ ನಮ್ಮ ನಡುವೆ ಓಡಾಡುತ್ತಾ ಇರಬೇಕು. ವಿವಾದಗಳು, ವಿನೋದಗಳು ಆಗಾಗ ನಡೆಯುತ್ತಾ ಇರಬೇಕು. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಜೀವಂತವಾಗಿ ಉಳಿಯುವುದು ಹೀಗೇ ತಾನೆ.

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail -This email address is being protected from spambots. You need JavaScript enabled to view it.

Also See

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka