` Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
encounter dayanayak image
sachin, d rajendra babu, darshan, mg ram murthy

ಕನ್ನಡದಲ್ಲಿ ಒಂದೆರಡು ಚಿತ್ರಗಳಲ್ಲಿ ನಾಯಕನಾಗಿ ನಟಿಸಿ, ಆಮೇಲೆ ಸದ್ದಿಲ್ಲದೆ ಮರೆಗೆ ಸರಿದುಹೋದ ನಟನೊಬ್ಬ ಬೆಂಗಳೂರಿನಲ್ಲೊಂದು ಹೋಟೆಲ್ ಆರಂಭಿಸಿದ್ದಾನೆ ಅನ್ನುವ ಸುದ್ದಿಯನ್ನು ಫೇಸ್ ಬುಕ್ಕಲ್ಲಿ ಓದಿದೆ. ನಾನು ಈ ನಟನನ್ನು ತೀರಾ ಹತ್ತಿರದಿಂದ ನೋಡಿರುವುದರಿಂದ ಯಾಕೋ ಕೈ ಕಡಿಯುವುದಕ್ಕೆ ಶುರುವಾಯಿತು. ಬರೆಯಬೇಕೋ ಬೇಡ್ವೋ, to be or not to beಅಂತ ಷೇಕ್ಸ್ ಪಿಯರ್ ನಂತೆ ಎರಡು ದಿನಗಳ ಕಾಲ ಒದ್ದಾಡಿ, ಈಗ ಧೈರ್ಯದಿಂದ ಬರೆಯುವುದಕ್ಕೆ ಕುಳಿತಿದ್ದೇನೆ. ಇದು ನನ್ನ ವೈಯಕ್ತಿಕ ಕೊರಗಿನ ಆರ್ತನಾದ ಎಂದು ಓದುಗರು ಭಾವಿಸಬಾರದಾಗಿ ವಿನಂತಿ.

ನಿಮಗೆ ನಿರ್ಮಾಪಕ ರಾಮಮೂರ್ತಿ ಗೊತ್ತಿರಬಹುದು, ಪೂರ್ತಿ ನಾಮಧೇಯ ಎಂಜಿ. ರಾಮಮೂರ್ತಿ. ಆತ್ಮೀಯರ ಪಾಲಿಗೆ ಎಂಜಿಆರ್. ದರ್ಶನ್ ಅವರನ್ನು ತೆರೆಗೆ ನಾಯಕನಾಗಿ ಪರಿಚಯಿಸಿದ ‘ಮೆಜೆಸ್ಚಿಕ್’ಚಿತ್ರದ ನಿರ್ಮಾಪಕರಿವರು, ಜೊತೆಗೆ ಸಹನಿರ್ಮಾಪಕರಾಗಿ ಬಾಮ. ಹರೀಶ್ ಕೂಡಾ ಇದ್ದರು. ಮೆಜೆಸ್ಟಿಕ್ ಚಿತ್ರ ನಿರ್ಮಾಣಕ್ಕೆ ಮುಂಚೆ ಎಂಜಿಆರ್  ರಸ್ತೆ ಕಾಂಟ್ರಾಕ್ಟರ್ ಆಗಿ ತಮ್ಮ ಪಾಡಿಗೆ ಸುಖವಾಗಿದ್ದರು. ಕನ್ನಡದ ಎಲ್ಲಾ ನಿರ್ಮಾಪಕರೂ ನಿರ್ಮಾಪಕರಾಗುವುದಕ್ಕೆ ಮುಂಚೆ ಸುಖವಾಗಿಯೇ ಇರುತ್ತಾರೆ! ‘ಮೆಜೆಸ್ಟಿಕ್’ಯಶಸ್ಸು ಕಾಣುತ್ತಿದ್ದಂತೆಯೇ ರಾಮಮೂರ್ತಿ ಅವರಿಗೆ ಫುಲ್ ಟೈಮ್ ನಿರ್ಮಾಪಕರಾಗುವ ಹುರುಪು ಬಂತು. ಅಲ್ಲಿಂದಲೇ ಅವರ ದುರ್ದಿನಗಳು ಆರಂಭವಾದವು ಅಂದರೆ ತಪ್ಪಿಲ್ಲ. ‘ಮೆಜೆಸ್ಟಿಕ್’ನಂತರ ಅವರು ನಿರ್ಮಿಸಿದ ‘ಧರ್ಮ’ಸಾಧಾರಣ ಯಶಸ್ಸು ಕಂಡರೂ ಅವರ ತಮ್ಮೆರಡು ಕಾಲು ಮತ್ತು ಕೈಗಳನ್ನು ಗಾಂಧಿನಗರದತ್ತ ಚಾಚಿಯಾಗಿತ್ತು.    ಆಗ ಚಾಲ್ತಿಯಲ್ಲಿದ್ದ ನಿರ್ದೇಶಕ  ಡಿ. ರಾಜೇಂದ್ರಬಾಬು ಅವರ ನಿರ್ದೇಶನದಲ್ಲಿ ಚಿತ್ರವೊಂದನ್ನು ತಯಾರಿಸುವುದು ಎಂದು ನಿರ್ಧಾರವಾಯಿತು.  ನಾನು, ಜೋಗಿ, ಮೈಸೂರು ಹರೀಶ್, ಕೆಎಂ. ವೀರೇಶ್ , ಈ ನಾಲ್ಕು ಜನರನ್ನು ತಮ್ಮ ಹಿತೈಷಿಗಳು ಮತ್ತು ಸಲಹೆಗಾರರು ಎಂದು ರಾಮಮೂರ್ತಿ ತಾವಾಗಿಯೇ ನಿರ್ಧರಿಸಿದ್ದರಿಂದ,  ರಾಜಾಜಿನಗರದ ಹೋಟೆಲ್ ಒಂದರಲ್ಲಿ ನಾವೆಲ್ಲ ಒಟ್ಟಾಗಿ ಕುಳಿತು ಡಿರಾ. ಬಾಬು ಸಿದ್ದಪಡಿಸಿದ ಕತೆ ಕೇಳಿದೆವು. ಅವರಲ್ಲಿ ಎರಡು ಕತೆಗಳಿದ್ದವು. ಒಂದು ಚಿಕ್ಕ ಬಜೆಟ್ಟಲ್ಲಿ ನಿರ್ಮಾಣವಾಗುವಂಥಾದ್ದು, ಇನ್ನೊಂದು ಸ್ವಲ್ಪ ಜಾಸ್ತಿ ಬಜೆಟ್, ಅಂದರೆ ಒಂದು ಕೋಟಿ. ಎರಡೂ ಕತೆಗಳ ಒನ್ ಲೈನನ್ನು ಹೇಳಿದ ನಂತರ ಬಾಬು ನಮ್ಮ ಮುಖ ನೋಡಿ “ಮೊದಲನೆಯದ್ದು ಸೇಫ್, ಎರಡನೆಯದ್ದು ಕೊಂಚ ರಿಸ್ಕಿ. ಆಯ್ಕೆ ನಿಮ್ಮದು”ಎಂದರು. ನಾವು ಹೊರಗೆ ಬಂದು ಚರ್ಚೆ ಮಾಡಿದೆವು. “ಚಿಕ್ಕ ಬಜೆಟ್ಟಿನ ಚಿತ್ರ ಮಾಡಿ, ಲಾಭ ಗ್ಯಾರಂಟಿ”ಎಂದು ನಾನು ಸಲಹೆ ನೀಡಿದೆ.  ಆದರೆ ರಾಮಮೂರ್ತಿ ಯಾಕೋ ಭಯಂಕರ ಉಮೇದಿನಲ್ಲಿದ್ದರು. “ಮಾಡೋದಾದ್ರೆ ಎರಡನೇ ಕತೆಯನ್ನೇ ಮಾಡೋಣ, ಹೆಸರು ಮತ್ತು ದುಡ್ಡು ಎರಡೂ ಬರುತ್ತೆ”ಅಂದರು. ಅವರು ಹಾಗನ್ನುವುದಕ್ಕೆ ಕಾರಣ ಇತ್ತು. ಎರಡನೇ ಕತೆ, ಆ ಕಾಲಕ್ಕೆ ಸುದ್ದಿ ಮಾಡಿದ್ದ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಅವರ ಜೀವನಕತೆಯಾಗಿತ್ತು. ಅವರ ಸಾಹಸಗಳನ್ನು ಆಧರಿಸಿದ್ದ ‘ಅಬ್ ತಕ್ ಛಪ್ಪನ್’ಎಂಬ ಚಿತ್ರ ಆಗಷ್ಟೇ ತೆರೆಕಂಡು ಗೆದ್ದಿತ್ತು. ಆದರೆ ನಾವೆಲ್ಲರೂ ಆಗ ಮರೆತಿದ್ದ ಸಂಗತಿಯೆಂದರೆ ಬಾಬು ಅವರು ಸೆಂಟಿಮೆಂಟು ಚಿತ್ರಗಳ ಸ್ಪೆಷಲಿಸ್ಟ್ ಆಗಿದ್ದರೇ ಹೊರತಾಗಿ ಆಕ್ಷನ್ ಚಿತ್ರಗಳು ಅವರಿಗೆ ಒಗ್ಗುತ್ತಿರಲಿಲ್ಲ.

d rajendra babu, sachin, mahesh manjrekar, mg ramamurthy, mysore harish (pic k m veeresh)

ಕತೆ ಓಕೆಯಾಗಿ, ಚಿತ್ರಕ್ಕೆ ‘ಎನ್ ಕೌಂಟರ್ ದಯಾನಾಯಕ್’ಎಂಬ ನಾಮಕರಣವನ್ನೂ ಮಾಡಲಾಯಿತು. ದಯಾನಾಯಕ್ ಪಾತ್ರ ಮಾಡುವವರು ಯಾರು ಎಂದಾಗ ಪತ್ರಕರ್ತ ಮಿತ್ರರಿಗೆ ಬಾಂಬೆ ನಟನೊಬ್ಬನ ನೆನಪಾಯಿತು. ಆರಡಿ ಎತ್ತರ, ಕಟ್ಟುಮಸ್ತಾದ ಮೈಕಟ್ಟಿನ ಆ ಹುಡುಗ ‘ಬ್ಲಾಕ್ ಫ್ರೈಡೇ’ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದಾನೆ. ಜೊತೆಗೆ ಮಹೇಶ್ ಮಂಜ್ರೇಕರ್ ಎಂಬ ನಿರ್ದೇಶಕನ ಶಿಷ್ಯನೂ ಆಗಿದ್ದಾನೆ ಎಂಬ ವಿವರಗಳನ್ನೂ ಅವರು ನೀಡಿದರು.  ರಾಮಮೂರ್ತಿ ತಲೆ ಅಲ್ಲಾಡಿಸಿದರು. ಆ ಹುಡುಗ ಮುಂಬೈನಿಂದ ಬಂದ, ಎಲ್ಲರಿಗೂ ಮೆಚ್ಚುಗೆಯಾದ. ಆದರೆ ಆತನಿಗೆ ಕನ್ನಡ ಬರುತ್ತಿರಲಿಲ್ಲ, ಮಂಗಳೂರು ಮೂಲವಾಗಿದ್ದರಿಂದ ತುಳು ಮತ್ತು ಮುಂಬೈನಲ್ಲಿ ಬೆಳೆದಿದ್ದರಿಂದ ಹಿಂದಿ-ಇವೆರಡು ಭಾಷೆಗಳನ್ನು ಸುಲಲಿತವಾಗಿ ಮಾತಾಡುತ್ತಿದ್ದ. ಕನ್ನಡ ಕಲಿತಮೇಲೆಯೇ ಶೂಟಿಂಗ್ ಶುರುಮಾಡೋದು ಎಂದು ಬಾಬು ಹೇಳಿದರು.   ಆತನನ್ನು ಕನ್ನಡೀಕರಿಸುವ ಜವಾಬ್ದಾರಿಯನ್ನು ನನಗೆ ವಹಿಸಲಾಯಿತು. ಶೇಷಾದ್ರಿಪುರಂನಲ್ಲಿದ್ದ ನಮ್ಮ ಬಾಡಿಗೆ ಮನೆಯಲ್ಲಿ ಸಂಜೆ 6ರಿಂದ 8 ರ ತನಕ ಕನ್ನಡ ಟ್ಯೂಷನ್ ಹೇಳಿಕೊಡುವುದಕ್ಕೆ ನನ್ನ ಪತ್ನಿಯ ಸ್ನೇಹಿತೆಯೊಬ್ಬರು ಒಪ್ಪಿಕೊಂಡರು. ಆಗ ನನ್ನ ಮಕ್ಕಳಿನ್ನೂ ಚಿಕ್ಕವರು, ಮನೆಯೂ ಚಿಕ್ಕದು. ಮಕ್ಕಳ ಹೋಮ್ ವರ್ಕ್ ಮತ್ತು ದಯಾನಂದ ನಾಯಕ ಪಾತ್ರಧಾರಿಯ ಕನ್ನಡ ಕಲಿಕೆ ಏಕಕಾಲಕ್ಕೆ ನಡೆಯತೊಡಗಿದವು. ಅದೃಷ್ಟವಶಾತ್ ನಾನು ಆ ದೃಶ್ಯವನ್ನು ಮಿಸ್ ಮಾಡಿಕೊಂಡೆ. ಯಾಕೆಂದರೆ ‘ಕನ್ನಡಪ್ರಭ’ದಲ್ಲಿಕೆಲಸ ಮುಗಿಸಿ ನಾನು ಮನೆ ತಲುಪುವಾಗ ರಾತ್ರಿ ಹನ್ನೊಂದು ದಾಟುತ್ತಿತ್ತು. ನನ್ನ ಮಕ್ಕಳಿಗೆ ಆ ಅಂಕಲ್  ಇಷ್ಟವಾಗಿದ್ದ, ಆದರೆ ಕನ್ನಡ ಕಲಿಯುವಿಕೆಯಲ್ಲಿ ಅಂಥಾ ಸುಧಾರಣೆ ಏನೂ ಕಾಣಿಸುತ್ತಿಲ್ಲ ಎಂದು ನನ್ನ ಪತ್ನಿ ಹೇಳುತ್ತಿದ್ದಳು. ಒಟ್ಟಲ್ಲಿ ಮೂರು ತಿಂಗಳು ಕನ್ನಡ ಕಲಿಕೆ ಸಾಂಗವಾಗಿ ನಡೆದು ಶೂಟಿಂಗ್ ಶುರುವಾಯಿತು. ಆಗಲೂ ಆತ ಸೆಟ್ಟಲ್ಲಿ ಹಿಂದಿಯಲ್ಲೇ ಮಾತಾಡುತ್ತಿದ್ದ ಮತ್ತು ನನ್ನ ಜೊತೆ ತುಳುವಲ್ಲಿ ಮಾತಾಡುತ್ತಿದ್ದ. ಶೂಟಿಂಗ್ ಮಧ್ಯೆ ಒಂದೆರೆಡು ಬಾರಿ ಮನೆಗೆ ಬಂದು ನಮ್ಮ ಜೊತೆ ಊಟ ಮಾಡಿದ್ದ ನೆನಪು.

sachin, mg rammurthy, dayanayak, d rajendra babu

ಶೂಟಿಂಗ್ ಶುರುವಾದ ನಂತರ ಈ ನಟನ ಬಗ್ಗೆ ಒಂದೊಂದೇ ಟೀಕೆಗಳು ಕೇಳಿಬರುವುದಕ್ಕೆ ಶುರುವಾದವು. ಸ್ಟಾರ್ ಥರ ವರ್ತಿಸುವುದಕ್ಕೆ ಶುರು ಮಾಡಿದ್ದಾನೆ ಅನ್ನೋದು ಅದರಲ್ಲಿ ಮುಖ್ಯವಾದದ್ದು. ಆದರೆ ಬಾಬು ಅವರಂಥ ಸೀನಿಯರ್ ಟಾಸ್ಕ್ ಮಾಸ್ಟರ್ ಮುಂದೆ ಇವೆಲ್ಲಾ ನಡೆಯುತ್ತಿರಲಿಲ್ಲ. ಈ ಮಧ್ಯೆ ಲೊಕೇಷನ್ನುಗಳು ಬದಲಾಗುತ್ತಾ ಹೋದವು, ಜೊತೆಗೇ ಬಜೆಟ್ಟೂ ಏರುತ್ತಾ ಹೋಯಿತು. ಒಂದು ರಾತ್ರಿ ಎಂಜಿಆರ್ ತಮ್ಮ ಕಾರಲ್ಲಿ ನನ್ನನ್ನು ಮನೆಗೆ ಡ್ರಾಪ್ ಮಾಡುವ ಹೊತ್ತಿಗೆ ನಾನು ಹೇಳಿದೆ. ‘ಬಜೆಟ್ ಎಷ್ಟಾಯಿತು?’. ಒಂದೂವರೆ ಕೋಟಿ ದಾಟಿದೆ ಅಂದರು. ನನ್ನದೆ ಧಸಕ್ ಅಂದಿತು. “ಅಲ್ಲಾ ಸ್ವಾಮಿ, ಒಂದು ಕೋಟಿಯೊಳಗೆ ಪ್ಲಾನ್ ಮಾಡಿದ ಸಿನಿಮಾಇದು. ಅರ್ಧ ಶೂಟಿಂಗ್ ಆಗುವ ಹೊತ್ತಿಗೇ ಒಂದೂವರೆ ಕೋಟಿ ದಾಟಿದೆ ಅನ್ನುತ್ತೀರಿ. ಬಚಾವಾಗೋದು ಹೇಗೆ”ಎಂದೆ. ಎಂಜಿಆರ್ ಆಕಾಶ ನೋಡಿದರು, ಮೋಡ ಮುಸುಕಿತ್ತು. “ಈಗಲೇ ಶೂಟಿಂಗ್ ನಿಲ್ಲಿಸಿದರೆ ಇನ್ನಷ್ಟು ನಷ್ಟ ಆಗುವುದನ್ನು ತಪ್ಪಿಸಬಹುದು”ಎಂದೆ. ಅದು ಸಾಧ್ಯವಿರಲಿಲ್ಲ ಅಂತ ನನಗೂ ಗೊತ್ತಿತ್ತು. ಕೊನೆಗೆ ನಾಲ್ಕೂವರೆ ಕೋಟಿಗೆ ಸಿನಿಮಾ ಮುಗಿಯಿತು. ನಾವು ಸಂಶೋಧಿಸಿದ ದಯಾನಾಯಕನಿಗೆ ಕನ್ನಡ ಅಷ್ಟೇ ಅಲ್ಲ, ನಟನೆಯ ಗಂಧಗಾಳಿಯೂ ಗೊತ್ತಿರಲಿಲ್ಲ ಅನ್ನುವುದು ಚಿತ್ರ ಬಿಡುಗಡೆಯಾದ ನಂತರ ಪತ್ತೆಯಾಯಿತು. ಆ ಚಿತ್ರದಿಂದ ನಿಜಕ್ಕೂ ಎನ್ ಕೌಂಟರ್ ಆದವರು ನಿರ್ಮಾಪಕ ರಾಮಮೂರ್ತಿ. ಭರ್ತಿ 3.5 ಕೋಟಿ ಕಳಕೊಂಡರು. ಆ ನಷ್ಟದಿಂದ ಅವರಿನ್ನೂ ಚೇತರಿಸಿಕೊಂಡಿಲ್ಲ. ಚಿತ್ರ ತೆರೆಕಂಡು ಹತ್ತು ವರ್ಷವಾದರೂ ಸಾಲದ ಹೊರೆ ಇನ್ನೂ ಭುಜದ ಮೇಲೆ ಕುಳಿತಿದೆ. ಅವರ ದುರಾದೃಷ್ಟಕ್ಕೆ ಆಮೇಲೆ ಅವರು ನಿರ್ಮಿಸಿದ ನಾಲ್ಕೈದು ಚಿತ್ರಗಳು ಕೂಡಾ ತೋಪಾದವು.

d rajendra babu, sachin (pic k m veeresh)

ಸಿನಿಮಾ ಬಿಡುಗಡೆಯಾಗುವುದಕ್ಕೆ ಮುಂಚೆ ಇನ್ನೊಂದು ಘಟನೆ ನಡೆಯಿತು. ಆ ದಯಾನಾಯಕನಿಗೆ ಪ್ರತಿದಿನ ಕನ್ನಡ ಹೇಳಿಕೊಡುತ್ತಿದ್ದ ಟೀಚರ್ ಅವರ ಮಗನಿಗೆ ಅದೇನೋ ಖಾಯಿಲೆ ಬಂದು ಆಸ್ಪತ್ರೆಗೆ ದಾಖಲು ಮಾಡಿದರು. ಆ ಸಂದರ್ಭದಲ್ಲಿ ಅವರಲ್ಲಿ ದುಡ್ಡಿರಲಿಲ್ಲ, ನಾಯಕ ಅಥವಾ ನಿರ್ಮಾಪಕರು ಟ್ಯೂಷನ್ ಫೀಸ್ ಕೊಡುತ್ತಾರೇನೋ ಎಂಬ ಆಶಾವಾದದಲ್ಲಿ ಅವರು ನನಗೆ ಫೋನ್ ಮಾಡಿದರು. ನಾನು ರಾಮಮೂರ್ತಿಯವರಿಗೆ ವಿಷಯ ತಿಳಿಸಿದೆ, ದಯಾನಾಯಕನಿಗೂ ಫೋನ್ ಮಾಡಿ ಹೇಳಿದೆ. ಅರ್ಥಿಕ ಸಹಾಯ ಮಾಡುವುದಿರಲಿ, ಆಸ್ಪತ್ರೆಗೆ ಭೇಟಿ ನೀಡುವಕನಿಷ್ಟ ಸೌಜನ್ಯವನ್ನೂ ಆತ ತೋರಲಿಲ್ಲ. ನಾನು ನನ್ನ ಪತ್ನಿ ಮತ್ತು ಆಕೆಯ ಗೆಳತಿ ಮುಂದೆ ಸಣ್ಣವನಾದೆ. ಪರೋಪಕಾರಿ ಪಾಪಣ್ಣನಾಗುವ ನನ್ನ ಹುಚ್ಚಿನಿಂದ ನನ್ನ ಮನೆಯವರ ಪ್ರೈವೆಸಿ ಮತ್ತು ಮರ್ಯಾದೆ ಎರಡನ್ನೂ ನಾನು ಕಿತ್ತುಕೊಂಡಿದ್ದೆ.  ‘ಎನ್ ಕೌಂಟರ್ ದಯಾನಾಯಕ್’ತೆರೆಕಂಡು ಒಂದು ತಿಂಗಳ ನಂತರ ನನ್ನ ಮಗಳು ಕೇಳಿದಳು “ಪಪ್ಪಾ, ಹೀರೋ ಆಂಕಲ್ ಯಾಕೆ ಮನೆಗೆ ಬರ್ತಿಲ್ಲ?”. ಅವರು ತುಂಬಾ ಬಿಜಿಯಾಗಿದ್ದಾರೆ ಅಂದೆ. ಆಮೇಲೆ ಗೊತ್ತಾದ ಸಂಗತಿಯೇನೆಂದರೆ ತನ್ನನ್ನು ಚಿತ್ರರಂಗಕ್ಕೆ ಕರಕೊಂಡು ಬಂದ ಪತ್ರಕರ್ತ ಮಿತ್ರನ ಜೊತೆಗೂ ಆತ ಸಂಬಂಧ ಕೆಡಿಸಿಕೊಂಡಿದ್ದ.

Real Dayanayak Watching Moive Clipping (pic k m veeresh)

ನಾಲ್ಕು ವರ್ಷದ ಹಿಂದೆ ನಾನು ಸುವರ್ಣ ನ್ಯೂಸ್ ಸೇರಿಕೊಂಡಾಗ ಆ ದಯಾನಾಯಕ ಅನಿರೀಕ್ಷಿತವಾಗಿ ಭೇಟಿಯಾದ. ಆತ ನಟಿಸುತ್ತಿದ್ದ ‘ಶ್ರೀಮೋಕ್ಷ’ಎಂಬ ಚಿತ್ರವೊಂದರ ಪ್ರಮೋಷನ್ ಗಾಗಿ ‘ಸುವರ್ಣ ಎಂಟರ್ಟೇನ್ ಮೆಂಟ್’ಚಾನೆಲ್ಲಿನ ಮುಖ್ಯಸ್ಥರನ್ನು ನೋಡುವುದಕ್ಕೆ ಬಂದಿದ್ದ. ಆತ ಲಿಫ್ಟ್ ನಿಂದ ಹೊರಬರುವ ಹೊತ್ತಲ್ಲಿ ನಾನಲ್ಲಿ ನಿಂತಿದ್ದೆ. ಒಂದು ಕ್ಷಣ ಕಕ್ಕಾಬಿಕ್ಕಿಯಾದ ಆತ ಒಂದೇ ವಾಕ್ಯದಲ್ಲಿ ಯೋಗಕ್ಷೇಮ ವಿಚಾರಿಸಿ ಮಾಯವಾದ. ಈಗ ಫೇಸ್ ಬುಕ್ಕಲ್ಲಿ ಆತ ಮತ್ತು ಆತನ ಹೋಟೆಲ್ಲಿನ ಫೋಟೋ ನೋಡುತ್ತಿದ್ದೇನೆ.

ಈಗ ರಾಜೇಂದ್ರಬಾಬು ತೀರಿಹೋಗಿದ್ದಾರೆ,  ರಾಮಮೂರ್ತಿ ಮತ್ತೊಂದಿಷ್ಟು ಚಿತ್ರಗಳನ್ನು ನಿರ್ಮಿಸಿ ಇನ್ನಷ್ಟು ಸಾಲದ ಹೊರೆ ಹೊತ್ತುಕೊಂಡಿದ್ದಾರೆ. ನಮ್ಮ ದಯಾನಾಯಕ ನಟನಾಗುವ ಪ್ರಯತ್ನದಲ್ಲಿ ಪದೇಪದೇ ವಿಫಲನಾಗಿ, ಇನ್ನೊಂದಿಷ್ಟು ಜನರನ್ನು ನಷ್ಟದ ಪಾತಾಳಕ್ಕೆ ತಳ್ಳಿ, ಈಗ ಹೋಟೆಲ್ ಮಾಲಿಕನಾಗಿದ್ದಾನೆ.   ನನಗನಿಸುವ ಪ್ರಕಾರ ಆತ ತನ್ನ ಹೋಟೆಲ್ಲಿನ ಮುಖ್ಯದ್ವಾರದಲ್ಲಿ ‘ಈ ಹೋಟೆಲ್ ರಾಮಮೂರ್ತಿಗೆ ಅರ್ಪಣೆ’ಎಂದು ಬರೆದರೂ ಆ ಋಣ ತೀರಲಾರದು. ಆದರೆ ರಾಮಮೂರ್ತಿ ವಿಪರೀತ ಅನಿಸುವಷ್ಟು ಸಂಭಾವಿತರು, ಯಾವತ್ತೂ ಅವರು ತನ್ನನ್ನು ಈ ಸ್ಥಿತಿಗೆ ತಂದಿಟ್ಟ ದಯಾನಾಯಕನ ಬಗ್ಗೆ ಕೆಟ್ಟ ಮಾತುಗಳನ್ನಾಡಿದ್ದನ್ನು ನಾನು ಕೇಳಿಲ್ಲ.

sachin image

ನನಗೀಗಲೂ ಅನಿಸುತ್ತಿದೆ, ಅಂದು ಬಾಬು ಎರಡು ಕತೆಗಳನ್ನು ಹೇಳಿದಾಗ ಚಿಕ್ಕ ಬಜೆಟ್ಟಿನ ಕತೆಯನ್ನೇ ರಾಮಮೂರ್ತಿ ಆಯ್ಕೆ ಮಾಡಿಕೊಂಡಿದ್ದರೆ ಅವರು ಸಾಲಗಾರರಾಗುತ್ತಿರಲಿಲ್ಲವೇನೋ?ಅಥವಾ ದಯಾನಾಯಕನ ಪಾತ್ರಕ್ಕೆ ಚಾಲ್ತಿಯಲ್ಲಿರುವ ಒಬ್ಬ ನಾಯಕನ್ನೇ ಆಯ್ಕೆ ಮಾಡಿಕೊಂಡಿದ್ದರೆ ನಷ್ಟದ ಪ್ರಮಾಣ ಕಡಿಮೆಯಾಗುತ್ತಿತ್ತೇನೋ?ಆದರೆ ಇಂಥಾ ಚಿಂತನೆಗಳು ಹತ್ತು ವರ್ಷದ ಹಿಂದೆ ಹೂತಿಟ್ಟ ಶವದ ಪೋಸ್ಟ್ ಮಾರ್ಟಂ ಮಾಡಿದಂತಿರುತ್ತದೆ. ಆದರೂ ಪತ್ರಿಕೆಗಳಲ್ಲಿ ‘ಕನ್ನಡ ನಿರ್ಮಾಪಕರು ಹೊಸಬರನ್ನು ಪ್ರೋತ್ಸಾಹಿಸುತ್ತಿಲ್ಲ’ಅನ್ನುವ ವಾಕ್ಯವನ್ನು ಓದಿದಾಗ ನನಗೆ ರಾಮಮೂರ್ತಿ ನೆನಪಾಗುತ್ತಾರೆ, ರಸ್ತೆ ಕಂಟ್ರಾಕ್ಟರ್ ಒಬ್ಬ ಏನೋ ಸಾಧನೆ ಮಾಡುವುದಕ್ಕೆ ಹೋಗಿ ಇದ್ದಿದ್ದೆಲ್ಲವನ್ನೂ ಕಳಕೊಂಡು ಸಾಲಗಾರನಾದ ಕತೆ ನೆನಪಾಗುತ್ತದೆ, ನಮ್ಮೆಲ್ಲರ ಒಳ್ಳೇತನವನ್ನೇ ಏಣಿಯಾಗಿಸಿಕೊಂಡು ಮೆರೆದ ನವನಾಯಕ ನೆನಪಾಗುತ್ತಾನೆ, ಆಸ್ಪತ್ರೆ ಹಾಸಿಗೆ ಮೇಲೆ ಮಗನನ್ನು ಮಲಗಿಸಿ ತನಗೆ ನ್ಯಾಯವಾಗಿ ಬರಬೇಕಾಗಿದ್ದ ದುಡ್ಡಿಗೆ ಕಾಯುತ್ತಿದ್ದ ಪತ್ನಿಯ ಗೆಳತಿ ನೆನಪಾಗುತ್ತಾರೆ.

ಒಂದೇ ಒಂದು ಅಪಘಾತ ಎಷ್ಟೊಂದು ಜನರನ್ನು ಬಲಿತೆಗೆದುಕೊಳ್ಳುತ್ತದೆ ಅಲ್ಲವೇ?

Also See

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Singer S Janaki Gallery