` Uma Column 49 - ಮಾರಿಬಿಡಿ! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mungarina minchu image
rajendra singh babu, ramesh aravind

‘ರಮೇಶ್ ಸೇಲೇಬಲ್ ನಟ ಅಲ್ಲ’. ಈ ಸಂಗತಿಯನ್ನು ರಾಜೇಂದ್ರಸಿಂಗ್ ಬಾಬು ಪತ್ತೆ ಮಾಡಿದ್ದಾರೆ. ಹಾಗಿದ್ದರೆ ರಮೇಶ್ ಅವರನ್ನೇನು ಮಾಡುವುದು? ಓಎಲ್ಎಕ್ಸ್ ನಲ್ಲಿ ಮಾರಿಬಿಡಿ!  ರಾಜೇಂದ್ರ ಸಿಂಗ್ ಬಾಬು ಕೂಡಾ ಸೇಲೇಬಲ್ ಡೈರೆಕ್ಟರ್ ಅಲ್ಲ. ಅವರನ್ನೂ ಮಾರಿಬಿಡಿ. ಹಾಗಂತ ಜನ ಆಡಿಕೊಳ್ಳುತ್ತಿದ್ದಾರೆ.

ಕಾಲ ಬದಲಾಗುವ ತಮಾಷೆ ನೋಡಿ. ಮೊನ್ನೆಮೊನ್ನೆಯ ತನಕ ಎಲ್ಲಾ ಮಾಧ್ಯಮಗಳಲ್ಲಿ ನಮ್ಮನ್ನು ಆವರಿಸಿರುವ  ಕೊಳ್ಳುಬಾಕ ಸಂಸ್ಕೃತಿಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಮಾಲ್ ಗಳು ದಾಳಿಯಿಟ್ಟ ನಂತರ ಜನರು ತಮಗೆ ಬೇಕಾದ್ದು, ಬೇಡವಾದದ್ದನ್ನೆಲ್ಲಾ ಖರೀದಿಸುವ ಹುಚ್ಚಿಗೆ ಅಡಿಕ್ಟ್ ಆಗಿದ್ದಾರೆ ಎಂದು ಪ್ರಜ್ಞಾವಂತರು ಬೇಜಾರು ಮಾಡಿಕೊಂಡಿದ್ದರು.   ಡಿಸ್ಕೌಂಟ್ ಸೇಲ್ ಗಳು, ಗಿಫ್ಟ್ ಹ್ಯಾಂಪರುಗಳು, ಆಕರ್ಷಕ ಬಹುಮಾನದ ಸ್ಕೀಮುಗಳು, ಇನ್ ಸ್ಟಾಲ್ ಮೆಂಟ್ ಸೌಲಭ್ಯಗಳು ಇವೆಲ್ಲವೂ ಸೇರಿ ಜನರನ್ನು ಮಾರುಕಟ್ಟೆಯ ಗುಲಾಮರನ್ನಾಗಿಸುತ್ತಿದೆ ಅನ್ನುವ ಬಗ್ಗೆ ವಿಚಾರಸಂಕಿರಣಗಳು ನಡೆದವು.  ಮಧ್ಯಮವರ್ಗದ ಮನೆಗಳಲ್ಲೂ ಎರಡೆರಡು ಕುಕ್ಕರು, ವಾಹನಗಳು, ಟೀವಿಗಳು ತುಂಬಿಕೊಂಡವು. ಮನುಷ್ಯರಿಗೇ ಓಡಾಡುವುದಕ್ಕೆ ಜಾಗ ಇಲ್ಲದಂತಾಯಿತು. ಈಗ ಖರೀದಿಸಿದ್ದೆಲ್ಲವೂ ಉಪಯೋಗಕ್ಕೆ ಬಾರದೇ ವೇಸ್ಟ್ ಅನಿಸುವ ಹೊತ್ತಲ್ಲಿ ಅವುಗಳನ್ನು ಮಾರಿಬಿಡುವ ಸಂಸ್ಕೃತಿ ಶುರುವಾಗಿದೆ, ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ದಾಸರ ಪದದಂತೆ. ಹೋಟೆಲ್ಲಲ್ಲಿ ಎರಡು ಇಡ್ಲಿಗೆ ಆರ್ಡರ್ ಮಾಡಿ ಒಂದಕ್ಕೇ ಹೊಟ್ಟೆತುಂಬಿದಾಗ ಇನ್ನೊಂದನ್ನು ಓಎಲ್ಎಕ್ಸ್ ನಲ್ಲಿ ಮಾರಬಹುದು ಅನ್ನುವ ಜೋಕು ಕೂಡಾ ಹುಟ್ಟಿಕೊಂಡಿದೆ. ಅವೆಲ್ಲವೂ ನಿರ್ಜೀವ ವಸ್ತುಗಳು, ಮಾರುವುದು ಕಷ್ಟವೇನಲ್ಲ. ಆದರೆ ಮನುಷ್ಯರನ್ನೂ ಕೂಡಾ ಮಾರಾಟದ ಸರಕುಗಳಂತೆ ನೋಡುವ ಕಲ್ಪನೆ ಕೊಂಚ ಅತಿರೇಕದ್ದಾಯಿತೇನೋ?

ಅಷ್ಟಕ್ಕೂ ಸೇಲೇಬಲ್ ಅನ್ನುವ ಪದದ ಅರ್ಥವೇನು? ಮಾರುಕಟ್ಟೆಯಲ್ಲಿ ಯಾವ ನಟನ ಚಿತ್ರಗಳಿಗೆ ಬೇಡಿಕೆ ಇರುತ್ತದೆಯೋ ಆತ ಸೇಲೇಬಲ್ ನಟನಾಗುತ್ತಾನೆ. ಕನ್ನಡದ ಸಂದರ್ಭದಲ್ಲಿ ಈಗ ಸುದೀಪ್, ಪುನೀತ್, ದರ್ಶನ್, ಯಶ್, ಇತ್ತೀಚೆಗೆ ಶರಣ್, ಇವರೆಲ್ಲಾ ಸೇಲೇಬಲ್ ಪಟ್ಟಿಯಲ್ಲಿದ್ದಾರೆ. ಮನುಷ್ಯರನ್ನು ಮಾರಾಟ ಮಾಡುವ ಬಿಸಿನೆಸ್ಸನ್ನು  ಶುರು ಮಾಡಿದ್ದು ಐಪಿಎಲ್ ಕ್ರಿಕೆಟ್ ಪಂದ್ಯಾವಳಿ. ಆಗ ಮೊದಲ ಬಾರಿಗೆ ಆಟಗಾರರಿಗೆ ತಮ್ಮ ಬೆಲೆಯೇನು ಅನ್ನುವುದು ಅರ್ಥವಾಯಿತು. ಆದರೆ ಅದನ್ನು ನಿರ್ಧರಿಸುವುದಕ್ಕೆ ಕುಳಿತವರು ಬೆರಳೆಣಿಕೆಯಷ್ಟು ಮಂದಿ. ಹಾಗಾಗಿ ಸೇಲೇಬಲ್ ಅನಿಸಿಕೊಂಡವರು ಮೈದಾನದಲ್ಲಿ ಶೂನ್ಯ ಸಂಪಾದನೆ ಮಾಡಿ, ಅವರನ್ನು  ಖರೀದಿ ಮಾಡಿದವರ ಮಂಡೆಬಿಸಿ ಮಾಡಿದರು.

ಸಿನಿಮಾದಲ್ಲೂ ಆಗಾಗ ಹಾಗಾಗುತ್ತದೆ. ಸೇಲೇಬಲ್ ಅನಿಸಿಕೊಂಡ ಪುನೀತ್ ಅವರ ಹಿಂದಿನ ಮೂರು ಚಿತ್ರಗಳು ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ.  ಹಾಸ್ಯದ ಟ್ರಾಕ್ ಗಷ್ಟೇ ಸೀಮಿತವಾಗಿದ್ದ ಅನಿಸಿಕೊಂಡಿದ್ದ ಶರಣ್ ನಾಯಕನಾದ  ಮೂರು ಚಿತ್ರಗಳು ಸಿಕ್ಕಾಪಟ್ಟೆ ಹಿಟ್ ಆದವು. ಆದರೆ ರಮೇಶ್ ಚಿತ್ರಗಳು ಹಿಟ್ ಆಗದೇ ಬಹಳ ಕಾಲವಾಗಿದ್ದರಿಂದ ಅವರನ್ನು ನಾನ್ ಸೇಲೇಬಲ್ ಕೆಟಗರಿಗೆ ಸೇರಿಸುವುದಕ್ಕೆ ಬಾಬು ನಿರ್ಧಾರ ಮಾಡಿದ್ದಾರೆ ಅನಿಸುತ್ತದೆ. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ ಬಾಬು ಮಾತಲ್ಲಿ ಸತ್ಯಾಂಶವಿಲ್ಲದೇ ಇಲ್ಲ. ಅದು ರಮೇಶ್ ಅವರಿಗೂ ಗೊತ್ತಿದೆ.  ಆದರೆ ಟೀವಿ ಚಾನೆಲ್ಲಲ್ಲಿ ಕುಳಿತು ಒಬ್ಬ ನಟನ ಬಗ್ಗೆ ಇಂಥ ಮಾತನ್ನಾಡುವುದು ಕೆಲವರಿಗೆ ಕ್ರೌರ್ಯ ಅನಿಸಬಹುದು. ರಮೇಶ್ ನಿನ್ನೆಮೊನ್ನೆ ಬಂದ ನಟನೇನಲ್ಲ, ಒಂದು ಕಾಲದಲ್ಲಿ ಮಧ್ಯಮವರ್ಗದ ಪಾಲಿಗೆ ಡಾರ್ಲಿಂಗ್ ಆಗಿದ್ದವರು. ರಮೇಶ್ ಸಿನಿಮಾ ಅಂದಮೇಲೆ ಅಲ್ಲಿ ಯಾವುದೇ ಮುಜುಗರ ಸನ್ನಿವೇಶಗಳಾಗಲಿ, ಸಂಭಾಷಣೆಯಾಗಲಿ ಇರುವುದಿಲ್ಲ ಎಂದು ಯಾರು ಬೇಕಾದರೂ ಬೆಟ್ ಕಟ್ಟಬಹುದಾಗಿತ್ತು.  ಸಿಂಗ್ ಬಾಬು ಕೂಡಾ ರಮೇಶ್ ಚಿತ್ರಗಳಿಂದ ನಿರ್ದೇಶಕ ಮತ್ತು ನಿರ್ಮಾಪಕನಾಗಿಯೂ ಯಶಸ್ಸು ಕಂಡಿದ್ದರು.  ಕಾಲಕಳೆದಂತೆ ರಮೇಶ್ ಬ್ರಾಂಡ್ ತನ್ನ ಹೊಳಪನ್ನು ಕಳೆದುಕೊಂಡಿತು. ಅವರನ್ನು ಸಂಪರ್ಕಿಸುವ ನಿರ್ಮಾಪಕರ ಸಂಖ್ಯೆಯೂ ಕ್ಷೀಣಿಸಿತು. ಹಾಗಂತ ರಮೇಶ್ ಮಿಕ್ಕವರ ಥರ ಹತಾಶರಾಗಲಿಲ್ಲ, ತಮ್ಮದೇ ಹೊಸ ಹಾದಿಯನ್ನು ಹುಡುಕಿಕೊಂಡರು. ಅವರ ಚಿತ್ರಗಳು ಓಡದೇ ಇರಬಹುದು, ಆದರೆ ಅವರು ಓಡುತ್ತಿದ್ದಾರೆ. ತನ್ನನ್ನು ಜನ ಮರೆತುಹೋದ ಮಹಾನುಭಾವರ ಪಟ್ಟಿಗೆ ಸೇರಿಸದಂತೆ ಎಚ್ಚರಿಕೆ ವಹಿಸಿದ್ದಾರೆ.

ಎಲ್ಲಾ ನಟರೂ ಎಲ್ಲ ಕಾಲಕ್ಕೂ ಸಲ್ಲುವ ಅಥವಾ ಸೇಲೇಬಲ್ ಆಗುವ ಭಾಗ್ಯವನ್ನು ಪಡೆದಿರುವುದಿಲ್ಲ. ರಾಜ್ ಕುಮಾರ್ ಅವರೊಬ್ಬರೇ ಈ ಮಾತಿಗೆ ಅಪವಾದ. ಕೆಲವರು ಒಮ್ಮೆ ಬಿದ್ದು, ಮತ್ತೆ ಎದ್ದು ನಿಲ್ಲುವುದುಂಟು, ವಿಷ್ಣುವರ್ಧನ್ ಥರ. ಹಾಗಾಗಬೇಕಾದರೆ ಒಬ್ಬ ನಟ ತನ್ನದೇ ಆದ ನಿಯತ್ತಿನ ಅಭಿಮಾನಿ ವರ್ಗವನ್ನು ಹೊಂದಿರಬೇಕಾಗುತ್ತದೆ. ತನ್ನನ್ನು ಯಾವ ಆಕಾರದ ಪಾತ್ರೆಯಲ್ಲಿಡಬಹುದು ಅನ್ನುವುದನ್ನು ಅರಿತಿರುವ ನಿರ್ದೇಶಕರ ಸಾಂಗತ್ಯವನ್ನೂ ಹೊಂದಿರಬೇಕಾಗುತ್ತದೆ. ಮಲೆಯಾಳಂನಲ್ಲಿ ಮೋಹನ್ ಲಾಲ್ ಮತ್ತು ಮಮ್ಮೂಟ್ಟಿ ಇನ್ನೂ ಚಲಾವಣೆಯಲ್ಲಿರುವುದಕ್ಕೆ ಇದೇ ಕಾರಣ.

ರಮೇಶ್ ಸೇಲೇಬಲ್ ನಟ ಆಗಿಲ್ಲದೇ ಇರುವುದು ಅಂಥಾ ದೊಡ್ಡ ಸಮಸ್ಯೆಯೇನಲ್ಲ, ಅವರು ತಮ್ಮ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಬೇರೆ ಸ್ಟಾರ್ ಗಳನ್ನು ಕರೆದುಕೊಂಡು ಬರುತ್ತಾರೆ ಅನ್ನುವುದೇ ಸಮಸ್ಯೆ ಎಂದು ತಮ್ಮ ವಾದಕ್ಕೊಂದು ತಾರ್ಕಿಕ ಸ್ಪರ್ಶ ಕೊಡುತ್ತಾರೆ ಬಾಬು. ‘ವೀಕೆಂಡ್ ವಿಥ್ ರಮೇಶ್’ಕಾರ್ಯಕ್ರಮದಲ್ಲಿ ಈಗಾಗಲೇ ಪುನೀತ್ ಬಂದು ಹೋಗಿದ್ದಾರೆ, ರವಿಚಂದ್ರನ್ ಬಂದು ಹೋಗಿದ್ದಾರೆ. ಹಾಗಾಗಿ ಜನರು ವಾರಾಂತ್ಯದಲ್ಲೂ ಚಿತ್ರಮಂದಿರಕ್ಕೆ ಹೋಗದೇ ಮನೆಯಲ್ಲೇ ಕುಳಿತು ಟೀವಿ ನೋಡುತ್ತಾರೆ. ಸೆಕೆಂಡ್ ಶೋಗಳು ಖಾಲಿ ಹೊಡೆಯುತ್ತಿವೆ. ಬಾಬು ತರ್ಕ ಹೀಗೆ ಮುಂದುವರಿಯುತ್ತದೆ. ಬಾಬು ಟೀಕೆಗೆ ರಮೇಶ್ ತಮ್ಮ ಎಂದಿನ ಶೈಲಿಯಲ್ಲಿ ತುಂಬಾ ನಯವಾಗಿ, ನಾಜೂಕಾಗಿ ಟ್ಟೀಟರ್ ನಲ್ಲಿ ಉತ್ತರಿಸಿದ್ದಾರೆ. “ನಮ್ಮ ಸಂವಿಧಾನ ಪ್ರತಿಯೊಬ್ಬನಿಗೂ ಕೆಲಸ ಮಾಡುವ ಹಕ್ಕನ್ನು ನೀಡಿದೆ. ಹಾಗಾಗಿ ನಟನೆಯ ಜೊತೆಗೆ ನಿರ್ದೇಶನ, ಟೀವಿ ನಿರೂಪಣೆ ಮೊದಲಾದ ಇತರೇ ಅಭಿವ್ಯಕ್ತಿಯ ಹಾದಿಗಳನ್ನು ಬಳಸಿಕೊಳ್ಳುವುದಕ್ಕೆ ನಾನು ಇಚ್ಚಿಸುತ್ತೇನೆ. ವೀಕೆಂಡ್ ವಿಥ್ ರಮೇಶ್ ಅನ್ನುವುದು ಒಂದು ಜೀವನ್ಮುಖಿ ಕಾರ್ಯಕ್ರಮ. ಜೀವನದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಕಾರ್ಯಕ್ರಮಕ್ಕೆ ಕರೆಸುವ ಮೂಲಕ ಬೇರೆಯವರಲ್ಲೂ ಸ್ಫೂರ್ತಿ ಮೂಡಿಸುವುದು ಇದರ ಉದ್ದೇಶ”.

ಇಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಬೆಳೆಯುವುದಕ್ಕೆ ಹೋರಾಡುತ್ತಾರೆ, ತಪ್ಪೇನಲ್ಲ. ಆದರೆ ಅದರಿಂದ ಇಡೀ ಉದ್ಯಮಕ್ಕೆ ಕೊಡಲಿಯೇಟು ಬೀಳುತ್ತದೆಯೇ ಎಂದು ಯೋಚಿಸುವುದಿಲ್ಲ, ಅದು ಸಮಸ್ಯೆ. ಕನ್ನಡ ಸಿನಿಮಾಗಳ ಯಶಸ್ಸಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತಿದ್ದ ಹಾಗೆ ನಿರ್ಮಾಪಕರ ಕಣ್ಣು ಟೀವಿ ರಿಯಾಲಿಟಿ ಶೋ, ಅದರಲ್ಲಿ ಪಾಲ್ಗೊಳ್ಳುತ್ತಿರುವ ನಟ-ನಟಿಯರ ಕಡೆ ಹೊರಳುತ್ತದೆ. ಸಮಸ್ಯೆಯ ಮೂಲ ಇಲ್ಲೇ ಇದೆ ಎಂಬ ತೀರ್ಮಾನಕ್ಕೆ ಬಂದು ಅವರು ಆತಂಕಕ್ಕೀಡಾಗುತ್ತಾರೆ. ಆಗ ಅವರನ್ನೆಲ್ಲಾ ನಿಷೇಧಿಸಬೇಕು ಎಂಬ ಐಡಿಯಾ ಹೊಳೆಯುತ್ತದೆ. ಆದರೆ ಇವೆಲ್ಲವೂ ವೈಯಕ್ತಿಕ ಮಟ್ಟದಲ್ಲಿ ಪರಿಹಾರ ಆಗುವ ಸಮಸ್ಯೆಗಳಲ್ಲ. ಕಲಾವಿದರ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೆ ಕಲಾವಿದರ ಸಂಘವಿದೆ. ಅದು ಸಕ್ರಿಯವಾಗಿದೆಯೋ ಇಲ್ಲವೋ ಅನ್ನುವುದು ಬೇರೆ ಮಾತು. ಅನ್ನದಾತರಿಗೂ ಅವರದ್ದೇ ಆದ ಸಂಘವಿದೆ. ಇವರಿಬ್ಬರ ಮಧ್ಯೆ ತಕರಾರು ಉಂಟಾದರೆ ಪರಿಹರಿಸುವುದಕ್ಕೆ ಫಿಲಂ ಚೇಂಬರ್ ಇದೆ. ಆದರೆ ಒಬ್ಬ ನಟ ಅಥವಾ ನಿರ್ಮಾಪಕ ತನ್ನ ಸಂಘವನ್ನೇ ಮೀರಿಸುವಷ್ಟು ಪ್ರಬಲನಾದಾಗ ಸಂಘಗಳ ಪದಾಧಿಕಾರಿಗಳ ಮಾತಿಗೆ ಬೆಲೆ ಸಿಗುವುದಿಲ್ಲ. ಅವುಗಳು ಏನೇ ಕ್ರಮ ಕೈಗೊಂಡರೂ ಅದು ಚಾಲ್ತಿಗೆ ಬರುವುದಿಲ್ಲ.

ಹಿಂದಿ ಚಿತ್ರೋದ್ಯಮದಲ್ಲೂ ಅಮಿತಾಬ್, ಅಮೀರ್ ಖಾನ್, ಸಲ್ನಾನ್ ಖಾನ್ ಮೊದಲಾದ ಸೇಲೇಬಲ್ ನಟರು ಟೀವಿಯಲ್ಲಿ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಆದರೆ ಅವರನ್ನು ಬ್ಯಾನ್ ಮಾಡುವ ಧೈರ್ಯ ಯಾರಿಗಿದೆ?ನೀವು ಬ್ಯಾನ್ ಎಂಬ ಪದವನ್ನು ಬಳಸುವ ಮುನ್ನ ಹುಷಾರಾಗಿರಬೇಕು. ಅದು ನಿಮ್ಮ ಪ್ರತಿಭಟನೆಯ ನಿಘಂಟಿನಲ್ಲಿರುವ ಕೊನೆಯ ಪದವಾಗಿರಬೇಕು. ಅದಕ್ಕೂ ಮುಂಚೆ ಮಾತುಕತೆ, ಸಂಧಾನ, ಹೊಂದಾಣಿಕೆಯಂಥ ಹಲವು ಹಂತಗಳಿವೆ. ಬ್ಯಾನ್ ಅನ್ನುವುದು ಸರ್ವಾಧಿಕಾರತ್ವಕ್ಕೆ ಸಂಕೇತವಾಗುತ್ತದೆ. ಅಷ್ಟಕ್ಕೂ ಕನ್ನಡ ಚಿತ್ರಗಳ ಸಂಕಷ್ಟದ ಬೇರು ಇರುವುದು ರಿಯಾಲಿಟಿ ಶೋಗಳಲ್ಲೇ ಎಂದು ತೀರ್ಮಾನಕ್ಕೆ ಬರುವುದು ಸರಿಯೇ?ನಿರ್ಮಾಪಕರು ರೀಮೇಕ್ ಚಿತ್ರಗಳ ಹಿಂದೆ ಬಿದ್ದಿರುವುದರಿಂದ ನಾಯಕ ನಟರಿಗೆ ಫ್ರೀ ಟೈಮ್ ಜಾಸ್ತಿ ಸಿಗುತ್ತದೆ. ಒಂದು ಪಾತ್ರಕ್ಕೆ ತಯಾರಾಗಬೇಕಾದ ಅಗತ್ಯವೇ ಆತನಿಗೆ ಇರುವುದಿಲ್ಲ. ಎಲ್ಲವೂ ರೆಡಿಮೇಡ್ ಆಗಿ ಕಣ್ಣ ಮುಂದೆಯೇ ಇರುವುದರಿಂದ ಡಿವಿಡಿ ನೋಡುವುದು, ಅದರಂತೆ ನಡೆಯುವುದಷ್ಟೇ ಅವರಿಗಿರುವ ಕೆಲಸ. ಅದನ್ನು ಸೆಟ್ಟಲ್ಲೇ ಮಾಡುವವರೂ ಇದ್ದಾರೆ.

ತಮಿಳು, ತೆಲುಗಿನಲ್ಲಿದ್ದಂತೆ ನಮ್ಮಲ್ಲಿ ಎರಡನೇ ಹಂತದ ನಾಯಕರು ಪ್ರೇಕ್ಷಕರನ್ನು ಆಕರ್ಷಿಸುವಷ್ಟು ಬೆಳೆದು ನಿಂತಿಲ್ಲ. ಅವರಿಗೆ ಒಂದು ಪ್ರತ್ಯೇಕ ಮಾರುಕಟ್ಟೆ ಇನ್ನೂ ನಿರ್ಮಾಣವಾಗಿಲ್ಲ. ಹಾಗಾಗಿ ಪ್ರೇಕ್ಷಕರು ಮೊದಲನೇ ಸಾಲಿನಲ್ಲಿರುವ ನಾಯಕರ ಚಿತ್ರಗಳನ್ನಷ್ಟೇ ನೋಡುತ್ತಿದ್ದಾರೆ. ಮಿಕ್ಕವರ ಚಿತ್ರಗಳನ್ನು ಟೀವಿಯಲ್ಲಿ ನೋಡುತ್ತಾರೆ. ಆ ಕಾರಣಕ್ಕೆ ಮಿಕ್ಕವರು ಸೇಲೇಬಲ್ ಆಗುವುದಕ್ಕೆ ಚಿತ್ರವಿಚಿತ್ರ ಗಿಮಿಕ್ಕುಗಳನ್ನು ಮಾಡಬೇಕಾಗಿದೆ. ಒಂದು ಕಾಲದಲ್ಲಿ ನಾಯಕಿಯರು ಅಥವಾ ಐಟಂ ಸಾಂಗಿನಲ್ಲಿ ಬರುವ ನಾಯಕಿಯರು ಅರೆಬೆತ್ತಲಾದರೆ ಗಲ್ಲಾಪೆಟ್ಟಿಗೆ ಸದ್ದು ಮಾಡುತ್ತಿತ್ತು.  ಈಗ ಕನ್ನಡ ನಾಯಕರೇ ಬೆತ್ತಲಾಗುತ್ತಿದ್ದಾರೆ, ಇದೂ ಕೂಡಾ ಬಾಡಿಗೆ ಐಡಿಯಾ ಅನ್ನುವುದು ಬೇರೆ ಮಾತು. ಆದರೆ ಹೀಗೆ ಬೆತ್ತಲಾಗುವ ಮೂಲಕ ಚಿತ್ರೋದ್ಯಮವೂ ಬೆತ್ತಲಾಗುತ್ತಿದೆ. ಟೀವಿ ಚಾನೆಲ್ಲುಗಳು ಉದ್ಯಮದ ಬೆತ್ತಲೆಯಾಟಕ್ಕೆ ಕನ್ನಡಿ ಹಿಡಿಯುತ್ತಿವೆ.

ಒಬ್ಬ ನಾಯಕನಿಗೆ ಸೇಲೇಬಲ್ ಪಟ್ಟ ಬರುವುದು ಆತ ನಟಿಸಿದ ಸಿನಿಮಾಗಳ ಕತೆ, ಚಿತ್ರಕತೆ, ನಿರ್ದೇಶನ ಎಲ್ಲದರಲ್ಲೂ ಸೇಲೇಬಲ್ ಗುಣಗಳಿದ್ದಾಗ. ಒಂದು ಸಾರಿ ಸೇಲೇಬಲ್ ಎಂದು ಸಾಬೀತಾದ ನಂತರ ಆತನಿಗೆ ಅವ್ಯಾವುದರ ಅಗತ್ಯವೂ ಇರುವುದಿಲ್ಲ. ಉದಾಹರಣೆಗೆ ರಜನಿಕಾಂತ್ ಚಿತ್ರಕ್ಕೆ ಈಗ ಕತೆಯ ಅಗತ್ಯವಿದೆಯಾ? ಸೇಲೇಬಲ್ ಆಗುವ ನಟನನ್ನು ಹುಟ್ಟುಹಾಕುವುದು ನಿರ್ದೇಶಕನ ಜವಾಬ್ದಾರಿ. ಆತನಿಗೆ ಅದಕ್ಕೆ ತಕ್ಕ ಕಾಲಾವಕಾಶ ಮತ್ತು ಸ್ವಾತಂತ್ರ್ಯ ನೀಡುವುದು ನಿರ್ಮಾಪಕನ ಜವಾಬ್ದಾರಿ. ರೀಮೇಕು ಚಿತ್ರಗಳು ಸೇಲೇಬಲ್ ನಟನನ್ನು ಸೃಷ್ಟಿಸುವುದಿಲ್ಲ. ಅಂದಹಾಗೆ ವೀಕೆಂಡ್ ವಿಥ್ ರಮೇಶ್ ಕೂಡಾ ಸ್ವಮೇಕ್ ಕಾರ್ಯಕ್ರಮವಲ್ಲ. ಕೆಲವು ವರ್ಷಗಳ ಹಿಂದೆ ಜೀಟೀವಿ ಹಿಂದಿ ಚಾನಲ್ಲಲ್ಲಿ ಫರೂಕ್ ಶೇಖ್  ಇದೇ ಮಾದರಿಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದ.

ಪ್ರತಿಯೊಬ್ಬ ವ್ಯಕ್ತಿಗೂ ಒಂದು ಘನತೆ ಇರುತ್ತದೆ. ಆತ ಸೇಲೇಬಲ್ ಅಂದಾಕ್ಷಣ ಆತನ ಸಾಧನೆಗಳೇನೂ ಮುಕ್ಕಾಗುವುದಿಲ್ಲ.

Also See

Uma Column 48 - ಅನಂತಮೂರ್ತಿಯವರು ಕುಪ್ಪಣ್ಣನಾದ ಕತೆ

Jnanapeetha Award winner U R Anathamurthy Dead

Uma Column 47 - ಇದ್ಯಾಕೆ ಬಾಸು ಹಿಂಗಾಯ್ತು?

Uma Column 46 - ಮಲ್ಲಿಗೆಯ ತೋಟದಲ್ಲಿ ಡೇಲಿಯಾ ಬಂದು ಕುಳಿತಂತೆ..

Uma Column 45 - ಈ ಸಂಭಾವನೆ.....

Uma Column 44 - ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಎಲ್ಲಿ ಹೋಯಿತು?

Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

#

Smuggler Release Meet Gallery

Rightbanner02_tora_inside

Tora Tora PressMeet Gallery