` ಚಿತ್ರಲೋಕ ಇಂಪ್ಯಾಕ್ಟ್ : ಬುಕ್ ಮೈ ಶೋಗೆ BIFFIes Festನಿಂದ ಅರ್ಧ ಗೇಟ್‍ಪಾಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Manivannan Image
Manivannan

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿರುವುದು ಗೊತ್ತಿದೆ ತಾನೇ. ಈ ಚಿತ್ರೋತ್ಸವ ಆಯೋಜಿಸಿರುವುದು ಕರ್ನಾಟಕ ಚಲನಚಿತ್ರ ಅಕಾಡೆಮಿ. ಸಹಭಾಗಿತ್ವ ವಹಿಸಿರುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದ ಇತರ ಸಂಘಟನೆಗಳು. ಆದರೆ, ಈ ಚಿತ್ರೋತ್ಸವದಲ್ಲಿ ಆಯೋಜಕರನ್ನೇ ಹೊರಗಿಟ್ಟು, ಬುಕ್ ಮೈ ಶೋಗೆ ಇಡೀ ಚಿತ್ರೋತ್ಸವದ ಉಸ್ತುವಾರಿ ವಹಿಸಲಾಗಿತ್ತು.

ನೀವು ಚಿತ್ರೋತ್ಸವಕ್ಕೆ ಹೋಗಿ ಸಿನಿಮಾ ನೋಡಬೇಕಾ..? ಪಾಸ್ ಬೇಕಾ..? ಟಿಕೆಟ್ ಬೇಕಾ..? ಎಲ್ಲದಕ್ಕೂ ಬುಕ್ ಮೈ ಶೋ ಪರ್ಮಿಷನ್ ತೆಗೆದುಕೊಳ್ಳುವಂತಾ ಪರಿಸ್ಥಿತಿ ಸೃಷ್ಟಿಯಾಗಿತ್ತು. ಮೊದಲೇ ಬುಕ್ ಮೈ ಶೋ ಕನ್ನಡ ಚಿತ್ರಗಳ ವಿರುದ್ಧ ಮಲತಾಯಿ ಧೋರಣೆ ಅನುಸರಿಸ್ತಾ ಇದೆ ಅನ್ನೋ ಆರೋಪ ಹೊತ್ತಿರೋ ಸಂಸ್ಥೆ. ಇನ್ನು ಬುಕ್ ಮೈ ಶೋನಲ್ಲಿ ಕನ್ನಡ ಸಿನಿಮಾ ರೇಟಿಂಗ್ಗೆ ಗೋಲ್ ಮಾಲ್ ಮಾಡುತ್ತಿದೆ ಎಂಬ ಆರೋಪವೂ ಇದೆ. ಈ ಕುರಿತು ಫಿಲಂ ಚೇಂಬರ್ ಹಲವು ಬಾರಿ ನೋಟಿಸ್ ಕೊಟ್ಟಿದ್ದರೂ, ಹಲವು ನಿರ್ಮಾಪಕರು ದೂರು ನೀಡಿದ್ದರೂ.. ಅದು ಕ್ಯಾರೇ ಎನ್ನುತ್ತಿಲ್ಲ. ಅಂತಾದ್ದರಲ್ಲಿ ಆ ಸಂಸ್ಥೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹೊಣೆ ನೀಡಿದ್ದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದರು. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಅಸಹಾಯಕತೆ ವ್ಯಕ್ತಪಡಿಸಿದ್ದರು.

ನಾನು ಅಕಾಡೆಮಿ ಅಧ್ಯಕ್ಷನಾಗಿ ನೇಮಕವಾಗುವ ಮುನ್ನ ನಡೆದಿರುವ ಒಪ್ಪಂದ ಇದು. ಹೀಗಾಗಿ ನಾನು ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ನಿರ್ಮಾಪಕ ಸಂಘದ ಅಧ್ಯಕ್ಷ ರಾಮಕೃಷ್ಣ ಕೂಡಾ ಇದೊಂದು ಕೆಟ್ಟ ಬೆಳವಣಿಗೆ ಎಂದು ಅಸಮಾಧಾನ ಹೊರಹಾಕಿದ್ದರು. ಚಿತ್ರಲೋಕ ಇದರ ಬಗ್ಗೆ ವರದಿ ಮಾಡಿತ್ತು.

ಇಷ್ಟೆಲ್ಲ ಆದ ನಂತರ ವಾರ್ತಾ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಕರಿಗೆ ವರದಿ ನೀಡಲು ಸೂಚಿಸಿದ್ದಾರೆ. ಅಕಾಡೆಮಿ ಅಧ್ಯಕ್ಷರು ವರದಿ ಕೊಟ್ಟ 24 ಗಂಟೆಯೊಳಗೆ ಇದನ್ನು ರದ್ದು ಮಾಡಬಹುದು ಎಂದಿದ್ದಾರೆ.

ಈಗಾಗಲೇ ಪ್ರಕ್ರಿಯೆ ಒಂದು ಹಂತಕ್ಕೆ ಮುಗಿದಿರುವುದರಿಂದ ಎಲ್ಲವನ್ನೂ ರದ್ದು ಮಾಡಲು ಸಾಧ್ಯವಿಲ್ಲ. ಹೀಗಾಗಿ ಬುಕ್ ಮೈ ಶೋನಲ್ಲಿ ಈಗಾಗಲೇ ಬುಕ್ ಆಗಿರುವ, ಪೇಮೆಂಟ್ ಟಿಕೆಟ್‍ಗಳನ್ನು ರದ್ದು ಮಾಡುತ್ತಿಲ್ಲ. ಅದನ್ನು ಬುಕ್ ಮೈ ಶೋ ಮೂಲಕವೇ ಮಾಡಿಕೊಳ್ಳಬೇಕು.

ಉಳಿದಂತೆ ಅಕಾಡೆಮಿ ಮೂಲಕ ಪಡೆಯಬಹುದಾದ ಪಾಸ್‍ಗಳನ್ನು ಅಕಾಡೆಮಿಯೇ ನಿರ್ವಹಿಸಲಿದೆ. ಒಟ್ಟಿನಲ್ಲಿ ಚಿತ್ರಲೋಕ ವರದಿಯ ನಂತರ  ಏಕಸ್ವಾಮ್ಯ ಸಾಧಿಸಲು ಹೊರಟಿದ್ದ ಬುಕ್ ಮೈ ಶೋ ಆಟಕ್ಕೆ ಅರ್ಧ ಬ್ರೇಕ್ ಬಿದ್ದಿದೆ.