` Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Udaya marakini, veeresh

ಚೊಚ್ಚಲ ಹೆರಿಗೆ, ಹೇಗಾಗುತ್ತದೆಯೋ ಅನ್ನುವ ಆತಂಕ ಇತ್ತು. ಅದೃಷ್ಟವಶಾತ್ ಎಲ್ಲವೂ ಸಲೀಸಾಗಿ ನಡೆದುಹೋಯಿತು.ಸಿಸೇರಿಯನ್ ಅಲ್ಲ, ನಾರ್ಮಲ್. ಗದ್ದಲ ಮಾತ್ರ ಅಬ್ನಾರ್ಮಲ್.  ನಾನು ಬರೆದ ಮೊದಲ ಪುಸ್ತಕ ‘ಟಚ್ ಸ್ಕ್ರೀನ್’ಕಳೆದ ಗುರುವಾರ ಬೆಂಗಳೂರಿನ ಕೆಎಸ್ ಸಿಎ ಕ್ಲಬ್ಬಲ್ಲಿ ಬಿಡುಗಡೆ ಆಗಿಯೇ ಬಿಟ್ಟಿತು. ಖುಶ್ವಂತ್ ಸಿಂಗ್ ಐವತ್ತು ದಾಟಿದ ಮೇಲೆ ಬರೆಯುವುದಕ್ಕೆ ಶುರುಮಾಡಿದರಂತೆ. ನಾನು ಇಪ್ಪತ್ತೈದಕ್ಕೇ ಬರೆಯುವುದಕ್ಕೆ ಶುರುಮಾಡಿದೆ, ಐವತ್ತು ದಾಟಿದ ಮೇಲೆ ಪುಸ್ತಕ ಹೊರತಂದೆ. ಹಾಗಾಗಿ ನಾನು ಕೂಡಾ ಖುಶ್ವಂತ್ ಸಿಂಗ್ ಆದೆ ಎಂದು ಖುಶಿಯಿಂದ ಈಗ ಬೀಗುವುದಕ್ಕೆ ಅಡ್ಡಿಯಿಲ್ಲ.ಸಂತೋಷದ ಸಂಗತಿಯೆಂದರೆ ಪುಸ್ತಕ ಬಿಡುಗಡೆ ಮಾಡುವಾಗ ವೇದಿಕೆ ಮೇಲಿದ್ದವರೆಲ್ಲಾ ಹಿರಿಯರೇ.  ನಾನು ಬಹಳವಾಗಿ ಮೆಚ್ಚುವ ಮತ್ತು ಗೌರವಿಸುವ ಹೆಣ್ಮಕ್ಕಳಾದ  ಜಯಮಾಲಾ, ಹೇಮಾ ಚೌದುರಿ, ಜಯಂತಿ ಹಾಜರಿದ್ದರು. ಅವರಿಗಿಂತ ಕೊಂಚ ಕಿರಿಯರಾದ ತಾರಾ ಮತ್ತು ಪೂಜಾ ಗಾಂಧಿಯವರೂ ಇದ್ದರು. ಈ ತಂಡದ ಕ್ಯಾಪ್ಟನ್ ಥರ ದ್ವಾರಕೀಶ್ ನಿಂತಿದ್ದರು. ದ್ವಾರಕೀಶ್ ಆಕ್ಷನ್ ಹೇಳಿ, ಕ್ಲಾಪ್ ಬೋರ್ಡ್ ಹೊಡೆಯುವುದರೊಂದಿಗೆ ಪಕ್ಕಾ ಸಿನಿಮಾ ಶೈಲಿಯಲ್ಲೇ ಪುಸ್ತಕ ಬಿಡುಗಡೆ ಆಯಿತು. ವೇದಿಕೆ ಮೇಲೆ ಅದಕ್ಕೆ ಸಾಕ್ಷಿಯಾದವರು ಸುವರ್ಣ ನ್ಯೂಸ್ ಚಾನೆಲ್ಲಿನ ಸಂಪಾದಕ ಅನಂತ್ ಚಿನಿವಾರ್, ಉದಯವಾಣಿ ಬಳಗದ ಸಂಪಾದಕ ರವಿಹೆಗಡೆ ಮತ್ತು ಮೈಸೂರಿನ ಮಿತ್ರ ರವೀಂದ್ರಜೋಷಿ. ನನ್ನ ಆಪ್ತಮಿತ್ರ ಜೋಗಿ ಸ್ವಾಗತ ಸಮಿತಿಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಹಾಗಾಗಿ ಅವರು ವೇದಿಕೆಗೆ ಬರಲಿಲ್ಲ.

ravindra joshi, ananth chinivar, ravi hegde, udaya marakini, veeresh

ಕೆಎಸ್ ಸಿಎ ಎಂದೇ ಹೆಸರಾದ ಕ್ರಿಕೆಟ್ ಕ್ಲಬ್ಬಿನ ಪಿ2 ಸಭಾಂಗಣದ ಕೆಪಾಸಿಟಿ ಇರುವುದು ಮುನ್ನೂರು. ಆ ಸಂಜೆ ಅಲ್ಲಿ ಐನೂರು ಜನ ಸೇರಿದ್ದರು. ಸಿನಿಮಾದವರು, ಚಾನೆಲ್ಲಿನವರು, ಪತ್ರಕರ್ತ ಮಿತ್ರರು, ಬಂಧುಬಳಗದವರು ಮತ್ತು ಸ್ನೇಹಿತರು. ಅಷ್ಟೊಂದು ಜನ ಸೇರುವುದಕ್ಕೆ ಕಾರಣವೂ ಇತ್ತು. ಆವತ್ತು ಕೆ.ಎಂ. ವೀರೇಶ್ ಅವರ ‘ಚಿತ್ರಲೋಕ ಡಾಟ್ ಕಾಂ’ನ ಹದಿನೈದನೇ ಹುಟ್ಟಹಬ್ಬ. ಅದರ ಅಂಗವಾಗಿ ಟಚ್ ಸ್ಕ್ರೀನ್ ಬಿಡುಗಡೆ. ಸಮಾರಂಭಕ್ಕೆ ಅತಿಥಿಗಳನ್ನು ಆಹ್ವಾನಿಸುವ ಜವಾಬ್ದಾರಿಯನ್ನು ವೀರೇಶ್ ಹೊತ್ತುಕೊಂಡಿದ್ದರು. ನಾನು ನನ್ನ ಖಾಸಾ ಗೆಳೆಯರನ್ನಷ್ಟೇ ಕರೆದಿದ್ದೆ. ಹಾಗಾಗಿ ನಾನು ಆ ಜಾತ್ರೆಯಲ್ಲಿ ಉತ್ಸವಮೂರ್ತಿ. ಜಯಮಾಲಾರಿಂದ ಹಿಡಿದು ಚಿನಿವಾರ್ ತನಕ ಎಲ್ಲರೂ ಇನ್ನೊಂದು ಜನ್ಮಕ್ಕಾಗುವಷ್ಟು ಹೊಗಳಿಕೆಯ ಮಾತಾಡಿದರು. ಇಷ್ಟಕ್ಕೆಲ್ಲಾ ನಾನು ಅರ್ಹನೇ ಅನ್ನುವ ಅನುಮಾನ ಮತ್ತು ಮುಜುಗರದೊಂದಿಗೇ ನಾನೂ ನಾಲ್ಕು ಮಾತಾಡಿದೆ. ತಮಾಷೆಯಂದರೆ ನಾನ್ಯಾವತ್ತೂ ವೇದಿಕೆಯ ಮೇಲೆ ನಿಂತು ಮಾತಾಡಿದವನಲ್ಲ. ಯಾರೋ ಮಾತಾಡಿದ್ದನ್ನು ಕೆಳಗೆ ಕುಳಿತು ಕೇಳಿಸಿಕೊಂಡು ಅದನ್ನು ನನ್ನಿಷ್ಟಕ್ಕೆ ಬಂದಂತೆ ಬರೆಯುತ್ತಾ ಬಂದವನು. ಹಾಗಾಗಿ ವೇದಿಕೆ ಮತ್ತು ಮೈಕು ಅನ್ನುವುದು ನನ್ನ ಪಾಲಿಗೆ ಪೊಲೀಸ್ ಸ್ಟೇಷನ್ ಮತ್ತು ಇನ್ ಸ್ಪೆಕ್ಟರ್ ಇದ್ದಹಾಗೆ. ಪುಸ್ತಕ ಬರೆದ ತಪ್ಪಿಗೆ ನಾನು ಆ ಶಿಕ್ಷೆಯನ್ನು ಅನುಭವಿಸದೇ ವಿಧಿಯಿರಲಿಲ್ಲ.

raghunath, km veeresh, cr manohar

ನಿಮಗೆ ಗೊತ್ತಿರುವ ಹಾಗೆ ಇಂಥಾ ಅದ್ದೂರಿ ಕಾರ್ಯಕ್ರಮ ನಡೆಸಬೇಕಾದರೆ ಸಾಕಷ್ಟು ಖರ್ಚುವೆಚ್ಚ ಆಗುತ್ತದೆ. ಊಟ, ಗುಂಡು, ಪೋಸ್ಟರು, ಪುಸ್ತಕ ಪ್ರಿಂಟಿಂಗು, ಆಹ್ವಾನ ಪತ್ರಿಕೆ, ಹಾಲ್ ಬಾಡಿಗೆ ಇವೆಲ್ಲವನ್ನೂ ಲೆಕ್ಕ ಹಾಕುತ್ತಾ ಕುಳಿತರೆ ಮಂಡೆಬಿಸಿಯಾಗುತ್ತದೆ. ಹಾಗಾಗಿ ಇದೆಲ್ಲಾ ರಗಳೆ ಬೇಡ, ಯಾವುದಾದರೂ ಚಿಕ್ಕ ಜಾಗದಲ್ಲಿ ಇಪ್ಪತ್ತೈದು ಜನರ ಮುಂದೆ ಸಿಂಪಲ್ಲಾಗಿ ಕಾರ್ಯಕ್ರಮ ಮಾಡೋಣ ಎಂದು ನಾನು ವೀರೇಶ್ ಅವರಿಗೆ ಹೇಳಿದ್ದೆ. ಆದರೆ ಇಂಥಾ ವಿಚಾರಗಳಲ್ಲಿ  ವೀರೇಶ್ ಅವರದ್ದು ಭಂಡಧೈರ್ಯ.  ಅವರೇನೇ ಮಾಡಿದರೂ ಅದು ದೊಡ್ಡ ಮಟ್ಟದಲ್ಲಿರಬೇಕು, ಇನ್ನೊಂದು ತಿಂಗಳಾದರೂ ಜನರು ಅದರ ಬಗ್ಗೆ ಮಾತಾಡಬೇಕು, ಯಾರೂ ಅಪಸ್ವರ ಹಾಡುವ ಹಾಗಿರಬಾರದು ಅನ್ನುವುದು ಅವರ ಸ್ವಭಾವ. ಅವರ ಬಜೆಟ್ಟು ಮತ್ತು ಹೃದಯ ಎರಡೂ ವಿಶಾಲವಾದದ್ದು. ಹಾಗಂತ ಎಲ್ಲರೂ ವೀರೇಶ್ ಆಗುವುದಕ್ಕಾಗುವುದಿಲ್ಲ. ಪಂಚತಾರಾ ಹೋಟೆಲ್ಲುಗಳಲ್ಲಿ ವಿಪರೀತ ಖರ್ಚು ಮಾಡಿ ನಡೆಸುವ ಹಲವು ಸಿನಿಮಾ ಕಾರ್ಯಕ್ರಮಗಳು ತೋಪಾಗುತ್ತದೆ. ನಿಮ್ಮ ಜನಪ್ರಿಯತೆ ಮತ್ತು ಜನಸಂಪರ್ಕ ಚೆನ್ನಾಗಿದ್ದರೆ ಮಾತ್ರ ಅದು ಯಶಸ್ಸು ಕಾಣುತ್ತದೆ. ಮೊನ್ನೆ ಆಗಿದ್ದು ಅದೇ. 

aprana

ನಾನು ತುಂಬಾ ಇಷ್ಟಪಡುವ ನಿರೂಪಕಿ ಅಪರ್ಣ ಅವರು ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದರಿಂದ ಇಡೀ ಕಾರ್ಯಕ್ರಮಕ್ಕೊಂದು ಪ್ರೊಫೆಷನಲ್ ಸ್ಪರ್ಶ ಸಿಕ್ಕಿತ್ತು. ಬಹುಶಃ ಅಪರ್ಣ ಅವರೇ ಮರೆತುಹೋಗಿದ್ದ ಸಂಗತಿಯೊಂದನ್ನು ನಾನು ಆವತ್ತು ನೆನಪಿಸಿದೆ. ಸಿನಿಮಾ ಪತ್ರಕರ್ತನಾಗಿ ನನ್ನ ಬದುಕು ಶುರುವಾಗಿದ್ದೇ ಅಪರ್ಣ ಅವರ ಸಂದರ್ಶನದಿಂದ. ಸುಧಾ ವಾರಪತ್ರಿಕೆಯ ಕಲಾವಿದ ಶ್ರೀ (ಶ್ರೀನಿವಾಸ ಮೂರ್ತಿ) ಅವರು ಆಗ (1985) ವಿಜಯಚಿತ್ರ ಪತ್ರಿಕೆಗೆ ಫೋಟೋಗಳನ್ನು ತೆಗೆಯುತ್ತಿದ್ದರು. ಅವರ ಜೊತೆ ಅವರು ಕರೆದಲ್ಲಿಗೆ ಹೋಗಿ ನಟ-ನಟಿಯರ ಸಂದರ್ಶನ ಮಾಡುವುದು ನನ್ನ ಕೆಲಸವಾಗಿತ್ತು. ಆಗ ನನಗೆ ಬೇರೆ ಕೆಲಸವೂ ಇರಲಿಲ್ಲ. ಹಾಗೆ ನನಗೆ ಪರಿಚಯವಾದವರು ಅಪರ್ಣ. ಆ ಲೆಕ್ಕದಲ್ಲಿ ನನ್ನ ಮತ್ತು ಅವರ ಪರಿಚಯಕ್ಕೆ ಈಗ 29 ವರ್ಷ ತುಂಬುತ್ತದೆ. ಅವರು ಮಾತು ಮತ್ತು ನಟನೆಗೆ ಫೇಮಸ್ಸು, ನನ್ನದೇನಿದ್ದರೂ ಬರೆವಣಿಗೆ ಮತ್ತು ಮೌನ.

chitraloka 15th year celebration

ಪುಸ್ತಕ ಬಿಡುಗಡೆ ಮತ್ತು ಚಿತ್ರಲೋಕದ ಹುಟ್ಟುಹಬ್ಬದ ನೆಪದಲ್ಲಿ ವೈಯಕ್ತಿಕವಾಗಿ ನನಗಾದ ಲಾಭವೆಂದರೆ ಹಳೆಯ ಗೆಳೆಯರ ಭೇಟಿ. ಕೆಲವು ಕಾರ್ಯಕ್ರಮಗಳು ಸಂಬಂಧಗಳನ್ನು ನವೀಕರಿಸುವುದಕ್ಕೆ ಸಹಾಯ ಮಾಡುತ್ತವೆ.  ನಾನು ಸುವರ್ಣ ಚಾನೆಲ್ಲಿಗೆ ಸೇರಿದ ಮೇಲೆ ಮತ್ತು ಅಲ್ಲಿಂದ ಹೊರಬಂದು ‘ಓ ಮನಸೇ’ಪತ್ರಿಕೆಗೆ ಸಂಪಾದಕನಾದ ಮೇಲೆ ಸಿನಿಮಾ ಮಂದಿಯ ಸಂಪರ್ಕ ಹೆಚ್ಚುಕಮ್ಮಿ ತಪ್ಪಿಯೇ ಹೋಗಿತ್ತು. ಯಾವುದೇ ಸಿನಿಮಾ ಸಮಾರಂಭಗಳಿಗೂ ನಾನು ಹೋಗುತ್ತಿರಲಿಲ್ಲ. ಆದರೆ ನೆನಪುಗಳಿಗೆ ಎಲ್ಲಿದೆ ಸಾವು?ನನ್ನೊಂದಿಗೆ ಹತ್ತಾರು ವರ್ಷ ಕಳೆದವರು, ನನ್ನ ಜೊತೆಜೊತೆಗೇ ಬೆಳೆದವರು, ನನ್ನ ಬೆಳವಣಿಗೆಗೆ ಸಾಕ್ಷಿಯಾದವರು, ಆರೈಕೆ ಮಾಡಿದ ಬಂಧುಗಳು, ಹಾರೈಸಿದ ಮಿತ್ರರು, ಆಶ್ರಯದಾತರು,  ಎಲ್ಲರೂ ಮೊನ್ನೆ ಅಲ್ಲಿದ್ದರು. ರಾಜೇಂದ್ರಸಿಂಗ್ ಬಾಬು ಅವರಂಥಾ ಹಿರಿಯರಿಂದ ಹಿಡಿದು ಕಿಟ್ಟಿ, ಪ್ರಜ್ವಲ್ ಥರದ ಕಿರಿಯರ ತನಕ, ಎಲ್ಲರೂ ಮಾತಿಗೆ ಸಿಕ್ಕಿದರು. ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಅವರು ಮಗುವಿನಂತೆ ಓಡಾಡುತ್ತಿದ್ದರು, ಚಿರ ಜವ್ವನಿಗ ಜೈಜಗದೀಶ್ ಎಂದಿನಂತೆ ‘ನಾನು ಮತ್ತು ನೀವು ಮಡಿಕೇರಿಗೆ ಹೋಗುವುದು ಯಾವಾಗ ಮಾರಾಯ್ರೇ’ಎಂದು ಬೆನ್ನಿಗೆ ಗುದ್ದಿದರು. ವಿಜಯಲಕ್ಷ್ಮಿ ಸಿಂಗ್  ಅವರದು ಅದೇ ಮಾಸದ ಮಂದಹಾಸ. ಪಾರ್ಟಿ ಕಳೆಗಟ್ಟುವುದಕ್ಕೆ ಉಮೇಶ್ ಬಣಕಾರ್ ಮತ್ತು ಗ್ಯಾಂಗ್ ಇತ್ತು.

jai jagadish, chandashekar, ravindra joshi, rajendra singh babu, vijaya lakshmi singh

ಕರೆದವರಲ್ಲಿ ಮುಕ್ಕಾಲು ಭಾಗ ಜನ ಬಂದಿದ್ದರು, ಬಾರದೇ ಇದ್ದವರನ್ನು ನಾನು ಉದಾರವಾಗಿ ಕ್ಷಮಿಸಿದ್ದೇನೆ. ಆದರೆ ಅವರು ಮುಂದಿನ ಸಾರಿ ತಪ್ಪಿಸಿಕೊಳ್ಳುವ ಹಾಗಿಲ್ಲ. ಯಾಕೆಂದರೆ ಅವರಿಗೋಸ್ಕರವೇ ಇನ್ನೊಂದು ಪುಸ್ತಕ ಪ್ರಕಟಿಸುವ ನಿರ್ಧಾರ ಮಾಡಿದ್ದೇನೆ. ಇದು ಬೆದರಿಕೆಯೂ ಹೌದು, ಆಶ್ವಾಸನೆಯೂ ಹೌದು. ಕನ್ನಡಪ್ರಭ ಸಂಪಾದಕ ವಿಶ್ವೇಶ್ವರ ಭಟ್ಟರು ‘ಟಚ್ ಸ್ಕ್ರೀನ್’ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ನನ್ನ ಚಿತ್ರವಿಮರ್ಶೆಗಳ ಸಂಕಲನ ಹೊರಗೆ ಬರಲಿ ಎಂದು ಪ್ರೀತಿಯಿಂದ ಅಪ್ಪಣೆ ಮಾಡಿದ್ದಾರೆ. ಕನ್ನಡಪ್ರಭದಲ್ಲಿ ನಾನು ಸುಮಾರು ಹನ್ನೆರಡು ವರ್ಷ ನಿರಂತರವಾಗಿ ಸಿನಿಮಾ ವಿಮರ್ಶೆ ಬರೆದಿದ್ದೆ. ಅದರ ಲೆಕ್ಕ ಇಟ್ಟಿಲ್ಲ, ಆ ಕಾಪಿಗಳೂ ನನ್ನಲ್ಲಿಲ್ಲ. ಒಂದೇ ಭಾನುವಾರ ನಾನು ಬರೆದ ನಾಲ್ಕು ಸಿನಿಮಾಗಳ ವಿಮರ್ಶೆ ಪ್ರಕಟವಾಗಿದ್ದು ಆಗಿನ ಕಾಲಕ್ಕೆ ದಾಖಲೆ. ಅದಕ್ಕೆ ಕಾರಣರಾದವರು ಆಗ ಸಂಪಾದಕರಾಗಿದ್ದ ವೈಎನ್ಕೆ. ಅವರ ಪ್ರೀತಿಗೆ ಪಾತ್ರರಾದವರೆಲ್ಲಾ ಪ್ರಸಿದ್ಧರಾಗುತ್ತಾರೆ ಎಂಬ ನಂಬಿಕೆಯೊಂದು ಆಗ ಜಾರಿಯಲ್ಲಿತ್ತು.  ನಾನು ಪ್ರಸಿದ್ಧನಾಗಿರುವುದರಿಂದ ಅದು ಮೂಢನಂಬಿಕೆಯಲ್ಲ ಅನ್ನುವುದು ರುಜುವಾತಾಗಿದೆ!

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು ಹೇಳಬೇಕೆಂದುಕೊಂಡಿದ್ದ ಒಂದು ಮಾತನ್ನು ಇಲ್ಲಿ ಹೇಳುತ್ತಿದ್ದೇನೆ. ಒಬ್ಬ ಮನುಷ್ಯನೊಳಗೆ ಮೂರು  ರೀತಿಯ ಮನೋವ್ಯಾಪಾರಿಗಳಿರುತ್ತಾರೆ-  ಓದುಗ, ಕೇಳುಗ ಮತ್ತು ನೋಡುಗ. ಕೇಳುಗ ಮತ್ತು ನೋಡುಗನನ್ನು ರಂಜಿಸುವುದಕ್ಕೆ ಟೀವಿ ಸೀರಿಯಲ್ಲುಗಳು, ನಾಟಕಗಳು ಮತ್ತು ಸಿನಿಮಾಗಳಿವೆ. ಅವುಗಳು ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತವೆ. ನೋಡುವ ಮತ್ತು ಕೇಳುವ ಕ್ರಿಯೆ ಅಲ್ಲಿ ಏಕಕಾಲಕ್ಕೆ ನಡೆಯುತ್ತವೆ. ಆದರೆ ಓದುಗ ಹಾಗಲ್ಲ. ಆತ ತನ್ನ ಬುದ್ದಿ ಮತ್ತು ಭಾವಗಳೆರಡಕ್ಕೂ ಏಕಕಾಲದಲ್ಲಿ ಕೆಲಸ ಕೊಡಬೇಕಾಗುತ್ತದೆ. ಅದಕ್ಕೆ ಆಸಕ್ತಿ ಇರಬೇಕು, ಪುರುಸೊತ್ತಿರಬೇಕು, ಅದೆಲ್ಲಕ್ಕಿಂತ ಹೆಚ್ಚಾಗಿ ಅಭಿರುಚಿ ಇರಬೇಕು. ಈ ಮೂರರ ಅಭಾವದಿಂದ ಸಮಾಜದಲ್ಲಿ ಈಗ ಓದುಗ ಅಲ್ಪಸಂಖ್ಯಾತನಾಗುತ್ತಿದ್ದಾನೆ. ಈ ತಳಿಯನ್ನು ನಾಶವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಲೇಖಕನದ್ದು.

‘ಉಮ ಕಾಲಂ’ಕಳೆದೆರಡು ವಾರಗಳಿಂದ ಪ್ರಕಟವಾಗಿರಲಿಲ್ಲ. ಕಾರಣ ನಿಮಗೆ ಗೊತ್ತಿದೆ. ಮುಂದಿನ ವಾರದಿಂದ ಮತ್ತೆ ಬರೆವಣಿಗೆಯ ಮಾನ್ಸೂನ್ ಶುರು. ಕೀಪ್ ರೀಡಿಂಗ್.

Also See

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Satya Harishchandra PressMeet Gallery