` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
samarth prasad image
samarth prasad

ಶ್ರೀಮಂತಿಕೆ, ಬುದ್ದಿವಂತಿಕೆ ಮತ್ತು ಆತ್ಮವಿಶ್ವಾಸ – ಈ ಮೂರೂ ಗುಣಗಳು ಒಂದೇ ವ್ಯಕ್ತಿಯಲ್ಲಿ ಮೇಳೈಸಿದರೆ ಆತ ತನ್ನ ಜೀವನದಲ್ಲಿ ಉತ್ತುಂಗಕ್ಕೇರುತ್ತಾನೆ ಎಂದು ನಾವೆಲ್ಲಾ ಅಂದುಕೊಂಡಿದ್ದೇವೆ. ಆದರೆ ಸಿನಿಮಾ ಜಗತ್ತಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಅದನ್ನು ರುಜುವಾತು ಪಡಿಸುವುದಕ್ಕೆ ನಾನು ನಿಮಗೊಂದು ಕತೆ ಹೇಳುತ್ತೇನೆ. ಇದನ್ನೊಂದು ನೈಜ ನೀತಿಕತೆ ಎಂದು ಕರೆಯುವುದಕ್ಕೆ ನಾನಿಷ್ಟ ಪಡುತ್ತೇನೆ.

ದೃಶ್ಯ – 1

ಒಂದೂವರೆ ವರ್ಷದ ಹಿಂದಿನ ಮಾತು. ಪ್ರೆಸ್ ಕ್ಲಬ್ಬಿನ ಇಳಿಸಂಜೆ. ನಾನು, ಗೆಳೆಯರಾದ ಉಮೇಶ್ ಬಣಕಾರ್ ಮತ್ತು ಕೆ.ಎಂ.ವೀರೇಶ್ ಒಬ್ಬ ವ್ಯಕ್ತಿಗೆ ಕಾಯುತ್ತಾ ಕುಳಿತಿದ್ದೆವು. ಅವರು ಬರುವುದಕ್ಕೆ ಮುಂಚೆಯೇ ಉಮೇಶ್ ಆತನ ಬಯೋಡೇಟ ಒಪ್ಪಿಸಿದ್ದರು. ಆತ ನನಗೆ ತುಂಬ ವರ್ಷಗಳಿಂದ ಸ್ನೇಹಿತ. ಬಹಳ ಬುದ್ದಿವಂತ, ಜೊತೆಗೆ ನೇರವಂತ. ತುಂಬಾ ವಿಷ್ಯಗಳ ಬಗ್ಗೆ ತಿಳಿದುಕೊಂಡಿದ್ದಾನೆ. ನೀವು ಆತನನ್ನು ಮೀಟ್ ಆಗಲೇಬೇಕು.

ಸ್ವಲ್ಪ ತಡವಾಗಿ ಆ ಬುದ್ದಿವಂತ ವ್ಯಕ್ತಿಯ ಆಗಮನ ಆಯಿತು. ತನ್ನ ಉದ್ದುದ್ದ ಕಾಲುಗಳನ್ನು ಅವುಗಳು ತನಗೆ ಸೇರಿದವಲ್ಲ ಅನ್ನುವಂತೆ ಅತ್ತಿಂದಿತ್ತ ಎಸೆಯುತ್ತಾ ಬಂದ ಆ ಕೃಷಕಾಯದ ಎತ್ತರದ ವ್ಯಕ್ತಿಗೆ ತನ್ನ ಉಡುಗೆತೊಡುಗೆ ಬಗ್ಗೆ ಹೆಚ್ಚೇನೂ ಕಾಳಜಿ ಇದ್ದಂತಿರಲಿಲ್ಲ. ನನ್ನನ್ನು ಅವರಿಗೆ ಪರಿಚಯಿಸುತ್ತಾ, ತುಂಬಾ ಸೀನಿಯರ್ ಸಿನಿಮಾ ಪತ್ರಕರ್ತರು ಎಂದು ಉಮೇಶ್ ಕೊಂಚ ವೈಭವೀಕರಿಸಿ ಹೇಳಿದರೂ  ಅವರೇನೂ ಇಂಪ್ರೆಸ್ ಆದ ಹಾಗೆ ಕಾಣಿಸಲಿಲ್ಲ. ಒಂದು ಮರುಕದ ದೃಷ್ಟಿಯನ್ನು ನನ್ನೆಡೆಗೆ ಬೀರಿ, ನನ್ನ ಅಹಂನ್ನು ಇನ್ನಿಲ್ಲದಂತೆ ಘಾಸಿಗೊಳಿಸಿ ಮಾತಿಗಿಳಿದರು.  ಆವತ್ತಿನ ಚರ್ಚೆಯ ವಸ್ತು ಎಂದಿನಂತೆ ಕನ್ನಡ ಚಿತ್ರೋದ್ಯಮದ ಗತಿಸ್ಥಿತಿ..

ashok kheny, prasad

ಅವರೇ ಪ್ರಸಾದ್, ನಾಗಪ್ರಸಾದ್. ಮೂಲತಃ ಸ್ಟಾಕ್ ಬ್ರೋಕರ್, ಅಂದರೆ ಶೇರು ಮಾರ್ಕೆಟ್ ಬಗ್ಗೆ ಸಲಹೆ ನೀಡುವವರು. ಊರು ತುಮಕೂರು. ಅಶೋಕ್ ಖೇಣಿಗೆ ತಾನು ಆರ್ಥಿಕ ಸಲಹೆಗಾರ ಅನ್ನುವ ಮಾಹಿತಿ ಅವರ ಮಾತಿನ ನಡುವೆ ಬಂದುಹೋಯಿತು. ಆ ಹೊತ್ತಿಗಾಗಲೇ ಖೇಣಿಯ ದುಡ್ಡನ್ನು ಪ್ರಸಾದ್ ಕನ್ನಡ ಚಿತ್ರಗಳ ಮೇಲೆ ಸುರಿಯುತ್ತಿದ್ದಾರೆ ಅನ್ನುವ ಸುದ್ದಿ ಗಾಂಧಿನಗರದಲ್ಲಿ ಪ್ರಚಲಿತವಾಗಿತ್ತು. ತಾನೊಬ್ಬ ಪತ್ರಕರ್ತನೂ ಹೌದು ಅನ್ನುತ್ತಾ ನ್ಯೂಯಾರ್ಕ್ ಟೈಮ್ಸ್ ಥರದ ಪತ್ರಿಕೆಗೆ ಕಾಲಂ ಬರೆಯುತ್ತಿರುವುದನ್ನೂ, ಇಂಗ್ಲಿಷ್ ಚಾನೆಲ್ ಒಂದರಲ್ಲಿ ಶೇರು ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಪ್ರತಿಬೆಳಿಗ್ಗೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿರುವುದನ್ನೂ ಹೇಳಿಕೊಂಡರು. ಎಂಬಲ್ಲಿಗೆ ಉಮೇಶ್ ಹೇಳಿದಂತೆ ಈ ವ್ಯಕ್ತಿ ಬುದ್ದಿವಂತ ಅನ್ನುವುದು ನಿಜ ಅಂತ ನನಗೂ ಅನಿಸುವುದಕ್ಕೆ ಶುರುವಾಯಿತು. ಆದರೆ ಇವರ ಬುದ್ದಿವಂತಿಕೆ ಕನ್ನಡ ಚಿತ್ರರಂಗಕ್ಕೆ ಕೊಂಚ ದುಬಾರಿಯಾದೀತೇನೇ ಅನ್ನುವ ಅನುಮಾನವೂ ಹುಟ್ಟಿಕೊಂಡಿತು.

ಪ್ರಸಾದ್ ಮಾತಾಡುತ್ತಲೇ ಇದ್ದರು, ಪ್ರೆಸ್ ಕ್ಲಬ್ಬಿನ ಮರಗಳ ಎಲೆಗಳಿಗೆ ಅಲ್ಲಾಡುವುದಕ್ಕೂ ಅವಕಾಶ ಸಿಗದಂತೆ. ಬುದ್ದಿವಂತರಿಗೆ ಮಾತಾಡುವ ಹಕ್ಕಿದ್ದರೆ,, ದಡ್ಡರಿಗೆ ಅದನ್ನು ಕೇಳುವ ಹಕ್ಕಿದೆ ಅನ್ನುವಂತೆ ನಾನು ಸುಮ್ಮನೇ ಕುಳಿತಿದ್ದೆ. ಸಮರ್ಥ ವೆಂಚರ್ಸ್ ಎಂಬ ವಿತರಣ ಸಂಸ್ಥೆಯನ್ನು ಹುಟ್ಟು ಹಾಕಿ ಆ ಮೂಲಕ ಹತ್ತಾರು ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವ ಐಡಿಯಾ ಅವರಲ್ಲಿತ್ತು. ಅದರ ಜೊತೆಗೆ ವರ್ಷಕ್ಕೆ ನಾಲ್ಕು ದೊಡ್ಡ ಬಜೆಟ್ ಚಿತ್ರಗಳ ನಿರ್ಮಾಣ. ನೆನಪಿರಲಿ, ನಾನು ಅವರನ್ನು ಭೇಟಿ ಮಾಡುವ ಹೊತ್ತಿಗೆ ಅವರು  ಚಿತ್ರೋದ್ಯಮದೊಳಗೆ ಪ್ರವೇಶ ಮಾಡಿ ಒಂದೆರಡು ತಿಂಗಳುಗಳಾಗಿರಬಹುದಷ್ಟೆ. ಆದರೆ ಅವರ ಮಾತಿನ ಧಾಟಿ ಇಡೀ ಚಿತ್ರೋದ್ಯಮದ ಒಳಸುಳಿಗಳನ್ನು ಮತ್ತು ಹೂರಣವನ್ನು ಅರೆದು ಕುಡಿದಂತಿತ್ತು. 25 ವರ್ಷದ ಅನುಭವ ಇದ್ದ ನಾನು ಕಿವಿಬಾಯಿ ಮುಚ್ಚಿಕೊಂಡು ಸುಮ್ಮನೇ ಕುಳಿತಿದ್ದೆ.  ಪ್ರಸಾದ್ ಚಿತ್ರೋದ್ಯಮದ ಅರೆಕೊರೆಗಳ ಬಗ್ಗೆ ಮಾತಾಡುತ್ತಿದ್ದರು, ನಿರ್ಮಾಪಕರು ಎಲ್ಲಿ ತಪ್ಪುಹೆಜ್ಜೆ ಇಡುತ್ತಾರೆ ಅನ್ನೋದರ ಬಗ್ಗೆ ಹೇಳುತ್ತಿದ್ದರು. ನನ್ನದೊಂದು ದೊಡ್ಡ ಐಡಿಯಾ ಇದೆ ಅಂದರು.  ಕನ್ನಡ ಚಿತ್ರರಂಗದಲ್ಲಿ ಅಬ್ಬಬ್ಬಾ ಅಂದರೆ ಆರು ಸ್ಟಾರ್ ಗಳಿರಬಹುದು.  ಅವರೆಲ್ಲರಿಗೂ ತಲಾ ಇಪ್ಪತ್ತೈದು ಲಕ್ಷ ಅಡ್ವಾನ್ಸ್ ಕೊಟ್ಟು ಎರಡು ವರ್ಷ ಅವರ ಡೇಟ್ಸನ್ನು ಬ್ಲಾಕ್ ಮಾಡುತ್ತೇನೆ. ಮುಂದಿನ ಎರಡು ವರ್ಷ ನನ್ನ ಚಿತ್ರಗಳಲ್ಲಷ್ಟೇ ಅವರು ನಟಿಸುವಂಥಾಗಬೇಕು, ಅವೆಲ್ಲ ಚಿತ್ರಗಳು ಹಿಟ್ ಆದರೆ ಕೋಟ್ಯಂತರ ರುಪಾಯಿ ಬಿಸಿನೆಸ್ ಮಾಡಬಹುದು. ನಾವು ಮೆಚ್ಚುಗೆಯಿಂದ ತಲೆದೂಗಿದೆವು. ಒಟ್ಟಲ್ಲಿ ಇಡೀ ಚಿತ್ರೋದ್ಯಮವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಒಂದು ನೀಲನಕ್ಷೆ ಅವರ ಮನಸ್ಸಲ್ಲಿ ರೆಡಿಯಾಗಿತ್ತು..

 ಹೀಗೇ ಮೂರು ತಾಸುಗಳ ಕಾಲ ಸತತವಾಗಿ ಕೊರೆಸಿಕೊಂಡು ಕ್ಲಬ್ಬಿನಿಂದ ಈಚೆ ಬರುವ ವೇಳೆ ನಾನು ವೀರೇಶ್ ಗೆ ಹೇಳಿದೆ. ಈ ಮನುಷ್ಯ ಜಾಣ ಇದ್ದಾನೆ, ಆದರೆ ಪ್ರಾಕ್ಟಿಕಲ್ ಅಲ್ಲ, ಎರಡು ಪ್ಲಸ್ ಎರಡು ಸೇರಿದರೆ ನಾಲ್ಕು ಆಗುತ್ತೆ ಅನ್ನುವ ಶೇರು ಮಾರುಕಟ್ಟೆ ಲೆಕ್ಕಾಚಾರ ಚಿತ್ರೋದ್ಯಮದಲ್ಲಿ ನಡೆಯುವುದಿಲ್ಲ. ದುಡ್ಡಿದ್ದವನು ನಿರ್ಮಾಪಕನಾಗಬಹುದು, ಆದರೆ ಆತನ ಚಿತ್ರ ದುಡ್ಡು ಮಾಡುತ್ತೆ ಅನ್ನೋದನ್ನು ಹೇಳುವುದಕ್ಕಾಗೋದಿಲ್ಲ.

ದೃಶ್ಯ-2

ಅದಾಗಿ ಎರಡು ದಿನಕ್ಕೆ ಪ್ರಸಾದ್ ನನಗೆ ಫೋನ್ ಮಾಡಿದರು. ನಿಮ್ಮ ಸುವರ್ಣ ನ್ಯೂಸ್ ಚಾನೆಲ್ಲಲ್ಲಿ ನನಗೊಂದು ಸ್ಲಾಟ್ ಬೇಕು, ನಾನೇ ಆ ಸ್ಲಾಟನ್ನು ಖರೀದಿ ಮಾಡುತ್ತೇನೆ, ಅದೆಷ್ಟಾಗುತ್ತೋ ಹೇಳಿ. ಶೇರು ಮಾರ್ಕೆಟ್ ಬಗ್ಗೆ ನಾನು ಮಾತಾಡೋದಕ್ಕಿದೆ ಎಂದರು. ನಾನು ಏನೂ ಹೇಳಲಿಲ್ಲ. ಈ ಮಧ್ಯೆ ಪ್ರಸಾದ್  ವಿಷ್ಣುವರ್ಧನ ಮತ್ತು ಅಲೆಮಾರಿ ಎಂಬ ಎರಡು ಚಿತ್ರಗಳ ಹಂಚಿಕೆ ಮಾಡಿದರು, ಸ್ವಲ್ಪ ಲಾಭದ ಮುಖ ನೋಡಿದರು. ಅದೇ ಉತ್ಸಾಹದಲ್ಲಿ  ಅಣ್ಣಾ ಬಾಂಡ್ ಚಿತ್ರವನ್ನು  16 ಕೋಟಿಗೆ ಖರೀದಿ ಮಾಡ್ತೀನಿ ಅಂತ ವಜ್ರೇಶ್ವರಿ ಸಂಸ್ಥೆ ಜೊತೆ ಮಾತುಕತೆ ನಡೆಸಿದರು. ಅದೇನಾಯಿತೋ ಏನೋ ಕೊನೇ ಕ್ಷಣದಲ್ಲಿ ಒಪ್ಪಂದದಿಂದ ಹಿಂದೆ ಸರಿದರು. ಅಷ್ಟಕ್ಕೇ ಸುಮ್ಮನಿದ್ದರೆ ಏನೂ ಆಗುತ್ತಿರಲಿಲ್ಲ. ವಜ್ರೇಶ್ವರಿ ಕಂಪನಿ ಬಗ್ಗೆ, ಪುನೀತ್ ಮತ್ತು ಶಿವರಾಜ್ ಕುಮಾರ್ ಬಗ್ಗೆ ಹಗುರವಾಗಿ ಮಾತಾಡಿ ಅವರಿಬ್ಬರಿಂದಲೂ ಬೈಸಿಕೊಂಡರು.

ಅದೇನೇ ಇರಲಿ, ಪ್ರಸಾದ್ ಆಗಮನದಿಂದ ಕನ್ನಡ ನಿರ್ಮಾಪಕರು ಖುಶಿಯಾಗಿದ್ದರು. ಬಹಳ ವರ್ಷದ ನಂತರ ಒಂದು ಮಿಕವೊಂದು ತಾನಾಗಿ ಹಳ್ಳಕ್ಕೆ ಬಂದು ಬಿದ್ದಿತ್ತು. ಬಂಡವಾಳ ಹಾಕುವವರಿಲ್ಲದೆ ಸುಮ್ಮನೇ ಕುಳಿತಿದ್ದ ನಿರ್ಮಾಪಕರೆಲ್ಲಾ ಚುರುಕಾದರು. ಪ್ರಸಾದ್ ಅವರನ್ನು ಇಂದ್ರಚಂದ್ರ ಎಂದು ಹೊಗಳಿ ಸಾಲ ತೆಗೆದುಕೊಂಡು ಸಿನಿಮಾ ಶುರು ಮಾಡಿದರು. ಆ ಸಾಲವನ್ನು ಸಿನಿಮಾ ನಿರ್ಮಾಣಕ್ಕೆ ಬಳಸದೇ ತಮ್ಮ ವೈಯಕ್ತಿಕ ಸುಖಸಂತೋಷಕ್ಕೆ ಖರ್ಚು ಮಾಡಿದರು. ಕನ್ನಡ ಚಿತ್ರೋದ್ಯಮದ ಕ್ಯಾಪ್ಟನ್ ಆಗುವ ಹುಮ್ಮಸ್ಸಿನಲ್ಲಿದ್ದ ಪ್ರಸಾದ್ ಅವರಿಗೆ ಇದ್ಯಾವುದೂ ಗೊತ್ತೇ ಆಗಲಿಲ್ಲ. ಕಳ್ಳೆಪುರಿಯಂತೆ ಹಣ ಹಂಚಿದರು. ಚಿತ್ರಗಳು ಒಂದೊಂದಾಗಿ  ತೋಪಾಗತೊಡಗಿದವು. ಕೊಟ್ಟ ಹಣ ವಾಪಸ್ ಬರಲಿಲ್ಲ, ನಿರ್ಮಾಪಕರು ಕೊಟ್ಟ ಚೆಕ್ಕುಗಳು ಬೌನ್ಸ್ ಆಗತೊಡಗಿದವು. ಚಿಂಗಾರಿ, ಭೀಮಾ ತೀರದಲ್ಲಿ, ಗಾಡ್ ಫಾದರ್, ಜಾನು ಚಿತ್ರಗಳ ನಿರ್ಮಾಪಕರು ಸೇಫ್ ಆದರೂ, ಆ ಚಿತ್ರಗಳಿಗೆ ಹಣ ಹೂಡಿದ್ದ ಪ್ರಸಾದ್ ಕೈಖಾಲಿ ಮಾಡಿಕೊಂಡರು. ಈ ಮಧ್ಯೆ ಅಶ್ವಿನಿ ಆಡಿಯೋ ಕಂಪನಿಯನ್ನು ಖರೀದಿಸಿ ಅಲ್ಲೂ ನಷ್ಟ ಮಾಡಿಕೊಂಡರು.

ದೃಶ್ಯ-3

2013ನೇ ಇಸ್ವಿ ಜುಲೈ ತಿಂಗಳ ಒಂದು ದಿನ ಪತ್ರಿಕೆಯೊಂದರಲ್ಲಿ ಚಿಕ್ಕ ಸುದ್ದಿ ಪ್ರಕಟವಾಯಿತು. ಕನ್ನಡ ಚಿತ್ರಗಳ ವಿತರಕ ಪ್ರಸಾದ್ ಎಂಬವರು ಆತ್ಮಹತ್ಯೆಗೆ ಪ್ರಯತ್ನಿಸಿ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ. ಕನ್ನಡ ಸಿನಿಮಾಗಳ ಸಹವಾಸ ಮಾಡಿ, ಕೋಟ್ಯಂತರ ರುಪಾಯಿ ಕಳಕೊಂಡು, ಮನೆಕಾರು ಮಾರಾಟ ಮಾಡಿ, ಸಾಲಗಾರರ ಕೈಯಿಂದ ಪದೇಪದೇ ಅವಮಾನಿತಗೊಂಡ ಪ್ರಸಾದ್ ಅವರ ಮುಂದೆ ಬೇರೆ ದಾರಿಯಿರಲಿಲ್ಲ. ಅದೃಷ್ಟವಶಾತ್ ಪ್ರಸಾದ್ ಜೀವಕ್ಕೇನೂ ಅಪಾಯವಾಗಲಿಲ್ಲ. ಡಿಸೆಂಬರ್ ತಿಂಗಳಲ್ಲಿ ಮತ್ತೊಂದು ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಚೆಕ್ ಬೌನ್ಸ್ ಕೇಸ್ ಒಂದರಲ್ಲಿ ಪ್ರಸಾದ್ ಅವರನ್ನು ಬಂಧಿಸಲಾಗಿದೆ. ಪ್ರಸಾದ್ ಅವರಿಂದ ಉಪಕೃತರಾಗಿದ್ದ ಯಾವ ನಿರ್ಮಾಪಕನೂ ಅವರ ಸಹಾಯಕ್ಕೆ ಧಾವಿಸಲಿಲ್ಲ. ನನಗಿನ್ನು ಚಿತ್ರೋದ್ಯಮದ ಸಹವಾಸ ಸಾಕು, ಹಳೇ ಬಿಸಿನೆಸ್ಸಿಗೆ ಮರಳುತ್ತೇನೆ ಎಂದು ಪ್ರಸಾದ್ ಹೇಳಿದರೂ ಉದ್ಯಮ ಅವರಿಗೆ ಬಿಡುಗಡೆ ನೀಡುವುದಕ್ಕೆ ತಯಾರಾಗಿರಲಿಲ್ಲ. ಹಲವಾರು ವರ್ಷ ರೌಡಿಸಂ ಮಾಡಿ ಬೇಸತ್ತು, ಒಂದು ದಿನ ತನಗಿನ್ನು ರೌಡಿಸಂ ಬೇಡ ಅನ್ನುವ ಮಾಜಿ ರೌಡಿಯನ್ನು ಭೂಗತಲೋಕ ನಡೆಸಿಕೊಳ್ಳುವ ರೀತಿಯಲ್ಲೇ ಉದ್ಯಮವೂ ಪ್ರಸಾದ್ ಅವರನ್ನು ನಡೆಸಿಕೊಂಡಿತು. ನಾನು ಮೋಸಗಾರನಲ್ಲ, ಒಂದಲ್ಲ ಒಂದು ದಿನ ಎಲ್ಲರ ಋಣ ತೀರಿಸುತ್ತೇನೆ ಎಂದು ಪ್ರಸಾದ್ ಅಂಗಲಾಚಿದರೂ ಕೆಲವು ನಿರ್ಮಾಪಕರು ಅವರ ಮಾತನ್ನು ನಂಬಲಿಲ್ಲ. ನಿಂದನೆಗಳ ಸುರಿಮಳೆಯಾದವು, ಯಾರೋಅವರ ಮೇಲೆ ಹಲ್ಲೆ ಮಾಡಿದರು ಅನ್ನುವ ಸುದ್ದಿಯೂ ಬಂತು. ಅವರ ಮಾಜಿ ಧಣಿ ಖೇಣಿಯೂ ಹಳೇ ಬಾಕಿ ವಸೂಲಿಗೆ ನಿಂತರು. ಕೇವಲ ಒಂದು ವರ್ಷದ ಹಿಂದೆ ಮನೆಮುಂದೆ ನಾಲ್ಕೈದು ಕಾರುಗಳನ್ನು ನಿಲ್ಲಿಸುತ್ತಿದ್ದ ಪ್ರಸಾದ್ ಬಳಿ ಆಟೋಗೆ ಕೊಡುವುದಕ್ಕೂ ಕಾಸಿರಲಿಲ್ಲ.

ದೃಶ್ಯ-4

yash raj, balu muttaiah

ಕಳೆದ ವಾರ ಬಿಡುಗಡೆಯಾದ ಅಗ್ರಜ ಚಿತ್ರದ ಮೂಲಕ ಪ್ರಸಾದ್ ಮತ್ತೆ ಉದ್ಯಮಕ್ಕೆ ಮರಳಿದ್ದಾರೆ. ಈ ಚಿತ್ರಕ್ಕೆ ಅವರೇ ಹಂಚಿಕೆದಾರರು. ಈ ಒಂದು ಚಿತ್ರ ಗೆದ್ದರೆ ಅವರು ಬಚಾವಾಗುತ್ತಾರೆ ಅನ್ನುವ ಹಾಗಿಲ್ಲ, ಆದರೆ ಮರ್ಯಾದೆಯಿಂದ ತಲೆಯೆತ್ತಿ ನಡೆಯುವ ಹಾಗಾದೀತು. ಹಾಗಾಗಬೇಕು ಅನ್ನುವುದೂ ನನ್ನ ಆಸೆ ಕೂಡಾ. ಯಾಕೆಂದರೆ ಈತ ಬುದ್ದಿವಂತ, ಪ್ರಾಮಾಣಿಕ ಮತ್ತು ಶ್ರಮಜೀವಿ. ತಾನೊಬ್ಬನೇ ಬುದ್ದಿವಂತ ಅನ್ನುವ ಧೋರಣೆ, ಒಮ್ಮೆಗೇ ಎಲ್ಲವನ್ನೂ ಬಾಚಿಕೊಳ್ಳಬೇಕು ಅನ್ನುವ ಅವಸರವೇ ಇವರ ಪತನಕ್ಕೆ ಕಾರಣವಾಯಿತು ಅನ್ನುವುದು ಬೇರೆ ಮಾತು. ಅಂದಹಾಗೆ ಕನ್ನಡ ಚಿತ್ರೋದ್ಯಮ ಈ ಹಿಂದೆಯೂ ಕೆಲವು ಒಳ್ಳೆಯ ಫೈನಾನ್ಶಿಯರುಗಳನ್ನೂ ಇದೇ ರೀತಿ ನಾಶ ಮಾಡಿದ ಉದಾಹರಣೆಗಳಿವೆ. ಎ ಚಿತ್ರದಿಂದ ಬಂದ ಯಶ್ ರಾಜ್, ಆಪ್ತಮಿತ್ರದಿಂದ ಬಂದ ಬಾಲು ಮುತ್ತಯ್ಯೆ ಇವರಿಬ್ಬರೂ ಈಗ ಎಲ್ಲಿದ್ದಾರೆ?ಶುದ್ಧ ಬಿಸಿನೆಸ್ ಮಾಡಬೇಕು ಅನ್ನುವ ಆಸೆಹೊತ್ತು ಬರುವ ಶ್ರೀಮಂತರನ್ನು ಕೆಲ ನಿರ್ಮಾಪಕರು ಯಾಕೆ ರಣಹದ್ದುಗಳಂತೆ ಕುಕ್ಕಿಕುಕ್ಕಿ ತಿನ್ನುತ್ತಾರೆ?

ಪ್ರೆಸ್ ಕ್ಲಬ್ಬಲ್ಲಿ ಪ್ರಸಾದ್ ಮಾತಾಡುವ ಹೊತ್ತಿಗೆ ನಾನು ಸುಮ್ಮನೇ ಇರಬಾರದಾಗಿತ್ತು, ಸ್ವಾಮೀ ಈ ಕೃತಘ್ನ ಇಂಡಸ್ಚ್ರಿಯಲ್ಲಿ ನಿಮ್ಮಂಥವರು ಬಾಳಿಕೆ ಬರುವುದು ಕಷ್ಟ, ನೀವು ನಿಮ್ಮ ಪಾಡಿಗೆ ಸ್ಟಾಕ್ ಬ್ರೋಕರ್ ಆಗಿ ನೆಮ್ಮದಿಯಿಂದಿರಿ ಎಂದು ಸಲಹೆ ನೀಡಬೇಕಾಗಿತ್ತು. ಅವರ ಈ ಮಹಾಪತನದಲ್ಲಿ ನನ್ನ ಮೌನದ್ದೂ ಪಾತ್ರ ಇದ್ದಿರಬಹುದಾ?

Also See

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

Raju Kannada Medium PromoLaunch Gallery

https://www.chitraloka.com/movie-reviews/15441-mugulunage-movie-review-chitraloka-rating-4-5.html

Satya Harishchandra PressMeet Gallery