` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
a movie image
chandini, upendra

ಸಿನಿಮಾ ಗೆದ್ದರೂ ಪರವಾಗಿಲ್ಲ, ಸೋತರೂ ಪರವಾಗಿಲ್ಲ. ಅದು ಸೌಂಡು ಮಾಡಬೇಕು. ಆ ಸೌಂಡಿಗೆ ಬೆಚ್ಚಿಬಿದ್ದ ಪ್ರೇಕ್ಷಕ ಒಮ್ಮೆ ಕಣ್ಣರಳಿಸಿ ತಿರುಗಿ ನೋಡಬೇಕು. ಬಾಕಿ ಮೊಕ್ತಾ.

ಇಂಥಾ ಸೌಂಡು ಮಾಡುವ ವಿದ್ಯೆಯಲ್ಲಿ ಪಾರಂಗತರಾದ ಕೆಲವು ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಅದನ್ನು ಆರಂಭಿಸಿದ ಕ್ರೆಡಿಟ್ಟು ಉಪೇಂದ್ರರಿಗೆ ಸಲ್ಲುತ್ತದೆ. ಅವರ ‘ಎ’ಮತ್ತು ‘ಉಪೇಂದ್ರ’ಚಿತ್ರಗಳ ಗೆಲುವಿನ ಹಿಂದೆ ಈ ಸೌಂಡು ಇತ್ತು. ಅನಂತರ ಪ್ರೇಮ್, ಯೋಗರಾಜ ಭಟ್ರು, ಚಂದ್ರು, ಮೊದಲಾದವರು ಸೌಂಡ್ ನ ಮೊರೆಹೋಗಿ ಗೆಲುವಿನ ನಗೆಬೀರಿದರು. ಸೌಂಡು ಮಾಡುವುದರಲ್ಲೂ ನಾನಾ ವಿಧಗಳಿವೆ. ಅಬ್ಬರದ ಪ್ರಚಾರದ ಮೂಲಕ ಸೌಂಡು ಮಾಡುವುದು ಮೊದಲ ಪಂಕ್ತಿಯಲ್ಲಿ ಬರುತ್ತದೆ. ಚಿತ್ರದ ಆಮಂತ್ರಣ ಪತ್ರವನ್ನು ವಿಭಿನ್ನವಾಗಿ ತಯಾರಿಸುವುದು ಹಳೇ ಸ್ಟೈಲು, ಮುಹೂರ್ತವನ್ನು ಸ್ಮಶಾನದಲ್ಲಿ ನೆರವೇರಿಸುವುದು ಹೊಸ ಸ್ಟೈಲು. ವಿವಾದಗಳಿಂದಲೇ ಶೂಟಿಂಗ್ ಶುರು ಮಾಡುವುದು ಇತ್ತೀಚಿನ ಟ್ರೆಂಡು. ಉದಾಹರಣೆಗೆ ‘ಬಸವಣ್ಣ’ಎಂಬ ಟೈಟಲ್ ಮಾಡಿದ ಸೌಂಡನ್ನು ನೆನಪಿಸಿಕೊಳ್ಳಿ. ದಿಗಂತ್ ಬೆತ್ತಲೆಯಾಗಿ ಓಡಿದರೆ ಅದು ಭಯಂಕರ ಸೌಂಡು ಮಾಡುತ್ತದೆ ಅನ್ನುವುದು ಮೊನ್ನೆಯಷ್ಟೇ ರುಜುವಾತಾಯಿತು. ಸೌಂಡು ಜಾಸ್ತಿ ಮಾಡುವುದಕ್ಕೆ ಟೀವಿ ಚಾನೆಲ್ಲುಗಳಿರುವುದು ಇಂದಿನ ನಿರ್ದೇಶಕರಿಗೆ ಬೋನಸ್ಸು.

raveena tandon, upendra

ಪಕ್ಕಾ ಕಮರ್ಷಿಯಲ್ ಚಿತ್ರಗಳಿಗೆ ಇಂಥಾ ಸೌಂಡ್ ನ ಅಗತ್ಯ ಇದೆ ಅಂತಾನೇ ಅಂದುಕೊಳ್ಳೋಣ. ಯಾಕೆಂದರೆ ಅದು ಖಾಲಿಡಬ್ಬ ಎಂದು ಪ್ರೇಕ್ಷಕನಿಗೆ ಅರ್ಥವಾಗುವುದಕ್ಕೆ ಮುಂಚೆಯೇ ಹಾಕಿದ ಬಂಡವಾಳ ವಾಪಸ್ಸು ಬರಬೇಕಾದರೆ ಸೌಂಡಿನ ಜರೂರತ್ತು ಇದೆ. ಗಿರೀಶ್ ಕಾಸರವಳ್ಳಿ, ಶೇಷಾದ್ರಿ ಅಂಥವರು ಸೌಂಡು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ ಸೌಂಡಿಗೂ ಖರ್ಚಾಗುತ್ತದೆ ಮತ್ತು ಚಿತ್ರದಲ್ಲಿ ಸ್ಟಾರ್ ಗಳೋ ಅಥವಾ ಐಟಂ ಡ್ಯಾನ್ಸುಗಳೋ ಇರಬೇಕಾಗುತ್ತದೆ.  ಆ ನಿಟ್ಟಿನಲ್ಲಿ ನನಗೆ ‘ಉಳಿದವರು ಕಂಡಂತೆ’ಚಿತ್ರ ಮಾಡಿದ ಸೌಂಡು ಸಾಕಷ್ಟು ಕುತೂಹಲ ಮೂಡಿಸಿದೆ. ಅದು ಕಮರ್ಷಿಯಲ್ ಅಥವಾ ಆರ್ಟ್ ಅನ್ನುವ ಯಾವ ಪ್ರಕಾರಕ್ಕೂ ಸಿಲುಕದೇ ಇರುವ ಚಿತ್ರ. ಮೇಕಿಂಗ್ ನಲ್ಲಿ ಪರದೇಸೀ ಚಿತ್ರಗಳ ಛಾಯೆ ಇರಬಹುದಾದರೂ ಅದು ರೀಮೇಕಲ್ಲ. ಐಟಂ ಸಾಂಗಿಲ್ಲ, ಭೀಕರ ಹೊಡೆದಾಟಗಳಿಲ್ಲ, ಭಟ್ಟರು ಬರೆದ ಹಾಡೂ ಇಲ್ಲ.

ಹಾಗಿದ್ದೂ ‘ಉಳಿದವರು ಕಂಡಂತೆ’ಚಿತ್ರ ಸಿಕ್ಕಾಪಟ್ಟೆ ಸೌಂಡು ಮಾಡಿತು. ಬಿಡುಗಡೆಗೆ ಮುಂಚೆಯೇ ಈ ಚಿತ್ರದ ಟ್ರೇಲರ್ ಸೌಂಡು ಮಾಡಿತ್ತು, ಬಿಡುಗಡೆಯ ನಂತರ ಫೇಸ್ ಬುಕ್ಕಲ್ಲಿ ಮತ್ತು ಕೆಲವು ಅಪ್ಪಟ ಸಿನಿಮಾ ಆಸಕ್ತರ ಮನಸ್ಸಲ್ಲಿ ಸೌಂಡು ಮಾಡಿತ್ತು. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸೌಂಡು ಜೋರಾಗಿತ್ತು, ಅಲ್ಲಿನ ಸೌಂಡು ಸಿಸ್ಟಂ ಕೂಡಾ ಹಾಗೇ ಇರುತ್ತದೆ ಅನ್ನಿ. ಆದರೆ ಪತ್ರಿಕಾ ವಿಮರ್ಶೆಗಳಲ್ಲಿ ಕೇಳಿಸಿದ  ಸೌಂಡುಮಾತ್ರ ನಿರ್ಮಾಪಕ ಮತ್ತು ನಿರ್ದೇಶಕರ ಕಿವಿಗಷ್ಟು ಹಿತವಾಗಿರಲಿಲ್ಲ. ಆ ವಿಮರ್ಶಕರ ಬಗ್ಗೆ ಫೇಸ್ ಬುಕ್ಕಲ್ಲಿ ಚಿತ್ರದ ಅಭಿಮಾನಿಗಳು ಮಾಡಿದ ಸೌಂಡು ಕೂಡಾ ವಿಪರೀತವಾಗಿತ್ತು.

 ಈಗ ಈ ಚಿತ್ರಸೌಂಡು ಮಾಡುತ್ತಿರುವುದು ಬೇರೆಯೇ ಕಾರಣಕ್ಕೆ. ಚಿತ್ರದ ನಿರ್ಮಾಪಕ ಸುನಿ ಮೊದಲಬಾರಿಗೆ ಈ ಪಿಕ್ಚರ್ ನಿಂದ ತನಗೆ ನಷ್ಟ ಆಯಿತು ಅಂದಿದ್ದಾರೆ, ಅದಕ್ಕೆ ಕಾರಣ ನಿರ್ದೇಶಕ ರಕ್ಷಿತ್ ಶೆಟ್ಟಿಯವರ ದುಂದುವೆಚ್ಚ ಎಂಬ ಆರೋಪವನ್ನೂ ಮಾಡಿದ್ದಾರೆ.  ಸುನಿಯ ಹೇಳಿಕೆಗೆ ಮಾರನೇ ದಿನವೇ ರಕ್ಷಿತ್ ಪ್ರತಿಕ್ರಿಯೆ ನೀಡಿ ಅಷ್ಟೊಂದು ಬಜೆಟ್ ಆಗಿಯೇ ಇಲ್ಲ, ಅಷ್ಟೊಂದು ಲಾಸ್ ಕೂಡಾ ಆಗಿಲ್ಲ ಎಂದಿದ್ದಾರೆ. ಇಬ್ಬರ ಸೌಂಡು ಕೂಡಾ ಜೋರಾಗಿಯೇ ಇದೆ.ಸೋತವರು ಕೂಡಾ ಸೌಂಡು ಮಾಡುವುದಕ್ಕೆ ಚಿತ್ರರಂಗದಲ್ಲಷ್ಟೇ ಸಾಧ್ಯ.

ನಾನು ಈ ಸೌಂಡು ಪದವನ್ನು ಪದೇಪದೇ ಬಳಸುವುದರಿಂದ ಈ ಅಂಕಣ ಓದುವವರಿಗೆ ಕಿರಿಕಿರಿ ಆಗಬಹುದು ಅನ್ನುವುದು ನನಗೂ ಗೊತ್ತಿದೆ. ಆದರೆ ವಿಧಿಯಿಲ್ಲ. ಯಾಕೆಂದರೆ ಸೌಂಡು ಅನ್ನುವುದು ಈಗಿನ ಪತ್ರಿಕೋದ್ಯಮ ಮತ್ತು ಚಿತ್ರೋದ್ಯಮದ ಫೇವರಿಟ್ ಪದ. ಇದು ಎಂಥಾ ಪರಿ ಸೌಂಡು ಮಾಡುತ್ತಿದೆ ಅಂದರೆ ಈ ಪದವನ್ನು ತಮ್ಮ ಕತೆಗಳಲ್ಲಿ ವ್ಯಂಗ್ಯ ಮತ್ತು ಕುಚೋದ್ಯಕ್ಕಾಗಿ ಬಳಸುವ ಕುಂವೀ ಮತ್ತು ತಮ್ಮ ಹಾಡುಗಳಲ್ಲಿ ತಮಾಷೆಗಾಗಿ ಬಳಸುವ ಯೋಗರಾಜ ಭಟ್ಟರಿಗೂ ಕಿರಿಕಿರಿ ಆಗುತ್ತಿರಬಹುದು. ಸೌಂಡಿಗೂ ಒಂದು ಕಾಪಿರೈಟ್ ಇದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.

rakshith shetty in ulidavaru kandanthe

ಈಗ ‘ಉಳಿದವರು ಕಂಡಂತೆ’ಯಸೌಂಡಿನ ವಿಚಾರಕ್ಕೆ ಮತ್ತೆ ಬರೋಣ. ಸುನಿ ಮತ್ತು ರಕ್ಷಿತ್ ಇಬ್ಬರೂ ಈಗ ಸೌಂಡು ಮಾಡುತ್ತಿರುವುದಕ್ಕೆ ಚಿತ್ರದ ಸೌಂಡೇ (Sound) ಕಾರಣ ಅನ್ನುವುದು ವಿಪರ್ಯಾಸ. ಚಿತ್ರದ ಸೌಂಡ್ ಇಫೆಕ್ಟಿಗೆ ಅಂತ ರಕ್ಷಿತ್ ಶೆಟ್ಟಿ 60 ಲಕ್ಷ ಖರ್ಚು ಮಾಡಿದರು ಮತ್ತು ಚಿತ್ರ ಇಂಥಾ ಪರಿ ನಷ್ಟ ಅನುಭವಿಸುವುದಕ್ಕೆ ಅದೂ ಒಂದು ಕಾರಣ ಅಂದಿದ್ದಾರೆ ಸುನಿ.  ರಕ್ಷಿತ್ ಶೆಟ್ಟಿ ಈ ಮಾತಿಗೆ ಜಪ್ಪಯ್ಯಾ ಅಂದರೂ ಒಪ್ಪುತ್ತಿಲ್ಲ, ಸೌಂಡಿಗೆ ಖರ್ಚಾಗಿದ್ದು ಕೇವಲ 15 ಲಕ್ಷ, ಸುನಿ ಸುಳ್ಳು ಹೇಳುತ್ತಿದ್ದಾರೆ ಅನ್ನುವುದು ಅವರ ವಾದ. ಚಿತ್ರದ ಒಟ್ಟಾರೆ ಬಜೆಟ್ಟು ರಕ್ಷಿತ್ ಪ್ರಕಾರ ಎರಡೂ ಕಾಲು ಕೋಟಿ.ಸುನಿ ಪ್ರಕಾರ ಮೂರು ಕೋಟಿ, ಎಂಬತ್ತೈದು ಲಕ್ಷ. ಎರಡು ಕೋಟಿಯಲ್ಲಿ ಮುಗಿಸ್ತೀನಿ ಅಂತ ಹೇಳಿ ಮೂರು ಕೋಟಿ ಎಂಭತ್ತು ಲಕ್ಷ ಖರ್ಚು ಮಾಡಿದ್ದು ತಪ್ಪು ಎಂದು ಸುನಿ ಕೊರಗುತ್ತಾರೆ. ಈಗ ನೋಡಿದರೆ ಅವರು ಚಿತ್ರವನ್ನಷ್ಟೇ ಅಲ್ಲ, ನಮ್ಮನ್ನೂ ಮುಗಿಸಿದರು ಅಂತ ಅವರ ಪಾರ್ಟ್ನರ್ ಗಳಗಳ ಅಳುತ್ತಿದ್ದಾರೆ. ಇದು ಶುದ್ಧ ಸುಳ್ಳು ಯುವರ್ ಆನರ್ ಅಂತ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಕರೆಕ್ಷನ್ ಹಾಕುತ್ತಾರೆ. ಬಜೆಟ್ ಎರಡೂ ಕಾಲು ಕೋಟಿ ಮೀರಿಯೇ ಇಲ್ಲ. ಅದರ ಜೊತೆಗೆ ನನ್ನ ಮುಂದಿನ ಚಿತ್ರಕ್ಕೆ ಅಂತ ಸಿಕ್ಕಿದ ಅಡ್ವಾನ್ಸ್ ಹತ್ತು ಲಕ್ಷವನ್ನೂ ಸುನಿಗೇ ಕೊಟ್ಟಿದ್ದೇನೆ ಅಂತ ಅವರು ಲೆಕ್ಕ ಕೊಟ್ಟಿದ್ದಾರೆ. ಒಂದು ಮುಕ್ಕಾಲು ಕೋಟಿಗೆ ಆಫರ್ ಇದ್ದಾಗಲೂ ಟೀವಿ ರೈಟ್ಸ್ ಕೊಡದೇ ಇದ್ದಿದ್ದು ಸುನಿ ತಪ್ಪು. ಅವರ ಪ್ರಕಾರ ಏನೇ ಆದರೂ ಈ ಚಿತ್ರದಲ್ಲಿ ಲಾಸ್ ಆಗುವುದಿಲ್ಲ. ಮಲ್ಟಿಪ್ಲೆಕ್ಸಲ್ಲಿ ಈಗಲೂ ಚಿತ್ರ ಹೌಸ್ ಫುಲ್ ಆಗುತ್ತಿದೆ. ಅಂದರೆ ಚಿತ್ರಕ್ಕೆ ರೀಸೌಂಡ್ ವಾಲ್ಯೂ ಇದೆ ಅಂತಾಯ್ತು.

ನಿರ್ದೇಶಕನೊಬ್ಬ ನಿರ್ಮಾಪಕನ ಕುರ್ಚಿಯಲ್ಲಿ ಕುಳಿತಾಗ ನಿರ್ದೇಶಕನ ಥರ ಯೋಚಿಸಬೇಕು ಮತ್ತು ನಿರ್ಮಾಪಕನಾದವನು ನಿರ್ದೇಶಕನ ಕುರ್ಚಿಯಲ್ಲಿ ಕುಳಿತಾಗ ನಿರ್ಮಾಪಕನ ಥರ ಯೋಚಿಸಬೇಕು. ಆಗ ಬಜೆಟ್ಟು ಮತ್ತು ಸೃಜನಶೀಲತೆಗಳು ಪರಸ್ಪರ ಡಿಕ್ಕಿಹೊಡೆಯುವುದು ತಪ್ಪುತ್ತದೆ. ಸುನಿ ಈ ಕೆಲಸ ಮಾಡಲಿಲ್ಲ ಅನಿಸುತ್ತದೆ. ಒಂದೊಳ್ಳೇ ಪ್ರಯತ್ನ ಸೋತಾಗ ಎಲ್ಲರೂ ಒಟ್ಟಾಗಿ ಅದರ ಜವಾಬ್ದಾರಿ ಹೊರಬೇಕು. ಆರಂಭದಲ್ಲಿದ್ದ ನಂಬಿಕೆಯನ್ನು ಕೊನೆ ತನಕ ಉಳಿಸಿಕೊಳ್ಳಬೇಕು.  ನಿರ್ದೇಶಕನೊಬ್ಬ ನಿರ್ಮಾಪಕನಾಗುವುದು ಮತ್ತು ತನ್ನ ಸ್ನೇಹಿತರಿಗೋ, ಶಿಷ್ಯಂದಿರಿಗೋ ಆ ಪ್ರಾಜೆಕ್ಟನ್ನು ವಹಿಸಿಕೊಡುವುದು ಕನ್ನಡ ಚಿತ್ರರಂಗದಲ್ಲಿ ಕಾಣುತ್ತಿರುವ ಹೊಸ ಟ್ರೆಂಡು. ತೆಲುಗಲ್ಲಿ ಮತ್ತು ಹಿಂದಿಯಲ್ಲಿ ರಾಮ್ ಗೋಪಾಲ್ ವರ್ಮಾ ಥರದವರು ಇಂಥಾ ಪ್ರಯೋಗ ಮಾಡಿದ್ದಾರೆ ಮತ್ತು ಯಶಸ್ಸನ್ನೂ ಕಂಡಿದ್ದಾರೆ. ಕನ್ನಡದಲ್ಲಿ ಯೋಗರಾಜ ಭಟ್ಟರು ಈ ಪ್ರಯತ್ನ ಮಾಡುತ್ತಿದ್ದಾರೆ. ಇಂಥಾ ಪ್ರಯೋಗಗಳು ಯಶಸ್ವಿಯಾಗಬೇಕಾದರೆ ನಂಬಿಕೆ ಮುಖ್ಯ. ಸುನಿ ಈ ಹಿಂದೆ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ಅನ್ನುವ ಚಿತ್ರ ನಿರ್ದೇಶಿಸಿದವರು, ರಕ್ಷಿತ್ ಶೆಟ್ಟಿಯೇ ಆ ಚಿತ್ರಕ್ಕೆ ನಾಯಕ. ಹಾಗಾಗಿ ಅವರಿಬ್ಬರ ಮಧ್ಯೆ ಒಂದು ಪ್ರೊಫೆಷನಲ್ ಬಾಂಧವ್ಯ ಮತ್ತು ನಂಬಿಕೆ ಇದ್ದಿರಲೇಬೇಕು. ಇಲ್ಲದೇ ಇದ್ದಲ್ಲಿ ರಕ್ಷಿತ್ ಶೆಟ್ಟಿ ಕೈಗೆ ‘ಉಳಿದವರು ಕಂಡಂತೆ’ಚಿತ್ರವನ್ನು ಸುನಿ ಕೊಡುತ್ತಿರಲಿಲ್ಲ. ಈಗ ಚಿತ್ರ ಕಮರ್ಷಿಯಲ್ಲಾಗಿ ಸೋತುಹೋಯಿತು ಅಂದಾಕ್ಷಣ ಇವೆಲ್ಲದಕ್ಕೂ ರಕ್ಷಿತ್ ಕಾರಣ ಎಂದು ಅವರು ಗೊಣಗುತ್ತಿರುವುದು ಅರ್ಥಹೀನ ಪ್ರಲಾಪದಂತೆ ಕಾಣಿಸುತ್ತದೆ. ಚಿತ್ರ ನೋಡಿದವರಿಗೂ ಮೂರು ಮುಕ್ಕಾಲು ಕೋಟಿ ಖರ್ಚಾಗಿದೆ ಅಂತ ಅನಿಸುತ್ತಿಲ್ಲ.

yogaraj bhat, suri image

ಒಟ್ಟಲ್ಲಿ ಒಂದು ಸೋಲು ಇಬ್ಬರು ಪ್ರತಿಭಾನ್ವಿತರ ನಡುವಿನ ಗೆಳೆತನವನ್ನು ಕೊಂದುಹಾಕಿದ್ದಂತೂ ನಿಜ. ಸುನಿ ಕೊಂಚ ಪ್ರಬುದ್ಧವಾಗಿ ವರ್ತಿಸುತ್ತಿದ್ದರೆ ಇದನ್ನು ತಪ್ಪಿಸಬಹುದಾಗಿತ್ತು. ದುಡ್ಡು ಕಳಕೊಂಡವರ ಕಷ್ಟವನ್ನು ಚಿತ್ರರಂಗ ನೋಡುತ್ತಿರುವುದು ಇವತ್ತು ನಿನ್ನೆಯ ಕತೆಯಲ್ಲ. ಅವರು ಮತ್ತೆ ಇಲ್ಲೇ ಪಡೆದುಕೊಂಡ ಇತಿಹಾಸವೂ ನಮ್ಮೆದೆರುಗಿದೆ. ಆದರೆ ನಂಬಿಕೆ ಮತ್ತು ವಿಶ್ವಾಸವನ್ನು ಕಳಕೊಂಡರೆ ಅದನ್ನು ಮರಳಿ ಪಡೆಯುವುದು ಕಷ್ಟ.    ‘ಇಂತಿ ನಿನ್ನ ಪ್ರೀತಿಯ’ಚಿತ್ರ ಸೋತಾಗ ಅದರ ನಿರ್ಮಾಪಕರಲ್ಲಿ ಒಬ್ಬರಾದ ಯೋಗರಾಜ ಭಟ್ಟರು, ಸೂರಿಯ ಕಡೆ ಬೆರಳು ತೋರಿಸಬಹುದಾಗಿತ್ತು. ಆದರೆ ಅವರು ಚಿತ್ರ ಚೆನ್ನಾಗಿದೆ ಎಂದೇ ಸಮರ್ಥಿಸಿಕೊಂಡರು. ಆ ಕಾರಣಕ್ಕೇ ಆ ಗೆಳೆತನ ಉಳಿಯಿತು. ರಕ್ಷಿತ್ – ಸುನಿ ಜೋಡಿಗೆ ಭಟ್ಟರು ಮಾದರಿಯಾಗಿದ್ದರೆ ಈ ಇಬ್ಬರು ಯುವಕರಿಂದ ಇನ್ನಷ್ಟು ಒಳ್ಳೆಯ ಚಿತ್ರಗಳು ಹೊರಬರುತ್ತಿದ್ದವೇನೋ. ಆದರೆ ಸೌಂಡು ಮಾಡುವ ಚಟ ಒಮ್ಮೆ ಅಂಟಿಕೊಂಡರೆ ಅದರಿಂದ ಹೊರಗೆ ಬರುವುದು ಕಷ್ಟ ಕಣ್ರೀ.

‘ಉಳಿದವರು ಕಂಡಂತೆ’ಚಿತ್ರದ ಟೈಟಲ್ಲು ಕನ್ನಡದ ಮಟ್ಟಿಗೆ ಹೊಸದಾಗಿದೆ. ಎಷ್ಟು ಹೊಸದಾಗಿದೆ ಅಂದರೆ ಇದನ್ನು ಹೇಗೆ ಬೇಕಾದರೂ ಪನ್ ಮಾಡಬಹುದು ಎಂದು ಪತ್ರಕರ್ತರಲ್ಲಿ ಉಮೇದು ಮೂಡಿಸುವಷ್ಟು. ಅಂಥಾ ಕೆಲವು ಪನ್ ಪ್ರಯೋಗಗಳನ್ನು ನಿಮಗೋಸ್ಕರ ಇಲ್ಲಿ ನೀಡುತ್ತಿದ್ದೇನೆ.ಇದು ಫೇಸ್ ಬುಕ್ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ ಅಭಿಪ್ರಾಯಗಳು.

ಉಳಿದವರು ಕೊಂದಂತೆ– ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಅದ್ಭುತ ಪ್ರಯೋಗ. ಲೂಸಿಯಾ, ಜಟ್ಟ, ದೇವ್ರೇ ಚಿತ್ರಗಳ ಮಾದರಿಯಲ್ಲೇ ಪ್ರೇಕ್ಷಕನಿಗೆ ಹೊಸದನ್ನು ಕಟ್ಟಿಕೊಡುವ ಪ್ರಯತ್ನ. ಆದರೆ ವಿಮರ್ಶಕರು ಚಿತ್ರವನ್ನು ಕೊಂದು ಹಾಕಿದರು. ಚಿತ್ರದ ಕತೆಯ ಮೂಲ, ಪಾತ್ರಗಳ ಮೂಲವನ್ನು ಕಂಡುಹಿಡಿಯುವ ಉತ್ಸಾಹದಲ್ಲಿ ಪತ್ತೇದಾರರಂತೆ ವರ್ತಿಸಿದರು.  ಎಂಬತ್ತರ ದಶಕದಲ್ಲಿ ಕಲಾತ್ಮಕ ಚಿತ್ರಗಳ ಅಲೆಯನ್ನು ಹುಟ್ಟುಹಾಕಿದ ನಿರ್ದೇಶಕರಿಗೆ ನೀಡಿದ ಪ್ರೋತ್ಸಾಹವನ್ನು ಈ ಚಿತ್ರಕ್ಕೂ ಮಾಧ್ಯಮಗಳು ನೀಡಬಹುದಾಗಿತ್ತು.  ಹಾಗಿದ್ದೂ ಅವರು ಈ ಚಿತ್ರವನ್ನು ಶೂಟ್ ಮಾಡಿದ್ದೇಕೆ?ಉತ್ತರವನ್ನು ಗೂಗಲ್ ನಲ್ಲಿ ಹುಡುಕಿ

ಅಳಿದವರು ಕಂಡಂತೆ-  ಮಧ್ಯಂತರ ತನಕ ಚಿತ್ರ ನೋಡಿದೆವು, ಆಮೇಲೆ ಏನಾಯ್ತು ಗೊತ್ತಾಗಿಲ್ಲ. ಚೆನ್ನಾಗಿದೆ ಅಂತ ಫೇಸ್ ಬುಕ್ ಸದಸ್ಯರು ಹೇಳುತ್ತಿದ್ದರೆ, ಚೆನ್ನಾಗಿಲ್ಲ ಅಂತ ಪತ್ರಕರ್ತರು ಹೇಳುತ್ತಿದ್ದಾರೆ. ಯಾರು ನಿಜ ಹೇಳುತ್ತಿದ್ದಾರೆ ಅನ್ನೋದು ಗೊತ್ತಾಗದೇ ನಾವು ಗೊಂದಲಕ್ಕೊಳಗಾಗಿದ್ದೇವೆ. ಸಿನಿಮಾ ನೋಡುವಾಗಲೂ ಇಷ್ಟೊಂದು ಗೊಂದಲ ಕಾಡಿರಲಿಲ್ಲ. ಇನ್ನೊಂದು ಜನ್ಮ ಅನ್ನೋದು ಇದ್ದರೆ ಖಂಡಿತಾ ಉಳಿದವರು ಕಂಡಂತೆ ಚಿತ್ರವನ್ನು ಮಧ್ಯಂತರದ ನಂತರ ನೋಡುತ್ತೇವೆ.

ಅಳಿದುಳಿದವರು ಕಂಡಂತೆ- ಅಡ್ಡಗೋಡೆಯ ಮೇಲೆ ದೀಪವಿಡುವ ವಿದ್ಯಾವಂತ ಪ್ರೇಕ್ಷಕರು ‘ನಾವೇನೂ ಈ ಚಿತ್ರವನ್ನು ಕೊಲ್ಲುವುದಿಲ್ಲ ಬಿಡಿ’ಎಂಬ ಭರವಸೆ ನೀಡಿದ್ದಾರೆ. ಅಲ್ಲಲ್ಲಿ ಐ ಮೀನ್ ಇನ್ ಪ್ಯಾಚಸ್ ಚಿತ್ರ ಚೆನ್ನಾಗಿದೆ. ಇಂಥ ಚಿತ್ರಗಳು ಇನ್ನಷ್ಟು ತಯಾರಾಗಬೇಕು, ನಾವು ನೋಡ್ತೀವೋ ಬಿಡ್ತೀವೋ ಗೊತ್ತಿಲ್ಲ. ಸದಭಿರುಚಿಯ ಪ್ರೇಕ್ಷಕರಂತೂ ನೋಡೇ ನೋಡ್ತಾರೆ.

ಇದ್ದದ್ದು ಇದ್ದಂತೆ– ರಕ್ಷಿತ್ ಶೆಟ್ಟಿ ಅವರು ನಮ್ಮ ಕಾಲಕ್ಕಿಂತ ಬಹಳ ಮುಂದಿದ್ದಾರೆ, ಥೇಟು ದಿನೇಶ್ ಬಾಬು ಥರ. ಈ ಚಿತ್ರವನ್ನು ಇನ್ನೈದು ವರ್ಷ ಬಿಟ್ಟು ನೋಡಿದರೆ ಎಲ್ಲರಿಗೂ ಇಷ್ಟ ಆಗುವ ಸಾಧ್ಯತೆ ಇದೆ. ಈಗ ಇದು ನವ್ಯಕಾವ್ಯ ಇದ್ದಂತೆ. ಅರ್ಥವಾಗುವುದಿಲ್ಲ, ಆದರೂ ಇಷ್ಟವಾಗುತ್ತದೆ. ಕನ್ನಡ ಪ್ರೇಕ್ಷಕರನ್ನು ರಕ್ಷಿತ್ ಓವರ್ ಎಸ್ಟಿಮೇಟ್ ಮಾಡಿದ್ದಾರೆ ಅನಿಸುತ್ತದೆ.

ಕಾಣದೇ ಇರುವವರು ಕಂಡಂತೆ– ಪಿಕ್ಚರ್ ಚೆನ್ನಾಗಿದೆಯಂತೆ. ಅಂದಹಾಗೆ ಇದು ಟೀವಿಯಲ್ಲಿ ಯಾವಾಗ ಬರುತ್ತೆ?

Also See

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery